ಎಂಸಿಜಿಯಲ್ಲಿ ಸಿಗುವುದೇ ಗೆಲುವು?
ಮೆಲ್ಬರ್ನ್: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬುವಂತೆ, ಭಾರತದ ಪಾಲಿಗೆ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಟೆಸ್ಟ್‌ನ 4ನೇ ದಿನ ಪರಿಸ್ಥಿತಿ ಕಂಡು ಬಂದಿದೆ. 10ನೇ ವಿಕೆಟ್‌ಗೆ ಆಸೀಸ್ ನೇಥನ್ ಲಯನ್ ಹಾಗೂ ಸ್ಕಾಟ್ ಬೊಲಾಂಡ್ ನಡುವಿನ ಮುರಿಯದ 55 ರನ್‌ಗಳ ಕೊನೆಯ ವಿಕೆಟ್ ಜೊತೆಯಾಟ ಭಾರತದ ಗೆಲುವಿನ ಆಸೆಯನ್ನೇ ತಗ್ಗಿಸಿಬಿಟ್ಟಿದೆ. 2ನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 228 ರನ್‌ಗಳಿಸಿರುವ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್‌ನ 105 ರನ್‌ಗಳ ಮುನ್ನಡೆಯಿಂದಾಗಿ ಬರೋಬ್ಬರಿ 333 ರನ್‌ಗಳ ಮುನ್ನಡೆಯಲ್ಲಿದೆ. ಹಾಗಾಗಿ, ಕೊನೆಯ ದಿನ ಗೆಲುವಿಗೆ ಭಾರತ ತಂಡ, ಬೃಹತ್ ಶಿಖರವನ್ನೇ ಏರಬೇಕಿದೆ.
4ನೇ ದಿನದಾಟದಾರಂಭದಲ್ಲಿ ಭಾರತ 358 ರನ್‌ಗಳಿಗೆ 11 ರನ್ ಪೇರಿಸಿ ಆಲೌಟ್ ಆಯಿತು. ಆದರೆ, ಆಸ್ಟ್ರೇಲಿಯಾ ಕೂಡ ಭಾರತದ ವೇಗಿಗಳ ಮಾರಕ ದಾಳಿಗೆ ಕುಸಿಯುತ್ತಲೇ ಸಾಗಿತು. 2ನೇ ಇನ್ನಿಂಗ್ಸ್‌ನ ಒಂದು ಹಂತದಲ್ಲಿ 91ಕ್ಕೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ, ಯಶಸ್ವಿ ಜೈಸ್ವಾಲ್ ಕೈಚೆಲ್ಲಿದ ಮೂರು ಕ್ಯಾಚ್‌ಗಳ ಸಂಪೂರ್ಣ ಲಾಭ ಪಡೆದು, ಮತ್ತೆ ಚೇತರಿಸಿಕೊಳ್ಳುವ ಮೂಲಕ ದಿನದಂತ್ಯಕ್ಕೆ 82 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 228ರ ಮೊತ್ತ ತಲುಪಿದೆ.
ಇದನ್ನೂ ಓದಿ:ಸಾಮಾನ್ಯರ ಅಸಾಮಾನ್ಯ ಕಾರ್ಯಕ್ಕೊಂದು ಸೆಲ್ಯೂಟ್!
10ನೇ ವಿಕೆಟ್‌ಗೆ 55 ರನ್ ಕೇವಲ 173 ರನ್ ಗಳಿದ್ದಾಗಲೇ 9ನೇ ವಿಕೆಟ್ ಕಳೆದುಕೊಂಡ ಆಸೀಸ್‌ಗೆ 10ನೇ ವಿಕೆಟ್‌ಗೆ ನೇಥನ್ ಲಯನ್ ಹಾಗೂ ಬಾಲಂಗೋಚಿ ಸ್ಕಾಟ್ ಬೊಲಾಂಡ್ ಸುದೀರ್ಘ ಕಾಲ ಬ್ಯಾಟಿಂಗ್ ನಡೆಸಿದರು. ಒಟ್ಟು 107 ಎಸೆತಗಳನ್ನು ಎದುರಿಸಿದ ಈ ಜೋಡಿ 55 ರನ್‌ಗಳಿಸಿ, ದಿನದಂತ್ಯವರೆಗೂ ವಿಕೆಟ್ ಕಾಪಾಡಿಕೊಂಡಿದ್ದು, ಭಾರತದ ಗೆಲುವಿನ ಆಸೆಯನ್ನೇ ಕಿತ್ತುಕೊಂಡಿತು. ಸದ್ಯ ಲಯನ್ 41 ಹಾಗೂ ಬೊಲಾಂಡ್ 10 ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಜೋಡಿಯ ಆಟಕ್ಕೆ ಮೆಲ್ಲೋರ್ನ್ ಸ್ಟೇಡಿಯಂನಲ್ಲಿದ್ದ 43,867 ಪ್ರೇಕ್ಷಕರಿಂದ ಚಪಾಳೆ ಸಿಕ್ಕಿತು.
4ನೇ ದಿನದಾಟದಲ್ಲಿ ಭಾರತೀಯ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಆಸೀಸ್‌ಗೆ ಆಘಾತದ ಮೇಲೊಂದು ಆಘಾತ ನೀಡಿದರು. 20 ರನ್‌ಗಳಿಸಿದ್ದ ಆಸ್ಟ್ರೇಲಿಯಾಗೆ ಬುಮ್ರಾ ಸ್ಯಾಮ್ ಕೊನ್‌ಸ್ಪಾಸ್‌ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸ್ಟೇಡಿಯಂನಲ್ಲಿ ಕಿಚ್ಚೆಬ್ಬಿಸಿದರೆ, ಸಿರಾಜ್ ಉಸ್ಮನ್ ಖವಾಜರನ್ನು ಬೌಲ್ಡ್ ಮಾಡಿದರು. ಇದಾದ ನಂತರ ಜೊತೆಗೂಡಿದ ಮಾರ್ನಸ್ ಲಾಬುಷೇನ್ ಹಾಗೂ ಸ್ಟೀವನ್ ಸ್ಮಿತ್ ಜೋಡಿ ಭೋಜನ ವಿರಾಮದ ಹೊತ್ತಿಗೆ ಮೊತ್ತವನ್ನು ಐವತ್ತರ ಗಡಿ ದಾಟಿಸಿದರು.
ಭೋಜನ ವಿರಾಮದ ಬಳಿಕ ಸಿರಾಜ್ ಅಪಾಯಕಾರಿಸ್ಟೀವ್ ಸ್ಮಿತ್‌ರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಇನ್ನೊಂದೆಡೆ ಬುಮ್ರಾ ಕೇವಲ ಆರು ರನ್‌ಗಳ ಅಂತರದಲ್ಲಿ ಆಸೀಸ್‌ನ ಮೂವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಬರ್ತ್‌ಡೇ ಬಾಯ್ ಟ್ರಾವಿಸ್ ಹೆಡ್ ಕೂಡ 1 ರನ್ ಗಳಿಸಿ ನಿರ್ಗಮಿಸಿದರು. ಜೊತೆಗೆ ಮಿಚೆಲ್ ಮಾರ್ಷ್ ಕೂಡ ಶೂನ್ಯ ಸುತ್ತಿದರೆ, ಅಲೆಕ್ಸ್ ಕ್ಯಾರಿ 2 ರನ್ ಗಳಿಸಿ ಹೊರ ನಡೆದರು.
ಲಬುಷೇನ್ ಬ್ಯಾಟಿನಿಂದ ಸಿಡಿದ ಚೆಂಡನ್ನು ನೆಲಕ್ಕೆ ಹಾಕಿದ ಜೈಸ್ವಾಲ್ ಭಾರಿ ಬೆಲೆ ತೆತ್ತಿದ್ದಾರೆ. ಸುಮಾರು 3 ಕ್ಯಾಚ್‌ಗಳನ್ನು ಕೈಬಿಟ್ಟ ಜೈಸ್ವಾಲ್‌ರಿಗೆ ನಾಯಕ ರೋಹಿತ್‌ನಿಂದ ಎಚ್ಚರಿಕೆ ಸಂದೇಶಗಳು ಸಲ್ಲಿಕೆಯಾದವು. ಅಂತಿಮವಾಗಿ ಲಾಬುಷೇನ್ 105 ಎಸೆತಗಳಲ್ಲಿ ವೈಯಕ್ತಿಕ ಅರ್ಧ ಶತಕ ಪೂರೈಸಿದರು.
ಚಹ ವಿರಾಮದ ನಂತರದ ಎಸೆತದಲ್ಲೇ ಸಿರಾಜ್, 70 ರನ್ ಗಳಿಸಿದ್ದ ಲಾಬುಷೇನ್‌ರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಉರುಳಿಸಿದರೆ, ಅದಾದ 8 ರನ್‌ಗಳ ಬಳಿಕ 5 ರನ್ ಗಳಿಸಿದ್ದ ಮಿಚೆಲ್ ಸ್ಟಾರ್ಕ್ ರನೌಟ್‌ಗೆ ಬಲಿಯಾದರು. ಉತ್ತಮ ಆಟವಾಡಿದ ನಾಯಕ ಪ್ಯಾಟ್ ಕಮಿನ್ಸ್ 41 ರನ್‌ಗಳಿಸಿ, ಜಡೇಜಾ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ರೋಹಿತ್‌ಗೆ ಕ್ಯಾಚ್ ನೀಡಿದರು. ಇದಾದ ಬಳಿಕ 10ನೇ ವಿಕೆಟ್‌ಗೆ ಲಯನ್ ಹಾಗೂ ಬೋಲಾಂಡ್ ಅಜೇಯ ಆಟವಾಡಿದರು. ದಿನದಂತ್ಯದ ಕೊನೆ ಓವರ್‌ನಲ್ಲಿ ಬುಮ್ರಾ ಬೌಲಿಂಗ್‌ನಲ್ಲಿ ಲಯನ್ ಬಾರಿಸಿದ ಚೆಂಡು ಕೆ.ಎಲ್.ರಾಹುಲ್ ಹಿಡಿದರಾದರೂ, ನೋ ಬಾಲ್‌ನಿಂದ ಲಯನ್ ಬಚಾವ್ ಆದರು.
ಬುಮ್ರಾ ವೇಗದ 200ನೇ ವಿಕೆಟ್ ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ತಮ್ಮ 44ನೇ ಟೆಸ್ಟ್‌ನಲ್ಲೇ 200ನೇ ವಿಕೆಟ್ ಸಂಪಾದಿಸುವ ಮೂಲಕ 50 ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದ ಕಪಿಲ್ ದೇವ್‌ರ ದಾಖಲೆ ಮುರಿದಿದ್ದಾರೆ. ಅಲ್ಲದೇ, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 28 ವಿಕೆಟ್ ಪಡೆಯುವ ಮೂಲಕ ಬುಮ್ರಾ, ಕಪಿಲ್ ದೇವ್‌ರ 25 ವಿಕೆಟ್ ಸಾಧನೆಯನ್ನೂ ಮುರಿದಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 474 ಹಾಗೂ 82 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 228ರನ್. ಭಾರತ: 119.3 ಓವರ್‌ಗಳಲ್ಲಿ 369 ರನ್.