ಕಂಪನಿ ಷೇರಿನ ಮೇಲೆ ಹೂಡಿಕೆ ಹೇಗೆ?
ನೀವು ಕಂಪನಿಯೊಂದರ ಷೇರಿನ ಮೇಲೆ ಹೂಡಿಕೆ ಮಾಡಬೇಕೋ, ಬೇಡವೋ ಎಂದು ತೀರ್ಮಾನ ಮಾಡಬೇಕಾದರೆ ಆ ಕಂಪನಿಯ ವಾರ್ಷಿಕ ವರದಿಯನ್ನು ನೋಡಬೇಕಾಗುತ್ತದೆ.
ನಿರ್ದಿಷ್ಟ ವರ್ಷದಲ್ಲಿ ಕಂಪನಿಯ ಕಾರ್ಯಕ್ಷಮತೆ, ಭವಿಷ್ಯದ ಯೋಜನೆಗಳು ಮತ್ತು ಹಣಕಾಸಿನ ಸ್ಥಿತಿಗತಿಯ ವಿವರ ಸೇರಿ ಸಮಗ್ರ ಮಾಹಿತಿಯು ಆ ದಾಖಲೆಯಲ್ಲಿ ಅಡಕವಾಗಿರು- ಇದೆ. ಷೇರು ಮಾರುಕಟ್ಟೆಗೆ ಸೇರ್ಪಡೆಗೊಂಡಿರುವ ಪ್ರತಿ ಕಂಪನಿಯೂ ಕಡ್ಡಾಯವಾಗಿ 200ರಿಂದ 300 ಪುಟಗಳಷ್ಟು ವಿವರವಾದ ವಾರ್ಷಿಕ ವರದಿ ಪ್ರಕಟಿಸಬೇಕಾಗುತ್ತದೆ. ಆದರೆ, ಅಂಕಿ-ಸಂಖ್ಯೆ ಮತ್ತು ಚಾರ್ಟ್ಗಳನ್ನು ಒಳಗೊಂಡಿರುವ ಈ ಪುಟಗಳ ದಾಖಲೆಯನ್ನು ಓದಿ ಮನನ ಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ.
ಹಾಗಾದರೆ ಕಂಪನಿಯ ವಾರ್ಷಿಕ ವರದಿಯನ್ನು ಒಬ್ಬ ಸಾಮಾನ್ಯ ಹೂಡಿಕೆದಾರ ಅರ್ಥೈಸಿಕೊಳ್ಳುವುದು ಹೇಗೆ? ಯಾವ ಅಂಶಗಳ ಬಗ್ಗೆ ಹೆಚ್ಚು ಒತ್ತು ನೀಡಿದರೆ ಸಾಕಾಗುತ್ತದೆ? ಬನ್ನಿ, ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ.
ಕಂಪನಿಯ ಮುಖ್ಯಸ್ಥರು/ ಅಧ್ಯಕ್ಷರು / ಕಾರ್ಯ ನಿರ್ವಹಣಾಧಿಕಾರಿಯ ಸಂದೇಶ: ಕಂಪನಿಯ ವಾರ್ಷಿಕ ವರದಿಯಲ್ಲಿ ನೀವು ಮೊದಲನೆಯದಾಗಿ ಗಮನಿಸಿಕೊಳ್ಳಬೇಕಿರುವುದು ಅಧ್ಯಕ್ಷರು/ ಕಂಪನಿಯ ಕಾರ್ಯನಿರ್ವಹಣಾಧಿಕಾರಿ ನೀಡಿರುವ ಸಂದೇಶ, ಕಂಪನಿಯ ಭವಿಷ್ಯದ ಬಗ್ಗೆ ಅದನ್ನು ಮುನ್ನಡೆಸುತ್ತಿರುವ ಅಧಿಕಾರಿ ಹೇಗೆ ಆಲೋಚನೆ ಮಾಡುತ್ತಿದ್ದಾರೆ ಎನ್ನುವ ಚಿತ್ರಣವನ್ನು ಇದು ಕಟ್ಟಿಕೊಡುತ್ತದೆ.
ಕಂಪನಿಯ ಒಟ್ಟಾರೆ ಬೆಳವಣಿಗೆ ಬಗ್ಗೆ ಅಧ್ಯಕ್ಷರ ಸಂದೇಶ ಒಂದು ಪಕ್ಷಿನೋಟವನ್ನು ಒದಗಿಸುತ್ತದೆ. ನಿರ್ದಿಷ್ಟ ವರ್ಷದಲ್ಲಿ ಕಂಪನಿ ಮಾಡಿರುವ ಸಾಧನೆಗಳು ಮತ್ತು ಎದುರಿಸಿದ ಸವಾಲುಗಳು ಸೇರಿ ಭವಿಷ್ಯದ ಯೋಜನೆಗಳ ಬಗ್ಗೆ ಒಂದು ಮೇಲ್ನೋಟವು ಇಲ್ಲಿ ಸಿಗುತ್ತದೆ. ಒಂದರ್ಥದಲ್ಲಿ ಅಧ್ಯಕ್ಷರ ಸಂದೇಶವನ್ನು ಷೇರು ಹೂಡಿಕೆದಾರಿಗೆ ಆ ಕಂಪನಿಯ ಮುಖ್ಯಸ್ಥ ಬರೆದ ಪತ್ರ ಎಂದೇ ಪರಿಗಣಿಸಬಹುದು.
ಉದಾಹರಣೆಗೆ ಹಿಂದುಸ್ತಾನ್ ಯೂನಿಲಿವರ್ ಅಧ್ಯಕ್ಷ ನಿತಿನ್ ಪರಾಂಜಪೆ ಅವರು 2023-24ರ ವಾರ್ಷಿಕ ವರದಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರ ಖರೀದಿ ಸಾಮರ್ಥ್ಯ ಕುಗ್ಗಿದ ಪರಿಣಾಮ ಬ್ಯುಸಿನೆಸ್ಗೆ ಹೊಡೆತ ಬಿದ್ದಿತು. ಹೀಗಿದ್ದರೂ ಕಂಪನಿ ಉತ್ತಮ ಸಾಮರ್ಥ್ಯ ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.
ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಜನಪ್ರಿಯ ಉತ್ಪನ್ನಗಳನ್ನು ತರಲು ಡಿಜಿಟಲ್ ತಂತ್ರಜ್ಞಾನ ಮತ್ತು ಸಂಶೋಧನೆಗೆ ಒತ್ತು ನೀಡುವುದಾಗಿ ಉಲ್ಲೇಖಿಸಿದ್ದಾರೆ. ಹೊಸ ಉತ್ಪನ್ನಗಳನ್ನು ಕೇಂದ್ರೀಕರಿಸಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಸಲುವಾಗಿ 2024ರ ಏಪ್ರಿಲ್ನಿಂದ ವೈಯಕ್ತಿಕ ಆರೈಕೆ ಉದ್ಯಮ (ಪರ್ಸನಲ್ ಕೇರ್ ಬ್ಯುಸಿನೆಸ್) ಮತ್ತು ಸೌಂದರ್ಯ ಮತ್ತು ಶುಕ್ರೂಷೆ ಉದ್ಯಮ (ಬ್ಯುಟಿ ಆ್ಯಂಡ್ ವೆಲ್ ಬೀಯಿಂಗ್ ಬ್ಯುಸಿನೆಸ್) ಘಟಕಗಳನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ.
ಇವೆಲ್ಲಾ ಚಿಂತನೆಗಳು ಕಂಪನಿ ಭವಿಷ್ಯದಲ್ಲಿ ಮತ್ತಷ್ಟು ಸಕಾರಾತ್ಮಕವಾಗಿ ಬೆಳವಣಿಗೆ ಸಾಧಿಸಲಿದೆ ಎನ್ನುವ ಭರವಸೆ ನೀಡುತ್ತವೆ.
ಇದನ್ನೂ ಓದಿ: ಸಿಪಿಎಂ ಸಮ್ಮೇಳನ ಯಶಸ್ವಿಗೊಳಿಸಲು ಮನವಿ
ಆಡಳಿತ ಮಂಡಳಿ ಚರ್ಚೆ ಮತ್ತು ವಿಶ್ಲೇಷಣೆ:ವಾರ್ಷಿಕ ವರದಿಯಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಅಂದರೆ ಆಡಳಿತ ಮಂಡಳಿಯ ಚರ್ಚೆ ಮತ್ತು ವಿಶ್ಲೇಷಣೆ. ಇದನ್ನು ವಾರ್ಷಿಕ ವರದಿಯ ‘ಹೃದಯ ಭಾಗ’ ಎಂದೇ ಪರಿಗಣಿಸಲಾಗುತ್ತದೆ. ಕಂಪನಿ ಒಂದು ರೀತಿಯಲ್ಲಿ ನೇರವಾಗಿಇಲ್ಲಿ ಷೇರುದಾರನೊಂದಿಗೆ ಮಾತನಾಡುತ್ತದೆ.
ಉದ್ಯಮದ ನಿರ್ವಹಣೆ, ಒಟ್ಟಾರೆ ದಿಕ್ಕು, ಭವಿಷ್ಯದ ಯೋಜನೆಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸ ಲಾಗುತ್ತದೆ. ಒಂದು ಕಂಪನಿಯ ನಿರ್ದಿಷ್ಟ ಭವಿಷ್ಯದ ಮುನ್ನೋಟ ಬೇಕಾದರೆ ಆ ವಲಯದ ನಾಲೈದು ಕಂಪನಿಗಳ ಅಡಳಿತ ಮಂಡಳಿಯ ಮತ್ತು ವಿಶ್ಲೇಷಣೆ ವಿಭಾಗವನ್ನು ನೋಡಬೇಕಾ ಗುತ್ತದೆ. ಹೀಗೆ ಮಾಡಿದಾಗ ಆ ವಲಯದ ಉದ್ಯಮ ಒಟ್ಟಾರೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದು ಅರಿವಿಗೆ ಬರುತ್ತದೆ.
ಜೊತೆಗೆ, ಆ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳು ಯಾರು, ಮುಂದೆ ಇರುವ ರಿಸ್ಕ್ ಮತ್ತು ಅವಕಾಶಗಳೇನು ಎಂಬ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ವಾರ್ಷಿಕ ವರದಿಯ ಈ ವಿಭಾಗ ಕಂಪನಿಯ ಉದ್ಯಮ ತಂತ್ರಗಾರಿಕೆ ಬಗ್ಗೆಯೂ ತಿಳಿಸಿ ಕೊಡುತ್ತದೆ. ಭವಿಷ್ಯದಲ್ಲಿ ಹೊಸ ಉತ್ಪನ್ನಗಳು ಗಳು ಮತ್ತು ಹೊಸ ಪ್ರದೇಶಗಳಿಗೆ ಮಾರುಕಟ್ಟೆ ವಿಸ್ತರಣೆ ಮಾಡುವರೇ ಎನ್ನುವ ಮಾಹಿತಿ ಇರುತ್ತದೆ.
ಉದಾಹರಣೆಗೆ ಹಿಂದುಸ್ತಾನ್ ಯೂನಿಲಿವರ್ ಉನ್ನತ ಶ್ರೇಣಿಯ ಉತ್ಪನ್ನ ಗಳನ್ನು ಹೊರತರಲು ಬೇರೆ ಬೇರೆ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸುತ್ತಿದೆ. ಡಿಜಿಟಲ್ ವಲಯದಲ್ಲಿ ಪ್ರಭಾವಿಯಾಗಲು ಈ ಇಮ್ಯಾಜಿನ್ ಎಚ್ಯುಎಲ್ ಎನ್ನುವ ಅಭಿಯಾನ ಶುರು ಮಾಡಿದೆ. ಆರೋಗ್ಯಕ್ಕೆ ಪೂರಕವಾದ ಉತ್ಪನ್ನಗಳನ್ನು ಸೃಷ್ಟಿಸಲು ಓಜಿವಾ ಮತ್ತು ವೆಲ್ ಬೀಯಿಂಗ್ ನ್ಯೂಟ್ರೇಷನ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಹೀಗೆ ಕಂಪನಿಯ ಮುಂದಿನ ನಡೆಯನ್ನು ಇದು ತಿಳಿಸುತ್ತದೆ. ಅಲ್ಲದೆ, ಇದೇ ವಿಭಾಗದಲ್ಲಿ ಕಂಪನಿಗಿರುವ ರಿಸ್ಕ್ ಮತ್ತು ಅವಕಾಶಗಳ ಬಗ್ಗೆಯೂ ವಿವರವಾದ ಮಾಹಿತಿ ಇರುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕಾಗುತ್ತದೆ.
ಕಂಪನಿಯ ಹಣಕಾಸು ವರದಿ: ಕಂಪನಿಯ ಹಣಕಾಸು ವರದಿಗಳು ಎರಡು ರೀತಿಯಲ್ಲಿ ಬರುತ್ತವೆ. ಒಂದನೆಯದ್ದು ಕ್ರೋಡೀಕರಿಸಲಾದ ಹಣಕಾಸು ವರದಿ (ಕಾಲಿಡೇಟೆಡ್). ಮತ್ತೊಂದು ಸ್ವತಂತ್ರ ಹಣಕಾಸು ವರದಿ (ಸ್ಟ್ಯಾಂಡ್ ಅಲೋನ್), ಕ್ರೋಡೀಕರಿಸಲಾದ `ಹಣಕಾಸು ವರದಿಯಲ್ಲಿ ಮಾತೃಸಂಸ್ಥೆ ಮತ್ತುಅದರ ಸಹವರ್ತಿ ಸಂಸ್ಥೆಗಳ ವಿವರ ಇರುತ್ತದೆ.
ಆದರೆ, ಸ್ಟ್ಯಾಂಡ್ ಅಲೋನ್ ವರದಿಯಲ್ಲಿ ಒಂದು ಕಂಪನಿಯ ವರದಿ ಮಾತ್ರ ಉಲ್ಲೇಖ ವಾಗಿರುತ್ತದೆ. ಕಂಪನಿಯ ಹಣಕಾಸು ವರದಿಯಲ್ಲಿ ಪ್ರಾಫಿಟ್ ಆ್ಯಂಡ್ ಲಾಸ್ ಸ್ಟೇಟ್ಮೆಂಟ್, ಬ್ಯಾಲೆನ್ಸ್ ಶೀಟ್ ಮತ್ತು ಕ್ಯಾಷ್ ಫ್ಲೋ ಸ್ಟೇಟ್ಮೆಂಟ್ ಎಂಬ ಮೂರು ಭಾಗಗಳಿರುತ್ತವೆ. ಪ್ರಾಫಿಟ್ ಆ್ಯಂಡ್ ಲಾಸ್ ಸ್ಟೇಟ್ಮೆಂಟ್ ಉದ್ಯಮದ ಖರ್ಚು- ವೆಚ್ಚ, ಮಾರಾಟ ಮಾಹಿತಿ ಮತ್ತು ಲಾಭ-ನಷ್ಟದ ವಿವರ ಒಳಗೊಂಡಿರುತ್ತದೆ.
ಉದಾಹರಣೆಗೆ ಹಿಂದುಸ್ತಾನ್ ಯೂನಿಲಿವರ್ 2023-24ರಲ್ಲಿ ₹10,114 1. 2022-23ರಲ್ಲಿ 19,926 ಕೋಟಿ ಲಾಭ ದಾಖಲಿಸಿತ್ತು. ಇನ್ನು ಬ್ಯಾಲೆನ್ಸ್ ಶೀಟ್ ಕಂಪನಿಯ ಆಸ್ತಿ ಮತ್ತು ಸಾಲಗಳ ವಿವರವನ್ನು ಒದಗಿಸುತ್ತದೆ. ಕೊನೆಯದಾಗಿ ಕ್ಯಾಷ್ ಫ್ಲೋ ಸ್ಟೇಟ್ಮೆಂಟ್ ಕಂಪನಿಗೆ ಹಣದ ಒಳಹರಿವು ಮತ್ತು ಹೊರಹರಿವಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿಸುತ್ತದೆ. ಕಂಪನಿ ತನ್ನ ಉದ್ಯಮದಿಂದ ನಿಯಮಿತವಾಗಿ ಹಣದ ಒಳ ಹರಿವು ಹೆಚ್ಚಿಸಿಕೊಳ್ಳದಿದ್ದರೆ ಅದು ಹೂಡಿಕೆಗೆ ಅಷ್ಟು ಸೂಕ್ತ ಆಯ್ಕೆಯಲ್ಲ ಎಂದು ಪರಿಗಣಿಸಬೇಕಾಗುತ್ತದೆ.
ಕಾರ್ಪೊರೇಟ್ ಗವರ್ನೆನ್ಸ್ ವರದಿ: ಕಂಪನಿ ಯೊಂದರ ಆಡಳಿತ ಎಷ್ಟು ಉತ್ತಮವಾಗಿದೆ ಎನ್ನುವುದನ್ನು ಕಾರ್ಪೊರೇಟ್ ಗವರ್ನೆನ್ಸ್ ವರದಿ ತಿಳಿಸುತ್ತದೆ. ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ. ಸಭೆಗಳು ಸರಿಯಾಗಿ ನಡೆಯುತ್ತಿವೆಯೇ, ಉಪ ಸಮಿತಿಯಲ್ಲಿ ಸರಿಯಾದ ಸಂಖ್ಯೆ ಇದೆಯೇ, ಖಾಲಿಯಾದ ನಿರ್ದೇಶಕರ ಹುದ್ದೆಗಳಿಗೆ ಮರುನೇಮಕ ಆಗಿದೆಯೇ ಹೀಗೆ ಪ್ರಮುಖ ಮಾಹಿತಿ ಪಡೆದುಕೊಳ್ಳಿ. ಏಕೆಂದರೆ ಉತ್ತಮ ಆಡಳಿತ ಕಂಪನಿಯ ಸಕಾರಾತ್ಮಕ ಬೆಳವಣಿಗೆಗೆ ಪೂರಕವಾಗಿರುತ್ತದೆ.
ಮತ್ತೆ ಮತ್ತೆ ಅಡಿಟರ್ಗಳನ್ನು ಬದಲಿಸುವುದು, ಆಡಳಿತ ಮಂಡಳಿ ಸಭೆಗೆ ಹಾಜರಾತಿ ಕೊರತೆ ಯಂತಹ ಅಂಶಗಳು ಕಂಡು ಬಂದಿದ್ದರೆ ಅಂತಹ ಕಂಪನಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ಕಂಪನಿಯ ಸಾಧನೆಯ ನೋಟ: ಕಂಪನಿಯ ವಾರ್ಷಿಕ ವರದಿಯಲ್ಲಿ ಮೇಲೆ ಸೂಚಿಸಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನೋಡಲು ಕಷ್ಟವಾಗುತ್ತದೆ ಎನ್ನುವವರು ಕಂಪನಿಯ ಸಾಧನೆಯ ನೋಟ (ಕಂಪನಿ ಫರ್ಫಾರ್ಮೆನ್ಸ್ ಓವರ್ ವೀವ್) ವಿಭಾಗವನ್ನು ನೋಡಬಹುದು.
ಇದರಲ್ಲಿ ಕಂಪನಿಯ ಅಲೋಚನೆ, ಭವಿಷ್ಯದ ಮುನ್ನೋಟ, ಸಾಧನೆ, ಸವಾಲು, ಹಣಕಾಸಿನ ಸ್ಥಿತಿಗತಿ ಸೇರಿ ಎಲ್ಲ ಪ್ರಮುಖ ಅಂಶಗಳು ಒಳಗೊಂಡಿರುತ್ತವೆ. ಉದಾಹರಣೆಗೆ ಹಿಂದುಸ್ತಾನ್ ಯೂನಿಲಿವರ್ನ 2023-24ನೇ ಸಾಲಿನ ವಾರ್ಷಿಕ ವರದಿಯಲ್ಲಿ 25 ಪುಟಗಳ ವಿವರಣೆ ಇದೆ. ಇದನ್ನು ಗಮನಿಸಿದರೆ ಕಂಪನಿ ಯಾವ ದಿಕ್ಕಿನಲ್ಲಿ ಸಾಗಿದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಸಿಗುತ್ತದೆ.