ಸಾಹಿತ್ಯ ಪರಿಷತ್ತು : ಪರಿವರ್ತನೆಯ ಹೊತ್ತು

Written by karnatakanandi.com

Published on:

ಸಾಹಿತ್ಯ ಪರಿಷತ್ತು : ಪರಿವರ್ತನೆಯ ಹೊತ್ತು

ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ .ಮಾಧ್ಯಮಗಳು ತಮ್ಮ ಧೋರಣೆಗೆ ತಕ್ಕಂತೆ ಪುಟಗಳನ್ನು ಬರ್ತಿ ಮಾಡಿ ಮುಗಿಸಿವೆ. ಪುಸ್ತಕ ಪ್ರಕಾಶಕರು ಪ್ರತಿ ವರ್ಷದಂತೆ ಸಮ್ಮಿಶ್ರ ಭಾವದಲ್ಲಿ ಗಂಟುಮೂಟೆ ಕಟ್ಟಿದ್ದಾರೆ. ಸನ್ಮಾನಿತರು ಹಾರ, ಶಾಲು, ಸ್ಮರಣೆಕಗಳ ಹೊರೆಯನ್ನು ಮನೆಗೆ ಸಾಗಿಸಿಯಾಗಿದೆ. ಹಿಂಡು ಹಿಂಡಾಗಿ ಆಗಮಿಸಿದ ನುಡಿ ಪ್ರೇಮಿಗಳು ಕನ್ನಡ ತೇರು ಎಳೆದ ಭ್ರಮೆಬೆರೆತ ಸಂಭ್ರಮದೊಂದಿಗೆ ಹಿಂದಿರುಗಿದ್ದಾರೆ. ರಾಜಕಾರಣಿಗಳು ಎಂದಿನ ಹೇಳಿಕೆ, ಭಾಷಣ ಮತ್ತು ಸೋಗಲಾಡಿತನ ಮುಂದುವರಿಸಿದ್ದಾರೆ.

ಸಾಹಿತ್ಯದ ಸಂವೇದನೆ ಸೊಸಬೇಕಾದ ಜಾಗದಲ್ಲಿ ರಾಜಕಾರಣದ ಅತಿಸೂಕ್ಷ್ಮ ಭಾವ ಮೆರೆಯಿತು ,ಅರ್ಥಪೂರ್ಣ ಆಚರಣೆಯನ್ನು ಅದ್ದೂರಿತನ ಕಬಳಿಸಿತು. ಸಮ್ಮೇಳನದಲ್ಲಿ ಮಾತನಾಡಿದವರು ,ಉಂಡವರು, ಕೊಂಡವರು, ಪಟಗಳಲ್ಲಿ ಮಿಂಚಿದವರು ಒಟ್ಟಾಗಿ ಬಿಟ್ಟು ಹೋಗಿರುವ ತ್ಯಾಜ್ಯ ಸಾಗಿಸುವ ಹೆಚ್ಚುವರಿ ಹೊರ ಮಾತ್ರ ಸ್ಥಳೀಯ ಪೌರಕಾರ್ಮಿಕರ ಪಾಲಿಗೆ ಉಳಿದಿದೆ!

ಮತ್ತೊಂದೆಡೆ ,ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದ ತರುವಾಯ ತನ್ನ ಸಂಪ್ರದಾಯಿಕತೆಗೆ ತಕ್ಕ ಹಾಗೆ ವಿವಾದ ,ಗೊಂದಲ, ಸಂಘರ್ಷ ,ಅವ್ಯವಸ್ಥೆ, ಟೀಕೆ ಟಿಪ್ಪಣಿಗಳ ದಣಿವು ಹೊತ್ತು ದೀರ್ಘ ವಿರಾಮಕ್ಕೆ ಜಾರಲು ಸಿದ್ಧವಾಗಿದೆ .ಪರಿಷತ್ತಿನ ವಿರಾಮದ ಅವಧಿಯು ಬಳ್ಳಾರಿಯಲ್ಲಿ ನಿಗದಿಯಾಗಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮೀಪಿಸುವವರೆಗೆ ಮುಂದುವರಿದರೆ ಅಚ್ಚರಿ ಪಡೆಬೇಕಿಲ್ಲ. ಅದು ಸಹಜವೇ .ಆದರೆ ಪರಿಷತ್ತಿನ ಕಾರ್ಯ ವೈಖರಿ ಹಾಗೂ ಸಮ್ಮೇಳನದ ಸ್ವರೂಪದ ಬಗೆಗೆ ಮೌಲಿಕ ತಕರಾರು ಹೊಂದಿರುವ ವ್ಯಕ್ತಿಗಳು, ಸಂಸ್ಥೆಗಳು ವಹಿಸುವ ಮೌನವನ್ನು ಅಸಹಜ ಎನ್ನಬೇಕಾಗುತ್ತದೆ. ಈ ವರ್ಗ ಕಾಲ ಕಾಲಕ್ಕೆ ಸಾರ್ವಜನಿಕವಾಗಿ ಎತ್ತುವ ಪ್ರಶ್ನೆಗಳು ಬರೀ ತಾತ್ಕಾಲಿಕವೂ ಸಾಂದರ್ಭಿಕವೂ ಸಾಂಕೇತಿಕವೂ ಅಗಿ ದಾಖಲೆಗೆ ಸೀಮಿತವಾದರೆ ಹೇಗೆ ? ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಂತಹ ನುಡಿನುಡಿ ಕುರಿತು ಚಿಂತನಾ, ಭಾವನಾ ಚಟುವಟಿಕೆಯೂ ರಾಜಕೀಯ ಪಕ್ಷಗಳು ಹಣ, ಅಧಿಕಾರದ ಮದದಿಂದ ದಿಢೀರಾಗಿ ಏರ್ಪಡಿಸುವ ಸ್ವಾರ್ಥದಾಹದ ಸಮಾವೇಶಗಳೂ ಒಂದೇ ಅನ್ನಿಸಬಾರದು. ಅರ್ಥಪೂರ್ಣ ಸಮ್ಮೇಳನ ಸಕಾರ ಗೊಳ್ಳಬೇಕಂದರೆ ನೈಜ ಕಳಕಳಿ ಮತ್ತು ತಾತ್ವಿಕ ತಳಹದಿ ಹೊಂದಿದ ವರ್ಷದುದ್ದದ ಚರ್ಚೆ, ಸಂವಾದ, ಸಿದ್ಧತೆ ಬೇಕಾಗುತ್ತದೆ. ವಿವಿಧ ಮಾಧ್ಯಮಗಳು, ಅದರಲ್ಲೂ ಮುಕ್ತ ವೇದಿಕೆಗಳಾಗಿ ತೆರೆದುಕೊಂಡಿರುವ ಸಾಮಾಜಿಕ ಮಾಧ್ಯಮಗಳು ಸಮ್ಮೇಳನ ಮುಗಿದ ಮೂರು ದಿನದಿಂದಲೇ ಈ ದಿಸೆಯಲ್ಲಿ ತಮ್ಮದೇ ಆದ ಇತಿ ಮಿತಿಯಲ್ಲಿ ಕಾರ್ಯ ಪ್ರವೃತ್ತವಾಗುವುದು ಅಪೇಕ್ಷಣೀಯ. ಹತ್ತಾರು ಬಗೆಯಲ್ಲಿ ಬದಲಾವಣೆಗೆ ತುತ್ತಾಗುತ್ತ ಕೃತಕ ಬುದ್ಧಿಮತ್ತೆಯ ಯುಗ ಪ್ರವೇಶಿಸಿರುವ ಜಾಗದಲ್ಲಿಯೂ ಪರಿಷತ್ತು ಗಾತಕಾಲದ ಗರ್ಭಗುಡಿಯಿಂದ ಹೊರಬರುವುದಿಲ್ಲ ಎಂದರೆ ಆಗದು.

 

ಹಾಗೆ ನೋಡಿದರೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂದರ್ಭಾನುಸಾರ ಪರೋಕ್ಷವಾಗಿ ಹೊಸದರ ಹುಟ್ಟಿಗೆ ಕಾರಣವಾಗುವ ಅಂತರ್ಗತ ಸ್ವಭಾವ ಇದ್ದಂತಿದೆ. 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ದಲಿತ ಸಾಹಿತ್ಯದ ಪ್ರಾತಿನಿಧ್ಯದ ಪ್ರಶ್ನೆ ಉದ್ಭವವಾಗಿತ್ತು. ಸಮ್ಮೇಳನದಲ್ಲಿ ದಲಿತ ಸಾಹಿತ್ಯದ ಗೋಷ್ಠಿ ಇರಲಿ ಎಂಬ ಚೆನ್ನಣ್ಣ ವಾಲೀಕಾರ ಮತ್ತು ಜಂಬಣ್ಣ ಅಮರಚಿಂತ ಅವರ ಬೇಡಿಕೆಗೆ ಕಸಾಪದ ಆಗಿನ ಅಧ್ಯಕ್ಷ ಹಂಪನಾ ಅವರು ‘ಸಾಹಿತ್ಯದಲ್ಲಿ ದಲಿತ ಬಲಿತ ಎಂಬುದಿಲ್ಲ’ ಎಂಬ ನಿಲುವು ತಾಳಿದ್ದರು. ಹೀಗೆ ಮುನ್ನೆಲೆಗೆ ಬಂದ ದಲಿತರ ಪ್ರಾತಿನಿಧ್ಯದ ಪ್ರಶ್ನೆಯು ಬಂಡಾಯ ಸಾಹಿತ್ಯ ಸಂಘಟನೆಯ ಉಗಮಕ್ಕೆ ಕಾರಣವಾಗಿದ್ದು ಇತಿಹಾಸ .

ಇದನ್ನೂ ಓದಿ:- ಏರ್‌ಪೋರ್ಟ್‌ಗೆ ಅವಕಾಶ ನೀಡಲ್ಲ

ಧರ್ಮಸ್ಥಳ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಎಂ .ಗೋಪಾಲಕೃಷ್ಣ ಅಡಿಗ ಅವರು,’ ನಮ್ಮಲ್ಲಿ ಪ್ರತಿ ಸಂಸ್ಥೆಯೂ ಬಹು ಬೇಗ ಜಡವಾಗಿ ಹೋಗುವಂತೆ ಈ ಸಂಸ್ಥೆಯೂ [ಕಾಸಾಪ] ತೀರ ಜಡವಾಗಿ ,ಈವರೆಗೆ ಮಾಡಿಕೊಂಡು ಬಂದದ್ದನ್ನೇ ಯಾಂತ್ರಿಕವಾಗಿ ಮಾಡುತ್ತಾ ಹೋಗುತ್ತಿದೆ. ಇದನ್ನು ನಿವಾರಿಸುವ ದಾರಿ ಯಾವುದು ಎಂದು ನಾವೆಲ್ಲರೂ ಯೋಚಿಸಬೇಕು’ ಎಂದು ಹೇಳಿದ್ದರು. ನಲವತ್ತೈದು ವರ್ಷಗಳ ನಂತರವೂ ಆ ‘ನಿವಾರಿಸುವ ದಾರಿ’ ಗೋಚರಿಸದಿರುವುದು, ಆ ಬಗ್ಗೆ ‘ನಾವೆಲ್ಲರೂ’ ಯೋಚಿಸದಿರುವುದು ನಿರ್ಲಕ್ಷಿಸುವ ಸಂಗತಿಯಲ್ಲ. ಹೋದ ವರ್ಷ ಹಾವೇರಿಯಲ್ಲಿ ನಡೆದ 86ನೇ ಸಮ್ಮೇಳನದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಲೇಖಕರ ಪ್ರಾತಿನಿಧ್ಯದ ಪ್ರಶ್ನೆಯು ಚರ್ಚೆಯ ಕೇಂದ್ರ ಪ್ರವೇಶಿಸಿತ್ತು. ಅಂತಿಮವಾಗಿ ಬೆಂಗಳೂರಿನಲ್ಲಿ ಪ್ರತಿರೋಧದ ಸಾಹಿತ್ಯ ಸಮ್ಮೇಳನ ನಡೆದದ್ದನ್ನೂ ನಾಡು ಕಂಡಿದೆ. ಇದೀಗ ಮುಕ್ತಾಯಗೊಂಡ ಮಂಡ್ಯ ಸಾಹಿತ್ಯ ಸಮ್ಮೇಳನದ ಸನ್ನಿವೇಶ ಆಹಾರದ ಸಂಸ್ಕೃತಿ ಹಕ್ಕು ಸಮಾನತೆ ಕುರಿತ ಅರ್ಥಪೂರ್ಣ ಸಂಘರ್ಷದ ಹುಟ್ಟಿಗೆ ಕಾರಣವಾಗಿದ್ದು ಒಳ್ಳೆಯ ಬೆಳವಣಿಗೆ. ಆಹಾರ ಸಂಸ್ಕೃತಿ ವಿವಾದದಲ್ಲಿ ಪ್ರಜ್ಞಾವಂತ ಯುವ ಪೀಳಿಗೆಯೇ ಮುಂದ ನಿಂತು ವಿಶಿಷ್ಟವಾಗಿ ದನಿ ಎತ್ತಿದ್ದಂತೂ ಹೊಸ ಭರವಸೆ ಹುಟ್ಟಿಸುವಂತಿದೆ . ಹೀಗೆ ಈ ಸಮ್ಮೇಳನ ಕೂಡ ತನ್ನ ಪರಂಪರೆಗೆ ತಕ್ಕ ಹಾಗೆಯೇ ಕೆಲವು ಮೂಲಭೂತ ವರ್ತನೆಗಳನ್ನು ವಿಮರ್ಶೆಯ ಮೂಸೆಗೆ ಒಡ್ಡುವ ಮೂಲಕ ಕನ್ನಡ ಸಾಂಸ್ಕೃತಿಕ ವಲಯವನ್ನು ಮತ್ತೊಮ್ಮೆ ಜಾಗೃತಗೊಳಿಸಿದೆ .

ಸಮ್ಮೇಳನದ ಗೋಷ್ಠಿಗಳಲ್ಲಿನ ಪ್ರಾತಿನಿಧ್ಯ , ಸನ್ಮಾನ , ವಸತಿ, ಊಟೋಪಚಾರದಂತಹ
ತಕ್ಷಣದ ಸೀಮಿತ ವಿಷಯಗಳ ಜೊತೆಗೆಯೇ ಕಸಾಪ ಸಂಸ್ಥೆಯ ಧೋರಣೆ ಮತ್ತು ಅದು ರೂಪಿಸುವ ಸಮ್ಮೇಳನದ ಸ್ವರೂಪದಲ್ಲಿ ತಲಸ್ಪರ್ಶಿ ಬದಲಾವಣೆ ಪ್ರತಿಪಾದಿಸುವುದರ ಕಡೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ.

ಮೊದಲನೆಯದಾಗಿ ,ಆಡಂಬರ ಮತ್ತು ಅರ್ಥಪೂರ್ಣತೆ ತದ್ವಿರುದ್ಧ ಪದಗಳು ಎಂಬ ಸ್ಪಷ್ಟತೆ ಸಂಘಟಕರಲ್ಲಿ ಮೂಡಬೇಕಾಗುತ್ತದೆ. ಆಡಂಬರದ ಬೊಕ್ಕಣದಲ್ಲಿ ರೊಕ್ಕ ತುಂಬಿದ್ದರೆ, ಅರ್ಥಪೂರ್ಣತೆಯ ಹಿನ್ನೆಲೆಯಲ್ಲಿ ವೈಚಾರಿಕತೆ ನೆಲೆಸಿರುತ್ತದೆ. ಆದ್ದೂರಿತನಕ್ಕೆ ಹಣವಂತರ ,ಅರ್ಥಪೂರ್ಣ ಆಚರಣೆಗೆ ವಿಚಾರದಂತರ ಅಗತ್ಯವಿರುತ್ತದೆ. ಸಂಘಟಕರ ಉದ್ದೇಶ ‘ಸ್ವಾಗತ ಸಮಿತಿ ‘ಆಯ್ಕೆಯ ಹಂತದಲ್ಲಿಯೇ ನಿರ್ಧಾರವಾಗುತ್ತದೆ. ಇಲ್ಲಿಯೇ ಸರ್ಕಾರದ ನೆರವು ,ಭಾಗವಹಿಸುವಿಕೆ ,ದಾರಿ ತಪ್ಪಿಸುವಿಕೆಯ ಸರಣಿ ಏರ್ಪಡುವುದು. ಇದು ಕಸಾಪ ಸಂಸ್ಥೆಯ ಸ್ವಾಯತ್ತತೆಯ ಪ್ರಮಾಣ ನಿರ್ಣಯವಾಗುವ ಘಟ್ಟ ಕೂಡ.ಪರಿಷತ್ತು ಮತ್ತು ಸಮ್ಮೇಳನ ಸ್ವರೂಪದ ಬುನಾದಿಯನ್ನೇ ಅಲುಗಾಡಿಸುವ ಮೂಲಭೂತ ರಚನೆಗೆ ಕೈ ಹಾಕುವ ಎದೆಗಾರಿಕೆಯನ್ನು ಸದ್ಯದ ಸಂದರ್ಭದಲ್ಲಿ ನಿರೀಕ್ಷಿಸುವುದು ಕಷ್ಟ ಎಂಬುದು ಕಟು ವಾಸ್ತವವಾದರೂ ಅಸಾಧ್ಯವಲ್ಲ.

ಹಣಕಾಸಿನ ಆಯಾಮವನ್ನು ಬದಿಗಿಟ್ಟು ಅಳವಡಿಸಿ ಕೊಳ್ಳಬಹುದಾದ ಸುಧಾರಣೆ, ಬದಲಾವಣೆಗಳೂ ಬಹಳಷ್ಟು ಇವೆ. ಬಹುಮುಖ್ಯವಾಗಿ, ರಾಜ ಶಾಹಿಯ ಪಳೆಯುಳಿಕೆಯಂತೆ ಜಾರಿಯಲ್ಲಿರುವ ಸಮ್ಮೇಳನಾಧ್ಯಕ್ಷ ರಥಯಾತ್ರೆಯನ್ನು ಇತಿಹಾಸಕ್ಕೆ ಸೇರಿಸಬೇಕು. ಹಾಗೆಯೇ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ ಏರ್ಪಡಿಸುವ ಸಂಪ್ರದಾಯ ಅವಮಾನಕಾರಿ ಮತ್ತು ಅಮಾನೀಯ ಎಂಬುದನ್ನು ಬೇಗ ಅರಿತಷ್ಟೂ ಒಳಿತು. ಮಂಡ್ಯ ಸಮ್ಮೇಳನದಲ್ಲಿ ಕೆಲವು ಮಹಿಳೆಯರು ಪೂರ್ಣ ಕುಂಭದ ಬದಲು ಪುಸ್ತಕಗಳನ್ನು ಹೊತ್ತು ಸಾಗುವ ಮೂಲಕ ಈ ಸಂಪ್ರದಾಯವನ್ನು ಭಾಗಶಃ ಮುರಿದಿರುವುದು ಸ್ವಾಗತಾರ್ಹ .
ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಂಡ್ಯ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿಯೇ ಹೇಳಿದಂತೆ ,’ರಾಜಕಾರಣಿಗಳು ಅಕ್ಷರ ಶತ್ರುಗಳನ್ನು’ ಎಂಬುವುದರಲ್ಲಿ ಅನುಮಾನವೇ ಇಲ್ಲ. ಆದಾಗ್ಯೂ ನುಡಿಮೇಳೆದಲ್ಲಿ ರಾಜಕಾರಣಿಗಳಿಗೇಕೆ ಅಷ್ಟೊಂದು ಮಹತ್ವ?
ನೆರೆಯ ಮಹಾರಾಷ್ಟ್ರದಲ್ಲಿ ನಡೆಯುವ ಮರಾಠಿ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರಾಜಕಾರಣಿಗಳಿಗೆ ಅವಕಾಶವಿಲ್ಲ. ಅವರು ಸಾಮಾನ್ಯ ಜನರಂತೆ ಸಭಿಕರ ಸಾಲಿನಲ್ಲಿ ಕುಳಿತು ಸಾಹಿತಿಗಳ ಮಾತನ್ನು ಆಲಿಸುತ್ತಾರೆ. ಅದೇ ರೀತಿ ಕರ್ನಾಟಕದ ಮುಖ್ಯಮಂತ್ರಿ ಅದಿಯಾಗಿ ರಾಜಕಾರಣಿ ಗಳು ಸಾಹಿತ್ಯ ಸಮ್ಮೇಳನದಲ್ಲಿ ಸಭಿಕರಾಗಿ ಕುಳಿತುಕೊಳ್ಳಬಾರದೇ…….?

ಓದುವವರ ಸಂಖ್ಯೆ ಕ್ಷೀಣಿಸಿದೆ, ಯುವಜನರ ಆಸಕ್ತಿಗಳು ಬದಲಾಗಿವೆ ಎಂದು ಆರೋಪದ ನಡುವೆಯೂ ಹೊಸ ಪೀಳಿಗೆಯ ಸಾಹಿತ್ಯಕ ಚಟುವಟಿಕೆಗಳು, ಕೊಡಗೆಗಳು ಗಮನಾಹವಾಗಿವೆ. ವಿವಿಧ ವೃತ್ತಿ, ಪ್ರದೇಶ, ಸಾಮಾಜಿಕ ಹಿನ್ನೆಲೆಯ ಈ ಯುವಪಡೆಯಲ್ಲಿ ತಾಂತ್ರಿಕ ಪರಿಣತರೂ ಇದ್ದಾರೆ. ಸಾಕಷ್ಟು ಬೆಳೆದಿರುವ ಹಿರಿಯರು ಇವರನ್ನು ಒಳಗೊಳ್ಳುವ, ಇವರಿಗೆ ದಾರಿ ಬಿಡುವ ದೊಡ್ಡ ಮನಸ್ಸು ಮಾಡಬೇಕಷ್ಟೆ!

Leave a Comment