ಪರ್ಯಾಯ ಚಿಂತನೆಗೆ ಸಕಾಲ
ಅನುದಾನ ಕೊರತೆಯೂ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೆಲವು ವರ್ಷಗಳಿಂದ ರಾಜ್ಯದ ಬೃಹತ್ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಬಂಡವಾಳ ವೆಚ್ಚ ವರ್ಷದಿಂದ ವರ್ಷಕ್ಕೆ ತಗ್ಗುತ್ತಿರುವುದರಿಂದ ನೀರಾವರಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ನಿರೀಕ್ಷಿಸಿದಷ್ಟು ಅನುದಾನ ಹಂಚಿಕೆಯಾಗುತ್ತಿಲ್ಲ . ಕಲ್ಯಾಣ ಕಾರ್ಯಕ್ರಮದ ಜತೆಗೆ ಆಸ್ತಿ ಸೃಜನೆಯಂತಹ ದೂರದೃಷ್ಟಿಯ ಯೋಜನೆ ಸಮತೋಲನಗೊಳಿಸುವ ಆಶಯ ಸಾಕಾರಗೊಳ್ಳುತ್ತಿಲ್ಲ. ಬೊಕ್ಕಸದಿಂದ ಮೊಗೆದು ಹಾಕುವಷ್ಟು ಸಂಪನ್ಮೂಲ ಇಲ್ಲದಿರುವುದರಿಂದ ಇಂತಹ ಸ್ಥಿತಿ, ಅಭಿವೃದ್ಧಿಗೆ ಹಣವಿಲ್ಲವೆಂದು ಕೈಕೊಟ್ಟಿ ಕುಳಿತರೆ ವಿಕಾಸದ ರಥ ಮುಂದೆ ಸಾಗುವುದಿಲ್ಲ . ಸಂಪನ್ಮೂಲ ಕ್ರೋಡೀಕರಿಸಲು ಪರ್ಯಾಯ ಆಲೋಚನೆಗಳನ್ನು ಮಾಡಲೇಬೇಕು. ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ತ್ವರಿತವಾಗಿ ಪೂರ್ಣಗೊಳಿಸದಿದ್ದರೆ ವೆಚ್ಚವೂ ಹೆಚ್ಚುತ್ತಲೇ ಹೋಗುತ್ತದೆ. ಕೃಷ್ಣಾ ಮತ್ತು ಕಾವೇರಿ ಕಣಿವೆಯ ಯೋಜನೆಗಳ ಜಾರಿಯಲ್ಲಿ ಈಗಾಗಲೇ ವಿಳಂಬವಾಗಿದೆ. ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣ ಅಲ್ಲಿನ ಕೃಷಿ ಭೂಮಿಯನ್ನು ಸಮೃದ್ಧಗೊಳಿಸಲು ಕೃಷ್ಣಾ ಮೇಲ್ದಂಡೆ ಯೋಜನೆ-3 (ಯುಕೆಪಿ) ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಬೇಕು. ಅದಕ್ಕೆ ಅಗಾಧವಾದ ಆರ್ಥಿಕ ಸಂಪನ್ಮೂಲ ಅಗತ್ಯ. ಈ ಯೋಜನೆಯ ಭೂಸ್ವಾಧೀನ ಮತ್ತು ಪುನರ್ವಸತಿಗೆ ದೊಡ್ಡ ಮೊತ್ತ ತೆಗೆದಿರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೀರಾವರಿ ಯೋಜನೆಗಳಿಗೆ ಸಂಪನ್ಮೂಲ ಹೊಂದಿಸಲು ಬಾಂಡ್ ಬಿಡುಗಡೆ ಮಾಡುವುದು ಸಕಾರಾತ್ಮಕ ಚಿಂತನೆ.
ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸರಕಾರಗಳು ಮುಂಚೂಣಿಯಲ್ಲಿವೆ. ಪ್ರಾದೇಶಿಕವಾಗಿಯೂ, ರಾಜಕೀಯವಾಗಿಯೂ ಪಾರಮ್ಯ ಮೆರೆಯುವ ಈ ರಾಜ್ಯಗಳು ತಮ್ಮ ಹಕ್ಕಿನ ನೀರನ್ನು ದಕ್ಕಿಸಿಕೊಳ್ಳುವಲ್ಲಿ ಮತ್ತು ಅದರ ಬಳಕೆಯಲ್ಲಿ ಮುಂದಿವೆ. ನಮ್ಮ ರಾಜ್ಯ ಈ ವಿಷಯದಲ್ಲಿ ತುಸು ಹಿಂದಿದೆ ಎಂಬ ಆಕ್ಷೇಪಗಳಿವೆ. ಅಂತಾರಾಜ್ಯ ಜಲವಿವಾದ ಮತ್ತು ಇಂಥ ವಿವಾದ ಇತ್ಯರ್ಥಗೊಂಡು ತೀರ್ಪು ಪ್ರಕಟವಾದ ಬಳಿಕವೂ ಅಧಿಸೂಚನೆ ಪ್ರಕಟಗೊಳ್ಳದೇ ಇರುವುದೂ ಇದಕ್ಕೆ ಕಾರಣವಿರಬಹುದು. ಕೃಷ್ಣಾ ನ್ಯಾಯಾಧಿಕರಣ-2ರ ಐತೀರ್ಪು ಬಂದು 14 ವರ್ಷ ಕಳೆದರೂ ಗೆಜೆಟ್ ಅಧಿಸೂಚನೆ ಹೊರಬಿದ್ದಿಲ್ಲ. ಮೇಕೆದಾಟುವಿಗೆ ಕೇಂದ್ರದ ಅನುಮೋದನೆ ದೊರೆತಿಲ್ಲ. ಮಹದಾಯಿಗೂ ಅಡಚಣೆಯಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರ ಎರಡು ವರ್ಷದ ಹಿಂದೆಯ ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದರೂ ನಯಾಪೈಸೆ ಬಿಡುಗಡೆಯಾಗಿಲ್ಲ. ಇಂಥ ಕ್ಲಿಷ್ಟ ಸವಾಲಿನ ನಡುವೆ ಹಣಕಾಸಿನ ನೆರವಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ಅವಶ್ಯಕತೆ ಖಂಡಿತ ಇದೆ. ಈ ದಿಸೆಯಲ್ಲಿ ರಾಜ್ಯ ಸರಕಾರ ಆಲೋಚಿಸಿರುವುದು ಸೂಕ್ತವಾಗಿಯೇ ಇದೆ. ತಜ್ಞರ ಅಭಿಮತವೂ ಸರಕಾರದ ಚಿಂತನೆಗೆ ಪೂರಕವಾಗಿದೆ. ಬಜೆಟ್ ಪೂರ್ವದಲ್ಲಿ ವಿಜಯ ಕರ್ನಾಟಕದ ಜತೆ ಮಾತನಾಡಿದ್ದ ಹಣಕಾಸು ಹಾಗೂ ನೀರಾವರಿ ತಜ್ಞರು ಬಾಂಡ್ ವಿಚಾರ ಪ್ರಸ್ತಾಪಿಸಿದ್ದರು. ಎಚ್.ಡಿ.ದೇವೇಗೌಡರ ಅಧಿಕಾರಾವಧಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಸಂಬಂಧ ಬಾಂಡ್ ಬಿಡುಗಡೆ ಮಾಡಿದ್ದ ನಿದರ್ಶನವೂ ಇದೆ. ಹಾಗಾಗಿ ವರ್ತಮಾನದಲ್ಲೂ ನೀರಾವರಿ ಇನ್ನಿತರ ಪ್ರಮುಖ ಯೋಜನೆಗಳನ್ನು ದಡ ಮುಟ್ಟಿಸಲು ಬಾಂಡ್ ಬಿಡುಗಡೆಗೆ ಸರಕಾರ ಮುಂದುವರಿಯುವುದು ಸೂಕ್ತ.
XrNrHvHg igR DDbVU