ಪಟೇಲರ ನೆನಪುಳಿಸಲು ಸರಕಾರಕ್ಕೆ ಆಸಕ್ತಿ ಇಲ್ಲವೇ?

ಪಟೇಲರ ನೆನಪುಳಿಸಲು ಸರಕಾರಕ್ಕೆ ಆಸಕ್ತಿ ಇಲ್ಲವೇ?

ಸಾಹಿತ್ಯ ಲೋಕದ ಹೆಮ್ಮೆಯಾದ ಲೇಖಕ ಅಂತ ಮೂರ್ತಿಯವರು ಜೆ .ಎಚ ಪಟೇಲರ ಕುರಿತು ಮಾತನಾಡುತ್ತ, ”ನನಗೆ ಸೂಕ್ಷ್ಮ ಒಳನೋಟಗಳನ್ನು ಕೊಟ್ಟ ವ್ಯಕ್ತಿ ಪಟೇಲ್” ಎಂದು ದಾಖಲಿಸಿದ್ದಾರೆ. ಇದು ಜೆ.ಎಚ್.ಪಟೇಲ್‌ರ ಮುತ್ಸದ್ದಿತನ, ಓದು, ಅವರ ಜ್ಞಾನಕ್ಕೆ ಕನ್ನಡದ ಒಬ್ಬ ಮೇರು ಚಿಂತಕ, ಸಾಹಿತಿಯಿಂದ ಸಿಕ್ಕ ಗೌರವ.

ಈ ಮೇಲಿನ ವಾಕ್ಯಗಳು ಚಂದ್ರಶೇಖರ ತೌಡೂರು ಬರೆದ ‘ಎಲ್ಲರಂಥಲ್ಲದ ಜೆ.ಎಚ್.ಪಟೇಲ್’ ಕೃತಿಯಲ್ಲಿ ಉಲ್ಲೇಖವಾಗಿದೆ. ಓರ್ವ ಅಪರೂಪದ ಸಂಸದೀಯ ಪಟುವಾಗಿ ರಾಜಕಾರಣಿಗಳಿಗೆ ಮಾತ್ರವಲ್ಲ, ವೈಚಾರಿಕತೆ ಹಾಗೂ ಸಾಹಿತ್ಯ ವಲಯಕ್ಕೂ ಒಳನೋಟ, ಪ್ರೇರಣೆಯಾಗಿದ್ದ ಸಮಾಜವಾದಿ ನಾಯಕ, ಮಾಜಿ ಸಿಎಂ ಜೆ.ಎಚ್.ಪಟೇಲರ ಹೆಗ್ಗಳಿಕೆ . ತುರ್ತು ಪರಿಸ್ಥಿತಿಯಲ್ಲಿ ಗರಿಷ್ಠ ಅವಧಿ ಜೈಲಿನಲ್ಲಿದ್ದವರು, ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿ, ಸಂವಿಧಾನದ 150ನೇ ಪರಿಚ್ಛೇದವನ್ನು ದೇಶದಲ್ಲಿ ಮೊದಲ ಬಾರಿಗೆ ಬಳಸಿ ಪ್ರಾದೇಶಕ ಭಾಷಾ ಗೌರವವನ್ನು ಎತ್ತಿ ಹಿಡಿದ ಅಪರೂಪದ ಕನ್ನಡಿಗ.

ಕಳೆದ ಶತಮಾನದಲ್ಲಿ ಇಂಥ ಓರ್ವ ವರ್ಣಮಯ ರಾಜಕಾರಣಿಯನ್ನು ಸೃಷ್ಟಿಸಿದ್ದು ದಾವಣಗೆರೆ ನೆಲ. ಇಂತಿಪ್ಪ ಪಟೇಲರು ನಿಧನರಾಗಿ ಈಗ 25 ವರ್ಷಗಳಾಗಿವೆ. ಅವರ ಜನ್ಮ ಶತಮಾನವೂ ಸಮೀಪಿಸುತ್ತಿದ್ದು, ಕಾರಣಾಂತರದಿಂದ ಅವರು ಹುಟ್ಟಿ ಬಾಳಿದ ಮನೆಯನ್ನು ನಿರ್ವಹಣಾ ಹೊರೆಯ ಕಾರಣ ಸಹೋದರ ಸಂಬಂಧಿಗಳು ಕೆಡವಿ ಹಾಕುವ ಆಲೋಚನೆಯಲ್ಲಿದ್ದಾರೆ. ಇನ್ನು ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಹುಟ್ಟು ಹಾಕಿದ ದಾವಣಗೆರೆ ಜಿಲ್ಲೆಯಲ್ಲಿ ಜಿಪಂ ಎದುರು ಅವರ ಪ್ರತಿಮೆ ಒಂದಿದೆ. ಬಿಟ್ಟರೆ, ಅವರ ಯಾವ ನೆನಪನ್ನೂ ಜಿಲ್ಲೆ ಇಟ್ಟುಕೊಂಡಿಲ್ಲ. ಅವರ ಹೋರಾಟದ ದಿನಗಳನ್ನು, ಅಥವಾ ಜೀವನ ಚರಿತ್ರೆಯನ್ನು ನೆನಪಿಸಲು ಏನೂ ಇಲ್ಲ.

ಇದನ್ನೂ ಓದಿ:ವಿಟಮಿನ್ ಬಿ 1 ಕೊರತೆ

ದಾವಣಗೆರೆಯಿಂದ 25 ಕಿ.ಮೀ. ದೂರದಲ್ಲಿರುವ ಕಾರಿಗನೂರಿನ ಪಟೇಲರ ತೋಟದಲ್ಲಿ ಚಿಕ್ಕ ಸಮಾಧಿ ಇದೆ. ಒಂದು ಕಾಲದಲ್ಲಿ ಚಿಂತನಾ ಕೇಂದ್ರವಾಗಿದ್ದ ಕಾರಿಗನೂರಿಗೆ ರಾಷ್ಟ್ರೀಯ ನಾಯಕರಾಗಿದ್ದ ಜಾರ್ಜ್ ಫರ್ನಾಂಡಿಸ್, ಲೋಹಿಯಾ ಭೇಟಿ ನೀಡಿ ಸಾರ್ವಜನಿಕ ಸಭೆ ನಡೆಸಿದ್ದಾರೆ. ಸಮಾಜವಾದಿ ಹಿನ್ನೆಲೆಯ ಹಲವು ಸಭೆ ಸಮಾರಂಭಗಳು ನಡೆದ ಜಾಗವಿದು. ಆ ಕಾಲದಲ್ಲೆ ನಿರ್ಮಿಸಿದ ಆಕರ್ಷಕ ಮನೆ ಈಗೆಲ್ಲಿ ಎಂದು ಕೇಳಿದರೆ ಕೆಲವು ವರ್ಷದ ಬಳಿಕ ಯಾವ ಕುರುಹೂ ಉಳಿಯಲಿಕ್ಕಿಲ್ಲ. ದಾವಣಗೆರೆ ಜಿಲ್ಲಾಡಳಿತ ಯಾವ ರೀತಿ ನಿರ್ಲಕ್ಷ್ಯ ತಾಳಿದೆ ಎಂದರೆ, 25 ವರ್ಷಗಳ ಹಿಂದೆ ಜಿಲ್ಲೆಯನ್ನು ಪಟೇಲರು ಉದ್ಘಾಟಿಸಿದ ಸಂದರ್ಭದ ಫೋಟೊ ಕೂಡ ಸರಕಾರಿ ದಾಖಲೆಯಲ್ಲಿ ಇಲ್ಲ! 25 ವರ್ಷಗಳ ಬಳಿಕ ಮಳೆ ಗಾಳಿಗೆ ಸಿಕ್ಕು ಜೀರ್ಣಗೊಳ್ಳುತ್ತಿದ್ದ ಪಟೇಲ್ ಸಮಾಧಿಯನ್ನು ಅಲ್ಲಿಯೇ ಗಟ್ಟಿಗೊಳಿಸಲು ರೈತ ನಾಯಕ, ಪಟೇಲರ ಸಂಬಂಧಿ ತೇಜಸ್ವಿ ಪಟೇಲ್ ಮುಂದಾಗಿದ್ದಾರೆ. ಅವರ ಜೊತೆಗೆ ಯಾರೂ ಕೈ ಜೋಡಿಸುತ್ತಿಲ್ಲ. ಈಗ ಸರಕಾರ ನಡೆಸುತ್ತಿರುವ ಪಟೇಲರ ಹಳೆಯ ಸಹೋದ್ಯೋಗಿಗಳು 25 ಲಕ್ಷ ರೂ. ಕೊಟ್ಟು ಕೈ ತೊಳೆದುಕೊಂಡಿದ್ದಾರೆ! ಒಂದು ಮನೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಖರ್ಚು ಇರುವ ಕಾಲದಲ್ಲಿ, 25 ಲಕ್ಷ ರೂ. ಯಾವ ಲೆಕ್ಕ ಎನ್ನುತ್ತಿದ್ದಾರೆ ಪಟೇಲ್ ಅಭಿಮಾನಿಗಳು.

ಪಟೇಲ್ ಕುಟುಂಬದ ಆಪ್ತರಾದ ಹಾಲಿ ಗಣಿ ಮತ್ತು ಭೂ ವಿಜ್ಞಾನ ಖಾತೆಯ ಸಚಿವ ಶಾಮನೂರು ಮಲ್ಲಿಕಾರ್ಜುನ ಅವರು ಈ ನಿಟ್ಟಿನಲ್ಲಿ ಆಸಕ್ತಿ ತೋರಿದರು. “ಒಟ್ಟಾಗಿ ಹೋಗೋಣ, ಬನ್ನಿ ಎಂದು ಕರೆದರೆ, ಅವರ ಮಗ ಮಹಿಮಾ ಪಟೇಲ್ ಬರುತ್ತಿಲ್ಲ” ಎಂದು ಹೇಳುತ್ತಾರೆ. ತಂದೆಯ ಸ್ಮರಣೆಯ ಕುರಿತು ಮಾಜಿ ಶಾಸಕ, ಜೆಡಿಯು ಮುಖಂಡ ಮಹಿಮಾ, “ನಮ್ಮ ತಂದೆಯ ನೆನಪಿಗೆ ಏನಾದರೂ ಮಾಡಿ ಎಂದು ಉಳಿದವರಲ್ಲಿ ಹೇಳುವುದು ಎಷ್ಟು ಸರಿ? ಅವರಿಂದ ಪ್ರಯೋಜನ ಪಡೆದವರು ಮಾಡಬಹುದು, ಮಾಡಿ ಎಂದು ನಾನೇನು ಹೇಳುವುದಿಲ್ಲ. ನನಗೆ ಆಸಕ್ತಿಯೂ ಇಲ್ಲ,”, ಎಂದು ನಿರ್ಲಿಪ್ತವಾಗಿ ನಕ್ಕರು.

ಜಾತಿವಾದಿ, ಕುಟುಂಬವಾದಿ ರಾಜಕಾರಣಿಗಳನ್ನು ಅವರ ಮಕ್ಕಳು ಸ್ಮರಿಸುತ್ತಾರೆ. ಗೋರಿ ಕಟ್ಟಿಕೊಂಡ ಐತಿಹಾಸಿಕ ಪುರುಷರಾದ ಉಳಿಗಮಾನ್ಯರೂ ಇದ್ದಾರೆ. ಅವರರ್ಯಾರೂ ಪ್ರಜಾಸತ್ತೆಯ ಕುರುಹು ಅಲ್ಲ. ಹೀಗಿದ್ದರೂ ಪಟೇಲ್ ಅಂಥವರ ಸ್ಮರಣೆಯನ್ನು ಉಳಿಸಿಕೊಳ್ಳುವ ಅಗತ್ಯ ಪ್ರಜಾಸತ್ರೆಗೆ ಇದೆ. ಐರೋಪ್ಯ ದೇಶಗಳು, ವಿಶೇಷವಾಗಿ ಫ್ರಾನ್ಸ್ ರೀತಿಯಲ್ಲಿ ನಾವು ನಮ್ಮ ಇತಿಹಾಸವನ್ನು ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಉಳಿಸಿಕೊಳ್ಳುವ ವಿಧಾನವನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಫ್ರೆಂಚ್ ಕ್ರಾಂತಿ ಮತ್ತಿತರ ಜಾಗತಿಕ ವಿದ್ಯಮಾನಗಳಿಂದಲೇ ನಾವು ಜನತಂತ್ರದ ಹಂತಕ್ಕೆ ಬಂದಿದ್ದೇವೆ. ವೈವಿಧ್ಯಮಯ ಧ್ವನಿಗೆ ಅವಕಾಶ, ಕಾಲಕಾಲಕ್ಕೆ ಚುನಾವಣೆಗಳ ಕಾರಣ ಜಗತ್ತಿನ ಬಹುದೊಡ್ಡ ಜನತಂತ್ರ ಎಂಬ ಹೆಗ್ಗಳಿಕೆ ಒಂದಿಷ್ಟು ಗಟ್ಟಿಗೊಳ್ಳುತ್ತಿದೆ. ನೆರೆಯ ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಮನೆ ಕುರಿತು ಇದೇ ಚರ್ಚೆ ಇತ್ತು. ಕೊನೆಗೆ ಬೀದಿ ರಂಪ ಆದ ಬಳಿಕ ಅಂತೂ ರಾಜ್ಯ ಸರಕಾರ ಅದನ್ನು ಖರೀದಿಸಿ ಮ್ಯೂಸಿಯಂ ಮಾಡಲು ಮುಂದಾಯಿತು. ರಾಜಕೀಯ ಹಿತಾಸಕ್ತಿಯನ್ನು ವೀರಿ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಎಲ್ಲ ಬಗೆಯ ನೆನಪನ್ನು ಉಳಿಸಿಕೊಳ್ಳಲು ಪಟೇಲ್‌ ರಂಥವರ ನೆನಪನ್ನು ಯೋಗ್ಯ ರೀತಿಯಲ್ಲಿ ಉಳಿಸಿಕೊಳ್ಳುವುದು ಅಗತ್ಯ.

Leave a Comment