ಮುಂದಿವೆ ಸವಾಲಿನ ದಿನಗಳು
ವಾಡಿಕೆಯಂತೆ ಮಾರ್ಚ್ 1ರಿಂದ ಆರಂಭವಾಗಬೇಕಿದ್ದ ಬೇಸಿಗೆ ಈ ಬಾರಿ ಫೆಬ್ರವರಿ ಮೊದಲ ವಾರದಲ್ಲೇ ಶುರುವಾಗಿದೆ. ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಿದೆ. ಜಾಗತಿಕ ತಾಪಮಾನ ಏರಿಕೆ, ತೇವಾಂಶದ ಕೊರತೆ, ಶುಭ್ರ ಆಕಾಶ ಮತ್ತು ಒಣಗಾಳಿ ಸೇರಿ ವಿವಿಧ ಕಾರಣಗಳಿಂದ 22-24 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 3-4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗಿದೆ. ಮತ್ತೊಂದೆಡೆ, 2025ರ ಜನವರಿಯ ತಾಪಮಾನ ಈವರೆಗಿನ ಗರಿಷ್ಠ ಮಟ್ಟದ್ದು ಎಂದು ಯುರೋಪ್ ವಿಜ್ಞಾನಿಗಳ ವರದಿ ತಿಳಿಸಿದೆ. ಈ ಬಾರಿಯೂ ಬೇಸಿಗೆಯ ತೀವ್ರತೆ ಹೆಚ್ಚಾಗಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಕಳೆದ ಬಾರಿ ದೇಶದಲ್ಲಿ, ಅದರಲ್ಲೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಉಷ್ಣಾಘಾತದಿಂದಲೇ ನೂರಾರು ಜನರು ಪ್ರಾಣ ಕಳೆದುಕೊಂಡ ಕಹಿನೆನಪು ಇನ್ನೂ ಮರೆಯಾಗಿಲ್ಲ, ಬೇಸಿಗೆಯ ಸಮಯದಲ್ಲಿ ಜಲಸಂಕಷ್ಟದ ತೀವ್ರತೆಯೂ ಬಾಧಿಸಿ ಶ್ರೀಸಾಮಾನ್ಯರನ್ನು ಮತ್ತಷ್ಟು ಹೈರಾಣಾಗಿಸಿತು.
ಹವಾಮಾನ ಬದಲಾವಣೆ ಹಲವು ಸವಾಲುಗಳನ್ನು ತಂದೊಡ್ಡಿದ್ದು, ಜಾಗತಿಕ ತಾಪಮಾನವಂತೂ ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ‘2025ರಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯಬಲ್ಲಂತಹ ತಾಪಮಾನ ಇರಲಿದೆ’ ఎంబ ಎಚ್ಚರಿಕೆಯನ್ನೂ ಹವಾಮಾನ ತಜ್ಞರು ನೀಡಿದ್ದಾರೆ. ಅಲ್ಲದೆ, ‘2024 ಅತ್ಯಂತ ಹೆಚ್ಚು ಉಷ್ಣಾಂಶದ ವರ್ಷವಾಗಿತ್ತು’ ಎಂದು ಕೇಂದ್ರ ಹವಾಮಾನ ಇಲಾಖೆ ಕಳೆದ ತಿಂಗಳು ತಿಳಿಸಿತ್ತು. ವಿಶ್ವದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯು ದಾಖಲೆ ಮಟ್ಟದಲ್ಲಿ ಹೆಚ್ಚಾಗಿರುವುದರಿಂದ ಭೂಮಿಯ ಮೇಲೆ ಮತ್ತು ಜಲರಾಶಿಯಲ್ಲಿನ ತಾಪಮಾನವು ಕೂಡ ಹೆಚ್ಚಳವಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಕೆಲ ತಿಂಗಳುಗಳ ಹಿಂದೆಯೇ ಹೇಳಿದೆ. ಅಲ್ಲದೆ, ತಾಪಮಾನ ಹೆಚ್ಚಳವನ್ನು ತಡೆಯಲು ವಿಶ್ವದ ರಾಷ್ಟ್ರಗಳು ನಡೆಸುತ್ತಿರುವ ಪ್ರಯತ್ನಗಳು ಸಾಕಾಗುತ್ತಿಲ್ಲ ಎಂದು ಎಚ್ಚರಿಸಿದೆ.
ಇದನ್ನೂ ಓದಿ: ಸರಹದ್ದಿನ ಕೊನೆಯ ಅಂಚು… ಅಲಾಂಗ್
ಕಳೆದ ವರ್ಷ ಉಷ್ಣಾಘಾತದ ಕಹಿನೆನಪು ಇನ್ನೂ ಮಾಸಿಲ್ಲ
ಜಾಗತಿಕ ತಾಪಮಾನ ಹೆಚ್ಚಳದಿಂದ 2050ರ ಹೊತ್ತಿಗೆ ಜನರ ಆದಾಯದಲ್ಲೂ ಶೇಕಡ 19ರಷ್ಟು ಕುಸಿತವಾಗಲಿದೆ ಎಂದು ವೈಜ್ಞಾನಿಕ ನಿಯತಕಾಲಿಕ ‘ನೇಚರ್’ ತಿಳಿಸಿದೆ. ಉಷ್ಣಾಂಶ ಹೆಚ್ಚುತ್ತಿದ್ದಂತೆ ಕೃಷಿ ಉತ್ಪಾದಕತೆಯಲ್ಲಿ ಕುಸಿತ ಕಂಡುಬರಲಿದೆ. ಮಾನವ ಸಂಪನ್ಮೂಲದ ದುಡಿಮೆ ಸಾಮರ್ಥ್ಯ ತಗ್ಗಲಿದೆ ಹಾಗೂ ಆರೋಗ್ಯ ಸಮಸ್ಯೆಗಳು ಹೆಚ್ಚಲಿವೆ. ಇದೆಲ್ಲದರಿಂದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದರಿಂದ ವೈಯಕ್ತಿಕ ತಲಾ ಆದಾಯಕ್ಕೂ ಹೊಡೆತ ಬೀಳಲಿದೆ. ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರಗಳು ಹೆಚ್ಚು ಬಾಧಿತವಾಗಿವೆ. ಹೀಗಾಗಿ, ಮುಂದಿನ ಸವಾಲಿನ ದಿನಗಳನ್ನು ಎದುರಿಸಲು ಈಗಲೇ ಸಂಬಂಧಿತ ವ್ಯವಸ್ಥೆಯನ್ನು ಸನ್ನದ್ಧಗೊಳಿಸಬೇಕಿದೆ. ಭಾರತದಲ್ಲೂ ಇನ್ನಷ್ಟು ಸುಧಾರಣಾ ಕ್ರಮಗಳು ಕೈಗೊಳ್ಳಬೇಕಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಅಂಶಗಳ ಬಗ್ಗೆ ಸರ್ಕಾರಗಳು ಮತ್ತು ಸಾರ್ವಜನಿಕರು ಕಾಲ ಮಿಂಚಿ ಹೋಗುವ ಮುನ್ನವೇ ಗಮನ ಹರಿಸಿ, ಪರಿಹಾರ ಕ್ರಮಕ್ಕೆ ಮುಂದಾಗುವುದು ಒಳಿತು. ಈ ನಿಟ್ಟಿನಲ್ಲಿ ಪರಿಸರಕ್ಕೆ ಪೂರಕವಾದ ಜೀವನಶೈಲಿಯತ್ತ ಮರಳುವುದು ಪರಿಹಾರದ ಉತ್ತಮ ಮಾರ್ಗವಾದೀತು