ವಿಟಮಿನ್ ಬಿ2 ಕೊರತೆ
ವಿಟಮಿನ್ ಬಿ2ಬ್ ಅಥವಾ ರಿಬೋಫ್ಲಾವಿನ್ ಇದು ಜಾನುವಾರುಗಳ ಚಯಾಪಚಯ ಮತ್ತು ಶಾರೀರಿಕ ದೃಢತೆಗೆ ಅಗತ್ಯವಾದ ನೀರಿನಲ್ಲಿ ಕರಗುವ ವಿಟಮಿನ ಆಗಿದೆ. ಇದು ಜೀವರಾಸಾಯನಿಕ ಕ್ರಿಯೆಗಳಲ್ಲಿ ಸಹಕಿಣ್ವವಾಗಿ ಅದರಲ್ಲೂ ಶರ್ಕರಪಿಷ್ಟಗಳು, ಕೊಬ್ಬುಗಳು ಮತ್ತು ಪ್ರೋಟೀನ್‌ಗಳ ಚಯಾಪಚಯ ಕ್ರಿಯೆಯಲ್ಲಿ ಅವಶ್ಯಕ ವಸ್ತು. ಮೆಲುಕಾಡಿಸುವ ಪಶುಗಳು ತಮ್ಮ ರೈಬೋಫ್ಲಾವಿನ್ ಅಗತ್ಯಗಳನ್ನು ಪೂರೈಸಲು ಮೆಲುಕು ಚೀಲದಲ್ಲಿರುವ ಸೂಕ್ಷ್ಮಜೀವಿಗಳನ್ನು ಅವಲಂಬಿಸಿವೆ. ಕಾರಣ ಮೆಲುಕು ಚೀಲದ ಕಾರ್ಯದಲ್ಲಿ ಅಡಚಣೆಗಳು ಅಥವಾ ಪೋಷಣೆ ಏರುಪೇರಿನಿಂದ ವಿಟಮಿನ್ ಬಿ2 ಕೊರತೆಯಾಗಬಹುದು. ಆರೋಗ್ಯವಂತ ಜಾನುವಾರುಗಳಲ್ಲಿ ರೈಬೋಫ್ಲಾವಿನ್ ನ ಪ್ಲಾಸ್ಮಾ ಸಾಂದ್ರತೆಯು ಪ್ರತಿ 100 ಮಿಲಿಗೆ 5-15 ಮೈಕ್ರೋಗ್ರಾಮ್ ಇರುತ್ತದೆ. ಇದಕ್ಕಿಂತ ಕೆಳಗಿನ ಮಟ್ಟಗಳು ಕೊರತೆಯನ್ನು ಸೂಚಿಸುತ್ತವೆ.
ಕಾರಣಗಳು: ಪಶುಗಳ ಮೆಲುಕು ಚೀಲಕ್ಕೆ ಕಳಪೆ ಆಹಾರ, ಧಾನ್ಯಗಳಲ್ಲಿ ಸಮೃದ್ಧವಾಗಿರುವ
ಆದರೆ ಕಡಿಮೆ ಫೈಬರ್ ಹೊಂದಿರುವ ಹೆಚ್ಚಿನ ಸಾಂದ್ರತೆಯ ಆಹಾರಗಳು ಆಮ್ಲತೆಯನ್ನು ಉಂಟುಮಾಡುತ್ತವೆ. ಇದು ರೈಬೋಫ್ಲಾವಿನ್ ಸಂಶ್ಲೇಷಣೆಗೆ ಕಾರಣವಾದ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ತೀವ್ರವಾಗಿ ಕುಗ್ಗಿಸುತ್ತದೆ ಮತ್ತು ವಿಟಮಿನ್ ಬಿ 2 ಉತ್ಪಾದನೆಯನ್ನು ಗಣನೀಯ ವಾಗಿ ಕಡಿಮೆಯಾಗಿಸುತ್ತದೆ. ಕರುಗಳ ಮೆಲುಕು ಚೀಲ ಬೆಳವಣಿಗೆ ಹೊಂದಿರುವುದಿಲ್ಲ ಮತ್ತು ಅವು ಹಾಲಿನ ಮೇಲೆಯೇ ಅವಲಂಬಿತವಾಗಿರುವುದರಿಂದ ಹಾಲಿನ ಪೂರೈಕೆ ಕಡಿಮೆಯಾದರೆ ಕೊರತೆಯಿಂದ ಬಳಲುತ್ತವೆ. ನಾನಾ ಸೂಕ್ಷ್ಮಾಣು ಕಾಯಿಲೆಗಳು ಅಥವಾ ಪರಾವಲಂಬಿ ಜಂತು ಕಾಯಿಲೆಗಳು ಪೌಷ್ಟಿಕಾಂಶದ ಹೀರಿಕೊಳ್ಳುವಿಕೆಯನ್ನು ದುರ್ಬಲಗೊಳಿಸುವ ಮೂಲಕ ಕೊರತೆ ಯನ್ನು ಉಲ್ಬಣಗೊಳಿಇಸಬಹುದು .
ಇದನ್ನೂ ಓದಿ:ವೆಬ್‌ಕಾಸ್ಟಿಂಗ್ ಕಣ್ಣಾವಲಿನಲ್ಲಿ ನಮ್ಮ ನೈತಿಕತೆಯ ಪರೀಕ್ಷೆ
ಲಕ್ಷಣಗಳು: ಪಶುಗಳಲ್ಲಿ ಕೊರತೆಯ ಮಟ್ಟದ ಮೇಲೆ ರೋಗಲಕ್ಷಣಗಳು ಬದಲಾಗುತ್ತವೆ.
ಸಾಮಾನ್ಯವಾಗಿ ಬೆಳವಣಿಗೆ ಕಡಿಮೆಯಾಗುವುದು, ಚರ್ಮ ಮತ್ತು ದೃಷ್ಟಿದೋಷಗಳು ಪ್ರಾಥಮಿಕ ಹಂತ ದಲ್ಲಿ ಕಾಣಿಸಿಕೊಳ್ಳಬಹುದು. ಎಳೆಯ ಕರುಗಳಲ್ಲಿ ಬೆಳವ ಣಿಗೆ ನಿಂತುಹೋಗುತ್ತದೆ. ಒರಟಾದ ಒಣ ಚರ್ಮ ಮತ್ತು ಕೂದಲು ಉದುರುವುದು ಇತ್ಯಾದಿ ಚರ್ಮ ಸಂಬಂಧಿ ಲಕ್ಷಣಗಳು ಕಾಣಿಸಿಕೊಳ್ಳಬ ಹುದು. ಊದಿ ಕೊಂಡ ಕೆಂಪು ಕಣ್ಣುರೆಪ್ಪೆಗಳು, ನಿರಂತರ ಕಣ್ಣೀರು ಇತ್ಯಾದಿ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳ ಬಹುದು. ತೀವ್ರತರವಾದ ಕೊರತೆಯಲ್ಲಿ ನರ ದೌರ್ಬಲ್ಯ, ನಡುಕ ಮತ್ತು ಉದ್ರೇಕದ ನಡಿಗೆಯಂತಹ ನರ ಮಾನಸಿಕ ಲಕ್ಷಣಗಳನ್ನು ಪ್ರದರ್ಶಿಸಬಹುದು. ಕೊರತೆ ಜಾಸ್ತಿಯಾ ದಂತೆ ಕಡಿಮೆ ಹಸಿವು, ಹಾಲಿನ ಉತ್ಪಾದನೆಯಲ್ಲಿ ಇಳಿ ಮುಖ, ಬಾಯಿಯ ಹುಣ್ಣು ಮತ್ತು ಆಲಸ್ಯ ಇತ್ಯಾದಿ ಗಳು ಕಾಣಸಿಗಬಹುದು.
ಪತ್ತೆ: ವಿಟಮಿನ್ ಬಿ 2 ಕೊರತೆಯ ಪತ್ತೆಯು ಕೊರತೆ ಲಕ್ಷಣಗಳನ್ನು ಗಮನಿಸುವುದು, ಆಹಾರದ ಮೌಲ್ಯ ಮಾಪನ ಮತ್ತು ಪ್ರಯೋಗಾಲಯ ಪರೀಕ್ಷೆಯನ್ನು ಆಧರಿಸಿದೆ. ಪಶುವೈದ್ಯರು ಬೆಳವಣಿಗೆಯಲ್ಲಿ ತೀವ್ರವಾಗಿ ಕುಂಠಿತ, ಚರ್ಮದ ಗಾಯಗಳು ಮತ್ತು ಕಣ್ಣಿನ ಸಮಸ್ಯೆ ಗಳಂತಹ ವಿಶಿಷ್ಟ ಚಿಹ್ನೆಗಳನ್ನು ಗಮನಿಸುತ್ತಾರೆ. ಆಹಾರದ ವಿಶ್ಲೇಷಣೆ ಮತ್ತು ರಕ್ತಸಾರದ ರಿಬೋಫ್ಲಾವಿನ್ ಮಟ್ಟವನ್ನು ಅಳೆಯುವ ಪರೀಕ್ಷೆಗಳು ನಿರ್ಣಾಯಕವಾಗಿ ಕೊರತೆಯನ್ನು ಖಚಿತಪಡಿಸುತ್ತವೆ. ಮೆಲುಕು ಚೀಲದ ಸೂಕ್ಷ್ಮಜೀವಿಯ ಚಟುವಟಿಕೆ ಸಹ ಒಂದು ರೋಗ ನಿರ್ಣಯಕಾರಿ ವಿಧಾನ.
ಚಿಕಿತ್ಸೆ: ಕರುಗಳು ಅಥವಾ ತೀವ್ರವಾಗಿ ಬಾಧಿತ ಜಾನುವಾರುಗಳಿಗೆ ವಿಟಮಿನ್ ಬಿ 2 ಅಥವಾ ರೈಬೋಫ್ಲಾವಿನ್ ಪೂರಕಗಳನ್ನು ಚುಚ್ಚುಮದ್ದಿನ ಅಥವಾ ಮೌಖಿಕವಾಗಿ ನೀಡಬಹುದು. ಪೋಷಕಾಂಶ ಸಮೃದ್ಧವಾದ ಮೇವುಗಳು ಮತ್ತು ಉತ್ತಮ ಗುಣಮಟ್ಟದ ಸಮತೋಲಿತ ಪಶು ಆಹಾರ ನೀಡುವುದು ಬೇಗ ಪಶುಗಳು ಕೊರತೆಯಿಂದ ಚೇತರಿಸಿಕೊಳ್ಳಲು ಸಹಕಾರಿ. ಶಕ್ತಿ ಮತ್ತು ಪ್ರೋಟೀನ್ ಪೂರಕಗಳನ್ನು ಒಳಗೊಂಡಂತೆ ಪ್ರೋಬಯಾಟಿಕ್ ಗಳು ಅಥವಾ ಪ್ರಿಬಯಾಟಿಕ್‌ಗಳ ಮೂಲಕ ಮೆಲುಕು ಚೀಲದ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನು ಮರುಸ್ಥಾಪಿಸಿದಲ್ಲಿ ರೈಬೋಫ್ಲಾವಿನ್ ಉತ್ಪಾದನೆ ಹೆಚ್ಚಿ ಚೇತರಿಕೆಯ ಪ್ರಮಾಣ ವೇಗಗೊಳ್ಳುತ್ತದೆ.
ತಡೆಗಟ್ಟುವಿಕೆ: ರೈಬೋಫ್ಲಾವಿನ್ ಕೊರತೆಯನ್ನು ತಡೆಗಟ್ಟಲು ಸಮತೋಲಿತ ಆಹಾರ ನೀಡು
ವುದು ಅವಶ್ಯ. ಮೆಲುಕು ಚೀಲದ ಆರೋಗ್ಯವನ್ನು ಹೆಚ್ಚಿಸಲು ಉತ್ತಮ ನಾರಿನಂಶ ಶಕ್ತಿ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಒದಗಿಸುವುದು ಅತ್ಯಗತ್ಯ. ನೈಸರ್ಗಿಕವಾಗಿ ರೈಬೋಫ್ಲಾವಿನ್ ಸಮೃದ್ಧವಾಗಿರುವ ಹಸಿರು ಮೇವುಗಳನ್ನು ಆಹಾರದಲ್ಲಿ ಸೇರಿಸುವುದು ಒಂದು ಉತ್ತಮ ಮಾರ್ಗ, ಜೀವನಿರೋಧಕಗಳನ್ನು ಬಾಯಿಯ ಮೂಲಕ ನೀಡಿದ ನಂತರ ಆರೋಗ್ಯಕರ ಮೆಲುಕುಚೀಲದ ಸೂಕ್ಷ್ಮಾಣುಗಳ ಸಂಖ್ಯೆ ವೃದ್ಧಿಯಾಗಲು ವಿವಿಧ ಪ್ರೋಬಯಾಟಿಕ್‌ಗಳನ್ನು ಬಳಸಬಹುದು. ಎಳೆಯ ಕರುಗಳಿಗೆ ನಿರಂತರ ತಾಯಿಯ ಹಾಲು ನೀಡುವಿಕೆ ಅತ್ಯಂತ ಅಗತ್ಯ. ಅವುಗಳ ಮೆಲುಕು ಚೀಲ ಸಂಪೂರ್ಣವಾಗಿ ಬೆಳವಣಿಗೆಯಾಗುವ ವರೆಗೆ ಸಾಕಷ್ಟು ವಿಟಮಿನ್ ಬಿ 2 ನೀಡುವುದು ಕೊರತೆಯಾಗದಂತೆ ತಡೆಯಲು ಅವಶ್ಯ.