ಅನಪೇಕ್ಷಿತ ಕರೆ, ಸಂದೇಶ ‘ಟ್ರಾಯ್’ ನಿಯಮ ಬಿಗಿ
ದೂರಸ೦ಪರ್ಕ ಜಾಲವನ್ನು ದುರ್ಬಳಕೆ ಮಾಡಿಕೊ೦ಡು, ಮೊಬೈಲ್ ಬಳಕೆದಾರರಿಗೆ ಕಿರಿಕಿರಿ ಉಂಟುಮಾಡುವ ಕರೆ, ಸಂದೇಶಗಳನ್ನು ನಿರ್ಬಂಧಿಸಲು ‘ಟ್ರಾಯ್’ ತನ್ನ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. 2018ರ ನಿಯಂತ್ರಣ ನಿಯಮಗಳಿಗೆ ತಿದ್ದುಪಡಿ ತಂದಿದೆ. ಗ್ರಾಹಕರಿಗೆ ದೂರು ನೀಡಲು ಅವಕಾಶ ನೀಡಲಾಗಿದ್ದು, ಅದನ್ನು ನಿಗದಿತ ಕಾಲಾವಧಿಯಲ್ಲಿ ಇತ್ಯರ್ಥ ಪಡಿಸುವುದು ಕಡ್ಡಾಯವಾಗಿದೆ. ನಿಯಮ ಮೀರಿದರೆ ದೂರಸಂಪರ್ಕ ಕಂಪನಿಗಳಿಗೆ ಶಿಕ್ಷೆ/ದಂಡ ವಿಧಿಸಲು ನಿಯಮಗಳಲ್ಲಿ ಅವಕಾಶನೀಡಲಾಗಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಅನಪೇಕ್ಷಿತ ವಾಣಿಜ್ಯ ಕರೆಗಳನ್ನು (ಯುಸಿಸಿ) ನಿಯಂತ್ರಿಸಲು ಕೆಲವು ಕಠಿಣ ಕ್ರಮಗಳಿಗೆ ಮುಂದಾಗಿದೆ. ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಷನ್ಸ್ ಕಸ್ಟಮರ್ ಪ್ರಿಫರೆನ್ಸ್ ರೆಗ್ಯುಲೇಷನ್ಸ್ (ಟಿಸಿಸಿಸಿಪಿಆರ್)-2018ಕ್ಕೆ ಎರಡನೆಯ ತಿದ್ದುಪಡಿ ಮಾಡಿ ಹೊಸ ನಿಯಮಗಳನ್ನು ರೂಪಿಸಿದೆ. ಗೆಜೆಟ್ ಅಧಿಸೂಚನೆ ಹೊರಡಿಸಿದ ದಿನದಿಂದ ಎರಡು ಹಂತಗಳಲ್ಲಿ (30 ದಿನ ಮತ್ತು 60 ದಿನ) ಹೊಸ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಟ್ರಾಯ್ ತಿಳಿಸಿದೆ.
ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಟೆಲಿ ಮಾರ್ಕೆಟಿಂಗ್ ಉದ್ದೇಶಕ್ಕೆ ಬಳಸಲಾಗುವ ಸಂಪರ್ಕಗಳಿಗೆ 10 ಅಂಕಿಗಳ ಮೊಬೈಲ್ ಸಂಖ್ಯೆ ಬಳಸುವುದನ್ನು ಟ್ರಾಯ್ ನಿರ್ಬಂಧಿಸಿದೆ. ‘140’ರಿಂದ ಆರಂಭವಾಗುವ ಮೊಬೈಲ್ ಸಂಖ್ಯೆಯ ಸರಣಿಯನ್ನು ಜಾಹೀರಾತುಗಳಿಗೆ ಬಳಸುವುದನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ. ಜತೆಗೆ, ವ್ಯಾಪಾರ, ಉತ್ಪನ್ನ/ಸೇವೆಗಳ ಪ್ರಚಾರಕ್ಕೆ ‘1600’ರಿಂದ ಆರಂಭವಾಗುವ ಹೊಸ ಸಂಖ್ಯಾ ಸರಣಿಯನ್ನು ಬಳಸಬೇಕು ಎಂದು ಸೂಚಿಸಲಾಗಿದೆ.
ತಾವು ಯಾವ ರೀತಿಯ ಸಂವಹನ ನಡೆಸುತ್ತೇವೆ ಎನ್ನುವ ಬಗ್ಗೆ ನೋಂದಣಿ ಮಾಡಿಕೊಳ್ಳದ ನಂಬರ್ಗಳಿಂದ ಬರುವ ಕರೆ/ಸಂದೇಶಗಳನ್ನು (ಎಸ್ಎಂಎಸ್) ಕಳುಹಿಸುವವರ ವಿರುದ್ಧ ದೂರು ದಾಖಲಿಸಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ದೂರು ದಾಖಲಿಸುವ ಪ್ರಕ್ರಿಯೆಯನ್ನೂ ಸರಳೀಕರಿಸಲಾಗಿದೆ. ದೂರು ದಾಖಲಿಸಲು ಈಗ ಮೂರು ದಿನಗಳ ಕಾಲಾವಕಾಶ ಇದ್ದು ಅದನ್ನು ಹೊಸ ನಿಯಮಗಳಲ್ಲಿ ಏಳು ದಿನಗಳಿಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ:ಪರೀಕ್ಷಿ ಹಬ್ಬ: ಬನ್ನಿ ಸಂಭ್ರಮಿಸೋಣ
ಯುಸಿಸಿ ಸಂಬಂಧದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲು ದೂರಸಂಪರ್ಕ ಕಂಪನಿಗಳಿಗೆ ಇದುವರೆಗೆ 30 ದಿನಗಳವರೆಗೂ ಸಮಯ ಇತ್ತು. ಅ ಅವಧಿಯನ್ನು 5 ದಿನಕ್ಕೆ ಇಳಿಕೆ ಮಾಡಲಾಗಿದೆ. ಇದುವರೆಗೂ ನಿಯಮ ಉಲ್ಲಂಘಿಸುವ ಸಂಖ್ಯೆಗಳ ವಿರುದ್ಧ ಕ್ರಮ ಕೈಗೊಳ್ಳಲು 7 ದಿನದಲ್ಲಿ 10 ದೂರು ದಾಖಲಾಗಬೇಕಿತ್ತು. ಹೊಸ ನಿಯಮದಲ್ಲಿ 10 ದಿನದಲ್ಲಿ 5 ದೂರು ದಾಖಲಾದರೂ ದಂಡ ವಿಧಿಸಲು ಅವಕಾಶ ಇದೆ. ದೂರಸಂಪರ್ಕ ಕಂಪನಿಗಳು ದೂರುಗಳನ್ನು ದಾಖಲಿಸಲು ವ್ಯವಸ್ಥೆ ರೂಪಿಸಬೇಕು. ತಮ್ಮ ಮೊಬೈಲ್ ಆ್ಯಪ್ ಮತ್ತು ವೆಬ್ಸೈಟ್ಗಳಲ್ಲಿ ದೂರು ದಾಖಲಿಸಲು ಅವಕಾಶ ನೀಡಬೇಕು.
ತಪ್ಪಿತಸ್ಥರಿಗೆ ದಂಡ/ಶಿಕ್ಷೆ: ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ, ಅವರ ಸಂಖ್ಯೆಗಳಿಂದ ಹೊರಹೋಗುವ ಕರೆಗಳನ್ನು 15 ದಿನ ಕಡಿತಗೊಳಿಸಲಾಗುತ್ತದೆ. ಉಲ್ಲಂಘನೆ ಮುಂದುವರಿದರೆ, ಅವರ ಸಂಪರ್ಕವನ್ನು ವರ್ಷದವರೆಗೆ ಸ್ಥಗಿತಗೊಳಿಸಲಾಗುತ್ತದೆ.
ನಿಯಮಗಳನ್ನು ಜಾರಿ ಮಾಡುವಲ್ಲಿ ವಿಫಲವಾದರೆ, ಭಾರಿ ದಂಡ ವಿಧಿಸುವುದಾಗಿಯೂ ಟ್ರಾಯ್, ಕಂಪನಿಗಳನ್ನು ಎಚ್ಚರಿಸಿದೆ. ಯುಸಿಸಿಯ ಸಂಖ್ಯೆಗಳ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಕಂಪನಿಗಳಿಗೆ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಯ ಉಲ್ಲಂಘನೆಗೆ ₹2 ಲಕ್ಷ ದಂಡ, ಎರಡನೆಯ ಬಾರಿಯ ಉಲ್ಲಂಘನೆಗೆ ₹5 ಲಕ್ಷ ದಂಡ ಮತ್ತು ನಂತರದ ಉಲ್ಲಂಘನೆಗೆ ₹10 ಲಕ್ಷ ದಂಡ ವಿಧಿಸಲು ನಿಯಮಗಳು ಅವಕಾಶ ಕಲ್ಪಿಸುತ್ತವೆ.
ದೂರಸಂಪರ್ಕ ಕಂಪನಿಗಳು ಗ್ರಾಹಕರಿಗೆ ಅನಪೇಕ್ಷಿತ ಕರೆ/ಸಂದೇಶ ನಿರಾಕರಿಸುವ ಆಯ್ಕೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ಸಂದೇಶಗಳನ್ನು ಸುಲಭವಾಗಿ ವಿಂಗಡಿಸಲು/ಗ್ರಹಿಸಲು ಸಾಧ್ಯವಾಗುವಂತೆ ಕೆಲವು ನಿರ್ದಿಷ್ಟ ಪದಗಳನ್ನು ಬಳಸಬೇಕು; ವಸ್ತು/ಸೇವೆಯ ಬಳಕೆಗೆ ಉತ್ತೇಜನ ನೀಡುವ ಸಂದೇಶಗಳಿಗೆ ‘ಪಿ’ ಎಂದು, ಸೇವೆಗೆ ‘ಎಸ್’ ಎಂದು, ವ್ಯಾವಹಾರಿಕ ಸಂದೇಶಕ್ಕೆ ‘ಟಿ’ ಎಂದು, ಸರ್ಕಾರಿ ಸಂದೇಶಗಳಿಗೆ ‘ಜಿ’ ಎಂದು ಬಳಸಬೇಕು ಎಂದು ನಿಯಮಗಳು ಹೇಳುತ್ತವೆ.ಗ್ರಾಹಕರು ಒಮ್ಮೆ ಯಾವುದೇ ಜಾಹೀರಾತು ಕರೆ/ಸಂದೇಶ ನಿರ್ಬಂಧಿಸಿದ್ದರೆ, ಮತ್ತೆ ಅವರ ಸಮ್ಮತಿ ಪಡೆಯಲು 90 ದಿನಗಳ ನಂತರವೇ ಪ್ರಯತ್ನಿಸಬೇಕು. ಅನಪೇಕ್ಷಿತ ಕರೆ ಮತ್ತು ಎಸ್ಎಂಎಸ್ಗಳ ಮಾದರಿಗಳನ್ನು ವಿಶ್ಲೇಷಣೆ ಮಾಡುವಂತೆಯೂ ಕಂಪನಿಗಳಿಗೆ ಟ್ರಾಯ್ ಸೂಚಿಸಿದೆ. ಅಸ್ವಾಭಾವಿಕವಾಗಿ ಕರೆಗಳಲ್ಲಿ ಹೆಚ್ಚಳ, ಕರೆಗಳ ಕಡಿಮೆ ಅವಧಿ, ಒಳಬರುವ ಹಾಗೂ ಹೊರಹೋಗುವ ಕರೆಗಳ ಅನುಪಾತದ ಆಧಾರದಲ್ಲಿ ಅನಪೇಕ್ಷಿತ ಕರೆಗಳನ್ನು ತಕ್ಷಣವೇ ಪತ್ತೆಹಚ್ಚಬಹುದಾಗಿದೆ ಎಂದೂ ಟ್ರಾಯ್ ಹೇಳಿದೆ.
ವಾಣಿಜ್ಯ ಕರೆಗಳನ್ನು ಮಾಡುವವರ (ನೋಂದಣಿರಹಿತ) ವಿರುದ್ಧ ದೂರು ದಾಖಲಿಸಲು ಗ್ರಾಹಕರು ಡಿಎನ್ಡಿ (ಡು ನಾಟ್ ಡಿಸ್ಟರ್ಬ್) ಅಡಿ ನೋಂದಣಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಗ್ರಾಹಕರು ಬಯಸಿದರೆ, ತಮಗೆ ಸೇವೆ ಪೂರೈಸುವ ಕಂಪನಿಗಳ ಪ್ರಚಾರಕ್ಕೆಸಂಬಂಧಿಸಿದ ಎಸ್ಎಂಎಸ್ಗಳನ್ನು ಕೂಡ ನಿರ್ಬಂಧಿಸಲು ನಿಯಮಗಳಲ್ಲಿ ಅವಕಾಶವಿದೆ.ಗ್ರಾಹಕರಿಗೆ ಸೇವೆ ನೀಡುವ ಪ್ರತಿಯೊಂದು ಕಂಪನಿಯೂ ನೋಂದಾಯಿತ ವಾಣಿಜ್ಯ ಸಂಪರ್ಕ ವ್ಯವಸ್ಥೆಗಳಿಗೆ ಮಾತ್ರವೇ ತನ್ನ ಜಾಲವನ್ನು ಬಳಸಿ ವಾಣಿಜ್ಯ ಕರೆ/ಸಂದೇಶ ಕಳುಹಿಸಲು ಅವಕಾಶ ನೀಡಬೇಕು. ನೋಂದಾಯಿತ ಅಲ್ಲದವರು ಕರೆ/ಸಂದೇಶ ಕಳುಹಿಸಿದರೆ, ಆ ಸಂಖ್ಯೆಯನ್ನು ಹೊಸ ನಿಯಮಗಳ ಅಡಿ ಅಮಾನತ್ತಿನಲ್ಲಿಡಬಹುದು ಇಲ್ಲವೇ ಸಂಪರ್ಕವನ್ನೇ ಕಡಿತ ಮಾಡಬಹುದು.
ಪಾರದರ್ಶಕವಾದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನೂನುಬದ್ದವಾದ ವಾಣಿಜ್ಯ ಕರೆಗಳಿಗೆ ಅಡ್ಡಿ ಇರುವುದಿಲ್ಲ. ವಂಚಕ ಕರೆಗಳ ವಿರುದ್ದ ದೂರು ನೀಡಲೂ ನಿಯಮಗಳಲ್ಲಿ ಅವಕಾಶ ನೀಡಲಾಗಿದೆ. ಆದರೆ, ಇಂಥ ಪ್ರಕರಣಗಳಲ್ಲಿ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಲಷ್ಟೇ ಸಾಧ್ಯ. ಮತ್ತೊಂದು ಮುಖ್ಯ ಬದಲಾವಣೆ ಎಂದರೆ, ಸದ್ಯ ಅನಪೇಕ್ಷಿತ, ವಾಣಿಜ್ಯ ಕರೆಗಳನ್ನು ಮಾಡುವವರನ್ನು ಎರಡು ವರ್ಷ ನಿರ್ಬಂಧಿಸಲಾಗುತ್ತಿದೆ. ಆದರೆ, ಹೊಸ ನಿಯಮಗಳಲ್ಲಿ ಅದನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದೆ.