ವಿಟಮಿನ್ ಬಿ 1 ಕೊರತೆ
ವಿಟಮಿನ್ ಬಿ 1 ಅಥವಾ ಥಯಾಮಿನ್ ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ.
ಇದು ಪಶುಗಳ ಶರ್ಕರ ಪಿಷ್ಟದ ಜೀರ್ಣ, ಶಕ್ತಿ ಉತ್ಪಾದನೆ ಮತ್ತು ನರಮಂಡಲದ ಕಾರ್ಯಚಟುವಟಿಕೆಗೆ ಅಗತ್ಯವಾದ ವಸ್ತುವಾಗಿದೆ. ಜಾನುವಾರುಗಳು ಸಾಕಷ್ಟು ಪ್ರಮಾಣದ ಥಯಾಮಿನ್ ಸಂಶ್ಲೇಷಿಸಲು ತಮ್ಮ ಮೆಲುಕು ಚೀಲದ ಸೂಕ್ಷ್ಮ ಜೀವಿಗಳನ್ನು ಅವಲಂಬಿಸಿವೆ. ಆಮ್ಲತೆಯಂತ ಹಲವಾರು ಅಂಶಗಳು ಈ ನೈಸರ್ಗಿಕ ಪ್ರಕ್ರಿಯೆಯನ್ನು ಅಡ್ಡಿಪಡಿಸಿ ಥಯಾಮಿನ್ ಕೊರತೆಗೆ ಕಾರಣವಾಗ ಬಹುದು .’ಬೆರಿ- ಬೆರಿ ’ಎಂಬ ಕಾಯಿಲೆ ಮನುಷ್ಯರಲ್ಲಿ ಬರುತ್ತಿದ್ದು ಪಶುಗಳಲ್ಲಿ ಪೋಲಿಯೊ ಎನ್ಸೆಫಾಲೋಮಲೇಶಿಯಾ ಅಥವಾ ಸೆರೆಬ್ರೊಕಾರ್ಟಿಕಲ್ ನೆಕ್ರೋಸಿಸ್ ಎಂದು ಕರೆಯಲಾಗುತ್ತಿದ್ದು ತೀವ್ರ ವೇಗದಲ್ಲಿ ಸಾವು ತರುತ್ತದೆ. ವಿಟಮಿನ್ ಬಿ 1ನ ಸಾಮಾನ್ಯ ರಕ್ತಸಾರ ಸಾಂದ್ರತೆಯು 10-20 ಮೈಕ್ರೋಗ್ರಾಂ/100 ಮಿಲಿಗೆ ಇರುತ್ತಿದ್ದು ಇದಕ್ಕಿಂತ ಕಡಿಮೆಯಾದಲ್ಲಿ ಕೊರತೆಯ ಲಕ್ಷಣಗಳು ಕಾಣಬರುತ್ತವೆ.
ಕಾರಣ: ಬ್ರೇಕನ್ ಜರೀಗಿಡ ಅಥವಾ ಇತರ ಕೆಲವು ಸಸ್ಯಗಳಲ್ಲಿ ಥಯಾಮಿನೇಸ್ ಕಿಣ್ಣಗಳ ಉಪಸ್ಥಿತಿ, ಮೆಲುಕು ಚೀಲದ ತೀವ್ರವಾದ ಆಮ್ಲತೆ, ಆಹಾರದಲ್ಲಿ ವಿಟಮಿನ್ ಬಿ 1ರ ಕೊರತೆ ಮತ್ತು ಗಂಧಕದ ವಿಷಬಾಧೆ ಥಯಾಮಿನ್ ಕೊರತೆಯನ್ನುಂಟು ಮಾಡಬಹುದು. ಒತ್ತಡ, ಹಠಾತ್ ಆಹಾರ ಬದಲಾವಣೆಗಳು ಮತ್ತು ಅಪ್ಟೌಕತೆಯು ಥಯಾಮಿನ್ ಉತ್ಪಾದನೆ ಅಥವಾ ಬಳಕೆಯನ್ನು ದುರ್ಬಲಗೊಳಿಸುವ ಇತರ ಕೆಲವು ಅಂಶಗಳಾಗಿವೆ. ಜೀವಸತ್ವ-ಬಿ ಹೈನುರಾಸುಗಳ ಹೊಟ್ಟೆಯೊಳಗೆಯೇ ತಯಾರಾಗುವುದರಿಂದ ಇದರ ಕೊರತೆ ಅಷ್ಟಾಗಿ ಕಂಡುಬರುವುದಿಲ್ಲ, ಆದರೆ ಇದು ತಯಾರಾಗಲು ಕೋಬಾಲ್ಟ್ ಖನಿಜಾಂಶ ಬೇಕಾಗುತ್ತದೆ. ರಾಸುಗಳಿಗೆ ಕೋಬಾಲ್ಟ್ ಕೊರತೆಯಿರುವ ಆಹಾರ ನೀಡಿದರೆ ಬಿ 1 ಜೀವಸತ್ವದ ಕೊರತೆಯುಂಟಾಗಬಹುದು.
ಇದನ್ನೂ ಓದಿ:ರಫ್ತು ಯೋಗ್ಯ ಮಾವು ಉತ್ಪಾದನ
ಲಕ್ಷಣ: ಅಲ್ಪ ಕೊರತೆಯ ಲಕ್ಷಣಗಳೆಂದರೆ ರಾಸುಗಳು ಹಸಿವು ಕಳೆದುಕೊಂಡು ಬಡಕಲಾಗುವುದು, ಕೂದಲು ತನ್ನ ಹೊಳಪನ್ನು ಕಳೆದುಕೊಂಡು ಕೆಂಪು ಅಥವಾ ಕಂದು ಬಣ್ಣಕ್ಕೆ ತಿರುಗುವುದು ಇತ್ಯಾದಿ. ಆದರೆ ತೀವ್ರ ಥಯಾಮಿನ್ ಕೊರತೆಯು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆರಂಭಿಕ ಚಿಹ್ನೆಗಳು ಕಡಿಮೆ ಆಲಸ್ಯ ಮತ್ತು ಉದ್ರೇಕವನ್ನು ಒಳಗೊಂಡಿರುತ್ತದೆ. ಕೊರತೆಯು ಮುಂದುವರಿದಂತೆ, ಸ್ನಾಯು ನಡುಕ, ತಲೆ ಒತ್ತುವುದು, ಕುರುಡುತನ, ಸುತ್ತುವುದು ಮತ್ತು ಉದ್ರೇಕದ ನಡಿಗೆ ಮುಂತಾದ ನರಮಾನಸಿಕ ಲಕ್ಷಣಗಳನ್ನು ಪ್ರದರ್ಶಿಸಬಹುದು. ಸಕಾಲದಲ್ಲಿ ಚಿಕಿತ್ಸೆ ದೊರಕದಿದ್ದರೆ ಪಶು ಮರಣವನ್ನಪ್ಪಬಹುದು.
ಪತ್ತೆ: ವಿಟಮಿನ್ ಬಿ 1 ಕೊರತೆಯ ಪತ್ತೆಯನ್ನುರೋಗಲಕ್ಷಣಗಳು, ಆಹಾರದ ಇತಿಹಾಸ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಮೂಲಕ ಪತ್ತೆ ಮಾಡಬಹುದು. ರಕ್ತದಲ್ಲಿ ಕಡಿಮೆಯಾದ ಥಯಾಮಿನ್ ಅಥವಾ ಹೆಚ್ಚಿದ ಪೈರುವೇಟ್ /ಲ್ಯಾಕ್ಟೇಟ್‌ನ ಹೆಚ್ಚಿದ ಮಟ್ಟವು ಸಹ ದುರ್ಬಲಗೊಂಡ ಶರ್ಕರ ಪಿಷ್ಟದ ಚಯಾಪಚಯವನ್ನು ಸೂಚಿಸುತ್ತದೆ. ಕೊರತೆಯಿಂದ ಸತ್ತ ಪ್ರಾಣಿಗಳಲ್ಲಿ ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ ಭಾಗದಲ್ಲಿ ಮೃದುವಾದ ಅಥವಾ ಹಳದಿ ಬಣ್ಣದ ಪ್ರದೇಶಗಳು ಮೆದುಳಿನ ನಾಶವನ್ನು ತಿಳಿಸುತ್ತವೆ. ಮರಣೋತ್ತರ ಪರೀಕ್ಷೆಯಲ್ಲಿ ಮೆದುಳಿನ ಎಲ್ಲಾ ಭಾಗಗಳಲ್ಲಿ ತೀವ್ರತರನಾದ ರಕ್ತಸ್ರಾವವೂ ಸಹ ಕಂಡುಬರುತ್ತದೆ.
ಚಿಕಿತ್ಸೆ: ವಿಟಮಿನ್ ಬಿ 1 ಕೊರತೆಯ ಚಿಕಿತ್ಸೆಯು ಅತ್ಯಂತ ತ್ವರಿತವಾಗಿ ನಡೆಯಬೇಕು. ಚುಚ್ಚುಮದ್ದಿನ ಮೂಲಕ ನೀಡುವ ಥಯಾಮಿನ್ ಹೈಡ್ರೋಕ್ಲೋರೈಡ್ ಪಶುವಿನ ಜೀವ ಉಳಿಸಲು ಅತ್ಯಂತ ಪರಿಣಾಮಕಾರಿ. ಪ್ರಾರಂಭಿಕವಾಗಿ ಹೆಚ್ಚಿನ ಪ್ರಮಾಣವನ್ನು ನೀಡಿ ಕ್ರಮೇಣ ಇದರ ಪ್ರಮಾಣವನ್ನು ತಗ್ಗಿಸಬೇಕಾಗುತ್ತದೆ. ಶರೀರದ ನಿರ್ಜಲೀಕರಣ ಮತ್ತು ಇತರ ಚಯಾಪಚಯ ಅಸಮತೋಲನವನ್ನು ಪರಿಹರಿಸಲು ಸಾಕಷ್ಟು ದ್ರವಗಳು ಸೇರಿದಂತೆ ಬೆಂಬಲಿತ ಆರೈಕೆ ಅತ್ಯಗತ್ಯ. ಹೆಚ್ಚಿನ ಶರ್ಕರಪಿಷ್ಟದ ಧಾನ್ಯ ಆಹಾರ ಅಥವಾ ಗಂಧಕದ ಸೇವನೆಯನ್ನು ಕಡಿಮೆ ಮಾಡಿದಲ್ಲಿ ಪಶು ಬೇಗ ಸುಧಾರಿಸುತ್ತದೆ.
ತಡೆಗಟ್ಟುವಿಕೆ: ಉತ್ತಮ ಗುಣಮಟ್ಟದ ನಾರಿನ ಅಂಶ ಹೊಂದಿದ ಸಮತೋಲಿತ ಆಹಾರ ಮತ್ತು ಅತಿಯಾದ ಧಾನ್ಯ ಅಥವಾ ಸಾಂದ್ರೀಕೃತ ಆಹಾರವನ್ನು ತಪ್ಪಿಸುವುದು ಥಯಾಮಿನ್ ಕೊರತೆ ತಪ್ಪಿಸಲು ಬಹಳ ಮುಖ್ಯ. ಪಶುಗಳ ಮೆಲುಕು ಚೀಲದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೊಸ ಆಹಾರ ನೀಡುವಾಗ ಇದ್ದಕ್ಕಿದ್ದ ಹಾಗೆ ಬದಲಾಯಿಸದೇ ಕ್ರಮೇಣವಾಗಿ ಹೊಸ ಆಹಾರ ಕ್ರಮಕ್ಕೆ ಬದಲಾಯಿಸಬೇಕು. ಜಾಸ್ತಿ ಗಂಧಕ ಮತ್ತು ಥಯಾಮಿನೇಸ್ ಕಿಣ್ವ ಹೊಂದಿರುವ ಬ್ರೇಕನ್ ಜರೀಗಿಡ ಸಸ್ಯಗಳು ಪಶುವಿಗೆ ಆಕಸ್ಮಿಕವಾಗಿ ದೊರೆಯದಂತೆ ಎಚ್ಚರ ವಹಿಸಬೇಕು.