ಉತ್ತಮ ಹೆಜ್ಜೆ
ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸೆ ಈಗಿನ ದಿನಗಳಲ್ಲಿ ವೆಚ್ಚದಾಯಕವಾಗಿ ಪರಿಣಮಿಸಿದೆ. ಅಲ್ಲದೆ, ಬದಲಾದ ಜೀವನ ಪದ್ಧತಿ, ಕೆಲಸದ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ ಅನಾರೋಗ್ಯದ ಪ್ರಮಾಣವೂ ಹೆಚ್ಚುತ್ತಿದ್ದು, ಕುಟುಂಬದಲ್ಲಿ ಒಬ್ಬ ಸದಸ್ಯ/ಸದಸ್ಯೆ ಕಾಯಿಲೆ ಬಿದ್ದರೂ, ಉಳಿತಾಯವೆಲ್ಲ ಕರಗಿಹೋಗಿ ಸಾಲದ ಹೊರೆ ಹೊತ್ತುಕೊಳ್ಳಬೇಕಾಗುತ್ತದೆ. ಅದೆಷ್ಟೋ ಮಾಧ್ಯಮ ವರ್ಗದ ಕುಟುಂಬಗಳಂತೂ ವೈದ್ಯಕೀಯ ಚಿಕಿತ್ಸೆ ಉಂಟುಮಾಡಿದ ಆರ್ಥಿಕ ಹೊಡೆತಕ್ಕೆ ನಲುಗಿ ಹೋಗಿವೆ. ಆದರೆ, ಹೊಸವರ್ಷದ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ಉತ್ತಮ ಹೆಜ್ಜೆ ಇರಿಸಿದ್ದು ಸ್ವಾಗತಾರ್ಹ.
ದೇಶದಲ್ಲೇ ಮೊದಲ ಬಾರಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ನಗದು ರಹಿತ ಚಿಕಿತ್ಸೆ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಮಹತ್ವದ ಸುಧಾರಣೆಗೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳ ಪೈಕಿ ಮೊದಲ ಹಂತದಲ್ಲಿ ಜನವರಿ 6ರಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಅನ್ವಯಿಸುವಂತೆ ಚಿಕಿತ್ಸಾ ವೆಚ್ಚದ ಮಿತಿ ಇರದ ಆರೋಗ್ಯ ಯೋಜನೆ ಜಾರಿಗೆ ಬರಲಿದೆ. ಆ ಬಳಿಕ ಉಳಿದ ಮೂರು ನಿಗಮಗಳಾದ ಬಿಎಂಟಿಸಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರಿಗೂ ಈ ಸೌಲಭ್ಯ ಸಿಗಲಿದೆ.
ಇದನ್ನೂ ಓದಿ: ಯೂನುಸ್ ತಳೆಯ ಹೊರಟಿರುವ ಆಯತೊಲ್ಲಾ ಅವತಾರ
ರಾಜ್ಯಾದ್ಯಂತ 225 ಆಸ್ಪತ್ರೆಗಳನ್ನು ಈ ಯೋಜನೆಗಾಗಿ ನೋಂದಣಿ ಮಾಡಲಾಗಿದೆ. ಅದರಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ. ನಾರಾಯಣ ಹೃದಯಾಲಯ, ಎಚ್‌ಸಿಜಿ, ಮೈಸೂರಿನ ಜೆಎಸ್‌ಎಸ್ ಸೇರಿದಂತೆ ಎಲ್ಲ ಪ್ರಮುಖ ಆಸ್ಪತ್ರೆಗಳಿವೆ. ನಾಲ್ಕು ನಿಗಮಗಳಲ್ಲಿ ಒಟ್ಟಾರೆ 1.15 ಲಕ್ಷ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟಾರೆ 7 ಲಕ್ಷ ಜನರು ಈ ಸೌಲಭ್ಯ ಪಡೆಯಲಿದ್ದಾರೆ. ನೌಕರರ ನಗದು ರಹಿತ ಚಿಕಿತ್ಸೆಗಾಗಿ ಪ್ರತಿ ನಿಗಮದಲ್ಲೂ ಪ್ರತ್ಯೇಕ ಟ್ರಸ್ಟ್ ರಚನೆಯಾಗಲಿದೆ.
ಸಾರಿಗೆ ಇಲಾಖೆಯಲ್ಲಿ ಇದು ಪರಿಣಾಮಕಾರಿಯಾಗಿ ಜಾರಿಗೆ ಬರಲಿ. ಅಲ್ಲದೆ, ರಾಜ್ಯ ಸರ್ಕಾರದ ಉಳಿದ ಎಲ್ಲ ಇಲಾಖೆಗಳಲ್ಲೂ ನಗದು ರಹಿತ ಚಿಕಿತ್ಸೆ ಸೌಲಭ್ಯವನ್ನು ಇದೇ ಮಾದರಿಯ ಯೋಜನೆಯ ಮೂಲಕ ಜಾರಿಗೆ ತರುವುದು ಅತ್ಯಂತ ಅವಶ್ಯವಾಗಿದೆ. ಇದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸ್ವಲ್ಪ ಹೊರೆ ಉಂಟುಮಾಡುವುದಾದರೂ, ಸರ್ಕಾರಿ ನೌಕರರಿಂದ ವಂತಿಗೆಯನ್ನು ಅಲ್ಪಪ್ರಮಾಣದಲ್ಲಿ ಹೆಚ್ಚಿಸಿ, ಸರ್ಕಾರಿ ಇಲಾಖೆಯ ಉದ್ಯೋಗಿ ಮತ್ತು ಅವರ ಕುಟುಂಬದ ಕನಿಷ್ಠ 5 ಸದಸ್ಯರಿಗೆ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸಬೇಕು. ಇಂಥ ವಿಷಯವನ್ನು ಕೇವಲ ಆರ್ಥಿಕ ದೃಷ್ಟಿಯಿಂದ ಅಳೆಯಲಾಗದು. ನಗದು ರಹಿತ ವೈದ್ಯಕೀಯ ಚಿಕಿತ್ಸೆಯಸೌಲಭ್ಯವಿದ್ದಲ್ಲಿ ಅದರಿಂದ ನೌಕರರ ಮನೋಬಲವೂ ಹೆಚ್ಚುತ್ತದೆ, ಕೆಲಸದ ಉತ್ಪಾದಕೆಯೂ ಆ ಮುಖೇನ ಜಾಸ್ತಿಯಾಗುತ್ತದೆ. ಸರ್ಕಾರಿ ನೌಕರರಲ್ಲಿ ಅಸಂಖ್ಯ ಜನರು ತಮ್ಮ ಕುಟುಂಬಕ್ಕೆ ಉತ್ತಮ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ. ಸರ್ಕಾರದಿಂದಲೇ ಆರೋಗ್ಯ ರಕ್ಷಣೆಯಂಥ ಯೋಜನೆ ಜಾರಿಗೆ ಬಂದಲ್ಲಿ ಅದು ಹಲವು ಆಯಾಮದಲ್ಲಿ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಲ್ಲದು.