ರಾಜಕೀಯದಲ್ಲೂ ದಳಪತಿ ಅಧಿಪತಿ?

ರಾಜಕೀಯದಲ್ಲೂ ದಳಪತಿ ಅಧಿಪತಿ?

‘ನದಿ ಒ೦ದು ಕಡೆಯಿಂದ ಹರಿದುಕೊಂಡು ಹೋಗುತ್ತಲೇ ಇರುತ್ತದೆ . ನದಿಯನ್ನು ಕಂಡ ಜನ ದೀಪಗಳನ್ನು ತೇಲಿಬಿಟ್ಟು , ನಮಸ್ಕರಿಸುತ್ತಾರೆ. ನದಿ ಹರಿಯುತ್ತಲೇ ಇರುತ್ತದೆ. ಮತ್ತೊಂದು ಕಡೆ ಜನ ಹೂವುಗಳನ್ನು ಚೆಲ್ಲಿ ನದಿಯನ್ನು ಸ್ವಾಗತಿಸುತ್ತಾರೆ. ನದಿ ತನ್ನಪಾಡಿಗೆ ಸಾಗುತ್ತಲೇ ಇರುತ್ತದೆ. ಬೇರೊಂದು ಕಡೆ ಮತ್ತೊಂದಿಷ್ಟು ಮಂದಿಯು ನದಿಗೆ ಕಲ್ಲು , ಕಸ ಎಸೆಯುತ್ತಾರೆ. ಆಗಲೂ ನದಿಯ ಹರಿವು ನಿಲ್ಲುವುದಿಲ್ಲ. ಅಷ್ಟಕ್ಕೂ, ಜೀವನ ಎಂದರೆ ನದಿ ಇದ್ದಂತೆ. ಏನಾದರೂ ಆಗಲಿ, ಹರಿಯುತ್ತಿರಬೇಕು…’ ಜೋಸೆಫ್ ವಿಜಯ್ ಚಂದ್ರಶೇಖರ್ ಎಂಬ ಹೆಸರಿನಿಂದ ಜೀವನ ಆರಂಭಿಸಿ, ತಮಿಳುನಾಡಿನ ಜನರ ಹೃದಯದಲ್ಲಿ ‘ದಳಪತಿ ವಿಜಯ್’ ಎಂದೇ ಸ್ಥಾನ ಪಡೆದಿರುವ ನಟ ವಿಜಯ್ ಅವರು ‘ಮಾಸ್ಟರ್’ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಇಂತಹದ್ದೊಂದು ‘ಕುಟ್ಟಿ ಸ್ಟೋರಿ’ ಹೇಳಿದ್ದರು.

ಸಿನಿ ರಂಗದಲ್ಲಿ ಅಕ್ಷರಶಃ ನದಿಯಂತೆಯೇ ಹರಿದಿದ್ದ ದಳಪತಿ ವಿಜಯ್ ಈಗ ರಾಜಕೀಯ ಎಂಬ ಸಮುದ್ರ ಸೇರಿದ್ದಾರೆ. ಇದೇ ಕಾರಣಕ್ಕೆ, ನಟನೆ, ಡೈಲಾಗ್, ಡಾನ್ಸ ಸ್ವೈಲ್‌ ನಿಂದ ಸುದ್ದಿಯಾಗುತ್ತಿದ್ದ ದಳಪತಿ ಈಗ ಡಿಎಂಕೆ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ರಾಜಕಾರಣಿಯಂತೆ ಕಾಣುತ್ತಿದ್ದಾರೆ. ತ್ರಿಭಾಷಾ ನೀತಿಯಂತೆಯೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಿಜಯ್ ಈಗ ತ್ರಿಭಾಷಾ ಸೂತ್ರವನ್ನೇ ವಿರೋಧಿ ಸುತ್ತಿದ್ದಾರೆ ಎಂದರೆ, ತಮಿಳು, ಹಿಂದಿ ವಿಷಯದಲ್ಲಿ ಧ್ವನಿ ಎತ್ತುತ್ತಿದ್ದಾರೆ ಎಂದರೆ ಅವರೊಳಗಿನ ರಾಜಕಾರಣಿ ಪ್ರಬಲವಾಗುತ್ತಿದ್ದಾನೆ ಹಾಗೂ 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಿದ್ದನಾಗುತ್ತಿದ್ದಾನೆ ಎಂದೇ ಅರ್ಥ. ರಾಜಕೀಯ ರಣತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನೂ ಪಕ್ಕದಲ್ಲಿ ಕೂರಿಸಿಕೊಂಡಿರುವುದೂ ಇದಕ್ಕೆ ಸಾಕ್ಷ . ಇದು ದಳಪತಿ ಅಭಿಮಾನಿಗಳಿಗೆ ಮಾತ್ರವಲ್ಲ, ಜನಸಾಮಾನ್ಯರಿಗೂ ಕುತೂಹಲದ ಸಂಗತಿಯೇ.

1974ರಲ್ಲಿ ಚೆನ್ನೈನಲ್ಲಿ ಜನಿಸಿದವರು ದಳಪತಿ ವಿಜಯ್. ತಂದೆ ಖ್ಯಾತ ನಿರ್ದೇಶಕ ಎಸ್.ಎ.ಚಂದ್ರಶೇಖರ್. ತಾಯಿ ಶೋಭಾ ಚಂದ್ರಶೇಖರ್ ಕೂಡ ಹಿನ್ನೆಲೆ ಗಾಯಕಿ. ಸಿನಿಮಾ ಹಿನ್ನೆಲೆ ಇದ್ದ ಕಾರಣ ಕೇವಲ 8ನೇ ವಯಸ್ಸಿಗೆ ಬೆಳ್ಳಿ ತೆರೆಗೆ ಧುಮುಕಿದರು. ಬಾಲನಟನಾಗಿ ಪಡೆದ ಯಶಸ್ಸು 18ನೇ ವಯಸ್ಸಿಗೇ ಹೀರೊ ಪಟ್ಟ ಕಟ್ಟಿತು. ಹಾಗಂತ ವಿಜಯ್ ಅವರು ದಳಪತಿ ಆಗುವುದು ಸುಲಭವಾಗಿರಲಿಲ್ಲ. ವಿಚಿತ್ರ ನಡಿಗೆ, ಅದಕ್ಕೂ ವಿಚಿತ್ರವಾದ ಹೇರ್‌ಸ್ಟೈಲ್ ಹಾಗೂ ಆರಂಭಿಕ ಸಿನಿಮಾಗಳು ಹಿಟ್ ಆಗದ ಕಾರಣ ಇವರನ್ನು ‘ಮಸಾಲ ಹೀರೊ’ (ಸೀರಿಯಸ್ ನಟ ಅಲ್ಲ ಎಂದರ್ಥದಲ್ಲಿ) ಎಂದೇ ಕರೆಯಲಾಗುತ್ತಿತ್ತು. ಆದರೆ, ಅದ್ಭುತ ಡೈಲಾಗ್, ಮನಮೋಹಕ ಡಾನ್ಸ, ಸ್ಕ್ರಿಪ್ಟ ಸೆಲೆಕ್ಷನ್‌ನಲ್ಲಿ ಚಾಣಾಕ್ಷತನ ಮೆರೆದ ವಿಜಯ್, ತಮಿಳು ಚಿತ್ರರಂಗದ ‘ಮಾಸ್ಟರ್’ ಎನಿಸಿದರು. ಕಾಲಿವುಡ್ ನಲ್ಲಿ ರಜನಿಕಾಂತ್ ನಂತರ ಹೆಚ್ಚು ಖ್ಯಾತಿ, ಅಭಿಮಾನಿಗಳನ್ನು ಹೊಂದಿದ ನಟರಾದರು.

ಇದನ್ನೂ ಓದಿ:ಪ್ರವಾಸಿ ಹೇಳುವ ಕಥೆಗಳು

ಸ್ಟಾರ್ ನಿರ್ದೇಶಕನ ಪುತ್ರನಾದರೂ, ತಾವೇ ಸೂಪರ್ ಸ್ಟಾರ್ ಎನಿಸಿದರೂ ದಳಪತಿ ವಿಜಯ್‌ಗೆ ಮೊದಲಿನಿಂದಲೂ ಸಾಮಾಜಿಕ ವಿಷಯಗಳ ಕುರಿತು ಎಲ್ಲಿಲ್ಲದ ಆಸಕ್ತಿ. ದೇಶಾದ್ಯಂತ 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ಆರಂಭವಾದಾಗ, ಅದಕ್ಕೆ ವಿಜಯ್ ಬೆಂಬಲ ಸೂಚಿಸಿದರು. ಜಲ್ಲಿಕಟ್ಟು ಪರವಾಗಿ 2017ರಲ್ಲಿ ನಡೆದ ಹೋರಾಟದ ಭಾಗವಾದರು. ತೂತುಕುಡಿಯಲ್ಲಿ 2018ರಲ್ಲಿ ಪೊಲೀಸರ ಫೈರಿಂಗ್‌ನಲ್ಲಿ ಮೃತಪಟ್ಟ 13 ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಆ ಮೂಲಕ ಸಮಾಜಕ್ಕೆ ಮಿಡಿಯುವ ಮನಸ್ಥಿತಿಯನ್ನು ಪ್ರದರ್ಶಿಸಿದರು. ಹೆಚ್ಚಿನ ಜನ ಇವರ ಅಭಿಮಾನಿಗಳಾಗಲು ಈ ಗುಣವೂ ಕಾರಣವಾಯಿತು. ಇದೇ ಸಾಮಾಜಿಕ ಕಳಕಳಿ ಅವರನ್ನು 2024ರಲ್ಲಿ ತಮಿಳಗೆ ವೆಟ್ರಿ ಕಳಗಂ (ಟಿವಿಕೆ) ಎಂಬ ಪಕ್ಷಸ್ಥಾಪಿಸಲು ಪ್ರೇರೇಪಿಸಿತು.

ರೋಲ್ಸ್ ರಾಯ್ಸ್ ಗೆ ತೆರಿಗೆ ವಿನಾಯಿತಿ ಕೇಳಿ ನ್ಯಾಯಾಲಯದಿಂದಲೇ ಛೀಮಾರಿ ಹಾಕಿಸಿಕೊಂಡಿದ್ದು, ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಪ್ರಭಾವ ಬಳಸಿ ಥಿಯೇಟರ್‌ಗಳಲ್ಲಿ ಶೇ.100ರಷ್ಟು (ಆಗ ಶೇ.50ರಷ್ಟು ಇತ್ತು) ಆಸನ ವ್ಯವಸ್ಥೆ ಮಾಡಿಸಿ ಕೊಂಡಿದ್ದು, ತೆರಿಗೆ ವಂಚನೆ ಆರೋಪದಲ್ಲಿ ಐಟಿ ದಾಳಿ ಸೇರಿ ಕೆಲ ವಿವಾದಗಳೂ ವಿಜಯ್‌ಗೆ ಅಂಟಿ ಕೊಂಡಿವೆ. ಆದರೆ, ಅವು ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುವ ‘ಕಪ್ಪುಚುಕ್ಕೆ’ ಗಳೇನೂ ಅಲ್ಲ. ದಳಪತಿಗೆ ಖ್ಯಾತಿ ಇದೆ, ಹಣವಿದೆ.ವೇದಿಕೆ ಮೇಲೆ ನಿಂತರ ಲಕ್ಷಾಂತರ ಜನರನ್ನು ಮಂತ್ರ ಮುಗ್ಧಗೊಳಿಸುವ ವಾಕ್ಚಾತುರ್ಯ ಇದೆ. ಬೇಕಾಬಿಟ್ಟಿ ಹೇಳಿಕೆ ನೀಡಬಾರದು ಎಂಬ ಸೂಕ್ಷ್ಮ ವ್ಯಕ್ತಿತ್ವ ಇದೆ. ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾಗಲೇ, ವೃತ್ತಿ ಬದುಕಿನ ಪೀಕ್ ನಲ್ಲಿದ್ದಾಗಲೇ ಸಿನಿಮಾ ತೊರೆದು, ಪೂರ್ಣಪ್ರಮಾಣ ದಲ್ಲಿರಾಜಕೀಯಕ್ಕೆ ಇಳಿದಿರುವ ಅವರ ಬಳಿ ಜನರಿಗಾಗಿ ಕೆಲಸ ಮಾಡಬೇಕು ಎಂಬ ಹಂಬಲವೂ ಎದ್ದು ಕಾಣುತ್ತಿದೆ. ಆದರೆ, ತಮಿಳುನಾಡಿನಲ್ಲಿ 75 ವರ್ಷಗಳ ಇತಿಹಾಸವಿರುವ ಡಿಎಂಕೆ, 50 ವರ್ಷದಿಂದ ರಾಜಕೀಯ ಮಾಡುತ್ತಿರುವ ಎಐಎಡಿಎಂಕೆ ಬಲಿಷ್ಠ ವಾಗಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಎರಡೇ ಪಕ್ಷಗಳು ಶೇ.71ರಷ್ಟು ಮತಗಳನ್ನು ಸೆಳೆದಿವೆ. ರಾಜ್ಯದಲ್ಲಿ ತಳವೂರಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಕಮಲ್ ಹಾಸನ್‌ ರ ಎಂಎನ್‌ಎಂ, ವಿಸಿಕೆ , ಎನ್‌ಟಿಕೆ ಪಕ್ಷಗಳೂ ಮತ ಸೆಳೆಯುವ ಸಾಮರ್ಥ್ಯ ಹೊಂದಿವೆ. ರಜನಿಕಾಂತ್ ಅವರು ರಾಜಕೀಯದಿಂದ ಹಿಂದಡಿ ಇಟ್ಟಿರುವುದು ದಳಪತಿಗೆ ಅನುಕೂಲವಾದರೂ, ಡಿಎಂಕೆಯ ಉದಯನಿಧಿ ಸ್ಟಾಲಿನ್ ಯುವ ಹಾಗೂ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಸೈದ್ಧಾಂತಿಕ ಹೋರಾಟಕ್ಕಾಗಿ ಬಿಜೆಪಿಯ ಕೆ. ಅಣ್ಣಾಮಲೈ ಒಂದು ಹೆಜ್ಜೆ ಮುಂದಿದ್ದಾರೆ.


ತಮಿಳುನಾಡು ರಾಜಕಾರಣಿಗಳಲ್ಲಿ ರಾಜ್ಯದ ಅಸ್ಮಿತೆ, ತಮಿಳು ಭಾಷೆ ವಿಷಯದಲ್ಲಿ ಅಬ್ಬರ, ಸಾಮಾಜಿಕ ಹೋರಾಟವು ಸಹಜವಾಗಿಯೇ ಇರುತ್ತದೆ. ಇದು ದಳಪತಿ ಅವರಲ್ಲೂ ಮೇಲೈಸಿದೆ. ಆದರೆ, ಬಲಿಷ್ಠ ಪಕ್ಷಗಳು, ನಾಯಕರ ಮಧ್ಯೆ ದಳಪತಿಯು ಅಧಿಪತಿ ಆಗುವರೇ? ತಮಿಳುನಾಡು ರಾಜಕೀಯದಲ್ಲಿ ಅಷ್ಟೊಂದು ‘ಸ್ಪೇಸ್’ ಇದೆಯೇ? ಸಿ.ಎನ್.ಅಣ್ಣಾದೊರೈ, ಎಂ.ಜಿ.ರಾಮಚಂದ್ರನ್ (ಎಂಜಿಆರ್), ಜೆ. ಜಯಲಲಿತಾ ಅವರಂತೆ ಸಿನಿಮಾ ಹಿನ್ನೆಲೆಯವರು ಮತ್ತೆ ಸಿಎಂ ಆಗುವರೇ? ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ತೆಗೆದುಕೊಂಡಂತೆ ಸ್ವಲ್ಪ ಸಮಯ ತೆಗೆದುಕೊಳ್ಳುವರೇ? ಚಿರಂಜೀವಿ, ಕಮಲ್ ಹಾಸನ್ ಅವರಂತೆ ‘ರಾಜಕೀಯ ನೇಪಥ್ಯ’ಕ್ಕೆ ಸರಿಯುವವರೇ? ಇದಕ್ಕೆ 2026ರ ರಾಜ್ಯ ವಿಧಾನಸಭೆ ಚುನಾವಣೆಯು ಪರಿಪೂರ್ಣ ಉತ್ತರ ನೀಡದಿದ್ದರೂ, ದಳಪತಿಯ ರಾಜಕೀಯ ಭವಿಷ್ಯದ ಕುರಿತು ಸ್ಪಷ್ಟ ಚಿತ್ರಣವಂತೂ ಕೊಡಲಿದೆ.

Leave a Comment