ರಾಜ್ಯದ ಈಜುಪಟುಗಳ ಪಾರಮ್ಯ
ಕರ್ನಾಟಕದ ಸ್ಟಾರ್ ಈಜುಪಟುಗಳಾದ ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಘು ತಲಾ 9 ಚಿನ್ನದ ಪದಕಗಳೊಂದಿಗೆ ಮಂಗಳವಾರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಮ್ಮ ಯಶಸ್ವಿ ಅಭಿಯಾನ ಕೊನೆಗೊಳಿಸಿದ್ದಾರೆ. ರಾಜ್ಯದ ಈಜುಪಟುಗಳು ಒಟ್ಟು 22 ಪದಕಗಳನ್ನು ಗೆದ್ದಿದ್ದು ತಮ್ಮ ಪಾರಮ್ಯವನ್ನು ಮೆರೆದಿದ್ದಾರೆ.
14 ವರ್ಷದ ರಾಜ್ಯದ ಸ್ವಿಮ್ಮಿಂಗ್ ಸೆನ್ಸೆಷನ್ ಧಿನಿಧಿ ಮಹಿಳೆಯರ 100 ಮೀ. ಫ್ರೀಸ್ಟೈಲ್ ವಿಭಾಗದ ಸ್ಪರ್ಧೆಯನ್ನು 57.34 ಸೆ.ಗಳಲ್ಲಿ ಕ್ರಮಿಸಿ ದಾಖಲೆಯೊಂದಿಗೆ ಗೆಲುವು ಸಾಧಿಸಿದರು. 2023ರ ಗೋವಾ ಆವೃತ್ತಿಯ ಕ್ರೀಡಾಕೂಟದಲ್ಲಿ ತಮ್ಮದೇ ಹೆಸರಿನಲ್ಲಿದ್ದ 57.87 ಸೆ.ಗಳ ದಾಖಲೆಯನ್ನು ಅವರು ಉತ್ತಮಪಡಿಸಿಕೊಂಡರು.
ಇದನ್ನೂ ಓದಿ: ವಾರಾಂತ್ಯದ ರಜೆ ಕಲ್ಪನೆ ಬದಲಾದರೆ ಒಳಿತು.
ಶ್ರೀಹರಿ ನಟರಾಜ್ ಪುರುಷರ 100ಮೀ. ಫ್ರೀಸ್ಟೈಲ್ ವಿಭಾಗದ ಸ್ಪರ್ಧೆಯನ್ನು 50.65 ಸೆ.ಗಳಲ್ಲಿ ಗುರಿಮುಟ್ಟಿ ಜಯ ಸಾಧಿಸಿದರು. ಬಳಿಕ ಪ್ಯಾರಿಸ್ ಒಲಿಂಪಿಯನ್ನರಾದ ದೇಸಿಂಘು ಮತ್ತು ನಟರಾಜ್ ಇಬ್ಬರೂ ಜತೆಗೂಡಿ ಮಿಶ್ರ 4×100ಮೀ, ಮೆಡ್ಲೆಯಲ್ಲಿ ರಾಜ್ಯಕ್ಕೆ ಚಿನ್ನ ದೊರಕಿಸಿ ಕೊಡುವಲ್ಲಿ ನೆರವಾದರು. ರಾಜ್ಯ ತಂಡ 4 ನಿಮಿಷ 3.91 ಸೆಕೆಂಡುಗಳಲ್ಲಿ ಗುರಿಮುಟ್ಟಿತು. ಇದರೊಂದಿಗೆ ದೇಸಿಂಘು ಮತ್ತು ನಟರಾಜ್ ಇಬ್ಬರೂ ಪ್ರಸಕ್ತ ಕೂಟದಲ್ಲಿ ತಮ್ಮ ಚಿನ್ನದ ಪದಕಗಳನ್ನು ತಲಾ 9ಕ್ಕೆ ಏರಿಸಿಕೊಂಡರು.ಆದರೆ, ಒಟ್ಟಾರೆ ಪದಕಗಳ ಆಧಾರದಲ್ಲಿ ದೇಸಿಂಘು ಅವರು ನಟರಾಜ್ ರನ್ನು ಹಿಂದಿಕ್ಕಿದ್ದಾರೆ. ದೇಸಿಂಘಂ 9 ಚಿನ್ನ, 1 ಬೆಳ್ಳಿ, 1 ಕಂಚು ಸೇರಿ ಒಟ್ಟು 11 ಪದಕಗಳನ್ನು ಪಡೆದರೆ, ನಟರಾಜ್ ಒಟ್ಟು 10 ಪದಕಗಳನ್ನು (9 ಚಿನ್ನ 1 ಬೆಳ್ಳಿ) ಪಡೆದಿದ್ದಾರೆ.
ರಾಜ್ಯಕ್ಕೆ ಮಂಗಳವಾರ ನಾಲ್ಕನೇ ಚಿನ್ನ ಪುರುಷರ 100ಮೀ. ಬ್ರೆಸ್ಟ್ಸ್ಟೋಕ್ನಲ್ಲಿ ಬಂದಿತು. ವಿದಿತ್ ಎಸ್.ಶಂಕರ್ ಅವರು 1 ನಿಮಿಷ 3.97 ಸೆ.ಗಳಲ್ಲಿ ಗುರಿ ತಲುಪಿ ದಿನದ ನಾಲ್ಕನೇ ಚಿನ್ನವನ್ನು ರಾಜ್ಯದ ಖಾತೆಗೆ ಸೇರ್ಪಡೆಗೊಳಿಸಿದರು. ಮಹಿಳೆಯರ 100ಮೀ. ಬ್ರೆಸ್ಟ್ ಸ್ಟೋಕ್ನಲ್ಲಿ ಕೇರಳದ ಹರ್ಷಿತಾ ಜಯರಾಮ್ ಚಿನ್ನದ ಪದಕ ಗೆದ್ದರು. ಅವರು1 ನಿಮಿಷ 14.34 ಸೆ.ಗಳಲ್ಲಿ ಗುರಿಮುಟ್ಟಿ ಮೊದಲಿಗರಾದರು. ಇದರೊಂದಿಗೆ ಮಂಗಳವಾರ ನಡೆದ 5 ಸ್ಪರ್ಧೆಗಳ ಪೈಕಿ ನಾಲ್ಕರಲ್ಲಿ ಕರ್ನಾಟಕದ ಸ್ಪರ್ಧಿಗಳು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಕರ್ನಾಟಕದ ಈಜುಪಟುಗಳು ಒಟ್ಟು 37 ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡು ತಂಡ ಅಗ್ರಸ್ಥಾನ ಪಡೆಯಲು ನೆರವಾದರು. ಅದರಲ್ಲಿ 22 ಚಿನ್ನ, 10 ಬೆಳ್ಳಿ ಮತ್ತು 5 ಕಂಚಿನ ಪದಕಗಳು ಸೇರಿವೆ. ಮಹಾರಾಷ್ಟ್ರ ತಂಡ ಒಟ್ಟು 28 ಪದಕಗಳೊಂದಿಗೆ ದ್ವಿತೀಯ ಸ್ಥಾನಿಯಾಯಿತು. ಅದರಲ್ಲಿ 5 ಚಿನ್ನ, 11 ಬೆಳ್ಳಿ ಮತ್ತು 12 ಕಂಚಿನ ಪದಕಗಳು ಒಳಗೊಂಡಿವೆ.
ರಾಜ್ಯದ ಶಿಖಾ ಗೌತಮ್ ಮತ್ತು ಅಶ್ವಿನಿ ಭಟ್ ಜೋಡಿ ಮಹಿಳೆಯರ ಡಬಲ್ಸ್ನಲ್ಲಿ ಉತ್ತರಾಖಂಡದ ಎಂಜೆಲ್ ಪುನೇರಾ- ಆನ್ಯಾ ಬಿಷ್ ಜೋಡಿಯನ್ನು 21-11, 21-13 ಗೇಮ್ ಗಳಿಂದ ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿತು.