ಸಂವಾದದ ಗುಡಿಯಲ್ಲಿ ಮಾತೆಂಬುದು ಜ್ಯೋತಿರ್ಲಿಂಗ
ಮಾತಲ್ಲಿದು ಸಾಚಾ-ಮಾತಲ್ಲಿದು ಕೋಟಾ ಎನ್ನುವುದು ಬಡಪಾಯಿ ಕಿವಿ ಗಲ್ಲ ಸುಲಭ’ ಎಂಬ ನಾಡಿನ ಸುಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯಲಹರಿಯಲ್ಲಿರುವುದು ಮಾತು ತಂದೊಡುವ ಸಂಕಷ್ಟ. ಕೇಳಿದ ಮಾತು ಕಿವಿಗೆ ಬೇರೆ ಬೇರೆ ರೀತಿಯಲ್ಲಿ ತಲುಪಿದರೆ ಅದರಿಂದ ಆಗುವುದು ಪರಿಹಾರವಲ್ಲ ಬದಲಿಗೆ ದೊಡ್ಡ ಜಿಜ್ಞಾಸೆ. ಬೆಳಗಾವಿ ಚಳಿಗಾಲದ ಆಧಿವೇಶನದ ಕೊನೆಯ ದಿನ ಜರುಗಿದ ಘಟನಾವಳಿಗೆ ಈ ಮಾತೇ ದರ್ಶನ ಹಾಗೂ ನಿದರ್ಶನ. ನಿಷ್ಪಕ್ಷಪಾತವಾಗಿ ಆಡಿದ್ದನ್ನು ಹೇಳುವವರಿಲ್ಲ, ಹೇಳಿದ್ದನ್ನು ಕೇಳುವವರೂ ಇಲ್ಲ, ಇವರಿಂದಾಗಿ ಸತ್ಯಕ್ಕೆ ಸಂಚಕಾರ. ತಪ್ಪು ಒಪ್ಪಿನ ಪ್ರಶ್ನೆ ಬೇರೆ. ಆದರೆ, ಘನತೆವೆತ್ತ ಶಾಸನಸಭೆಯಲ್ಲಿ ಎಂದಿಗೂ ಕೂಡಾ ನಡೆಯಬಾರದ ಘಟನಾವಳಿ ಜರುಗಿ ಹೋಗಿರುವುದು ನಿಜಕ್ಕೂ ಒಂದು ಬೇಸರದ ಸಂಗತಿ.
ಶಾಸನಸಭೆ ಎನ್ನುವುದು ಮಾತಿನ ಮಂಟಪ ಎನ್ನುವುದಕ್ಕಿಂತಲೂ ಬಸವಾದಿ ಶರಣರು ಸ್ಪಷ್ಟಪಡಿಸುವಂತೆ ಅನುಭವ ಮಂಟಪ. ಇಂತಹ ಮಂಟಪದಲ್ಲಿ ಅನುಭವದ ಜೊತೆಗೆ ಜ್ಞಾನದ ಮಾತುಗಳು ಹೊರಬೀಳಬೇಕೆ ವಿನಃ ಬಾಯಿಗೆ ಬಂದಂತೆ ಮಾತಾಡುವುದಲ್ಲ. ಮಾತೆಂಬುದು ಜ್ಯೋತಿರ್ಲಿಂಗ ಎಂಬ ಉದ್ಗಾರಕ್ಕೆ ಶಾಸನಸಭೆ ಕುರಿತು ಆಡಿರುವ ಮಾತು ಎಂಬುವುದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ವಿಧಾನ ಪರಿಷತ್ತಿನ ಕಲಾಪದಲ್ಲಿ ಬಳಿಕೆಯಾಗಿರುವ ಶಬ್ದಗಳ ಬಗ್ಗೆ ಈಗ ತಕರಾರು. ಘಟನಾವಳಿಯ ಕೇಂದ್ರಬಿಂದುವಾದ ಸಿ.ಟಿ. ರವಿ ಅವರ ಮಾತನ್ನು ನಂಬುವುದೇ ಆದರೆ ‘ಅಂತಹ ಅಸಂಸದೀಯ, ಅಸಭ್ಯ ಶಬ್ದವನ್ನು ಬಳಿಸಿಯೇ ಇಲ್ಲ’ಎಂಬುವುದನ್ನು ಒಪ್ಪಬೇಕು. ಇದಕ್ಕೆ ಸಂವಾದಿಯಾಗಿ ಮತ್ತೊಂದು ಕೇಂದ್ರಬಿಂದುವಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣೀರಿನ ನಡುವೆ ಪ್ರತಿಪಾದಿಸಿರುವ ಮಾತನ್ನು ಒಪ್ಪಿಕೊಳ್ಳುವುದಾದರೆ ‘ಹನ್ನೆರಡು ಬಾರಿ ಸಿ.ಟಿ .ರವಿ ಅವರು ಈ ಅಶ್ಲೀಲ ಶಬ್ದವನ್ನು ಬಳಸಿದ್ದರು’ ಎಂಬ ವಿವರಣೆಯನ್ನು ನಿರಾಕರಿಸುವುದು ಕಷ್ಟವೇ.
ಕಲಾಪ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಸಭಾಪತಿ ಬಸವರಾಜ ಹೊರಟ್ಟಿಯವರು ಖಚಿತ ಮಾತುಗಳಲ್ಲಿ ಹೇಳಿರುವ ಸಂಗತಿ ಎಂದರೆ ‘ವಿವಾದಾತ್ಮಕ ಶಬ್ದಗಳು ಬಳಕೆ ಯಾಗಿರುವ ಬಗ್ಗೆ ಸದನದ ಕಲಾಪದಲ್ಲಿ ದಾಖಲೆಗಳಿಲ್ಲ .ಆದರೂ ಇನ್ನೊಮ್ಮೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ. ನಂತರ ನೀತಿ ನಿಲುವಿನ ಸಮಿತಿಯ ಪರಾಮಾರ್ಶೆಗೆ ಘಟನೆಯನ್ನು ವಿಚಾರಣೆಗಾಗಿ ಒಪ್ಪಿಸಲಾಗುವುದು ‘ಎಂದು ಪ್ರಕಟಿಸಿರುವುದು ಕಾದು ನೋಡಬೇಕಾಗಿರುವ ಸಂಗತಿ. ಇದಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಹಿಡಿದು ಅನೇಕ ಹಿರಿಯ ಮುಖಂಡರು ‘ರವಿಯವರು ಅಶ್ಲೀಲ ಶಬ್ದಗಳನ್ನು ಬಳಸಿರುವ ಬಗ್ಗೆ ದಾಖಲೆಗಳು ಇವೆ ‘ಎಂದು ಹೇಳಿರುವುದು ಕುತೂಹಲ ಮೂಡಿಸಿರುವ ಸಂಗತಿ .
ಇದನ್ನೂ ಓದಿ:- ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆದ ಭಾರತ! ನಿಕಿ ಬಳಗಕ್ಕೆ ಚೊಚ್ಚಲ ಏಷ್ಯಾ ಕಪ್
ಈ ಎಲ್ಲಾ ಬೆಳವಣಿಗೆಯನ್ನು ನಿರಾಕರಿಸುವ ರೀತಿಯಲ್ಲಿ ಪ್ರತಿಪಕ್ಷದ ಮುಖಂಡರು ‘ಅಂತಹ ಶಬ್ದ ಬಳಕೆ ಆಗಿಯೇ ಇಲ್ಲ ‘ಎಂದು ಎದೆಮುಟ್ಟಿ ಹೇಳುತ್ತಿರುವುದು ಪರಿಸ್ಥಿತಿಯ ಇನ್ನೊಂದು ಮುಖ. ಈ ಘಟನಾವಳಿ ಹಲವು ಹತ್ತು ಸಂಗತಿಗಳ ಚರ್ಚೆಗೆ ಗ್ರಾಸ ಒದಗಿಸಿದೆ .ಅಧಿಕೃತ ಕಲಾಪದಲ್ಲಿ ಇಂತಹ ಶಬ್ದಗಳು ಬಳಕೆಯಾಗಿದ್ದರೆ ಅದನ್ನು ಖಚಿತಪಡಿಸುವುದು ಸಭಾಪತಿಗಳ ಕರ್ತವ್ಯ. ಸಧನದ ಕಲಾಪ ಮುಂದೂಡಿದ ನಂತರ ಆಡಿದ ಮಾತುಗಳು ದಾಖಲೆಗೆ ಹೋಗುವುದಿಲ್ಲ .ಹಾಗೂಮ್ಮೆ ಬಳಕೆಯಾಗಿದ್ದರೂ ಅವುಗಳಗೆ ದಾಖಲೆ ಇರುವುದಿಲ್ಲ. ಇನ್ನು ಮೊಬೈಲ್ ಇಲ್ಲವೇ ಬೇರೆ ಸಾಧನಗಳಲ್ಲಿ ಧ್ವನಿ ಮುದ್ರಣ ವಾಗಿದ್ದರೂ. ಅದಕ್ಕೆ ಮಾನ್ಯತೆ ಸಿಕ್ಕುವುದೇ ಎಂಬುದು ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ ಮಾರ್ಗ.
ಇದರ ಜೊತೆಗೆ ಶಾಸನಸಭೆಯ ಪ್ರಾಂಗಣಕ್ಕೆ ಪೊಲೀಸರ ಪ್ರವೇಶವೂ ಕೂಡ ಈ ಗಿನ ಚರ್ಚೆಯ ವಸ್ತು .ಕಲಾಪದ ನಂತರ ಇಂತಹ ಪ್ರವೇಶವಾಗಿದ್ದರೆ ಅದಕ್ಕೆ ಇರುವ ಕಾನೂನಿನ ಮಾನ್ಯತೆ ಏನೆಂಬುದು ಕೂಡಾ ತಿಳಿಯಬೇಕಾದ ಸಂಗತಿ .
ನಿಜಕ್ಕೂ ಇಂತಹ ವಿಚಾರಗಳಲ್ಲಿ ನಿರ್ಧಾರಕ್ಕೆ ಬರುವುದು ತಂತಿಯ ಮೇಲೆ ನಡೆದಷ್ಟೆ ನಾಜೂಕಿನ ವಿಷಯ .ಶಾಸನಸಭೆ ಎಷ್ಟಾದರು ಜನರ ಸಮಸ್ಯೆಗಳ ಬಗ್ಗೆ ಸಂವಾದಗಳ ಮೂಲಕ ಪರಿಹಾರ ಕಂಡುಕೊಳ್ಳುವ ಒಂದು ವೇದಿಕೆ. ಸಂವಾದ ಎಂದ ಮೇಲೆ ವಾದ ವಿವಾದಗಳು ಸ್ವಾಭಾವಿಕ .ಆದರೆ ,ವಾದ ಮಂಡಿಸುವಾಗ ವೈಯಕ್ತಿಕ ನೆಲಗಟ್ಟಿನ ರಾಗದ್ವೇಷಗಳನ್ನು ನಿಯಂತ್ರಣವಿಲ್ಲದೆ ಹರಿಯ ಬಿಟ್ಟಾಗ ಇಂತಹ ಪರಿಸ್ಥಿತಿ ಉದ್ಭವಿಸುವುದು ನಿರೀಕ್ಷಿತವೇ. ಹೀಗಾಗಿಯೇ ಸಭಾಸದರು ತಮ್ಮ ನಡವಳಿಕೆಯಲ್ಲ ಅಗತ್ಯಕ್ಕಿಂತ ಹೆಚ್ಚಿನ ಎಚ್ಚರವನ್ನು ವಹಿಸಬೇಕೆಂಬುದು ಗೋಡೆ ಮೇಲಿನ ಬರಹದಂತೆ ಜನತಂತ್ರದ ದೇಶಗಳಲ್ಲಿ ಎದ್ದು ಕಾಣುವ ಸಂದೇಶ .
ನಾವು ಬಳಸುವ ಮಾತಿನಲ್ಲಿ ವಜ್ರದಂತಹ ಸತ್ಯವಿದ್ದರೂ ಮೃದು ವಾಚನ ಇದ್ದರಷ್ಟೆ ಅದಕ್ಕೆ ಮಾನ್ಯತೆ ಎಂಬುದನ್ನು ಸಂಬಂಧಪಟ್ಟವರು ಅರಿತರೆ ನಿಜಕ್ಕೂ ಅದರಿಂದ ಆಗುವ ಲೋಕಕಲ್ಯಾಣ ಅಗಣಿತ. ಈಗಂತೂ ಮೇಲ್ಮನೆಯಲ್ಲಿ ಜರುಗಿದ ಅಸಹನೀಯ ಘಟನಾವಳಿ ರಾಜಕೀಯದ ಗಡಿಗಳನ್ನು ವಿಸ್ತರಿಸಿಕೊಂಡು ನಾಡಿನ ಮೂಲೆ ಮೂಲೆಗಳಲ್ಲಿ ಪ್ರತಿದ್ವನಿಗೊಳ್ತೂತ್ತಿರುವ ಕಾಲಘಟ್ಟದಲ್ಲಿ ಸತ್ಯಾನ್ವೇಷಣೆ ಆಗಿದೆ ಇಂತಹ ರಗಳೆಗಳು ದಿನಕ್ಕೊಂದು ರೂಪ ಪಡೆಯಲಾರಂಭಿಸಿದರೆ ಸಾರ್ವಜನಿಕ ಬದುಕಿಗಷ್ಟೆ ಅಲ್ಲ ವೈಯಕ್ತಿಕ ನೆಲಗಟ್ಟಿನ ಸಂಬಂಧಗಳಿಗೆ ಅರ್ಥವೂ ಇಲ್ಲ ಬೆಲೆಯೂ ಇಲ್ಲ .ಈಗ ಭುಗಿಲೆದ್ದಿರುವ ವಿವಾದದ್ದು ಬಹು ಆಯಾಮಗಳದು. ಯಾವ ಸಂದರ್ಭದಲ್ಲಿ ಯಾವ ದಿಕ್ಕನ್ನು ಹಿಡಿಯುತ್ತದೆ ಎಂಬುದನ್ನು ಯಾರೊಬ್ಬರಿಗೂ ಗುರುತಿಸಲಾಗದ ಸಂಗತಿ .ಇಂತಹ ಅಸಹನೀಯ ಘಟನಾವಳಿಗಳಿಂದ ಶಾಸನಸಭೆಯ ವಿಶ್ವಾಸಾರ್ಹತೆ ಹಾಗೂ ಪವಿತ್ರತೆ ಮೇಲೆ ಆಗುವ ಪರಿಣಾಮಗಳನ್ನು ಕೂಡಿ ಕಳೆದು ಗುಣಿಸಿ ಭಾಗಿಸಿ ಲೆಕ್ಕ ಹಾಕಿದಾಗ ನಮಗೆ ಪ್ರಾಪ್ತಿಯಾಗುವುದು ಒಂದರ್ಥದ ಶೂನ್ಯ ಸಂಪಾದನೆ ಅಷ್ಟೇ.