ಸನಾತನ ಧರ್ಮದಲ್ಲಿ ಭಗವಂತನ ಸಹಿ ಓಂಕಾರ
ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಒಂದು ಪ್ರಾತಿನಿಧಿಕ ಚಿಹ್ನೆಯಿದೆ. ಈ ದೃಷ್ಟಿಯಲ್ಲಿ, ‘ಓಂ- ಚಿಹ್ನೆಯು ಸನಾತನ ಧರ್ಮವನ್ನು ಪ್ರತಿನಿಧಿಸುತ್ತದೆ. ಇದ ಸಾಕ್ಷಾತ್ ಭಗವಂತನನ್ನು ಪ್ರತಿಬಿಂಬಿಸುವ ಚಿಹ್ನೆಗಳ ಪೈಕಿ ಆಳ ಹಾಗೂ ಉತ್ಕೃಷ್ಟ ಅರ್ಥವನ್ನು ಹೊಂದಿರುವ ಚಿಹ್ನೆಯಾಗಿದೆ. ‘ಓಂಕಾರ’ದಲ್ಲಿ ಭಗವಂತನ ಹಾಗೂ ಸೃಷ್ಟಿಯ ಪರಿಪೂರ್ಣತೆಯೇ ಸಾಂಕೇತಿಕವಾಗಿ ಅಡಕವಾಗಿದೆ ಮತ್ತು ಇದುವೇ ಸನಾತನ ಧರ್ಮದ ಸಾರವೂ ಆಗಿದೆ. ಇಂತಹ ಓಂಕಾರದ ಮಹತ್ವವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಓಂಕಾರವನ್ನು ವಿಶ್ವದ ಪ್ರಪ್ರಥಮ ಶಬ್ದವೆಂದು ಪರಿಗಣಿಸಲಾಗಿದೆ. ಇದು ಸೃಷ್ಟಿಯ ಪ್ರತಿಯೊಂದು ಅಂಶದಲ್ಲಿಯೂ ಕಂಡುಬರುವ ಮೂಲಭೂತ ಆವರ್ತನವಾಗಿದೆ (Fundamentalfrequency), ಸಕಲ ವಿಶ್ವಕ್ಕೆ ಆಧಾರವಾದ ನಾಮ-ರೂಪಗಳಿಲ್ಲದ ದಿವ್ಯಚೈತನ್ಯವನ್ನು ಸನಾತನ ಧರ್ಮದಲ್ಲಿ ‘ಬ್ರಹ್ಮ’ವೆಂದು ಕರೆಯಲಾಗಿದೆ. ಈ ಶಬ್ದದ ಮೂಲಪದ- ‘ಬೃಹತ್’, ಎಂದರೆ ‘ಅನಂತ ವಿಶಾಲತೆ’. ಸನಾತನ ಧರ್ಮದಲ್ಲಿ ಓಂಕಾರವು ವಿಶ್ವಮೂಲ ಚೈತನ್ಯಸ್ವರೂಪ-“ಬ್ರಹ್ಮ’ದ ಸಾಂಕೇತಿಕ ರೂಪವಾಗಿದೆ. ದೇವನಾಗರಿ ಲಿಪಿಯಲ್ಲಿ (ಸಂಸ್ಕೃತ) ‘ಓಂ’ ಎಂದು ಬರೆಯಲಾಗುವ ಓಂಕಾರವನ್ನು ಭಗವಂತನ ಸಹಿಯೆಂದು ಕರೆಯಲಾಗಿದೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು, ‘ಓಂ ಇಕಾಕ್ಷರಂ ಬ್ರಹ್ಮ (8.13)- ಎಕಾಕ್ಷರ ಓಂಕಾರವೇಬ್ರಹ್ಮ’ ಮತ್ತು ‘ಓಂ ತತ್ವದಿತಿ ನಿರ್ದೇಶೋ ಬ್ರಹ್ಮಣಸ್ತಿ ವಿಧಃ ಸ್ವತಃ (17.23)- ಓಂ, ತತ್ ಮತ್ತು ಸತ್, ಈ ಮೂರು ಬ್ರಹ್ಮವನ್ನು ನಿರೂಪಿಸುತ್ತವೆ’ ಎಂದು ಘೋಷಿಸಿದ್ದಾನೆ.
ಉಪನಿಷತ್ತುಗಳಲ್ಲಿ ಓಂಕಾರದ ಮಹತ್ವ: ತೈತ್ತಿರೀಯ ಉಪನಿಷತ್ತು ಸೃಷ್ಟಿಯು ಹೇಗೆ ಪ್ರಾರಂಭವಾಯಿತೆಂಬುದನ್ನು ವಿವರಿಸುತ್ತ, ‘ದಿವ್ಯ ಮೂಲಚೈತನ್ಯದಿಂದ ಮೊಟ್ಟಮೊದಲು ಆಕಾಶವು ಹೊರಹೊಮ್ಮಿತು. ತದನಂತರ ವಾಯು, ಅಗ್ನಿ, ಜಲ ಮತ್ತು ಭೂಮಿಗಳು ಈ ಕ್ರಮದಲ್ಲಿ ಉದ್ಭವವಾದವು. ಇವುಗಳು ಪಂಚ ಮಹಾಭೂತಗಳು’ ಎಂದು ಅರುಹಿದೆ. ಪ್ರತಿಯೊಂದು ಮಹಾಭೂತವೂ ತನ್ನದೇ ಆದ ಮೂಲಗುಣವನ್ನು ಹೊಂದಿದ್ದು, ಆಕಾಶಕ್ಕೆ ಶಬ್ದ, ವಾಯುವಿಗೆ ಸ್ಪರ್ಶ, ಅಗ್ನಿಗೆ ರೂಪ. ಜಲಕ್ಕೆ ರಸ ಹಾಗೂ ಭೂಮಿಗೆ ಗಂಧವು ಮೂಲಗುಣಗಳು. ಆದ್ದರಿಂದ, ಪರಮ ದಿವ್ಯ ಮೂಲಚೈತನ್ಯದಿಂದ ಪ್ರಪ್ರಥಮವಾಗಿ ಹೊರಹೊಮ್ಮಿದ್ದು, ಶಬ್ದವೇ. ಆದ್ದರಿಂದ, ಸೃಷ್ಟಿಕರ್ತನಾದ ಭಗವಂತನನ್ನು ಪ್ರತಿನಿಧಿಸಲು ಶಬ್ದವನ್ನೇ ಅರಿಸಿಕೊಂಡಿರುವುದು ಅತ್ಯಂತ ಸೂಕ್ತ. ಸನಾತನ ಧರ್ಮದಲ್ಲಿ ಓಂಕಾರವು ಮೂಲಶಬ್ದವೆಂದು ಪರಿಗಣಿಸಲಾಗಿದ್ದು, ಅದುವೇ ಭಗವಂತನ ಸಂಕೇತವಾಗಿದೆ.
ಅಲ್ಲದೆ, ಓಂಕಾರವು ನಮ್ಮ ಅಸ್ತಿತ್ವದ ಮೂರು ಸ್ಥಿತಿಗಳಾದ ಜಾಗೃತ, ಸ್ವಪ್ನ, ಸುಷುಪ್ತಿಗಳನ್ನು ಮತ್ತು ಈ ಮೂರೂ ಸ್ಥಿತಿಗಳನ್ನು ಮೀರಿದ, ತುರೀಯಾವಸ್ಥೆಯನ್ನು ಕೂಡ ಪ್ರತಿನಿಧಿಸುತ್ತದೆ. ಸಂಪೂರ್ಣ ಮಾಂಡೂಕ್ಯ ಉಪನಿಷತ್ತಿನ ವಿಷಯವೆಂದರೆ, ಓಂಕಾರದ ಧ್ಯಾನ ಹಾಗೂ ಅದರ ತಾತ್ವಿಕ ಮಹತ್ವದ ವರ್ಣನೆ.
ಇದನ್ನೂ ಓದಿ: ಇ-ತ್ಯಾಜ್ಯ ಬೇಕಿದೆ ಪರಿಹಾರ
ಓಮಿತ್ಯೇತದಕ್ಷರಮಿದಂಸರ್ವಂ ತಸ್ಕೋಪವ್ಯಾಖ್ಯಾನಂ ಭೂತಂಭವದ್ಭವಿಷ್ಯದಿತಿ ಸರ್ವಮೋಂಕಾರ ಏವ | ಯಚ್ಚಾಸ್ಕತ್ ತ್ರಿಕಾಲಾತೀತಂ ತದಪ್ಪೋಂಕಾರ ಏವ ॥ (1)
“ಸರ್ವವೂ “ಓಂ’ ಎಂಬ ಅಕ್ಷರವೇ ಆಗಿದೆ. ಅದರ ಉಪಾಖ್ಯಾನವೆಂದರೆ- ಹಿಂದೆ ಆಗಿಹೋದದ್ದು, ಈಗ ಇರುವುದು ಹಾಗೂ ಮುಂದೆ ಆಗುವುದು ಎಲ್ಲವೂ ಓಂಕಾರವೇ. ಅಲ್ಲದೆ, ಭೂತ, ವರ್ತಮಾನ ಮತ್ತು ಭವಿಷ್ಯತ್- ಈ ಮೂರೂ ಕಾಲಗಳನ್ನು ಮೀರಿರುವುದೂ ಓಂಕಾರವೇ ಆಗಿದೆ’. ಹೀಗೆ ಮುಂದುವರಿದ ಉಪನಿಷತ್ತು, ನಮ್ಮ ಅಸ್ತಿತ್ವದ ನಾಲ್ಕು ಸ್ಥಿತಿಗಳು ಓಂಕಾರದ ನಾಲ್ಕು ಭಾಗಗಳಲ್ಲಿ ಪ್ರತಿನಿಧಿಸಲ್ಪಟ್ಟಿವೆಯೆಂದು ವರ್ಣಿಸುತ್ತದೆ.
ಸರ್ವಂ ಹ್ಯೇತದ್ದಹ್ಮ ಅಯಮಾತ್ಮಾ ಬ್ರಹ್ಮ ಸ ಅಯಮಾತ್ಮಾ ಚತುಷ್ಪಾತ್ 1 (2)
“ಎಲ್ಲವೂ ಬ್ರಹ್ಮವೇ ಆಗಿದೆ. ಈ ಆತ್ಮವೂ (ಜೀವಾತ್ಮವೂ) ಬ್ರಹ್ಮ. ಇದು ನಾಲ್ಕು ಅಕ್ಷರವನು ಪಾದಗಳನ್ನು ಹೊಂದಿದೆ. ಅವುಗಳೆಂದರೆ, ‘ಅ’ ಕಾರ, ‘ಉ’ ಕಾರ, ‘ಮ’ ಕಾರ ಹಾಗೂ ನಂತರದ ಮೌನ’.
1. ‘ಆ’ ಕಾರವು, ಬಾಹ್ಯ ಪ್ರಜ್ಞೆ ಹಾಗೂ ಭೌತಿಕ ಅನುಭವವನ್ನು ಪ್ರತಿನಿಧಿಸುವ ‘ಜಾಗ್ರತಾವಸ್ಥೆ’. 2. ‘ಉ’ ಕಾರವು, ಅಂತಪ್ರ್ರಜ್ಞೆ ಹಾಗೂ ಸ್ವಪ್ನದ ಅನುಭವಗಳನ್ನು ಸೂಚಿಸುವ ‘ಸ್ವಪ್ನಾವಸ್ಥೆ’, 3. ‘ಮ’ ಕಾರವು, ಯಾವುದೇ ಕಾಮನೆಗಳಿಲ್ಲದ ‘ಸುಷುಪ್ತಿ ಅವಸ್ಥೆ’, 4. ‘ಓಂ’ ಉಚ್ಛಾರಣೆಯ ನಂತರದ ಮೌನವು. ಪರಿಶುದ್ಧ ಪರಿಪೂರ್ಣ ಬ್ರಹ್ಮಪ್ರಜ್ಞೆಯೊದಿಗಿನ ಏಕತ್ವದ ಅತೀಂದ್ರಿಯವಾದ ತುರೀಯಾವಸ್ಥೆ.
ಓಂಕಾರವನ್ನು ಸರಿಯಾಗಿ ಅರ್ಥಮಾಡಿಕೊಂಡು ಧ್ಯಾನಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆಂದುಮಾಂಡೂಕ್ಯ ಉಪನಿಷತ್ತು ಸಾರುತ್ತದೆ . ಓಂಕಾರ ಮಾನವನ ಆಧ್ಯಾತ್ಮಿಕ ಪಯಣವನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸುತ್ತದೆ: ಕೆಳಗಿನ ವಕ್ರರೇಖೆಯು ಜಾಗ್ರತಾವಸ್ಥೆಯನ್ನು ಪ್ರತಿನಿಧಿಸುತ್ತದೆ. ಮಧ್ಯದ ವಕ್ರರೇಖೆಯು ಜಾಗ್ರತಾವಸ್ಥೆಯನ್ನು ಪ್ರತಿನಿಧಿಸುತ್ತದೆ.ಮಧ್ಯದ ವಕ್ರರೇಯುಸ್ವಪ್ನಾವಸ್ಥೆಯನ್ನು ಸೂಚಿಸುತ್ತದೆ. ಮೇಲಿನ ವಕ್ರರೇಖೆಯು ಸುಷುಪ್ತಿಯ ಸ್ಥಿತಿಯನ್ನು ಸೂಚಿಸುತ್ತದೆ. ಬಿಂದುವು ತುರೀಯಾವಸ್ಥೆಯನ್ನು ಪ್ರತಿನಿಧಿಸುತ್ತದೆ. ಅರ್ಧಚಂದ್ರ ಆಕೃತಿಯು, ಮಾನವನನ್ನು ಬ್ರಹ್ಮಪ್ರಜ್ಞೆಯಿಂದ ಪ್ರತ್ಯೇಕಿಸುವ ಸುವ ಮಾಯೆ ಅಥವಾ ಭ್ರಮೆಯನ್ನು ಸಂಕೇತಿಸುತ್ತದೆ.
ಈ ಕಾರಣದಿಂದಲೇ, ಸನಾತನ ಧರ್ಮದ ಎಲ್ಲ ಆಚರಣೆ ಹಾಗೂ ಪ್ರಾರ್ಥನೆಗಳ ಆರಂಭದಲ್ಲಿ ಓಂಕಾರವನ್ನು ಉಚ್ಚರಿಸಲಾಗುತ್ತದೆ. ಓಂಕಾರ ಉಚ್ಚಾರದ ತರಂಗವು ನಮ್ಮ ಮನಸ್ಸನ್ನು ಶಾಂತಗೊಳಿಸಿ ಪರಮೋಚ್ಚ ದಿವ್ಯಪ್ರಜ್ಞೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.
ಛಾಂದೋಗ್ಯ ಉಪನಿಷತ್ತಿನಲ್ಲಿ ‘ಓಂ’ಕಾರವನ್ನು ‘ಉದ್ದೀಥ’ ಎಂದರೆ ‘ಪ್ರಥಮ ಮೂಲಧ್ವನಿ’ಯೆಂದು (Primal Sound) ಹೇಳಲಾಗಿದೆ. ಓಂಕಾರವು ವೇದಗಳ ಸಾರವಾಗಿದೆಯಷ್ಟೇ ಅಲ್ಲದೆ, ಜೀವಾತ್ಮನು ಪರಮಾತ್ಮನೊಂದಿಗೆ ಏಕತ್ವವನ್ನು ಸಾಧಿಸಲು ಇರುವ ಒಂದು ಸಾಧನವೂ ಆಗಿದೆ.
ತೈತ್ತಿರೀಯ ಉಪನಿಷತ್ತಿನಲ್ಲಿ
ಓಂಕಾರವನ್ನು ಅನುಮೋದನೆಯನ್ನು ಅಥವಾ ಒಪ್ಪಿಗೆಯನ್ನು ಸೂಚಿಸುವ ಅಥವಾ ‘ಹೌದು’ ಅಥವಾ ‘ಸರಿ’ ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗಿದೆ. ಓಂಕಾರವನ್ನು ಒಂದು ಪರಮ ಪವಿತ್ರ ಅಕ್ಷರವೆಂದು ಪರಿಗಣಿಸಲಾಗಿದ್ದು, ಅದು ಎಲ್ಲ ವೈದಿಕ ಆಚರಣೆ ಹಾಗೂ ಧ್ಯಾನಗಳ ಒಂದು ಅವಿಭಾಜ್ಯ ಅಂಗವಾಗಿ ಅಂಗೀಕರಿಸಲ್ಪಟ್ಟಿದೆ. ಇಂತಹ ಪವಿತ್ರ ಓಂಕಾರವನ್ನು ‘ಪಣವ’ವೆಂದೂಕರೆಯುತ್ತಾರೆ
ಮುಂಡಕೋಪನಿಷತ್ತಿನಲ್ಲಿ ಸಾರಿರುವಂತೆ:
ಪ್ರಣವೋ ಧನುಃ ಶರೋ ಹ್ಯಾತ್ಯಾ ಬ್ರಹ್ಮ ತಲ್ಲಕ್ಷ್ಯಮುಚ್ಯತೇ ।
ಅಪ್ರಮತ್ತೇನ ವೇದ್ದವ್ಯಂಶರವತ್ತನ್ಮಯೋ ಭವೇತ್ ।। (2.2.4)
‘ಪ್ರಣವವು ಧನುಸ್ಸು ಅಥವಾ ಬಿಲ್ಲು; ಜೀವಾತ್ಮವು ಶರ ಅಥವಾ ಬಾಣ, ಬ್ರಹ್ಮವೇ ಗಮ್ಯಸ್ಥಾನ. ಬಿಲ್ಲಿನಿಂದ ಹೊಡೆಯಲ್ಪಟ್ಟು, ಒಂದೇ ದಿಕ್ಕಿನಲ್ಲಿ ವಿಚಲಿತವಾಗದೆ ಚಲಿಸುವ ಬಾಣದಂತೆ, ಜೀವಾತ್ಮನು ಅಚಂಚಲವಾಗಿ ತನ್ಮಯತೆಯಿಂದ ಮುನ್ನಡೆದು ಲಕ್ಷ್ಯವನ್ನು ಮುಟ್ಟಬೇಕು’.
ಕಠೋಪನಿಷತ್ತಿನಲ್ಲಿ ಯಮನು ನಚಿಕೇತನಿಗೆ ಉಪದೆಶಿಸಿರುವಂತೆ:
ಸರ್ವೇ ವೇದಾ ಯತ್ನದಮಾಮನಂತಿ ತಪಾಂಸಿ ಸರ್ವಾಣಿ ಚ ಯದ್ದದಂತಿ । ಯದಿಚ್ಚಂತೋ ಬ್ರಹ್ಮಚರ್ಯಂ ಚರಂತಿ ತತ್ತೇ ಪದಂ ಸಂಗ್ರಹೇಣ ಬ್ರವೀವ್ಯೋಮಿತ್ಯೇತತ್II (1.2.15)
‘ಸರ್ವ ವೇದಗಳೂ ಯಾವ ಗುರಿಯನ್ನು ಪ್ರತಿಪಾದಿಸುತ್ತವೆಯೋ, ಸಾಧಕರು ಯಾವುದನ್ನು ಪಡೆಯಲು ಎಲ್ಲ ತಪಸ್ಸುಗಳನ್ನು ಆಚರಿಸುತ್ತಾರೆಯೋ, ಯಾವುದನ್ನು ಇಚ್ಚಿಸುತ್ತ ಬ್ರಹ್ಮಚರ್ಯವನ್ನು ಪಾಲಿಸುತ್ತಾರೆಯೋ, ಅದನ್ನು ಸಂಕ್ಷಿಪ್ತವಾಗಿ ನಿನಗೆ ನಾನು ಹೇಳುತ್ತೇನೆ. ಅದುವೇ ಓಂಕಾರ’.
ಏತದ್ಯೇವಾಕ್ಷರಂ ಬ್ರಹ್ಮ ಎತದ್ದೇದ್ಯೈವಾಕ್ಷರಂ ಪರಮ್
ಏತದ್ಯೇವಾಕ್ಷರಂ ಜ್ಞಾತ್ವಾ ಯೋ ಯದಿಚ್ಛತಿ ತಸ್ಯ ತತ್ 1 (1.2.16)
“ಓಂಕಾರವೆಂಬ ಅಕ್ಷರವೇ ಬ್ರಹ್ಮ, ಈ ಅಕ್ಷರವೇ ಪರಮೋಚ್ಚವಾದುದು. ಈ ಅಕ್ಷರವನ್ನು ಯಾರು ಅರಿಯುವರೋ, ಅವರಿಗೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ’.
ಹೀಗೆ ಓಂಕಾರವು ಸೃಷ್ಟಿಯ ಹಾಗೂ ಸೃಷ್ಟಿಕರ್ತನ ಅತಿ ಸಂಕ್ಷಿಪ್ತ ಸಂಕೇತವಾಗಿದ್ದು, ಅದುವೇ ನಮಗೆ ಸರ್ವವನ್ನೂ ಪ್ರಸಾದಿಸುವ ಒಂದು ಮಂತ್ರವಾಗಿದೆ. ಈ ಮಂತ್ರವು ಭೌತಿಕ ಹಾಗೂ ಆಧ್ಯಾತ್ಮಿಕ ಲೋಕಗಳನ್ನು ಜೋಡಿಸುವ ಶಕ್ತಿಯನ್ನು ಹೊಂದಿದ್ದು, ಓಂಕಾರ ಧ್ಯಾನವು ನಮಗೆ ಅತ್ಯುನ್ನತ ಸತ್ಯದರ್ಶನದ ಅನುಭವವನ್ನು ಅನುಗ್ರಹಿಸುತ್ತದೆ. ಇತರ ಧರ್ಮಗಳಲ್ಲಿ ಓಂಕಾರ: ಓಂಕಾರವು ಹಿಂದೂ ಧರ್ಮಗಳಲ್ಲಿ ಕೇಂದ್ರಸ್ಥಾನವನ್ನು ಪಡೆಯದಿ. ಅಲ್ಲದೆ, ಜೈನ, ಬೌದ್ಧ ಹಾಗೂ ಸಿಖ್ ಧರ್ಮಗಳಲ್ಲಿ ಕೇಂದ್ರಸ್ಥಾನವನ್ನು ಪಡೆಯದಿದ್ದರೂ, ಅದು ಸಾಕಷ್ಟು ಪ್ರಾಮುಖ್ಯ ಪಡೆದಿದ್ದು, ಅದು
ಆಧ್ಯಾತ್ಮಿಕ ಔನ್ನತ್ಯ ಹಾಗೂ ವಿಶ್ವಮಾನ್ಯ ಸತ್ಯಗಳ ಸಂಕೇತವಾಗಿದೆ. ಹೀಗೆ, ಓಂಕಾರವು ಧರ್ಮಗಳ ಸೀಮೆಯನ್ನು ಮೀರಿ ನಿಂತಿದೆಯೆಂದು ಹೇಳಬಹುದು.
ಜೈನ ಧರ್ಮದಲ್ಲಿ ಓಂಕಾರವು ಮಹತ್ವಪೂರ್ಣ ಆಧ್ಯಾತ್ಮಿಕ ಅರ್ಥವನ್ನುಅದು ಅದು ಧರ್ಮದ ಪಂಚಪರಮೇಷ್ಠಿಗಳ ಪ್ರತೀಕವಾಗಿದೆ (ಪಂಚ ಪರಮೇಷ್ಠಿಗಳು, ಆ ಧರ್ಮದ ಐದು ಅತ್ಯುನ್ನತ ಆಧ್ಯಾತ್ಮಿಕ ವ್ಯಕ್ತಿಗಳು):
1. ಅರಿಹಂತರು- ತಮ್ಮೊಳಗಿನ ಸರ್ವ ಕಾಮನೆಗಳನ್ನು ಗೆದ್ದು, ಪರಿಪೂರ್ಣ ಜ್ಞಾನವನ್ನು ಗಳಿಸಿದವರು.
2. ಸಿದ್ದರು- ಜನ್ಮ-ಮೃತ್ಯು ಚಕ್ರದಿಂದ ಮೋಕ್ಷವನ್ನು ಪಡೆದವರು.
3. ಆಚಾರ್ಯರು- ಸನ್ಯಾಸಿಗಳ ಸಮುದಾಯಕ್ಕೆ ಮಾರ್ಗದರ್ಶನ ಮಾಡುವ ಆಧ್ಯಾತ್ಮಿಕ ನಾಯಕರು,
4. ಉಪಾಧ್ಯಾಯರು- ಜೈನ ಧರ್ಮಗ್ರಂಥಗಳನ್ನು ಬೋಧಿಸಿ ಪ್ರಚಾರಮಾಡುವಶಿಕ್ಷಕರು.
5. ಸಾಧುಗಳು- ಸ್ವಯಂತಿಸ್ತು ಹಾಗೂ ವೈರಾಗ್ಯಗಳನ್ನು ಪಾಲಿಸುವ ಸನ್ಯಾಸಿಗಳು.
ಈ ಪಂಚ ಪರಮೇಶಿಗಳನ್ನು ನವಾಕರ್ ತಂತ್ರ ಮಂತ್ರ ಪಠಣದಿಂದಣ ಪೂಜಿಸಿ ಗೌರವಿಸಲಾಗುತ್ತದೆ. ಓಂಕಾರವನ್ನು ನವಕಾರ್ ಮಂತ್ರದ ಸಂಕ್ಷಿಪ್ತ ರೂಪವೆಂದು ಪರಿಗಣಿಸಲಾಗಿದೆ.
ಸಿಖ್ ಧರ್ಮದಲ್ಲಿ ಓಂಕಾರವು ‘ಇಕ್ ಓಂಕಾರ್’ ಎಂಬ ವಿಶಿಷ್ಟ ಮತ್ತು ಮಹತ್ವಪೂರ್ಣ ರೂಪವನ್ನು ಪಡೆದಿದ್ದು, ಅದು ಪರಮಾತ್ಮನ ಮತ್ತು ಸಕಲ ಅಸ್ತಿತ್ವದ ಏಕತ್ವವನ್ನು ಪ್ರತಿನಿಧಿಸುತ್ತದೆ. ‘ಇಕ್ ಓಂಕಾರ್’ ಪರಿಕಲ್ಪನೆಯನ್ನು ಸಿಖ್ ಧರ್ಮದ ಪವಿತ್ರ ಗ್ರಂಥವಾದ ‘ಗುರು ಗ್ರಂಥ್ ಸಾಹಿಬ್’ನ ಪ್ರಾರಂಭದ ಮಂತ್ರದಲ್ಲಿಯೇ ಪ್ರಸ್ತಾಪಿಸಲಾಗಿದೆ: ‘ಇಕ್ ಓಂಕಾರ್ ಸಾತ್ವಿಕ ಕರ್ತಾ ಪೂರಕ್ ನಿರ್ಭವ್ ನಿರ್ವೈರ್ ಅಕಾಲ್ ಮೂರತ್ ಅಜೂನಿ ಸೇ ಭಂಗ್ ಗುರುಪ್ರಸಾದ್’, ಸಿಖ್ ಧರ್ಮಗ್ರಂಥದ ಈ ಪ್ರಥಮ ಮಂತ್ರವು ಸಿಖ್ ಧರ್ಮದ ಧರ್ಮಶಾಸ್ತ್ರವನ್ನು ಹಾಗೂ ಭಗವಂತನ ಗುಣಲಕ್ಷಣಗಳನ್ನು ವಿವರಿಸುತ್ತದೆ.
ಬೌದ್ಧಧರ್ಮದಲ್ಲಿ ಓಂಕಾರವು ಅಥವಾ ‘ಓಂ’ ಅಕ್ಷರವು, ಹಿಂದೂ ಧರ್ಮದಲ್ಲಿರುವಂತೆ ಕೇಂದ್ರಸ್ಥಾನವನ್ನು ಗಳಿಸದಿದ್ದರೂ, ಆಧ್ಯಾತ್ಮಿಕವಾಗಿ ಬಹು ಮಹತ್ವವನ್ನು ಪಡೆದಿದೆ. ಟಿಬೆಟ್ ಬೌದ್ಧರ ಹಾಗೂ ಮಹಾಯಾನ ಪಂಥದ ಬೌದ್ಧರ ಸಂಪ್ರದಾಯಗಳಲ್ಲಿ ಓಂಕಾರವನ್ನು ಮುಖ್ಯವಾಗಿ ಮಂತ್ರ ಹಾಗೂ ಧ್ಯಾನಗಳಲ್ಲಿ ಬಳಸಲಾಗುತ್ತದೆ. ಇದು ದಿವ್ಯಶಕ್ತಿ, ಸೃಷ್ಟಿ ಹಾಗೂ ಅತ್ಯುನ್ನತ ಸತ್ಯದೊಂದಿಗೆ ಸಕಲ ಜೀವರಾಶಿಗಳ ಸಂಬಂಧವನ್ನು ಪ್ರತಿನಿಧಿಸುತ್ತದೆ.
ಓಂಕಾರವು ಅನೇಕ ಬೌದ್ಧ ಪ್ರಾರ್ಥನಾ ಮಂತ್ರಗಳ ಪ್ರಥಮ ಅಕ್ಷರವಾಗಿದೆ. ಟಿಬೆಟ್ ಬೌದ್ಧರ ಪ್ರಸಿದ್ದ ಮಂತ್ರಗಳಲ್ಲಿ ಒಂದಾದ ‘ಓಂ ಮಣಿ ಪದ್ಮ ಹಮ್ ಇದಕ್ಕೊಂದು ನಿದರ್ಶನ. ಈ ಮಂತ್ರವು ಕರುಣಾಮಯ ಬೋಧಿಸತ್ತೈ – ಅವಲೋಕಿತೇಶ್ವರನ ಉಪಾಸನೆಗೆ ಸಂಬಂಧಿಸಿದ್ದು, ಕರುಣಾಸಮ್ಮಿಳಿತ ಜ್ಞಾನಪಥದ ಸಂಕೇತವಾಗಿದೆ. ಈ ಮಂತ್ರದಲ್ಲಿ ಓಂಕಾರವು ವೈಶ್ಚಿಕ ದಿವ್ಯಶಕ್ತಿ ಹಾಗೂ ಎಲ್ಲ ಬುದ್ಧರ ಅಂತರಂಗವನ್ನು ಪ್ರತಿನಿಧಿಸುತ್ತದೆ.
ಒಟ್ಟಿನಲ್ಲಿ, ಸನಾತನ ಧರ್ಮದ ಸರ್ವಸಾರವು ಓಂಕಾರವೆಂಬ ಒಂದೇ ಅಕ್ಷರದಲ್ಲಿ ಅಡಗಿದೆಯೆನ್ನಬಹುದು. ಈ ಅಕ್ಷರದ ಮೇಲಿನ ಶ್ರದ್ಧಾಪೂರ್ಣ ಧ್ಯಾನವು ನಮ್ಮ ಅಂತರಂಗದಲ್ಲಿ ದಿವ್ಯತೆಯ ಪರಮಾನುಭವವನ್ನು ಪ್ರಸಾದಿಸಬಲ್ಲದು. ಈ ಮಂತ್ರವನ್ನು ದಿನದ ಯಾವುದೇ ಸಮಯದಲ್ಲಿ ಪರಿಸಬಹುದಾಗಿದ್ದು, ಇಂತಹ ಪಠಣವು ನಮ್ಮ ಅಧ್ಯಾತ್ಮಿಕ ಪ್ರಗತಿಯನ್ನು ತ್ವರಿತಗೊಳಿಸುತ್ತದೆ. ಸೂರ್ಯೋದಯಕ್ಕಿಂತ ತೊಂಭತ್ತಾರು ನಿಮಿಷಗಳ ಮೊದಲು ಪ್ರಾರಂಭವಾಗುವ ‘ಬ್ರಹ್ಮ ಮುಹೂರ್ತ’ದ ನಲವತ್ತೆಂಟು
ನಿಮಿಷಗಳ ಅವಧಿಯ ಸಮಯವು ಓಂಕಾರ ಪಠಣಕ್ಕೆ ಪ್ರಶಸ್ತ ಸಮಯವೆಂದು ಪರಿಗಣಿಸಲ್ಪಟ್ಟಿದೆ. ಪಠಿಸುವಾಗ ‘ಸುಖಾಸನ’ ಅಥವಾ ‘ಪದ್ಮಾಸನ’ದಲ್ಲಿ ಸ್ಥಿರವಾಗಿ ಕುಳಿತು, ಕೈಬೆರಳುಗಳನ್ನು ಚಿನ್ಮಯ ಮುದ್ರೆಯಲ್ಲಿರಿಸಿಕೊಂಡು ಓಂಕಾರವನ್ನು ಪಠಿಸುತ್ತ, ಮನಸ್ಸಿನಲ್ಲಿ ಅದರ ಅರ್ಥವನ್ನು ಧ್ಯಾನಿಸಬೇಕು. ‘ಅ’ಕಾರದ ಉಚ್ಚಾರವು
ನಾಭಿ ಪ್ರದೇಶದಿಂದ ಪಾರಂಭವಾಗಿ, ಕೆಳಗಿನ ಮೂರು ಚಕ್ರಗಳಾದ ಮೂಲಾಧಾರ, ಸ್ವಾಧಿಷ್ಠಾನ ಮತ್ತು ಮಣಿಪುರಗಳಲ್ಲಿ ಚೈತನ್ಯವನ್ನು ತುಂಬುತ್ತದೆ. ‘ಉ’ಕಾರವು ಶ್ವಾಸಕೋಶದ ಸಹಾಯದೊಂದಿಗೆ, ಎದೆ ಹಾಗೂ ಗಂಟಲಿನ ಭಾಗದಿಂದ ಬಂದು ಮೇಲಿನ ಚಕ್ರಗಳಾದ ಅನಾಹತ ಹಾಗೂ ವಿಶುದ್ದಿಗಳನ್ನು ಸಕ್ರಿಯಗೊಳಿಸುತ್ತದೆ. ‘ಮ’ಕಾರವು ಮೂಗಿನ ಉಸಿರಾಟದ ಮೂಲಕ ತಲೆಯ ಪ್ರದೇಶದಲ್ಲಿ ಪ್ರತಿಧ್ವನಿಸಿ ಅಜ್ಞಾ ಚಕ್ರವನ್ನು ಉತ್ತೇಜಿಸುತ್ತದೆ. ಕೊನೆಯದಾಗಿ ಆಚರಿಸುವ ಮೌನವು ಪರಮೋಚ್ಚ ಸಹಸ್ರಾರ ಚಕ್ರವನ್ನು ಜಾಗೃತಿಗೊಳಿಸುತ್ತದೆ.
ಮುಂದಿನ ಲೇಖನದಲ್ಲಿ, ನಮ್ಮ ದೇಹದ ಸೂಕ್ಷ್ಮ ಶಕ್ತಿಕೇಂದ್ರಗಳಾಗಿರುವ ಷಟ್ -ಚಕ್ರಗಳ ಹಾಗೂ ಧ್ಯಾನದ ಬಗ್ಗೆ ವಿವರವಾಗಿ ತಿಳಿಯೋಣ.