ನಾನು ಬ್ಯಾಂಕ್ ಅಥವಾ ಹಣಕಾಸು
ಪ್ರಶ್ನೆ: ನಾನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ವೈಯಕ್ತಿಕ ಸಾಲ ಪಡೆಯಬೇಕೆಂದಿದ್ದೇನೆ. ನನ್ನ ಮಿತ್ರರ ಜೊತೆ ಇತ್ತೀಚೆಗೆ ಮಾತುಕತೆ ನಡೆಸುತ್ತಿದ್ದಾಗ ಪದೇ ಪದೇ ಸಿಬಿಲ್ ಸ್ಕೋರ್ ಬಗೆಗಿನ ಮಾಹಿತಿ ಅನ್ವೇಷಿಸುತ್ತಿದ್ದರೆ ನಮ್ಮ ಒಟ್ಟಾರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ ಎಂದು ಹೇಳಿದರು. ಈ ವಿಚಾರ ಸರಿಯೇ. ನಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ತಿಳಿದು ಸರಿಪಡಿಸಿ ಕೊಳ್ಳಲು ನಮಗೆ ಅವಕಾಶ ಇಲ್ಲದಿದ್ದರೆ ಹೇಗೆ? ಈ ಬಗ್ಗೆ ಸಾಲ ಸಿಗಬಹುದೇ ಇಲ್ಲವೇ ಎಂಬ ಬಗ್ಗೆ ಆತಂಕ ಇದೆ? ಇದು ಖಾಸಗಿ ಸಂಸ್ಥೆ ನೀಡುವ ಮೌಲ್ಯಾಂಕ ಆದ ಕಾರಣ ಇದನ್ನು ನಾವು ಪರಿಗಣಿಸಬೇಕೆ ಹಾಗೂ ಈ ಸಂಸ್ಥೆಗೆ ಮಾನ್ಯತೆ ಇದೆಯೇ?
ಉತ್ತರ: ಈ ಹಿಂದೆ ಕ್ರೆಡಿಟ್ ಇನ್ನಾರ್ಮೇಷನ್ ಬ್ಯೂರೊ (ಇಂಡಿಯಾ) ಲಿಮಿಟೆಡ್ ಎಂದು ಕರೆಯಲ್ಪಡುತ್ತಿದ್ದ ಇಂದಿನ ಸಿಬಿಲ್ ಲಿಮಿಟೆಡ್ ಸಂಸ್ಥೆ ‘ಸಿಬಿಲ್ ಸ್ಕೋರ್’ ಎನ್ನುವ ರೇಟಿಂಗ್ ನೀಡುತ್ತಾ ಬಂದಿದೆ. ಇದು ವೈಯಕ್ತಿಕ ಆರ್ಥಿಕ ಕ್ಷಮತೆಯ ಮಾಹಿತಿ ನೀಡುತ್ತದೆ. ಇದು ಹೆಚ್ಚಿದ್ದಷ್ಟು ಉತ್ತಮ. ಇದು ಭಾರತೀಯ ರಿಸರ್ವ್ ಬ್ಯಾಂಕ್ನ ಅಧಿಕೃತ ಮಾನ್ಯತೆ ಮೇರೆಗೆ ಸಾಲಗಾರರ ಬಗ್ಗೆ ಮಾಹಿತಿ ಸಂಗ್ರಹಿಸುವ ಹಾಗೂ ಅಗತ್ಯವುಳ್ಳವರಿಗೆ ಮಾಹಿತಿ ನೀಡುವ ಅಧಿಕಾರ ಹೊಂದಿದೆ.
ಬ್ಯಾಂಕ್ ಹಾಗೂ ಸಾಲ ನೀಡುವ ಯಾವುದೇ ಸಂಸ್ಥೆಗೆ ಸಾಲಗಾರನ ಆರ್ಥಿಕ ಸಾಮರ್ಥ್ಯ ಅರಿತು ಸಾಲ ನೀಡಬೇಕು. ಸಂಭಾವ್ಯ ಆರ್ಥಿಕ ವಂಚನೆಗಳನ್ನು ತಪ್ಪಿಸಬೇಕೆನ್ನುವುದು ಇದರ ಉದ್ದೇಶ.
ಹೀಗಾಗಿ ಈ ಸಂಸ್ಥೆಯ ಬಗ್ಗೆ ಅನಗತ್ಯ ಸಂದೇಹ ಬೇಡ ಹಾಗೂ ಇದು ಯಾವುದೇ ಸಾಲ ಪಡೆಯುವಾಗ ವೈಯಕ್ತಿಕ ಸಾಲಗಾರರಲ್ಲಿ ಕೇಳುವ ಅಥವಾ ಅವರ ಬಗ್ಗೆ ಅನ್ವೇಷಿಸುವ ಮೊದಲ ಮಾಹಿತಿಯಾಗಿದೆ. ಎಲ್ಲ ಬ್ಯಾಂಕ್ ಹಾಗೂ ಸಾಲ ವಿತರಿಸುವ ಸಂಸ್ಥೆಗಳು ಇದರ ಸದಸ್ಯರಾದ ಕಾರಣ ಸಾಲದ ಸುರಕ್ಷತೆ ಹಾಗೂ ಸಾಲಕ್ಕೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳ ಮೇಲೆ ನಿಗಾ ಇಟ್ಟು 300ರಿಂದ ಗರಿಷ್ಠ 900ರ ತನಕ ಇರುವ ಮೌಲ್ಯಾಂಕ ನೀಡಲಾಗುತ್ತದೆ.
ಇದನ್ನೂ ಓದಿ: ಶಾಲೆಗೆ 6 ಲಕ್ಷ ಜಮೀನು ಖರೀದಿಸಿ ಕೊಟ್ಟ ಶಾಸಕ
ಸ್ವತಃ ನಮ್ಮ ಅಂಕ ಪರಿಶೀಲಿಸುವುದಕ್ಕೆ ಅವಕಾಶ ಇದೆ. ಇದನ್ನು ಸಾಫ್ಟ್ ಎನ್ಕ್ವೆರಿ ಎಂದು ಕರೆಯಲಾಗುತ್ತದೆ. ಯಾವುದೇ ಸಾಲ ನೀಡುವ ಸಂಸ್ಥೆ- ಬ್ಯಾಂಕ್ ಮಾಡುವ ಅಂಕ ಪರಿಶೀಲನೆಯನ್ನು ಹಾರ್ಡ್ ಎನ್ಕೈರಿ ಎಂದೂ ತಿಳಿಯಲಾಗುತ್ತದೆ. ಸ್ವತಃ ಮಾಡುವ ಪರಿಶೀಲನೆಯಿಂದ ಯಾವುದೇ ಮೌಲ್ಯಾಂಕಕ್ಕೆ ಹಾನಿ ಇಲ್ಲ. ಆದರೆ, ಪದೇ ಪದೇ ಸಾಲ ಕೇಳುತ್ತಿದ್ದಂತೆ ಸಾಲ ನೀಡುವ ಸಂಸ್ಥೆಗಳು ಮಾಡುವ ಮೌಲ್ಯಾಂಕ ಪರಿಶೀಲನೆಯಿಂದ ಸ್ಕೋರಿಂಗ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಈ ಬಗ್ಗೆ ಜಾಗರೂಕರಾಗಿರಿ ಹಾಗೂ ಅದನ್ನು ಉನ್ನತೀಕರಿಸುವ ಬಗ್ಗೆ ಕ್ರಮ ಕೈಗೊಳ್ಳಿ,
ಶಿವಾನಂದ ಹೆಬ್ಬಾರ, ರಾಜಾಜಿನಗರ , ಬೆಂಗಳೂರು.
•ಪ್ರಶ್ನೆ: ನನ್ನ ತಂದೆ ಸರ್ಕಾರದ ಉದ್ಯೋಗದಲ್ಲಿ ದ್ದರು. ನಿವೃತ್ತಿಯಾದ ನಂತರ ಪಿಂಚಣಿ ಪಡೆಯುತ್ತಿ
ದ್ದಾರೆ. ಇತ್ತೀಚೆಗೆ ಅವರು ಕೇರಳ ರಾಜ್ಯದ ಲಾಟರಿ ಖರೀದಿಸಿದ್ದರು. ಬಹುಮಾನವಾಗಿ ₹2 ಲಕ್ಷ ಸಿಗಲಿದೆ ಎಂದು ತಿಳಿಯಿತು. ಇದನ್ನು ಮೂರು ತಿಂಗಳ ಒಳಗಾಗಿ ಸಂಬಂಧಪಟ್ಟ ಕಚೇರಿಗೆ ಹೋಗಿ ಅಗತ್ಯ ದಾಖಲೆಗಳೊಂದಿಗೆ ಪ್ಯಾನ್ ಸಂಖ್ಯೆ ಕೊಡುವ ಮೂಲಕ ಪಡೆಯಬಹುದೆಂದು ತಿಳಿದುಕೊಂಡೆವು.
ನಮಗೆ ಲಾಟರಿ ಬಗೆಗಿನ ಆದಾಯ ತೆರಿಗೆ ನಿಯಮಾವಳಿಗಳ ಬಗ್ಗೆ ತಿಳಿಸಿ. ಅವರ ಹೆಸರಲ್ಲಿ ತೆರಿಗೆ ಬರುತ್ತದೆಯೇ? ತಿಂಗಳ ಪಿಂಚಣಿ ಸುಮಾರು ₹25 ಸಾವಿರ ಬರುತ್ತಿದೆ. ತೆರಿಗೆ ಇಲ್ಲವಾದರೆ ರಿಫಂಡ್ ಪಡೆಯಬಹುದೇ? ಈ ಬಹುಮಾನ ನಗದೀಕರಿಸಿದರೆ ಆದಾಯ ಘೋಷಣೆ ಕಡ್ಡಾಯವೇ?
ಉತ್ತರ: ನೀವು ನೀಡಿದ ಮಾಹಿತಿಯಂತೆ ತಂದೆಯವರು ವಾರ್ಷಿಕವಾಗಿ ₹3 ಲಕ್ಷವನ್ನು ಪಿಂಚಣಿ ರೂಪದಲ್ಲಿ ಪಡೆಯುತ್ತಿದ್ದಾರೆ. ಪ್ರಸ್ತುತ ₹2 ಲಕ್ಷದ ಲಾಟರಿ ಆದಾಯ ಸಿಗುವುದಾಗಿ ತಿಳಿಸಿದ್ದೀರಿ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194ಬಿ ಪ್ರಕಾರ ₹10 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ ಮೊತ್ತದ ಮೇಲೆ ಶೇ 30ರ ಮೂಲ ತೆರಿಗೆ ಕಡಿತ ಅನ್ವಯವಾಗುತ್ತದೆ. ಸೆಸ್ ಮತ್ತು ಹೆಚ್ಚುವರಿ ಶುಲ್ಕದೊಂದಿಗೆ , ಪರಿಣಾಮಕಾರಿ ದರವು ಶೇ 31.2 ಆಗಿರುತ್ತದೆ. ಬಹುಮಾನದ ಹಣ ವಿತರಿಸುವ ಕಂಪನಿ ಅಥವಾ ಸಂಸ್ಥೆಗಳು ತೆರಿಗೆ ಕಡಿತಗೊಳಿಸಿ ನಿವ್ವಳ ಮೊತ್ತವನ್ನು ಕೊಡಬೇಕೆಂಬುದು ನಿಯಮ.
ಈ ದರವು ವೈಯಕ್ತಿಕ ತೆರಿಗೆ ದರದಿಂದ ಸ್ವತಂತ್ರವಾಗಿ ರುತ್ತದೆ. ಅಂದರೆ ವ್ಯಕ್ತಿಯ ಆದಾಯವು ಶೇ 5, 10, 15 ಇತ್ಯಾದಿ ದರದಲ್ಲಿದ್ದರೂ, ಲಾಟರಿ ಬಹುಮಾನಗಳಿಂದ ಗಳಿಸಿದ ಆದಾಯದ ಮೇಲೆ ಶೇ 31.20ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಆದಾಯಕ್ಕೆ ಸಂಬಂಧಿಸಿ ಯಾವುದೇ ಖರ್ಚು ಪಡೆಯುವುದಕ್ಕೆ ಅವಕಾಶವಿರುವುದಿಲ್ಲ. ಇತರೆ ನಷ್ಟಗಳೊಡನೆ ವಜಾ ಮಾಡುವ ಅವಕಾಶವಿಲ್ಲ. ಅಲ್ಲದೆ, ಹಳೆಯ ತೆರಿಗೆ ನಿಯಮ ಅನುಸರಿಸಿದರೂ ಅದಾಯದಿಂದ ಸೆಕ್ಷನ್ 80ಸಿ ಅಥವಾ 80ಡಿ ಅಥವಾ ಯಾವುದೇ ಇತರ ಕಡಿತ/ಭತ್ಯೆ ಅಡಿಯಲ್ಲಿ ರಿಯಾಯಿತಿ ಪಡೆಯಲು ಅವಕಾಶವಿಲ್ಲ.
ಮೂಲ ವಿನಾಯಿತಿ ಮಿತಿ ಮತ್ತು ಆದಾಯ ತೆರಿಗೆ ಸ್ಲಯಬ ದರದ ಪ್ರಯೋಜನವು ಈ ಆದಾಯಕ್ಕೆ ಅನ್ವಯಿಸುವುದಿಲ್ಲ. ಸ್ವೀಕರಿಸಿದ ಸಂಪೂರ್ಣ ಮೊತ್ತವು ಶೇ 31.20ರ ಫ್ಲಾಟ್ ದರದಲ್ಲಿ ತೆರಿಗೆಗೆ ಒಳಪಡುತ್ತದೆ. ತೆರಿಗೆ ಕಡಿತಗೊಳ್ಳುವ ಕಾರಣ ಆ ಮೊತ್ತ ನೀವು ವಾರ್ಷಿಕ ರಿಟರ್ನ್ಸ್ ಸಲ್ಲಿಸುವಾಗ ಬಳಸಿಕೊಳ್ಳಬಹುದು.
ಲಾಟರಿ ಆದಾಯದ ಮೂಲಕ ಪಡೆದ ಮೊತ್ತವನ್ನು ಆದಾಯ ತೆರಿಗೆ ರಿಟರ್ನ್ಸ್ನಲ್ಲಿ ಘೋಷಿಸದಿದ್ದರೆ, ಮುಂದೆ ಈ ಬಗ್ಗೆ ನೋಟಿಸ್ ಬರುವ ಸಾಧ್ಯತೆಯನ್ನು ಅಲ್ಲಗಳೆ ಯುವಂತಿಲ್ಲ. ಅಪೂರ್ಣ ಮಾಹಿತಿ ಸಲ್ಲಿಕೆ ಬಗ್ಗೆಯೂ ಸೆಕ್ಷನ್ 270ಎ ಅಡಿ ದಂಡ ಅನ್ವಯವಾಗುತ್ತದೆ. ಇಂತಹ ಮೊತ್ತ ಸ್ವೀಕರಿಸುವವರ ಪ್ಯಾನ್ ಆಧಾರದಲ್ಲಿ ಬಹುಮಾನದ ಮೊತ್ತ ನೀಡುವ ಕಾರಣ ಆದಾಯ ಘೋಷಿಸದಿದ್ದರೂ ಸರ್ಕಾರದ ಬಳಿ ಮಾಹಿತಿ ಕಲೆ ಹಾಕುವ ಸೌಲಭ್ಯ ಇರುವ ಕಾರಣ, ಮುಂದೆ ಆದಾಯ ತೆರಿಗೆಯ ನೋಟಿಸ್ ನಿರೀಕ್ಷಿಸುವುದಕ್ಕಿಂತ ಆದಾಯ ಘೋಷಿಸುವುದೇ ಉತ್ತಮ.
ಈ ಮೇಲಿನ ಮಾಹಿತಿಯಂತೆ ನಿಮಗೆ ಬಂದಿರುವ ಆದಾಯವನ್ನು ಇತರೆ ಯಾವುದೇ ತೆರಿಗೆ ಆದಾಯಕ್ಕೆ ಹೊಂದಾಣಿಕೆ ಮಾಡದೆ ಪ್ರತ್ಯೇಕವಾಗಿ ಘೋಷಿಸಬೇಕಾಗು ತ್ತದೆ. ಅಲ್ಲದೆ, ಒಂದು ವೇಳೆ ನಿಮಗೆ ಇತರೆ ಯಾವುದೇ ತೆರಿಗೆ ಆದಾಯ ಇಲ್ಲದಿದ್ದಾಗಲೂ ಈ ಮೊತ್ತಕ್ಕೆ ವಿನಾಯಿತಿ ಇಲ್ಲ. ಹೀಗಾಗಿ, ರಿಫಂಡ್ ಪಡೆಯುವ ಅವಕಾಶ ಇರುವುದಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಈ ಸಂಬಂಧ ಮಾಹಿತಿ ನೀಡುವ ವಿಭಾಗದಲ್ಲಿ ಸಮರ್ಪಕವಾಗಿ ಭರಿಸಿ.