ದೊಡ್ಡಣ್ಣ’ನ ಹಾದಿಯಲ್ಲಿ ಬ್ರಿಟನ್

ದೊಡ್ಡಣ್ಣ’ನ ಹಾದಿಯಲ್ಲಿ ಬ್ರಿಟನ್


ಅಮೆರಿಕದ ನಂತರ ಬ್ರಿಟನ್ ಸರ್ಕಾರವು ಆಕ್ರಮ ವಲಸೆ ಮತ್ತು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಕ್ರಮ ವಲಸಿಗರನ್ನು ಅವರ ಮೂಲದೇಶಗಳಿಗೆ ತಲುಪಿಸಲು ಸಜ್ಜಾಗಿರುವ ವಿಮಾನಗಳ ವಿಡಿಯೊ ಅನ್ನು ಫೆ.10ರಂದು ಅಲ್ಲಿನ ಗೃಹ ಇಲಾಖೆ ಹಂಚಿಕೊಂಡಿದೆ. ಅಕ್ರಮ ವಲಸೆಯ ವಿರುದ್ಧ ತಾನು ದೃಢ ನಿಲುವು ಹೊಂದಿರುವುದನ್ನು ಸಾಬೀತು ಪಡಿಸುವುದಕ್ಕಾಗಿ ಲೇಬರ್ ಪಾರ್ಟಿ ಸರ್ಕಾರವು ಈ ರೀತಿ ಮಾಡಿರುವುದಾಗಿ ಹೇಳಲಾಗುತ್ತಿದ್ದು, ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಗಳನ್ನು ಮುಂದುವರಿಸಲಾಗುವುದು ಎಂಬ ಸಂದೇಶವನ್ನೂ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಈ ಮೂಲಕ ರವಾನಿಸಿದ್ದಾರೆ.

ಜನವರಿ ತಿಂಗಳಲ್ಲಿ ಬ್ರಿಟನ್‌ನ ವಲಸೆ ವಿಭಾಗದ ಅಧಿಕಾರಿಗಳು ದೇಶದ 828 ಸ್ಥಳಗಳಲ್ಲಿ ದಾಳಿ ನಡೆಸಿ ಅಲ್ಲಿದ್ದವರ ವಲಸೆಯ ದಾಖಲೆಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಭಾರತ ಮೂಲದವರಿಗೆ ಸೇರಿದ ಒಂದು ರೆಸ್ಟೋರೆಂಟ್ ಕೂಡ ಇತ್ತು. ಈ ವೇಳೆ ಏಳು ಮಂದಿಯನ್ನು ಬಂಧಿಸಿ, ನಾಲ್ವರನ್ನು ವಶಕ್ಕೆ ಪಡೆದಿದ್ದರು.

ಐದು ವರ್ಷಗಳಲ್ಲಿ ಬ್ರಿಟನ್‌ನಲ್ಲಿ ಅಕ್ರಮ ವಲಸಿಗರ ವಿರುದ್ಧ ನಡೆಸಲಾದ ಅತಿ ದೊಡ್ಡ ಕಾರ್ಯಾಚರಣೆ ಇದು. ನಾಲ್ಕು ‘ದೊಡ್ಡ ವಿಮಾನಗಳಲ್ಲಿ 850ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಕೀರ್ ಸ್ವಾರ್ಮರ್ ಸರ್ಕಾರ ಹೇಳಿಕೊಂಡಿದೆ. 2024ರ ಜುಲೈನಲ್ಲಿ ಸ್ವಾರ್ಮರ್ ಸರ್ಕಾರ ಬಂದ ನಂತರ, ಇಲ್ಲಿಯವರೆಗೆ ಸುಮಾರು 19 ಸಾವಿರ ಅಕ್ರಮ ವಲಸಿಗರನ್ನು ದೇಶದಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ. 2018ರ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ನೆಲಸಿದ್ದವರನ್ನು ಅವರ ದೇಶಕ್ಕೆ ಕಳುಹಿಸಿದ್ದು ಇದೇ ಮೊದಲು.

ಒಂದು ಕಡೆ ದೇಶದೊಳಗಿನ ಅಕ್ರಮ ವಲಸಿಗರನ್ನು ಹೊರಹಾಕಲಾಗುತ್ತಿದೆ. ಇನ್ನೊಂದು ಕಡೆ, ದೇಶದೊಳಗೆ ವಲಸಿಗರು ಅಕ್ರಮವಾಗಿ ಪ್ರವೇಶಿಸುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಉದ್ಯೋಗದ ಆಸೆಯೊಂದಿಗೆ ಸಣ್ಣ ದೋಣಿಗಳ ಮೂಲಕ ಬ್ರಿಟನ್‌ಗೆ ಬರುತ್ತಿರುವ ಕಾರ್ಮಿಕರ ವಿರುದ್ಧ ಬಿಗಿ ನಿಲುವು ತಳೆಯುವುದಾಗಿಯೂ ಪ್ರಧಾನಿ ಸ್ವಾರ್ಮರ್ ಹೇಳಿದ್ದಾರೆ.

ಇದನ್ನೂ ಓದಿ:ಪರೋಪಜೀವಿ’ಗಳುಯಾರು?

ಚುನಾವಣಾ ವಿಷಯ: ಇಂಗ್ಲಿಷ್ ಕಡಲ್ಗಾಲುವೆಯನ್ನು ಸಣ್ಣ ದೋಣಿಗಳಲ್ಲಿ ದಾಟಿ ಬ್ರಿಟನ್ ಸೇರುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಅಮೆರಿಕಕ್ಕೆ ಕೆನಡಾ ಮತ್ತು ಮೆಕ್ಸಿಕೊ ಮೂಲಕ ಡಂಕಿ ಮಾರ್ಗಗಳಿದ್ದಂತೆ ಇದು
ಬ್ರಿಟನ್ ಅನ್ನು ಅಕ್ರಮವಾಗಿ ಪ್ರವೇಶಿಸಲು ಬಯಸುವ ಹೆಚ್ಚಿನ ಜನ ಬಳಸುವ ದಾರಿಯಾಗಿದೆ. 2023ರಲ್ಲಿ ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯ ವೇಳೆ ಅಕ್ರಮ ವಲಸೆಯ ಪ್ರಮುಖ ವಿಷಯವಾಗಿತ್ತು, ಲೇಬರ್ ಪಾರ್ಟಿಯ ಎದುರು ಸೋಲುವ ಸೂಚನೆ ಸಿಕ್ಕಿದ್ದರಿಂದ ಆಗ ಪ್ರಧಾನಿಯಾಗಿದ್ದ ರಿಷಿ ಸುನಕ್ ಅವರು ತಮ್ಮ ಕನ್ನರ್ವೇಟಿವ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ, ಇಂಗ್ಲಿಷ್ ಕಡಲ್ಗಾಲುವೆಯ ಮೂಲಕ ದೇಶದೊಳಗೆ ಪ್ರವೇಶಿಸುವ ದೋಣಿಗಳನ್ನು ನಿರ್ಬಂಧಿಸುವುದಾಗಿ ಭರವಸೆ ನೀಡಿದ್ದರು.

ಲೇಬರ್ ಪಾರ್ಟಿ ಅಧಿಕಾರಕ್ಕೆ ಬಂದ ನಂತರ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ಚುರುಕುಗೊಂಡಿದೆ. ಸ್ವಾರ್ಮರ್ ಸರ್ಕಾರವು ಏಳು ತಿಂಗಳಲ್ಲಿ ದೇಶದಿಂದ ಹೊರ ಹಾಕಲಾದ ಅಕ್ರಮ ವಲಸಿಗರಲ್ಲಿ ಏಷ್ಯಾ, ಯೂರೋಪ್, ಅಫ್ರಿಕಾ, ದಕ್ಷಿಣ ಅಮೆರಿಕ ರಾಷ್ಟ್ರದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಪೈಕಿ ಬ್ಯೂಟಿ ಸಲೂನ್‌ಗಳಲ್ಲಿ ಕೆಲಸ ಮಾಡುವವರು, ಕಾರು ತೊಳೆಯುವವರು, ದಾಸ್ತಾನು ಮಳಿಗೆಗಳಲ್ಲಿ ಕೆಲಸ ಮಾಡುವವರು, ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರೇ ಹೆಚ್ಚು.

Leave a Comment