ಪ್ರವಾಸಿ ಹೇಳುವ ಕಥೆಗಳು
ಎಲ್ಲಾದರೂ ಹೋಗುವುದು, ನೋಡುವುದು ಮಾತ್ರವಾದರೆ ಅದು ಪ್ರವಾಸವಲ್ಲ. ಪ್ರವಾಸವೆಂದರೆ ಕಾಣುವುದು, ಅನುಭವಿಸುವುದು ಎಂಬ ಮಾತಿನ ಸತ್ವ-ಸಾರವನ್ನು ಇಲ್ಲಿನವರೆಗಿನ ಪ್ರತಿ ಪ್ರವಾಸದಲ್ಲೂ ಮನಗಂಡಿದ್ದೇನೆ. ಇದೇ ಕಾರಣಕ್ಕೆ ಕಾಸಿಲ್ಲದೇ ಹೋದ, ಕಾಸಿಟ್ಟುಕೊಂಡು ನಡೆದ, ಮನಸ್ಸಿಲ್ಲದೆಯೂ ಅನಿವಾರ್ಯತೆಯಲ್ಲಿ ಕೈಕೊಂಡ, ಮನಸಿಟ್ಟು ಆಸ್ಥೆಯಿಂದ ಗಮನಿಸಿದ ಪ್ರವಾಸಗಳೆಲ್ಲವೂ ನೆನಪಿವೆ. ಎಳವೆಯಲ್ಲಿ ಮುಂಬರುವ ಬೇಸಿಗೆ ರಜೆಯ ಖುಷಿ, ವಾರ್ಷಿಕ ಪರೀಕ್ಷೆಯ ಕಾವನ್ನು ತಣ್ಣಗಾಗಿಸುತ್ತಿತ್ತು. ಈಗ ಮಗರಾಯ ‘ಫೈನಲ್ ಟರ್ಮ್ ಎಕ್ಸಾಮಿನಲ್ಲಿ ಮಾರ್ಕ್ಸ್ ಚೆನ್ನಾಗಿ ತೆಗೆದರೆ ಬೇಸಿಗೆ ರಜೆಯಲ್ಲಿ ಓಳ್ಳೆಯ ಟೂರ್‌ಗೆ ಕರೆದುಕೊಂಡು ಹೋಗುವಿರ?’ ಎಂದು ಕೇಳಿದಾಗ ನನ್ನ ಬೇಸಿಗೆಯ ಪ್ರವಾಸಗಳು, ಅಲ್ಲಿನ ಮೋಜು, ಪರಿಪಾಟಲೆಲ್ಲ ಕಣ್ಮುಂದೆ ಕುಣಿಯುತ್ತವೆ. ಇದ್ಯಾವ ಕತ್ರಿ?
ಮೂರನೇ ಇಯತ್ತೆಯ ಪರೀಕ್ಷೆ ಮುಗಿಸಿ ನೈಟ್ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟಿದ್ದೆ. ಬಹುಶಃ ಅದೇ ನನ್ನ ಜೀವನದ ಮೊದಲ ಪ್ರವಾಸ. ಸೋದರಮಾವನ ಹೆಂಡತಿಗೆ ನನ್ನನ್ನು ಕರೆದೊಯ್ಯುವ ಜವಾಬ್ದಾರಿ. ಲಭ್ಯವಿದ್ದ ಗೌರ್ನಮೆಂಟ್ ಬಸ್ಸಿನಲ್ಲೇ ಉತ್ತಮವಾದ, ಸೆಮಿಲಕ್ಷುರಿಯೆಂದು ಕರೆಸಿಕೊಳ್ಳುವ ಬಸ್ಸಿನಲ್ಲಿ ಹೊರಟಿದ್ದೆವು. ‘ಮರುಬೆಳಗು ನೋಡಲಿರುವ ಬೆಂಗಳೂರಿನ ಕಲ್ಪನೆಯಿಂದಾಗಿ ನಿದ್ದೆ ಹತ್ತಿರವೂ ಸುಳಿಯುತ್ತಿಲ್ಲ. ನಮ್ಮದೋ – ಸಾಗರ, ಶಿವಮೊಗ್ಗ ಭದ್ರಾವತಿ ಎಲ್ಲ ಕಡೆಯೂ ಹತ್ತು ನಿಮಿಷ ವಿಶ್ರಾಂತಿ ಪಡೆದು ಮುಂದುವರಿಯುವ ಸೆಮಲಕ್ಷುರಿ ಬಸ್ಸು ಪ್ರತಿಬಾರಿ ನಿಂತಾಗಲೂ ನನ್ನ ಪಕ್ಕ ಒಳ್ಳೇ ನಿದ್ದೆಯಲ್ಲಿದ್ದ ಮಾವನ ಹೆಂಡತಿಯನ್ನು ಎಬ್ಬಿಸಿ, ‘ಉಮತ್ತೆ, ಇದ್ಯಾವ ಕತ್ರಿ..? ಎಂದು ಬಾಲಭಾಷೆಯಲ್ಲಿ ಕೇಳುತ್ತ ಬೆಳಗು ಹಾಯಿಸಿದ್ದೆ. ಅಲ್ಲಿಯವರೆಗೂ ಇಸಳೂರು ಕತ್ರಿ, ಎಕ್ಕಂಬ ಕತ್ರಿ, ನಾಣಿಕಟ್ಟಾ ಕತ್ರಿಯನ್ನು (ಕತ್ರಿ ಅಂದರೆ ಕ್ರಾಸ್, ಅಂದರೆ ಸಣ್ಣ ಊರುಗಳ ಬಸ್ ತಂಗುದಾಣ) ಬಿಟ್ಟು ಬೇರೆ ನೋಡದ ನನ್ನ ಮಟ್ಟಿಗೆ ಶಿವಮೊಗ್ಗದೊಂದಿಗೆ ತರಿಕೆರೆ, ಕಡೂರುಗಳೂ ಕತ್ರಿಗಳೇ.
ಇದನ್ನೂ ಓದಿ:ಶಾಸಕರಿಗೆ ಅನುದಾನ ಗ್ಯಾರಂಟಿ
ಆಗ ಮೊದಲ ಬಾರಿ ನೋಡಿದ್ದ ಬೆಂಗಳೂರು ಮಿದುಳಿನ ಪದರಗಳಲ್ಲಿ ಹೇಗೆ ಅಚ್ಚಳಿಯದೆ ಉಳಿದಿದೆಯೆಂದರೆ, ಇಷ್ಟು ವರ್ಷಗಳ ನಂತರ ಎಂಥದೇ ಗಿಜಿಗುಟ್ಟುವ ದಿನಗಳಲ್ಲಿ ಸಿಟಿ ಸೆಂಟರಿಗೆ ಹೋಗಲಿ – ಅಂದು ಕಣ್ಣೆವೆಗಳ ಕುಣಿಸದೇ ನೋಡಿದ ಅಗಾಧ ವಿಧಾನ ಸೌಧ, ಗಾಳಿಗೆ ಸುಂಯ್ಯನೆ ತುಯ್ಯುವ ಕಬ್ಬನ ಪಾರ್ಕಿನ ಬಿದಿರುಮೆಳೆಗಳು, ಎಂ.ಜೆ. ರೋಡು ಬ್ರಿಗೇಡ್ ರೋಡುಗಳಲ್ಲಿ ಅಪರೂಪಕ್ಕೆ ಕಂಡ ವಯ್ಯಾರದ ನಾಜೂಕಿನ ಗಾಜಿನ ಮಹಲುಗಳೇ ಮೊದಲು ನೆನಪಾಗುವುದು.
‘ಲ್ಯಾಂಡ್ಸ ಎಂಡ್’ನಲ್ಲಿ ಒದ್ದಾಟ, ಬೀಚಿನಲ್ಲಿ ಮರಳಾಟ ಇಂಥದ್ದೇ ಬಿಸಿಲಿನ ದಿನಗಳವು. ಹಿರಿಯರನ್ನೂ ಒಳಗೊಂಡಂತೆ
ಕುಟುಂಬದ ಹತ್ತು ಜನರು ದಕ್ಷಣ ಭಾರತ ಪ್ರವಾಸ ಹೊರಟಿದ್ದೆವು. ಮೊದಲೆರಡು ದಿನ ಮಧುರೈ ದೇವಸ್ಥಾನದಲ್ಲಿ ಇನ್ನಿಲ್ಲದ ಸರತಿ ಸಾಲು ಹಾಗೂ ಕನ್ಯಾಕುಮಾರಿಯ ತಾಸುಗಟ್ಟಲೆ ಉದ್ದದ ಕ್ಯೂ. ಎಪ್ಪತ್ತು ವರ್ಷ ಮೀರಿದವರು ದೇವಾನುದೇವತೆಯರ ದರ್ಶನದ ಗುಂಗಿನಲ್ಲಿದ್ದರೆ ನಾವು ನಡುವಯಸ್ಕರು ಪಾಲಕ-ಪೋಷಕತನದ ಹುಸಿ ಶಿಸ್ತಿನ ದಿಖಾವೆಯಲ್ಲಿ ಮಗ್ನರು .ಮಿಕ್ಕಚಿಕ್ಕಮಕ್ಕಳು ಮಾರನೆ ದಿನ ರಾಮೇಶ್ವರದ ಕಡಲ ತೀರದಲ್ಲಿ ಆಡುವ ಜೋಶ್‌ನಲ್ಲಿ ಬೋರ್ ಹೊಡೆಸುವ ಈ ಕ್ಯೂಗಳು ಯಾವ ದೊಡ್ಡ ಮಾತು ಎಂಬಂತೆ ಪೋಸು ಕೊಡುತ್ತಿದ್ದರು.ರಾಮೇಶ್ವರದ ಪಾಂಬನ್ ಬ್ರಿಜ್ಜನ್ನು ನಾವು ತಲುಪಿದಾಗ ಸೂರ್ಯಾಸ್ತದ ಪ್ರ ಸಮಯ. ದೃಷ್ಟಿ ಹರಿದಷ್ಟೂ ದೂರ ನೀರು. ಮಾರನೇ ಬೆಳಗ್ಗೆ ದೇವರ ದರ್ಶನವಾದ ಮೇಲೆ ಮಕ್ಕಳಿಗಂತೂ ಸಮುದ್ರದಲ್ಲಾಡುವ ಸಂಭ್ರಮ. ನೀರಿಗಿಳಿಯಲು ತಕ್ಕುದಾದ ಲೈಕ್ರಾ ಬಟ್ಟೆಗಳನ್ನು ಹಾಕಿ ರೆಡಿಯಾಗಿಬಿಟ್ಟಿದ್ದರು. ಆದರೆ ದೇವಸ್ಥಾನದಿಂದ ಒಂದಷ್ಟು ದೂರ ನಡೆದ ಮೇಲೆ ಕಂಡ ನೀರನ್ನು ನೋಡಿ ದೂರದಿಂದಲೇ ಕೈ ಮುಗಿದೆವು. ಕಾಲು ತೋಯಿಸಲೂ ಅಸಾಧ್ಯವೆಂಬಷ್ಟು ಜನ. ಜತೆಗೆ ನೀರಿನ ಬಣ್ಣ ಕಪ್ಪೋ ಕೆಂಪೋ ಹಸಿರೋ ಹೇಳಲೇ ಅಸಾಧ್ಯ. ಮಕ್ಕಳ ಮುಖ ಚಿಕ್ಕದಾಯಿತು. ಆದರೂ ನಂತರ ಹೋಗಲಿರುವ ಧನುಷೋಡಿಯ ಬಗ್ಗೆ ಉತ್ಸಾಹ. ‘ಅದು ಭಾರತದ ಅಂಚು ತಾನೇ..? ಅಲ್ಲಿಂದ ಮುಂದೆ ಶ್ರೀಲಂಕಾದವರೆಗೂ ನೀರೇ ನೀರು. ಅಲ್ಲಿ ಬೇಕಾದಷ್ಟು ಆಡೋಣ’ ಹೀಗೆ ಭೂಗೋಳ, ಸಾಮಾನ್ಯಜ್ಞಾನ ಎಲ್ಲವೂ ನಮ್ಮ ಮಾತಿನ ನಡುವೆ ಬಂತು.
ಧನುಷೋಡಿ ತಲುಪಿದಾಗ ನಮ್ಮ ವಾಹನಕ್ಕೆ ಜಾಗವೇ ಇಲ್ಲದಷ್ಟು ಕಾರು ಬಸ್ಸು ಟಿ.ಟಿ.ಗಳು ಆಗಲೇ ನಿಂತಿದ್ದವು. ವಾಹನದೊಟ್ಟಿಗೆ ಅಶೋಕಸ್ತಂಭಕ್ಕೆ ಒಂದು ಸುತ್ತು ಹಾಕಿ ಬಂದು ಅಲ್ಲೆಲ್ಲೋ ಮುಂದೆ ಇರಬಹುದಾದ ಶ್ರೀಲಂಕಾವನ್ನೂ ರಾಮಸೇತುವನ್ನೂ ಗೂಗಲ್ ಮ್ಯಾಪಿನಲ್ಲಿ ನೋಡಿದೆವು. ಸಮುದ್ರದಲ್ಲಿ ಆಡುವ ಕನಸು ಹಾಗೆ ಉಳಿದಿದ್ದರಿಂದ ಮಕ್ಕಳು ರೊಚ್ಚಿಗೆದ್ದಿದ್ದರು. ನಾವು, ಮಕ್ಕಳನ್ನು ಸಮಾಧಾನಿಸಲಾಗದೇ ಕಕ್ಕಾಬಿಕ್ಕಿ. ಕೊನೆಗೆ ನಮ್ಮ ಟಿ.ಟಿ. ಚಾಲಕರು ಪಾಂಬನ್ ಬ್ರಿಜ್ಜನ್ನು ದಾಟಿ ಬಂದಮೇಲೆ ಸುಮಾರು ಅರ್ಧ ಗಂಟೆ ಇನ್ನೊಂದು ಮಾರ್ಗದಲ್ಲಿ ಕರೆದೊಯ್ದು ಸುರಕ್ಷತವಾದ ಜಾಗದಲ್ಲಿ ವಾಹನ ನಿಲ್ಲಿಸಿದರು. ಅಲ್ಲಿ ಇಡೀ ಸಮುದ್ರತೀರ ಖಾಲಿ. ನಮ್ಮದೇ ಸದ ಪ್ರೈವೇಟ್ ಬೀಚ್ ಸಿಕ್ಕಿದ ಖುಷಿಯಲ್ಲಿ ಮಕ್ಕಳು ಕುಣಿದಾಡಿದರು. ಬಿರು ಬಿಸಿಲಿಗೂ ಸಮುದ್ರದ ನೀರಿಗೂ ಜತೆಯಾಟ ನಡೆದಂತೆ ತಾಸುಗಟ್ಟಲೆ ಮೈಮರೆತು ಆಟವಾಡಿದರು.
ಇಟಲಿಯ ಧಗೆಯೂ ಸ್ವಿಟ್ಟರ್ಲೆಂಡಿನ ಚಳಿಯೂ ಯೂರೋಪಿನ ಸುತ್ತಾಟದಲ್ಲಿ ಮನಗಂಡ ಸಂಗತಿಯೆಂದರೆ ಹೋಮ್ ವರ್ಕ್ ಮಾಡಿಕೊಂಡಷ್ಟೂ ನಮ್ಮ ಪ್ರವಾಸಗಳು ಸುಗಮ. ರೇಲ್ವೇ ಟಿಕೆಟು, ಹೋಟೆಲುಗಳು, ಹೋಗಬೇಕಾದಂತಹ ಸ್ಥಳಗಳ ಟಿಕೆಟ್ ಕಾಯ್ದಿರಿಸುವಿಕೆ, ಹತ್ತಿರದ ರೆಸ್ಟುರಾಗಳ ಮಾಹಿತಿ ಜತೆಗೆ ಮುಖದಲ್ಲೊಂದು ಮುಗುಳ್ನಗು – ಇಷ್ಟಿದ್ದು ಬಿಟ್ಟರೆ ಯೂರೋಪಿನಲ್ಲಿ ಪ್ರವಾಸ ಸುಲಭ. ಈ ರೀತಿ ಮುಂಗಡ ಬುಕಿಂಗ್‌ಗಳಿಂದಾಗಿ ಖರ್ಚಿನ ಲೆಕ್ಕಾಚಾರ ಏರುಪೇರಾಗುವುದು ಕಡಿಮೆ. ಪ್ರವಾಸ ಕರೆದೊಯ್ಯುವ ಟ್ರಾವೆಲ್ ಸಂಸ್ಥೆಗಳಿಗಿಂತ ನಮ್ಮ ಟೂರನ್ನು ನಾವೇ ಆಯೋಜನೆ ಮಾಡಿಕೊಳ್ಳುವುದು, ಅದರ ಯಶಸ್ಸನ್ನೂ ಎಡವಟ್ಟುಗಳನ್ನೂ ಸಮನಾಗಿಸ್ವೀಕರಿಸುವುದು ನಮ್ಮ ಖಾಯೀಷು.
ಒಮ್ಮೆ ಇಟಲಿಯ ಸರ್ದೀನಿಯ ಐಲೆಂಡುಗಳಲ್ಲಿ ಒಂದು ವಾರ ಕಳೆದು ನಂತರ ಸ್ವಿಟ್ಟರ್ಲೆಂಡಿನ ಮೌಂಟ್ ಝರ್ಮಾಟ್‌ಗೆ ಪ್ರಯಾಣ ಬೆಳೆಸಿದ್ದೆವು. ಹೋಗುವುದು ಹಿಮಾಚ್ಛಾದಿತ ಪರ್ವತಕ್ಕೆ ಎಂದು ಮಿದುಳಿಗೆ ಗೊತ್ತಿದ್ದರೂ ಮನದಲ್ಲಿ ಮಾತ್ರ ಇಟಲಿಯ ಸಮುದ್ರದಂಡೆಯ ಕಾವೇ ಇದ್ದಿರಬೇಕು… ಬೆಚ್ಚನೆಯ ಬಟ್ಟೆಯನ್ನು ಬ್ಯಾಗಿನಲ್ಲಿ ಇಡುವುದು ಮರೆತಿದ್ದೆವು. ಹದಿನಾರು ತಾಸಿನ ಅಂತರದಲ್ಲಿ 30 ಡಿಗ್ರಿ ಸೆಲ್ಸಿಯಸ್ ನಿಂದ ಮೈನಸ್ 20 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ತೆರೆದುಕೊಂಡಿದ್ದೆವು. ಬೆಚ್ಚನೆಯ ಸೆಟ್ಟರ್, ಮಂಗನ ಟೊಪ್ಪಿ ಯಾವುದೂ ನಮ್ಮೊಟ್ಟಿಗಿಲ್ಲ. ಹಾಗಂತ ಹಿಮದಲ್ಲಿ ಬಿದ್ದು ಉರುಳಾಡುವ ಆಸೆ! ಹತ್ತು ನಿಮಿಷ ನಮ್ಮ ಅಸಹಾಯಕತೆಯನ್ನೂ ಪೆಚ್ಚುಮೋರೆಯನ್ನೂ ನೋಡಿ ಕನಿಕರಗೊಂಡ ಅಲ್ಲಿನ ಸೆಕ್ಯೂರಿಟಿ ಗಾರ್ಡ್‌ಗಳಿಬ್ಬರು ತಾವು ಹಾಕಿದ್ದ ಜಾಕೆಟ್ ಹಾಗೂ ಕೈಗವಸನ್ನು ನಮಗೆ ಕೊಟ್ಟು ‘ಇಲ್ಲೇ ಆಟವಾಡಿ, ದೂರ ಹೋಗಬೇಡಿ’ ಎಂದು ಮಕ್ಕಳಿಗೆ ಗದರುವಂತೆ ಗದರಿ ತಾವು ಗಾಜಿನ ಬಾಗಿಲ ಒಳಗೆ ನಿಂತರು. ಅರ್ಧ ಗಂಟೆ ಮನಸೋಇಚ್ಛೆ ಹಿಮದಲ್ಲಿ ತೊಯ್ದ ನಾವು ಸುಭಗ ಪುಟಾಣಿಗಳಂತೆ ಅವರ ವಸ್ತುಗಳನ್ನು ಹಿಂದಿರುಗಿಸಿ ಮರಳಿದೆವು.
ಹೀಗೊಂದು ಜೀವನಾನುಭವ ಫುಕೆಟ್ ಪ್ರವಾಸಕ್ಕೆ ಹೋದಾಗ ಒಂದು ಹುಡುಗಾಟದ, ಹಾಸ್ಯದ ಸಂಗತಿಯೊಂದು ನಡೆಯಿತು. ನಾವು ಕಝಿನ್ನುಗಳೆಲ್ಲ ಸಂಸಾರ ಸಮೇತರಾಗಿ ಫುಕೆಟ್ಟಿನ ಹೋಟೆಲೊಂದರಲ್ಲಿ ತಂಗಿದ್ದೆವು. ಅಂದು ಸಂಜೆ ಒಂದು ಕಿಲೋಮೀಟರ್ ದೂರವಿರುವ ಸಮುದ್ರತೀರದಲ್ಲಿ ರಾತ್ರಿಯವರೆಗೂ ಸಮಯ ಕಳೆದು ಮರುದಿನ ಫುಕೆಟ್ಟಿನ ಉಳಿದೆಲ್ಲ ಪಾಕೆಟ್ಟುಗಳಿಗೆ ಹೋಗುವ ಯೋಜನೆ ನಮ್ಮದು. ಸಂಜೆ ಆರರವರೆಗೂ ಹೋಟೆಲಿನ ಸ್ವಿಮಿಂಗ್ ಪೂಲಿನಲ್ಲಿ ಮಕ್ಕಳು ದೊಡ್ಡವರಾದಿಯಾಗಿ ಆಟವಾಡಿ ನಂತರ ಬೀಚಿಗೆ ಹೊರಟೆವು. ಹತ್ತು ಹೆಜ್ಜೆ ಹಿಂದೆ ನಡೆದು ಬರುತ್ತಿದ್ದ ನನ್ನ ಅತ್ತಿಗೆ, ತನ್ನ ಹದಿನೈದರ ಮಗನಿಗೆ ಸಣ್ಣದನಿಯಲ್ಲಿ ಗದರುತ್ತಿದ್ದಳು. ಗದರುವಿಕೆ ಜೋರಾಗುವ ಲಕ್ಷಣ ಕಂಡು ನಾನು ತಾಯಿ-ಮಗನ ಹತ್ತಿರ ಹೋದೆ. ‘ಇನ್ನು ಆರು ತಿಂಗಳಾದರೆ ಹದಿನಾರು ತುಂಬುತ್ತದೆ ಈ ಪೋರನಿಗೆ… ಮಾಡಿರುವ ಕೆಲಸ ನೋಡು! ಹೋಟೆಲಿನವರು ಕೊಟ್ಟ ಸ್ಲಿಪ್ಪರಿನಂತಹ ಚಪ್ಪಲಿ ಹಾಕಿ ಬೀಚಿಗೆ ಬಂದಿದ್ದಾನೆ. ಕಂಪೌಂಡಿನಿಂದ ಹೊರಗೆ ಬೀಳುವಾಗಲಾದರೂ ಯೋಚನೆ ಬರಲಿಲ್ಲವ ಇವನಿಗೆ, ಆ ಚಪ್ಪಲಿ ಹಾಕಿ ಹೊರಬರಬಾರದು ಎಂದು….’ ಸ್ವರ ದೊಡ್ಡದಾಗುತ್ತಲೇ ಹೋಯಿತು ತಾಯಿಯದು. ನಾನು ಸೋದರಳಿಯನ ತೋಳು ಬಳಸಿ ‘ಹೋಗಲಿ ಬಿಡು, ಅಂವ ಹೋಟೆಲಿಗೆ ಹೋಗಿ ಚಪ್ಪಲಿಯನ್ನು ಸೋಪಿನಿಂದ ತೊಳೆದಿಡುತ್ತಾನೆ’ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದೆ. ರಾತ್ರಿ ಮರಳಿ ಬರುವವರೆಗೂ ತಾಯಿ ಮಗನನ್ನು ನೋಡಿ ಮುಖವುಬ್ಬಿಸುತ್ತಲೇ ಇದ್ದಳು.
ಮಾರನೆ ಬೆಳಗ್ಗೆ ಸಿಟಿ ಸುತ್ತಲು ಹೋದ ನಾವು ಗುಡ್ಡದ ಮೇಲಿರುವ ‘ಬಿಗ್ ಬುದ್ಧ’, ಚಲೋಂಗ್ ದೇವಾಲಯ, ವ್ಯೂ ಪಾಯಿಂಟ್ ಇದೆಲ್ಲವನ್ನೂ ಸುತ್ತಾಡಿ ಫುಕೆಟ್ಟಿನ ಜನಪ್ರಿಯ ಎಲಿಫಂಟ್ ಪಾರ್ಕ್‌ಗೆ ಬಂದೆವು. ಆನೆಗಳ ವಿಹಾರೋದ್ಯಾನ ಭೇಟಿಯೇ ನಮ್ಮ ಆ ದಿನದ ಕೊನೆಯ ಸುತ್ತಾಟ. ಇಡೀ ಪಾರ್ಕಿನಲ್ಲಿ ತಾಸುಗಟ್ಟಲೆ ಕಳೆದು, ಆನೆಗಳನ್ನು ಮುಟ್ಟಿ-ತಬ್ಬಿ, ಮಕ್ಕಳ ಸಂಭ್ರಮ ನೋಡಿ ನಾವೂ ಸಂಭ್ರಮಿಸಿ, ಸುತ್ತಾಡಿ ಸುಸ್ತಾಗಿದ್ದರಿಂದ ಅಲ್ಲೇ ಪಕ್ಕದ ಕೆಫೆಯಲ್ಲಿ ಊಟೋಪಚಾರ ಮುಗಿಸಿ ಇನ್ನೇನು ನಮ್ಮ ವಾಹನ ಹತ್ತಬೇಕು… ಆಗ ನನ್ನ ಪಕ್ಕದಲ್ಲೇ ಇದ್ದ ವ್ಯಕ್ತಿ ‘ಓಹೋ…’ ಎಂದು ಉದ್ಗಾರವೆತ್ತಿ ತಮ್ಮ ಕಾಲನ್ನು ದಿಟ್ಟಿಸಿದರು. ಹಾಗೆ ಉದ್ಗಾರವೆತ್ತಿದ್ದು ನನ್ನ ಗಂಡ. ಆ ಉದ್ಗಾರ ಎಷ್ಟು ಜೋರಾಗಿತ್ತು ಅಂದರೆ ನಾವು ಬೆಳೆದವರು, ಎಳೆಯರು ಎಲ್ಲರೂ ಅವರ ಸುತ್ತ ಗುಂಪುಗಟ್ಟಿ ಅವರ ಪಾದಗಳನ್ನು ನೋಡತೊಡಗಿದೆವು. ಹೋಟೆಲಿನ ಅದೇ ಸ್ಲಿಪ್ಪರ್ ಮಾದರಿಯ ಚಪ್ಪಲಿ ಈ ಯುಗಳಪಾದದಲ್ಲಿ! ನಂತರ ನಮ್ಮೆಲ್ಲರ ಕಣ್ಣಜೋಡಿಗಳು ತಿರುಗಿದ್ದು ನನ್ನತ್ತಿಗೆಯತ್ತ, ಹರೆಯದ ಸೋದರಳಿಯನತ್ತ .ಬೆಳಗಿಂದ ಸಂಜೆಯವರೆಗೂ ಫುಕೆಟ್ ಸಿಟಿ ತಿರುಗಿ ಸುಸ್ತಾದ ಚಪ್ಪಲಿ ಮಾತ್ರ ಸಶಬ್ದವಾಗಿ ಕುಂಯ್ಯೋ ಮಲ್ಲೊ ಅನ್ನುತ್ತಿತ್ತು.