ಕೌಲಾಲಂಪುರ: ಕನ್ನಡತಿ ನಿಕಿ ಪ್ರಸಾದರ ಬಳಗ ಇಲ್ಲಿ ನಡೆದ 19 ವರ್ಷದವರೊಳಗಿನ ಮಹಿಳೆಯರ ಚೊಚ್ಚಲ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಭಾನುವಾರ ನಡೆದ ಫೈನಲ್ನಲ್ಲಿ ಮೊದಲು ಗೊಂಗಾಡಿ ತ್ರಿಷಾ ಅವರ ದಿಟ್ಟ ಅರ್ಧ ಶತಕ ಹಾಗೂ ನಂತರ ಸ್ಪಿನ್ನರ್ಗಳ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ಹೆಚ್ಚಿನ ಬೆವರಿಳಿಸದೇ ಬಾಂಗ್ಲಾದೇಶವನ್ನು 41 ಓಟಗಳಿಂದ ಪರಾಭವಗೊಳಿಸಿ ಪ್ರಶಸ್ತಿಯ ಮೇಲೆ ತನ್ನ ಹಕ್ಕು ಜಮಾಯಿಸಿತು.
ಭಾರತದ ಸರದಿಯನ್ನಾರಂಭಿಸಿದ ತ್ರಿಷಾ(52, 47 ಎಸೆತ, 5 ಬೌಂಡರಿ, 2 ಸಿಕ್ಸರ್) ಇನ್ನೊಂದೆಡೆ ವಿಕೆಟ್ಗಳು ಬೀಳುತ್ತಿದ್ದರೂ ತಾವು ಗಟ್ಟಿಯಾಗಿ ನಿಂತು ವೈಯಕ್ತಿಕ ಅರ್ಧ ಶತಕ ಪೂರೈಸಿದರಲ್ಲದೇ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ:- ರೋಹಿತ್ಗೆ ಗಾಯದ ಭೀತಿ
ಬ್ಯಾಟರ್ ಗಳಿಗೆ ಹೆಚ್ಚಿನ ನೆರವು ನೀಡದ ಪಿಚ್ ಮೇಲೆ ಮಿಥಿಲಾ ವಿನೋದ(17, 12 ಎಸೆತ, 2 ಬೌಂಡರಿ, 1 ಸಿಕ್ಸರ್), ನಿಕಿ ಪ್ರಸಾದ(12, 21 ಎಸೆತ, 1 ಸಿಕ್ಸರ್) ಹಾಗೂ ಆಯುಷಿ ಶುಕ್ಲಾ(10, 13 ಎಸೆತ, 1 ಬೌಂಡರಿ) ಎರಡಂಕಿ ದಾಟಿದ ಇನ್ನುಳಿದ ಮೂವರು. ಫರ್ಜಾನಾ ಎಸ್ಟಿನ್ (4/31) ಹಾಗೂ ನಿಶಿತಾ ಅಖರ್ ನಿಶಿ(2/23) ಬಾಂಗ್ಲಾ ಪರ ವಿಕೆಟ್ ಪಡೆದ ಪ್ರಮುಖ ಬೌಲರ್ಗಳು.
ಉತ್ತರವಾಗಿ ಒಂದು ಹಂತದಲ್ಲಿ 44ರ ಮೊತ್ತದಲ್ಲಿ ಕೇವಲ ಎರಡೇ ವಿಕೆಟ್ಗಳನ್ನು ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಬಾಂಗ್ಲಾದೇಶ ನಂತರ ಆಯುಷಿ ಶುಕ್ಲಾ(3/17), ಪರುಣಿಕಾ ಸಿಸೋಡಿಯಾ(2/12) ಹಾಗೂ ಸೋನಮ್ ಯಾದವ(2/13) ಎದುರು ತಟಕ್ಕನೇ ಕುಸಿದು 18.3 ಓವರ್ಗಳಲ್ಲಿ 76ಕ್ಕೆ ಸರ್ವಪತನ ಕಂಡಿತು. ಕೇವಲ ಜುಐರಿಯಾ ಫೆರ್ದೂಸ್(22, 30 ಎಸೆತ, 3 ಬೌಂಡರಿ) ಹಾಗೂ ಫಹೋಮಿದಾ ಛೋಯಾ(18, 24 ಎಸೆತ, 2 ಬೌಂಡರಿ) ಮಾತ್ರ ಬಾಂಗ್ಲಾ ಪರ ಸ್ವಲ್ಪ ಪ್ರತಿರೋಧವೊಡ್ಡಿದರು.
ಸಂಕ್ಷಿಪ್ತ ಸ್ಕೋರುಗಳು
ಭಾರತ: 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 117(ಗೊಂಗಾಡಿ ತ್ರಿಷಾ
52, ಮಿಥಿಲಾ ವಿನೋದ 17, ನಿಕಿ ಪ್ರಸಾದ 12, ಆಯುಷಿ ಶುಕ್ಲಾ 10, ಫರ್ಜಾನಾ ಎಸ್ಮಿನ್ 4/31, ನಿಶಿತಾ ಅಖರ್ ನಿಶಿ 2/23, ಹಬೀಬಾ ಇಸ್ಲಾಮ್ 1/20).
ಬಾಂಗ್ಲಾದೇಶ: 18.3 ಓವರ್ಗಳಲ್ಲಿ 76(ಜುಐರಿಯಾ ಫೆರ್ದೂಸ್ 22, ಆಯುಷಿ ಶುಕ್ಲಾ 3/17, ಪರುಣಿಕಾ ಸಿಸೋಡಿಯಾ 2/12, ಸೋನಮ್ ಯಾದವ 2/13, ವಿ.ಜೆ. ಜೋಶಿತಾ 1/11).
ಫಲಿತಾಂಶ: ಭಾರತಕ್ಕೆ 41 ಓಟಗಳ ಗೆಲುವು.
ಪಂದ್ಯದ ಆಟಗಾರ್ತಿ: ಗೊಂಗಾಡಿ ತ್ರಿಷಾ(ಭಾರತ).