ಪ್ರಧಾನಿ ಮೋದಿ ಅಮೆರಿಕ ಭೇಟಿ ಫಲಿತಾಂಶ ಅರಿಯಲು ತುಸು ಕಾಯಬೇಕು

ಪ್ರಧಾನಿ ಮೋದಿ ಅಮೆರಿಕ ಭೇಟಿ ಫಲಿತಾಂಶ ಅರಿಯಲು ತುಸು ಕಾಯಬೇಕು

ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಕ್ಕೆ ನೀಡಿದ ಮೊದಲ ಭೇಟಿ ಸಂದರ್ಭದ ಮಾತುಕತೆಗಳಲ್ಲಿ ವ್ಯಾಪಾರ ವಹಿವಾಟು ಮತ್ತು ಅಕ್ರಮ ವಲಸೆ ವಿಷಯವೇ ಪ್ರಧಾನವಾಗಿತ್ತು. ಟ್ರಂಪ್ ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಮೋದಿ ಮತ್ತು ಟ್ರಂಪ್ ಅವರ ನಡುವೆ ಒಳ್ಳೆಯ ಭಾಂದವ್ಯ ಇತ್ತು. ಮೋದಿ ಮತ್ತು ಟ್ರಂಪ್ ಸ್ನೇಹಿತರೂ ಹೌದು ಎಂಬ ಮಾತುಗಳು ಇವೆ. ಆದರೆ ಎರಡನೆಯ ಅವಧಿಯಲ್ಲಿ ಟ್ರಂಪ್ ಅವರು ಹೆಚ್ಚು ಕಠಿಣವಾಗಿ ನಡೆದುಕೊಳ್ಳುತ್ತಿದ್ದಾರೆ. ಟ್ರಂಪ್ ಅವರು ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕಕ್ಕೆ ಭೇಟಿ ನೀಡಿದ ವಿದೇಶಿ ಮುಖ್ಯಸ್ಥರ ಪೈಕಿ ಮೋದಿ ಅವರು ನಾಲ್ಕನೆಯವರು. ಅಮೆರಿಕವು ಭಾರತಕ್ಕೆ ನೀಡುವ ಆದ್ಯತೆಯನ್ನು ಇದು ತೋರಿಸಬಹುದು. ಆದರೆ, ಇದಕ್ಕಿಂತ ಹೆಚ್ಚಾಗಿ ಎರಡು ದೇಶಗಳು ಸಂಬಂಧವನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಅಮೆರಿಕದ ಉತ್ಪನ್ನಗಳಿಗೆ ಯಾವ ದೇಶವು ಎಷ್ಟು ತೆರಿಗೆ ವಿಧಿಸುತ್ತದೆಯೋ ಅಮೆರಿಕ ಕೂಡ ಆದೇಶದ ಉತ್ಪನ್ನಗಳ ಮೇಲೆ ಅಷ್ಟೇ ಪ್ರಮಾಣದಲ್ಲಿ ತೆರಿಗೆ ವಿಧಿಸಲಿದೆ ಎಂದು ಟ್ರಂಪ್ ಘೋಷಣೆ ಮಾಡಿರುವ ಹೊತ್ತಿನಲ್ಲಿ, ಭಾರತದ ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಇನ್ನೊಂದು ವಿಮಾನ ಭಾರತಕ್ಕೆ ಹಾರಲು ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ಮೋದಿ ಅವರ ಭೇಟಿ ನಡೆದಿದೆ . ಅಮೆರಿಕದ ಕೆಲವು ಉತ್ಪನ್ನಗಳಿಗೆ ಸುಂಕ ವಿನಾಯಿತಿ ನೀಡುವ ಮೂಲಕ ಮೋದಿ ಅವರ ಭೇಟಿಗೆ ಭೂಮಿಕೆಯನ್ನು ಸಜ್ಜುಗೊಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿತ್ತು. ಭೆಟಿ ಸಂದರ್ಭದಲ್ಲಿ ಇಬ್ಬರು ನಾಯಕರು ಪರಸ್ಪರರನ್ನು ಶ್ಲಾಘಿಸಿಕೊಂಡಿದ್ದು,ಮಾತುಕತೆಗೆ ಪೂರಕ ವಾತಾವರಣವನ್ನು ಸೃಷ್ಟಿಸಿರಬಹುದು.

ಇದನ್ನೂ ಓದಿ:ಅಧ್ಯಕ್ಷಗಿರಿಯತ್ತ ಲಕ್ಷ್ಯ: ಜನ ಹಿತ ಅಲಕ್ಷ್ಯ


ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಮುಂದುವರಿಕೆ ಇರುತ್ತದೆ, ಎರಡು ದೇಶಗಳ ಹಿತಕ್ಕೆ ಪೂರಕವಾಗುವ ಬಗೆಯಲ್ಲಿ ಸಂಬಂಧದ ನೆಲೆಯು ಇನ್ನಷ್ಟು ವಿಚಾರವಾಗುತ್ತದೆ ಎಂಬ ಸ್ಪಷ್ಟ ಮಾತುಗಳು ಭೇಟಿಯ ಸಂದರ್ಭದಲ್ಲಿ ಬಂದಿವೆ. ಅಮೆರಿಕ ಮತ್ತು ಭಾರತದ ನಡುವಿನ ಈ ಬಗೆಯ ಸಂಬಂಧವು ಕೆಲವು ವರ್ಷಗಳಿಂದ ವಿಕಾಸ ಹೊಂದಿದೆ. ರಕ್ಷಣಾ ಕ್ಷೇತ್ರ, ವ್ಯಾಪಾರ ವಹಿವಾಟು, ತಂತ್ರಜ್ಞಾನದಲ್ಲಿ ಪಾಲುದಾರಿಕೆಯನ್ನು ಕೇಂದ್ರೀಕರಿಸಿ ಮಾತುಕತೆಗಳು ನಡೆದಿವೆ. ಆದರೆ ಈ ಮಾತು ಕಥೆಗಳು ಹೇಗೆ ಕಾರ್ಯರೂಪಕ್ಕೆ ಬರಲಿವೆ ಮತ್ತು ಇವುಗಳಿಂದ ಯಾರಿಗೆ ಹೆಚ್ಚು ಪ್ರಯೋಜನ ಎಂಬುದು ಗೊತ್ತಾಗಬೇಕಾದರೆ ಇನ್ನಷ್ಟು ವಿವರಗಳು ತಿಳಿಯಬೇಕಿದೆ. ಉಭಯ ದೇಶಗಳ ನಡುವಿನ ವ್ಯಾಪಾರವಹಿವಾಟಿನ ಮೊತ್ತವನ್ನು 2030ರ ವೇಳೆಗೆ 500 ಬಿಲಿಯನ್ ಡಾಲರ್ ಗೆ (ಅಂದಾಜು ರೂ43.33 ಲಕ್ಷ ಕೋಟಿ) ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಈ ಗುರಿ ಈಡೇರಿಸಲು ವ್ಯಾಪಾರ ಒಪ್ಪಂದ ಒಂದರ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಉಭಯ ದೇಶಗಳ ನಡುವೆ ವ್ಯಾಪಾರ ವಹಿವಾಟು ಹೆಚ್ಚಿಸುವ ಇರಾದೆಯು ಸ್ವಾಗತಾರ್ಹವೇ ಆದರೂ ವ್ಯಾಪಾರ ಅಂತರವನ್ನು ಹೆಚ್ಚು ಮಾಡಲು ಟ್ರಂಪ್ ಅವರು ಬಯಸುವುದಿಲ್ಲ ಎಂಬುದು ಸ್ಪಷ್ಟ. ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಪ್ರಮಾಣವನ್ನು ಭಾರತ ಹೆಚ್ಚಿಸಲಿದೆ, ಭಾರತಕ್ಕೆ ತಂತ್ರಜ್ಞಾನದ ವರ್ಗಾವಣೆಗೆ ಈಗಿರುವ ನಿರ್ಬಂಧಗಳನ್ನು ಅಮೆರಿಕವು ಪುನರ್ ಪರಿಶೀಲನೆಗೆ ಒಳಪಡಿಸಲಿದೆ. ಭಾರತಕ್ಕೆ ಅತ್ಯಾಧುನಿಕ ಎಫ್-35 ಯುಧ್ಧ ವಿಮಾನಗಳನ್ನು ಪೂರೈಸಲಾಗುವುದು.


ಎಂದು ಟ್ರಂಪ್ ಅವರು ಘೋಷಿಸಿದ್ದಾರೆ. ವ್ಯಾಪಾರ ವಹಿವಾಟು ಹೆಚ್ಚಿಸುವಲ್ಲಿ ರಕ್ಷಣಾ ಉಪಕರಣಗಳು ಆಮದಿನ ಪಾಲು ದೊಡ್ಡದಾಗಿಯೇ ಇರಬಹುದು. ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರ ಕೂಡ ಸುಧಾರಣೆ ಕಾಣಲಿದೆ. ಮಿಲಿಟರಿ ಪಾಲುದಾರಿಕೆ, ವಾಣಿಜ್ಯ ವಹಿವಾಟು ಮತ್ತು ತಂತ್ರಜ್ಞಾನದಲ್ಲಿ ಪರಸ್ಪರ ಪಾಲುದಾರಿಕೆ ಹೆಚ್ಚು ಮಾಡಲು ಎರಡು ದೇಶಗಳ ನಾಯಕರು ಸಹಮತ ಸೂಚಿಸಿದ್ದಾರೆ. ಭಾರತವು ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಖರೀದಿಸಲಿದೆ, ಅಣು ಶಕ್ತಿ ಕ್ಷೇತ್ರದಲ್ಲಿ ಎರಡು ದೇಶಗಳ ನಡುವೆ ಹೆಚ್ಚಿನ ಸಹಕಾರ ಇರಲಿದೆ.
ವಾಣಿಜ್ಯ ವಹಿವಾಟು ಹೆಚ್ಚಿಸಲು ಮತ್ತು ಪರಸ್ಪರರ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಇದೊಂದು ದೊಡ್ಡ ಹೆಜ್ಜೆ. ಆದರೆ ಹೆಚ್ಚಿನ ಕ್ಷೇತ್ರಗಳಲ್ಲಿ ಭಾರತವು ಖರೀದಿದಾರ ದೇಶವಾಗಿಯೂ ಅಮೆರಿಕವು ಪೂರೈಕೆದಾರ ದೇಶವಾಗಿಯೂ ಇರುತ್ತದೆ ಎಂಬುದನ್ನು ಗಮನಿಸಬೇಕಿದೆ. ಇದರ ಪರಿಣಾಮವು ಸರಿಯಾಗಿ ಅರಿವಿಗೆ ಬರುವುದು, ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸವ ದೇಶಗಳನ್ನು ಗುರಿಯಾಗಿಸಿಕೊಂಡು ಅಮೆರಿಕವು ಅಷ್ಟೇ ಪ್ರಮಾಣದಲ್ಲಿ ತೆರಿಗೆ ವಿಧಿಸುವ ಕ್ರಮವು ಅನುಷ್ಠಾನಕ್ಕೆ ಬಂದ ನಂತರದಲ್ಲಿ. ಈ ಬಗೆಯ ತೆರಿಗೆ ವಿಧಿಸುವ ಕ್ರಮಕ್ಕೆ ಗುರಿಯಾಗಲಿರುವ ದೇಶಗಳ ಸಾಲಿನಲ್ಲಿ ಭಾರತವೂ ಒಂದು. ಮೋದಿಯವರ ಅಮೆರಿಕ ಭೇಟಿಯು ಫಲಪ್ರದ ಎಂಬುದು ನಿಜ. ಆದರೆ, ಭೇಟಿಯ ಫಲಿತಾಂಶ ಏನು ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ

Leave a Comment