ಸಮಾಜಪ್ರಜ್ಞೆಯ ಸಾಧಕವರೇಣ್ಯ ಸರ್ವಜ್ಞ

ಸಮಾಜಪ್ರಜ್ಞೆಯ ಸಾಧಕವರೇಣ್ಯ ಸರ್ವಜ್ಞ

ಜಿ.ಡಾ. ಎಸ್.ಬಿ. ಚನ್ನಗೌಡ್ರ :ಸರ್ವಜ್ಞ ಲೋಕಸಂಚಾರಿ ಎಂಬುದು ಎಲ್ಲರಿಗೂತಿಳಿದ ವಿಷಯವೇ ನಿಂತ ಕಡೆ ನಿಲ್ಲದೆ ದೇಶ ಸುತ್ತಿದ ಸರ್ವಜ್ಞ ಸಮಾಜದ ಒಳಹೊರಗೆಲ್ಲ ಓಡಾಡಿ ಕೊನೆಗೆ ಜನಸಾಮಾನ್ಯರೊಡನೆ ಬೆರೆತು ಬದುಕಿದವನ್ನು ಅನುಭವಗಳನ್ನು ಬಹುಶಃ ಯಾರೂ ಹುಡುಕಿಕೊಂಡು ಹೋಗುವುದಿಲ್ಲ. ಲೋಕಕ್ಕೂ ನಮಗೂ ಇರುವ ನಿರಂತರ ಸಂಪರ್ಕ ಹಾಗೂ ಸಂಘರ್ಷಗಳ ಪರಿಣಾಮಗಳೇ ಅನುಭವಗಳಾಗಿ ಪ್ರಜ್ವಲಿಸುತ್ತವೆ. ಸರ್ವಜ್ಞನ ಸಮಾಜ ಪ್ರಜ್ಞೆ ಹಾಗೂ ಅವನು ಕಂಡ ಜೀವನ ದರ್ಶನ ಅಮೋಘವಾದದ್ದು!

ತಿಳಿಯಾದ ಕೊಳದಲ್ಲಿ ಸೂರ್ಯ ಸ್ಪಷ್ಟವಾಗಿ ಪ್ರತಿಬಿಂಬಿಸುವಂತೆ ಸೂಕ್ಷ್ಮ ಸ್ವಭಾವದ ಅವನ ಅಂತರಂಗದಲ್ಲಿ ಸಮಾಜದ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳೆಲ್ಲ ಪ್ರತಿಫಲಿತವಾಗಿವೆ. ಸರ್ವಜ್ಞ ವಿರಕ್ತನಾದರೂ ಜಗತ್ತನ್ನು ತೊರೆದವನಲ್ಲ. ಸಂತೆಯ ನಡುವಿದ್ದುಕೊಂಡೇ ಅನಂತವನ್ನು ಸಾಧಿಸಿದ ಮಹಾ ಸಂತನೀತ. ನೆಲದ ಮೇಲೆ ನಿಂತು ಬಯಲನ್ನು ತಬ್ಬಲು, ಗಾಳಿಯನ್ನು ಹುರಿಮಾಡಲು ಪ್ರಯತ್ನಿಸಿದ ಸಾಧಕವರೇಣ್ಯ ಸರ್ವಜ್ಞ,

ಸಂಸಾರದ ಮರ್ಮವನ್ನು ಮನಗಂಡು ಕೇವಲ ತನ್ನೊಬ್ಬನ ಶ್ರೇಯಸ್ಸಿಗಾಗಿ ಕಾಡು ಸೇರಿ ತಪಸ್ಸಿಗೆ ಕೂಡದೇ ಜಗದ ನಡುವಿದ್ದುಕೊಂಡೇ ಇಡೀ ಸಮಾಜದ ಶ್ರೇಯಸ್ಸಿಗಾಗಿ ದುಡಿದ ಮಹಾತ್ಮಾಗಿ ಸರ್ವಜ್ಞ ಜೀವನ ವಿಮರ್ಶೆ, ಅತ್ಯೋದ್ಧಾರ ಹಾಗೂ ಸಮಾಜ ಕಲ್ಯಾಣ ಸಾಧನೆಗಳು ಬದುಕಿನ ಅಂತಿಮ ಗುರಿಯೆಂದು, ತೋರಿಸಿಕೊಟ್ಟ ಮಹಾ ಮಾರ್ಗದರ್ಶಿ. ಮೆದು ಮಾತಿನ ಮೂಲಕವೋ, ಕಟು ನುಡಿಯ ಮೂಲಕವೋ ಜನರ ಬದುಕನ್ನು ತಿದ್ದಿ ಹಸನುಗೊಳಿಸಬೇಕೆಂದು ಸಂಕಲ್ಪಿಸಿ ಜೀವನದ ಮೌಲ್ಯಗಳನ್ನು ರೂಪಿಸಿದ ಸಮಾಜ ಸುಧಾರಕ ಸರ್ವಜ್ಞ.

ಅಂದಿನ ದಿನಗಳಲ್ಲಿ ಕವಿಗಳು, ತತ್ವಜ್ಞಾನಿಗಳಂಥವರಿಗೆ ರಾಜಾಶ್ರಯ ಸಹಜವಾಗಿತ್ತು, ಅಗತ್ಯವೂ ಆಗಿರುತ್ತಿತ್ತು. ಆದರೆ, ಸರ್ವಜ್ಞ ಹಾಗಲ್ಲ, ರಾಜಾಶ್ರಯದ ಹಂಗಿಲ್ಲದೆ ಗುರುಮನೆಗಳಆಶ್ರಯವಿಲ್ಲದೆ ಲೋಕವನ್ನೇ ನೆಲೆಯಾಗಿರಿಸಿಕೊಂಡು ಲೋಕಾನುಭವವನ್ನು ಪಡೆದವನು!

ಇದನ್ನೂ ಓದಿ: ಪ್ರೇಮದ ಆಲಿಂಗನಕ್ಕೆ ಸೋತುಹೋದ ಸಂಕಷ್ಟಗಳ ಸುನಾಮಿ

ಲೋಕ ಸಂಚಾರದಲ್ಲಿ ತಾನು ಕಂಡು ಕಲಿತ ಬದುಕಿನ ಪಾಠಗಳಿಂದ ಸಮಾಜವನ್ನು ತಿದ್ದಲು ಕಲಾತ್ಮಕವಾದ ತ್ರಿಪದಿಗಳನ್ನು ರಚಿಸಿದನು. ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಅಷ್ಟ ದಿಕ್ಕುಗಳಿಗೂ ಸಂಚರಿಸುತ್ತ ಜನತೆಯ ಕವಿ ಎನಿಸಿಕೊಂಡಿದ್ದಾನೆ. ಆ ಮೂಲಕ ಸಾಹಿತ್ಯವೆಂದರೆ ಜನ ಜೀವನದ ಪ್ರತಿಬಿಂಬ ಎನ್ನುವುದನ್ನು ಅಕ್ಷರಶಃ ತೋರಿಸಿದ್ದಾನೆ. ಒಪ್ಪುವ ಮೌಲ್ಯಗಳನ್ನು ಪ್ರಶಂಸಿಸುತ್ತ, ಅಪಮೌಲ್ಯಗಳನ್ನು ಟೀಕಿಸುತ್ತಾ ಲೋಕಜ್ಞನಾಗಿ, ಲೋಕಕ್ಕೆ ಗುರುವಾಗಿದ್ದಾನೆ ಸರ್ವಜ್ಞ,

ಭಾರತೀಯ ಸಾಹಿತ್ಯ ನಿರ್ಮಾಣಕಾರರಲ್ಲಿ ಒಬ್ಬನಾದ. ಕನ್ನಡ ಸಂಸ್ಕೃತಿಯನ್ನು ರೂಪಿಸಿದವರಲ್ಲಿ ಪ್ರಮುಖನಾದ ಕವಿ ಸರ್ವಜ್ಞ, ವರಕವಿ ಅಷ್ಟೇ ಅಲ್ಲ, ಚಿರಕವಿ ಕೂಡ. ದಕ್ಷಿಣ ಭಾರತದ ಶ್ರೇಷ್ಠ ಮಟ್ಟದ ಕವಿಗಳಾದ ತಿರುವಳ್ಳುವರ್ ಹಾಗೂ ವೇಮನರಷ್ಟೇ ಪ್ರಸಿದ್ಧನಾದವನು. ಸಂಸ್ಕೃತದ ವ್ಯಾಸ, ಕಾಳಿದಾಸ ಮತ್ತು ಕನ್ನಡದ ಪಂಪ, ರನ್ನ,
ಕುಮಾರವ್ಯಾಸರಂತೆ ಮಹಾಕಾವ್ಯಗಳನ್ನು ಬರೆಯದೇ ಮಹಾಕವಿ ಎನಿಸಿಕೊಂಡಿದ್ದಾನೆ! ಈ ಮೂಲಕ ಸಾಹಿತ್ಯವೆಂದರೆ ಜನಜೀವನದ ಪ್ರತಿಬಿಕೆ ಎನ್ನುವುದನ್ನು ಅಕ್ಷರಶಃ ತೋರಿಸಿದ್ದಾನೆ. ತನ್ನ ವಚನಗಳ ಲಕ ವಿವೇಕ ಮತ್ತು ವ್ಯವಹಾರ ಜ್ಞಾನಗಳೆರಡನ್ನೂ ಬೋಧಿಸಿದ ಸರ್ವಜ್ಞ ಸ್ಪರ್ಶಿಸದ ಕ್ಷೇತ್ರವಿಲ್ಲ.

ಕನ್ನಡ ಸಾಹಿತ್ಯ ಚರಿತ್ರೆಯ ಭವ್ಯ ಪರಂಪರೆಯಲ್ಲಿ ಸಾಮಾನ್ಯರಾಡುವ ಮಾತಿನ ಮೂಲಕ ಜನಪ್ರಿಯತೆ ಗಳಿಸಿದ ಶ್ರೇಷ್ಠ ವ್ಯಕ್ತಿತ್ವದ ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಸರ್ವಜ್ಞ ಎಂಬುದು ಹೆಮ್ಮೆಯ ವಿಚಾರ. ಈತನ ಕಾಲದ ಬಗ್ಗೆ ಸಮರ್ಪಕ ದಾಖಲೆಗಳ ಕೊರತೆಯಿಂದ ಈತನ ವೈಯಕ್ತಿಕ ಬದುಕಿನ ಕುರಿತ ಮಾಹಿತಿಗಳು ಅಸ್ಪಷ್ಟವಾಗಿವೆ. ತನ್ನ ವೈಯಕ್ತಿಕ ಮಾಹಿತಿಗಳು ಜನರಿಗೆ ಅನಗತ್ಯ, ಸಂದೇಶಗಳಷ್ಟೇ ಮುಖ್ಯ ಎನ್ನುವುದು ಕವಿಯ ಇಂಗಿತವಾಗಿತ್ತೇ ಎಂಬ ಪ್ರಶ್ನೆ ಸಹಜ

ಆದರೆ, ವಿದ್ವಾಂಸರ ತರ್ಕಬದ್ಧ ವಿಚಾರ ಸರಣಿಗಳಿಂದ, ಬಹುಜನರ ಗಟ್ಟಿ ಅಭಿಪ್ರಾಯದಿಂದ ಈತನ ಕಾಲವನ್ನು ಕ್ರಿ.ಶ. ಸುಮಾರು 1550-1600 ಎಂದು ತಿಳಿಯಲಾಗಿದೆ. ಈತನ ತಾಯಿ ಅಬಲೂರಿನ ಕುಂಬಾರ ಮಾಳಿ ಅಥವಾ ಮಾಳವ್ವ. ತಂದೆ ಮಾಸೂರ ಬಸವರಸ ಎಂದು ಗುರುತಿಸಲಾಗಿದೆ. ಸರ್ವಜ್ಞ ಕನ್ನಡ ನಾಡು, ಭಾರತ ಕಂಡ ಅಪರೂಪದ ಮಹಾಕವಿ, ಸಂತ. ಇಂದಿಗೂ ಅವನ ವಚನಗಳಿಲ್ಲದೆ ಜನರು ಮಾತನಾಡಲಾರರು. ಅವನ ವಚನಗಳನ್ನು ತಮ್ಮ ಬದುಕಿನ ಎಲ್ಲ. ಕ್ಷಣಗಳಲ್ಲಿ ದಿನದಿನವೂ ನೆನೆಯುತ್ತಾರೆ. ಅವನ ವಚನಗಳು ಜೀವನ ವಿವೇಕದ ಕನ್ನಡಿ ಆಗಿವೆ. ಈ ದೃಷ್ಟಿಯಿಂದ ಆತ ಸಾರ್ವಕಾಲಿಕ.

ಸರ್ವಜ್ಞನು ಕಾಲ ಮಾತ್ರದಿಂದ ಅಂದಿನವನಾದರೂ ಯುಗಧರ್ಮಗಳ ಮನೋಧರ್ಮ ದೃಷ್ಟಿಯಿಂದ ಇಂದಿನವನಾಗಿ ಗೋಚರಿಸುತ್ತಾನೆ. ಲೌಕಿಕದಲ್ಲಿ ಸಮಾಜವಾದಿಯಾದ ಈತ ಅಂತರಂಗದಲ್ಲಿ ಅನುಭವಿ ದಾರ್ಶನಿಕ ,ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ರಾಂತಿಕಾರಿ. ಬಂಡಾಯ ಮನೋಧರ್ಮ ಹೊಂದಿರುವ ಈತ ಸಮಾಜದಲ್ಲಿ ಕಣ್ಣಿಗೆ ಕಂಡದ್ದನ್ನು ಸಮುದಾಯದ ಜಾಗೃತಿಗಾಗಿ ಮಾತಿನ ಚಾಟಿ ಏಟು ಬೀಸಿದವನು. ಜನಪದ ಸತ್ವದ ತ್ರಿಪದಿ ಬಳಸುವುದರ ಮೂಲಕ ಕನ್ನಡದ ಪ್ರಜ್ಞೆ ಹಾಗೂ ಭಾಷೆಯ ಅನಂತ ಸಾಧ್ಯತೆಗಳನ್ನು ವಿಸ್ತರಿಸಿದವನು. ಹೀಗಾಗಿ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಅವನು ಮುಕುಟಪ್ರಾಯ. ಆದರ್ಶ ಸಮಾಜ ಹೇಗಿರಬೇಕೆಂದು ತೋರಿಸಿಕೊಟ್ಟ ಸರ್ವಜ್ಞ ಸಮುದಾಯ ಹಾಗೂ ಕನ್ನಡ ಪ್ರಜ್ಞೆ ಮೂಡಿಸಿ ವಿಶ್ವಕವಿಯೆನಿಸಿ ವಿಶ್ವಮಾನ್ಯವಾದ ಬದುಕನ್ನು ಪ್ರೀತಿಸುವ, ಟೀಕಿಸುವ ಆ ಮೂಲಕವೇ ಆದರ್ಶ ಸಮಾಜ ನಿರ್ಮಾಣಕ್ಕೆ ದಾರಿ ಹುಡುಕುವುದನ್ನು ತೋರಿಸಿ ಕೊಟ್ಟ ಮಹಾನ್ ಮಾರ್ಗದರ್ಶಕ.

ಹಿಂಡನಗಲಿದ ಮದಗಜದಂತೆ ಒಂಟಿಯಾದರೂ ಕ್ರಿಯಾಶೀಲವಾಗಿ ಹೊಸದನ್ನೇ ಕಟ್ಟಲು ಬಯಸಿದವನು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತ್ರಿಪದಿ ಬ್ರಹ್ಮ ಸರ್ವಜ್ಞ ಮೇರು ಪರ್ವತವಾಗಿ ಕಂಗೊಳಿಸಿ ಜನಮಾನಸದಲ್ಲಿ ಎಂದೂ ಮರೆಯಲಾಗದ ಮಾಣಿಕ್ಯವಾಗಿರುವುದಂತೂ ಸಾರ್ವಕಾಲಿಕ ಸತ್ಯವಾಗಿದೆ.

Leave a Comment