ಪ್ಲಾಸ್ಟಿಕ್ ಸರ್ಜರಿ ಎಂಬ ಸುರೂಪಿ ಚಿಕಿತ್ಸೆ
ಎಲ್ಲ ಪ್ರಾಚೀನ ನಾಗರಿಕತೆಗಳಲ್ಲೂ ಮೂಗು ಎನ್ನುವುದು ಪ್ರತಿಷ್ಠೆಯ ‘ಸಂಕೇತವಾಗಿತ್ತು. ತಪ್ಪು ಮಾಡಿದವರ ಮೂಗನ್ನು ಕತ್ತರಿಸುವ ಪದ್ಧತಿ ಭಾರತ, ಈಜಿಪ್ಟ್, ಮೆಸೆಪೆಟೊಮಿಯಾ ನಾಗರಿಕತೆಗಳಲ್ಲಿ ನಾಲ್ಕು ಸಾವಿರ ವರ್ಷಗಳಿಂದ ದಾಖಲಾಗಿದೆ. ತಮ್ಮ ಪ್ರತಿಷ್ಠೆಗೆ ಭಂಗವಾದಾಗ ಸಿರಿವಂತರು ಏನಾದರೂ ಪರಿಹಾರ ಹುಡುಕುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಬೆಳೆದದ್ದು ಕತ್ತರಿಸಿದ ಮೂಗನ್ನು ಸರಿಪಡಿಸುವ ಸುರೂಪಿ ಚಿಕಿತ್ಸೆ. ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಕುಂಬಾರರು ಮಣ್ಣಿನಿಂದ ಮಾಡಿದ ಆಕೃತಿಗಳನ್ನು ಬಳಸಿ ಕತ್ತರಿಸಿದ ಮೂಗನ್ನು ಸಾಮಾನ್ಯವಾಗಿ ಕಾಣುವಂತೆ ಮಾಡುತ್ತಿದ್ದರು ಎನ್ನುವ ದಾಖಲೆಗಳಿವೆ. ಇದು ಮುಂದೆ ಅಭಿವೃದ್ಧಿಯಾಗಿ ಹಣೆಯ ಮೇಲಿನ ಚರ್ಮವನ್ನು ಹೆರೆದು, ಅದನ್ನು ಕತ್ತರಿಸಿದ ಮೂಗಿನ ಭಾಗಕ್ಕೆ ಜೋಡಿಸುವ ಕಲೆಯಾಗಿ ಮಾರ್ಪಾಡಾಯಿತು. ಇದನ್ನು ಸಾಧಿಸಿದವರು ಸಣ್ಣ ಚಾಕುಗಳ ಬಳಕೆ, ನಿಖರವಾದ ಕೈಚಲನೆಯಲ್ಲಿ ಪಳಗಿದ್ದ ಕ್ಷೌರಿಕರು. ಕತ್ತರಿಸಿದ ಮೂಗನ್ನು ಸರಿಪಡಿಸುತ್ತಿದ್ದ ಕ್ಷೌರಿಕನ ಪ್ರಸ್ತಾಪವನ್ನು 11ನೆಯ ಶತಮಾನದ ಕಾಶ್ಮೀರದ ಕವಿ ಕ್ಷೇಮೇಂದ್ರ ತನ್ನ ‘ಸಮಯಮಾತೃಕಾ’ ಎನ್ನುವ ಕೃತಿಯಲ್ಲಿ ಮಾಡಿದ್ದಾನೆ.
ಶತಮಾನಗಳ ಕಾಲ ಜಗತ್ತಿನ ಗಮನಕ್ಕೆ ಬಾರದಂತೆ ಈ ಪದ್ಧತಿ ಭಾರತದಲ್ಲಿ ನಡೆಯುತ್ತಲೇ ಇತ್ತು. 1794ರಲ್ಲಿ ಮಿ. ಅರ್ಬನ್ ಮತ್ತು ಜನರಲ್ ಲ್ಯುಕಸ್ ಎಂಬ ಬ್ರಿಟಿಷ್ ಅಧಿಕಾರಿಗಳು ಇಂಗ್ಲೆಂಡಿನ ಪತ್ರಿಕೆಯೊಂದರಲ್ಲಿ ಮೈಸೂರು ಸಂಸ್ಥಾನದಲ್ಲಿ ಕಂಡುಬಂದ ಕತ್ತರಿಸಿದ ಮೂಗಿನ ಸುರೂಪಿ ಶಸ್ತ್ರಚಿಕಿತ್ಸೆಯ ಪ್ರಸಂಗವೊಂದನ್ನು ವರದಿ ಮಾಡಿ, ಜಗತ್ತಿಗೆ ಅಚ್ಚರಿ ಮೂಡಿಸಿದ್ದರು.
ಇಂದು ಪ್ಲಾಸ್ಟಿಕ್ ಸರ್ಜರಿ ಎಂದು ಕರೆಯಲ್ಪಡುವ ಸುರೂಪಿ ಶಸ್ತ್ರಚಿಕಿತ್ಸೆ ಬಹಳ ಪ್ರಗತಿ ಸಾಧಿಸಿದೆ. ಊನವಾದ ಅಂಗಗಳನ್ನು ಮೊದಲಿನಂತೆ ಸರಿಪಡಿಸುವುದು, ಬೇರೆ ವಿಧಾನಗಳಿಂದ ಅವುಗಳನ್ನು ಮತ್ತೆ ನಿರ್ಮಿಸುವುದು, ವಕ್ರವಾಗಿ ಬೆಳೆದಿರುವ ಅಂಗಗಳನ್ನು ಚಂದವಾಗಿ ಕಾಣುವಂತೆ ಸರಿಪಡಿಸುವುದು ಪ್ಲಾಸ್ಟಿಕ್ ಸರ್ಜರಿಯ ಧೈಯಗಳು. ಇದರಲ್ಲಿ ‘ಪ್ಲಾಸ್ಟಿಕ್’ ಎನ್ನುವ ಪದ ಗ್ರೀಕ್ ಮೂಲದ್ದು. ಅದರ ಅರ್ಥ ‘ಬೇಕಾದಂತಹ ಆಕೃತಿಗೆ ತರುವುದು’. ಶಸ್ತ್ರಚಿಕಿತ್ಸೆಯಲ್ಲಿ ಈ ಪದದ ಬಳಕೆ ಬಂದದ್ದು 1816ರಲ್ಲಿ. ನಾವು ಇಂದು ಬಳಸುವ ಪೆಟ್ರೋಲಿಯಂ ಮೂಲದ ಪ್ಲಾಸ್ಟಿಕ್ ಎನ್ನುವ ವಸ್ತು ಆವಿಷ್ಕಾರವಾದದ್ದು 1908ರಲ್ಲಿ. ಪ್ಲಾಸ್ಟಿಕ್ ಸರ್ಜರಿಗೂ, ಸಾಮಾನ್ಯ ಬಳಕೆಯ ಪ್ಲಾಸ್ಟಿಕ್ಗೂ ಯಾವ ಸಂಬಂಧವೂ ಇಲ್ಲ.
ಇದನ್ನೂ ಓದಿ:ಪ್ಯಾರಿಸ್ ಒಪ್ಪಂದ’ ಜಾರಿಗೆ ಬೇಕಿದೆ ಜಾಗತಿಕ ಬದ್ಧತೆ
ಮೊದಲನೆಯ ಮಹಾಯುದ್ಧದ ವೇಳೆ ಅಂಗಚ್ಛೇದಗಳಿಗೆ ಒಳಗಾಗಿದ್ದ ಸೈನಿಕರ ವಿಕೃತವಾದ ಅಂಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿದನ್ಯೂಜಿಲೆಂಡ್ನ ವೈದ್ಯ ಸರ್ ಹೆರಾಲ್ಡ್ ಗಿಲ್ಲೆಸ್ ಅಧುನಿಕ ಪ್ಲಾಸ್ಟಿಕ್ ಸರ್ಜರಿಯ ಜನಕ ಎನಿಸಿಕೊಂಡಿದ್ದಾರೆ. ಇಂದು ಪ್ಲಾಸ್ಟಿಕ್ ಸರ್ಜರಿ ಅಗಾಧವಾಗಿ ಬೆಳೆದಿದೆ. ನಟರ ಸೊಟ್ಟ ಮೂಗುಗಳನ್ನು ನೆಟ್ಟಗಾಗಿಸುವ, ನಟಿಯರ ಸ್ತನಗಳ ಗಾತ್ರಗಳನ್ನು ಹಿಗ್ಗಿಸುವ ವಿಧಾನಗಳು ಇದರ ಅಲ್ಪಭಾಗ ಮಾತ್ರ. ಸುಟ್ಟಗಾಯಗಳ ಚರ್ಮದ ಪುನರ್ ನಿರ್ಮಾಣ; ಮಕ್ಕಳ ಸೀಳು-ತುಟಿ, ಸೀಳು-ಅಂಗಳಗಳನ್ನು ಕೂಡಿಸುವಿಕೆ; ಕ್ಯಾನ್ಸರ್ ಮೂಲಕ ಗಾಸಿಗೊಂಡಿರುವ ಮುಖದ ಮೂಳೆಗಳ ಮರುನಿರ್ಮಾಣ; ಜನ್ಮಜಾತವಾಗಿಯೋ ಅಥವಾ ಅವಘಡಗಳ ಮೂಲಕವೋ ಸಂಭವಿಸಿದ ಕೈಬೆರಳುಗಳ ವಿಕೃತಿಗಳನ್ನು ತಿದ್ದುವಿಕೆ; ಕ್ಯಾನ್ಸರ್ ಮೂಲಕ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸ್ತನಗಳ ಕೃತಕ ನಿರ್ಮಿತಿ; ತೀರಾ ಸಣ್ಣಗಾತ್ರದ, ಆದರೆ ಬಹಳ ಮಹತ್ವದ ಕಾರ್ಯ ನಿರ್ವಹಿಸುವ ರಕ್ತನಾಳಗಳು ಮತ್ತು ನರಗಳ ಜೋಡಣೆ ಮೊದಲಾದುವುಗಳು ಪ್ಲಾಸ್ಟಿಕ್ ಸರ್ಜರಿಯ ವ್ಯಾಪ್ತಿಗೆ ಬರುತ್ತವೆ.
ಸುರೂಪಿ ಚಿಕಿತ್ಸೆಯ ಅತ್ಯಂತ ಮಹತ್ವದ ಅಂಶ ಚರ್ಮದ ರಕ್ಷಣೆ. ರೂಪ ಎನ್ನುವುದು ಮುಖ್ಯವಾಗಿ ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಆಧರಿಸುತ್ತದೆ. ಹೀಗಾಗಿ, ಸಫಲ ಪ್ಲಾಸ್ಟಿಕ್ ಸರ್ಜರಿಯಲ್ಲಿ ಆಯಾ ಅಂಗದ ಮೇಲಿನ ಚರ್ಮವನ್ನು ಸಹಜವಾಗಿ ಕಾಣುವಂತೆ ಮಾಡುವುದು ಬಹಳ ಮುಖ್ಯ. ಬಹುತೇಕ ಸುಟ್ಟ ಗಾಯಗಳ ಚಿಕಿತ್ಸೆಯಲ್ಲಿ ಚರ್ಮದ ಶಸ್ತ್ರಚಿಕಿತ್ಸೆಯೇ ಪ್ರಮುಖ ಭಾಗ. ಒಂದು ಭಾಗದ ಚರ್ಮವನ್ನು ಮತ್ತೊಂದು ಭಾಗಕ್ಕೆ ಜೋಡಿಸುವ ಪ್ರಕ್ರಿಯೆ ಸುರೂಪಿ ಶಸ್ತ್ರಚಿಕಿತ್ಸೆಯ ಅಂಗಭಾಗ. ಇದು ಆಯಾ ರೋಗಿಯ ಚರ್ಮವನ್ನೇ ಬಳಸಿ ಮಾಡಬಹುದು. ರೋಗಿಯ ತೊಡೆಯ ಚರ್ಮವು ಮುಖದ ಶಸ್ತ್ರಚಿಕಿತ್ಸೆಯಲ್ಲಿ ನೆರವಾಗುತ್ತದೆ.
ಕೆಲವೊಮ್ಮೆ ಇತರ ದಾನಿಗಳ ಚರ್ಮದ ಬಳಕೆಯೂ ಆಗುತ್ತದೆ.ಈಚೆಗೆ ಮೃತದೇಹಗಳಿಂದ ಚರ್ಮವನ್ನು ತೆಗೆದು ಸಂರಕ್ಷಿಸಿ, ರೋಗಿಗಳಿಗೆ ಬಳಕೆ ಮಾಡುವ ಚರ್ಮದ ಬ್ಯಾಂಕ್ ನಿರ್ಮಾಣವಾಗಿದೆ ಇದು ರೋಗಿಗಳ ಪಾಲಿಗೆ, ಅದರಲ್ಲೂ ಸುಟ್ಟ ಗಾಯಗಳ ಸಂತ್ರಸ್ತರಿಗೆ ವರದಾನವಾಗಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಪ್ರಾಣಿಗಳ ಚರ್ಮದ ಬಳಕೆಯೂ ಆಗುತ್ತದೆ. ಚರ್ಮದ ಮೇಲೆ ಕಲೆಗಳು ಕಾಣದಂತೆ ನಡೆಸುವ ಶಸ್ತ್ರಚಿಕಿತ್ಸೆಗಳಿಗೆ ಮಹತ್ವವಿದೆ. ಇದಕ್ಕಾಗಿ ಶಸ್ತ್ರಚಿಕಿತ್ಸೆಯ ವೇಳೆ ಚರ್ಮವನ್ನು ಯಾವ ರೀತಿಯಲ್ಲಿ, ಯಾವ ಕೋನದಲ್ಲಿ, ಯಾವ ಹಾದಿಯಲ್ಲಿ ವಿಂಗಡಿಸಬೇಕು ಎನ್ನುವ ಕರಾರುವಾಕ್ ಅಧ್ಯಯನಗಳಿವೆ. ಚರ್ಮದ ಸಹಜ ಅಂಗಾಂಶಗಳ ನಿರ್ಮಿತಿಯ ದಾರಿಯನ್ನು ಅನುಸರಿಸುವ ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆಯ ನಂತರ ಚರ್ಮ ಬಹಳ ಸಹಜವಾಗಿ ಕೂಡಿಕೊಳ್ಳುತ್ತದೆ. ಇದಕ್ಕೆ ಪೂರಕವಾಗುವಂತೆ ಅತ್ಯಂತ ಸಪೂರ ಹೊಲಿಗೆ ದಾರಗಳ ಬಳಕೆ, ಚರ್ಮದ ಆಂತರ್ಯದಲ್ಲೇ ಹಾಕುವ ಸೂಕ್ಷ್ಮ ಹೊಲಿಗೆಗಳು, ಬಹಳ ನಾಜೂಕಾಗಿ ಚರ್ಮದ ಪದರಗಳನ್ನು ಒಟ್ಟುಗೂಡಿಸುವ ವಿಧಾನ, ಚರ್ಮದ ಸಹಜ ಬಣ್ಣವನ್ನು ಏರುಪೇರು ಮಾಡದ ವಿಶಿಷ್ಟ ಔಷಧಗಳ ಬಳಕೆ ಮೊದಲಾದುವುಗಳು ಸಹಕಾರಿ.
ಸುರೂಪಿ ಶಸ್ತ್ರಚಿಕಿತ್ಸೆ ಎಷ್ಟು ಪರಮಾಣುಗಳು ಪ್ರಾಚೀನವೋ ಅಷ್ಟೇ ನವೀನ. ಸಾಮಾನ್ಯ ಜೀವನ ಸಹಜವಾಗಿಯೂ ಸುಂದರವಾಗಿಯೂ ಇರಬೇಕೆನ್ನುವುದು ಎಲ್ಲರ ಬಯಕೆ. ಸುರೂಪಿ ಶಸ್ತ್ರಚಿಕಿತ್ಸೆಯ ಧೈಯವೂ ಜೀವನದ ಈ ಆಶಯವನ್ನೇ ಬಿಂಬಿಸುವ ಪ್ರಯತ್ನ.