ಶಾಸಕರಿಗೆ ಅನುದಾನ ಗ್ಯಾರಂಟಿ

ಶಾಸಕರಿಗೆ ಅನುದಾನ ಗ್ಯಾರಂಟಿ

ಕ್ಷೇತ್ರಾಭಿವೃದ್ಧಿ ಅನುದಾನದ ಬಗ್ಗೆ ಕೊರಗುವ ಹಾಗೂ ನಾಯಕತ್ವದ ವಿಚಾರ ಬಂದಾಗ ನಾಲಿಗೆ ಹರಿಯ ಬಿಡುವ ಶಾಸಕರ ಬಾಯಿ ಬಂದ್ ಮಾಡಿಸಲು ಬಜೆಟ್ ಮಂಡನೆಗೆ ಮುನ್ನವೇ ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‌ಪಿ) ಸಭೆ ಕರೆಯಲಾಗಿದೆ. ಈ ಮೂಲಕ ಶಾಸಕರ ಮೂಗಿಗೆ ತುಪ್ಪ ಸವರಿ ಅಧಿವೇಶನ ಸುಸೂತ್ರಗೊಳಿಸಿಕೊಳ್ಳುವುದು ಆಡಳಿತ ಪಕ್ಷದ ಕಾರ್ಯತಂತ್ರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದೇ ಗ್ಯಾರಂಟಿಗಳ ಆಶ್ವಾಸನೆಯಿಂದ. ಪ್ರಣಾಳಿಕೆ ಭರವಸೆಯಂತೆ ಪಂಚ ಗ್ಯಾರಂಟಿಗಳಿಗೆ ಕಳೆದರಡು ಬಜೆಟ್‌ನಲ್ಲಿ ಈ ಸರಕಾರ ಆದ್ಯತೆ ನೀಡಿದೆ. ಈ ಅವಧಿಯಲ್ಲಿ ದೂರದೃಷ್ಟಿಯ ಯಾವುದೇ ಯೋಜನೆ ಅನುಷ್ಠಾನಗೊಂಡಿಲ್ಲ, ಕ್ಷೇತ್ರಾಭಿವೃದ್ಧಿಯಂತೂ ನಿಂತೇ ಹೋಗಿದೆ ಎಂದು ಕಾಂಗ್ರೆಸ್ ಶಾಸಕರೇ ಗೊಣಗುತ್ತಿದ್ದಾರೆ. ಇದರ ನಡುವೆ ಈ ಬಾರಿ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಲು ಮುಖ್ಯಮಂತ್ರಿಯವರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ವರ್ತಮಾನವಿದೆ. ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 7ರಂದು 2025-26ನೇ ಸಾಲಿನ ಮುಂಗಡ ಪತ್ರ ಮಂಡಿಸಲಿದ್ದಾರೆ. ಇದಕ್ಕೆ ಮುನ್ನ ಮಾರ್ಚ್ 4ರಂದೇ ಸಿಎಲ್‌ಪಿ ಸಭೆ ಕರೆಯಲಾಗಿದೆ. ಬಜೆಟ್ ಮಂಡನೆಗೆ ಮೊದಲೇ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಇದರ ಉದ್ದೇಶವಾಗಿದೆ.

ಈ ಬಾರಿಯ ಅಧಿವೇಶನದಲ್ಲಿ ಸರಕಾರಕ್ಕೆ ಅನೇಕ ಸವಾಲು ಎದುರಾಗಬಹುದು ಎಂದು ಹೇಳಲಾಗುತ್ತಿದೆ. ಪ್ರತಿಪಕ್ಷ ಬಿಜೆಪಿಯಲ್ಲಿ ಆಂತರಿಕ ಸಂಘರ್ಷವಿದ್ದರೂ ಶಾಸಕರುಗಳು ವೈಯಕ್ತಿಕ ನೆಲೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಿನ್ನಡೆ ಮುಂತಾದ ವಿಷಯದ ಬಗ್ಗೆ ಸದನದಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. ಇಂಥ ಸಂದರ್ಭದಲ್ಲಿ ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡದಿದ್ದರೆ ಸರಕಾರಕ್ಕೇ ಇರಿಸುಮುರಿಸು ಆಗುತ್ತದೆ. ನಿರೀಕ್ಷಸಿದಷ್ಟು ಅನುದಾನ ಸಿಕ್ಕಿಲ್ಲವೆಂದು ಅಸಮಾಧಾನದಲ್ಲಿರುವ ಆಡಳಿತ ಪಕ್ಷದ ಶಾಸಕರು ಮುಗುಮ್ಮಾಗಿದ್ದರೆ ಸರಕಾರ ಇಕ್ಕಟ್ಟಿಗೆ ಸಿಲುಕಬೇಕಾಗಿ ಬರುತ್ತದೆ. ಈ ದೃಷ್ಟಿಯಿಂದಲೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುವುದು ಸರಕಾರದ ಕಾರ್ಯಸೂಚಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಬಗ್ಗೆ ನಿರೀಕ್ಷೆ ಮೂಡಿದೆ. ಇತ್ತೀಚೆಗಷ್ಟೇ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಗಿದ್ದರೂ ಇದು ಸಾಲದು ಎಂಬ ಆಕ್ಷೇಪ ಕಾಂಗ್ರೆಸ್‌ನಲ್ಲೇ ಇದೆ. ಕ್ಷೇತ್ರಾಭಿವೃದ್ಧಿ, ಇತರ ಯೋಜನೆ ಮತ್ತು ಮುಂದಿನ ದಿನಗಳಲ್ಲಿ ಸರಕಾರದ ಆದ್ಯತಾ ಕಾರ್ಯಸೂಚಿಯ ಚಿತ್ರಣ ನೀಡುವುದು ಕೂಡ ಸಿಎಲ್‌ಪಿ ಸಭೆಯ ಅಜೆಂಡಾದಲ್ಲಿದೆ ಎನ್ನಲಾಗುತ್ತಿದೆ.

Leave a Comment