ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ವರ್ಕ್ ಮುಖ್ಯ

ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ವರ್ಕ್ ಮುಖ್ಯ

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಈ ಮಾತು ಇನ್ನೂ ಎಷ್ಟು ವರ್ಷ ಅಂತಾ ಹೇಳಬೇಕು ಹೇಳಿ. ಇದರ ಬದಲು ಅಭಿವೃದ್ಧಿ ಹೊಂದಿದ ದೇಶ ಎಂದು ಕೇಳಲು ಅಥವಾ ಹೇಳಲು ಎಷ್ಟು ಹೆಮ್ಮೆಯಲ್ಲವೇ? ಹಾಗಿದ್ದರೆ ಹಾಗಾಗಬೇಕಾದರೆ ಎನಾಗಬೇಕು? ಎಂದು ಒಮ್ಮೆ ಅವಲೋಕನ ಮಾಡಿದರೆ ಸಿಗುವ ಉತ್ತರ ಇನ್ನೂ ಹೆಚ್ಚಿನ ಶ್ರದ್ದೆ ಮತ್ತು ಶ್ರಮದ ಅಗತ್ಯವಿದೆ ಎಂಬುದೇ ಆಗಿದೆ. ಜಾಗತಿಕ ಮಟ್ಟದಲ್ಲಿ ಇಂದು ಭಾರಿ ಪೈಪೋಟಿ ಏರ್ಪಟ್ಟಿದೆ. ನಮಗಿಂತ ಸಣ್ಣ ದೇಶಗಳು ನಮಗೆ ಸವಾಲೊಡ್ಡುತ್ತಿವೆ. ಇಸ್ರೇಲ್, ಶೈವಾನ್, ಕೋರಿಯಾದಂತಹ ದೇಶಗಳು ತಂತ್ರಜ್ಞಾನ ವಿಷಯದಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ನ ನಾರಾಯಣಮೂರ್ತಿ ಅವರು ವಾರಕ್ಕೆ 70 ಅಥವಾ 100 ಗಂಟೆ ಕೆಲಸ ಮಾಡಬೇಕು ಎಂದು ಹೇಳಿರಬಹುದು. ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಇದು ಅಗತ್ಯ ಎಂದು ಹೇಳಿದರೋ ಅಥವಾ ನಮ್ಮ ದೇಶದಲ್ಲಿ ಈಗ ಒಬ್ಬ ಉದ್ಯೋಗಿ ಹಾಕುತ್ತಿರುವ ಶ್ರಮದ ಅವಧಿ ಎತಕ್ಕೂ ಸಾಲದು ಎಂಬ ದೃಷ್ಟಿಯಿಂದ ಹೇಳಿದರೋ ಗೊತ್ತಿಲ್ಲ. ಆದರೆ ಈ ಹೇಳಿಕೆಗಳು ನಾನಾ ಚರ್ಚೆ ಹುಟ್ಟು ಹಾಕಿದ್ದಂತೂ ನಿಜ. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸೋಣ ಭಾರತದಲ್ಲಿ ಈಗಿನ

ಪರಿಸ್ಥಿತಿಯಲ್ಲಿ ಇದು ಕೊಂಚ ಕಷ್ಟವೇ ಸರಿ. ನಾನೊಬ್ಬ ಮನೋವೈದ್ಯವಾಗಿ ನನಗೆ ತಿಳಿದ ವೈದ್ಯಕೀಯಜ್ಞಾನದ ಪ್ರಕಾರ ಮನುಷ್ಯನ ದೇಹಕ್ಕೆ ಇಂತಿಷ್ಟು ಅಂತ ಒಂದು ಶಕ್ತಿ ಇರುತ್ತದೆ. ಮೊದಲಿನಿಂದಲೂ ಹೆಚ್ಚು ಅವಧಿ ಕೆಲಸ ಮಾಡುವ ರೂಢಿಯಿದ್ದರೆ ಅದು ಯಾವುದೇ ಪರಿಣಾಮ ಬೀರದಿರಬಹುದು. ಆದರೆ ಈಗ ದಿಢೀರ್ ಎಂದು ಕೆಲಸದ ಅವಧಿ ಹೆಚ್ಚಿಸಿದರೆ ಅದಕ್ಕೆ ದೇಹ, ಮನೆಯ ವಾತಾವರಣ ಎಲ್ಲವೂ ಹೊಂದಿಕೆಯಾಗುವುದು ಕಷ್ಟ. ಆರ್ಥಿಕ ಅಭಿವೃದ್ಧಿ ದೇಶಕ್ಕೆ ಸಮಾಜಕ್ಕೆ ಮತ್ತು ಅದರ ಅವಿಭಾಜ್ಯ ಅಂಗವಾದ ವ್ಯಕ್ತಿಗೆ ಬೇಕು ನಿಜ. ಆದರೆ ಅದುವೇ ಜೀವನದ ಗುರಿಯಲ್ಲ. ಮನೋನೆಮ್ಮದಿ ಎದುರು ಆರ್ಥಿಕ ನೆಮ್ಮದಿ ಯಾವ ಲೆಕ್ಕಕ್ಕೂ ಇಲ್ಲ. ಇದು ಕಟುಸತ್ಯ. ಆದರೆ ಬದಲಾದ ಸನ್ನಿವೇಶದಲ್ಲಿ ನಾವಿಂದು ಪ್ರತಿ ಹಂತದಲ್ಲೂ ಸ್ಪರ್ಧೆ ಎದುರಿಸುವಂತಾಗಿದೆ. ಮಲ್ಟಿ ಸ್ಕಿಲ್ ಗೊತ್ತಿದ್ದರೆ ಮಾತ್ರ ಯಾವುದೇ ಕ್ಷೇತ್ರದಲ್ಲಿ ಉಳಿಯುವ ಸಾಧ್ಯತೆ. ಇಲ್ಲದಿದ್ದರೆ ಇರುವ ಉದ್ಯೋಗವನ್ನೂ ಕಳೆದುಕೊಳ್ಳಬೇಕಾದ ಸ್ಥಿತಿ ಇದೆ.

ಇದನ್ನೂ ಓದಿ: ಕಿರುಸಾಲ ದೌರ್ಜನ್ಯಕ್ಕೆ ಕಡಿವಾಣ

ಈ ಹಿನ್ನೆಲೆಯಲ್ಲಿ ಯೋಚಿಸಿದರೆ ಇನ್ನೂ ಹೆಚ್ಚಿನ ಶ್ರಮ ಅಗತ್ಯ ಎನಿಸಹುದೇನೋ, ಬದುಕಿಗೆ ಆರ್ಥಿಕ ಶಕ್ತಿ ಮತ್ತು ಮೂಲ ಬೇಕು ನಿಜ ಆದರೆ ಅದಕ್ಕೆ ದೇಹ ಕೂಡ ಸ್ಪಂದಿಸುವಂತಿರಬೇಕು. ನಿದ್ದೆಗೆಟ್ಟು ಅಥವಾ ಸಾಮರ್ಥ್ಯ ಮೀರಿ ಕೆಲಸ ಮಾಡಲು ಹೊರಟರೆ ಅಡ್ಡ ಪರಿಣಾಮದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ವರ್ಗದವರು ತಮ್ಮದೇ ಆದ ಸಮಯಕ್ಕೆ ಹೊಂದಿಕೊಂಡಿದ್ದಾರೆ. ಐಟಿಕಂಪನಿಗಳು, ಖಾಸಗಿ ಕಚೇರಿಗಳ ಉದ್ಯೋಗಿಗಳು, ಗೃಹ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಿರ್ಕರು ಹೆಚ್ಚು ಸಮಯ ದುಡಿಯುತ್ತಿದ್ದಾರೆ. ಆದರೆ ನನ್ನ ಪ್ರಕಾರ ಹಾರ್ಡ್ ವರ್ಕ್ಗಿಂತ. ಸ್ಮಾರ್ಟ್ ವರ್ಕ್ ಇಂದಿನ ತುರ್ತು ಅಗತ್ಯವಾಗಿದೆ. ಎಷ್ಟು ಹೊತ್ತು ಕೆಲಸ ಮಾಡುತ್ತೇವೆ ಎನ್ನುವುದಕ್ಕಿಂತ ಮಾಡುವ ಕೆಲಸವನ್ನೇ ಎಷ್ಟು ಪರಿಣಾಮಕಾರಿಯಾಗಿ ಮಾಡುತ್ತೇವೆ ಎಂಬುದು ಮುಖ್ಯ.

ಇನ್ನು ನಮ್ಮ ದೇಶದ ಸಂಪ್ರದಾಯ ಹೇಗಿದೆ ಎಂದರೆ ಅವಿಭಕ್ತ ಕುಟುಂಬ ಪದ್ಧತಿ. ಪ್ರತಿಯೊಬ್ಬರಿಗೂ ವೈಯಕ್ತಿಕ ಜೀವನದ ಸಂತಸ ಮುಖ್ಯ. ಉದ್ಯೋಗ ಮುಖ್ಯ ಹೇಗೋ ನೌಕರರನಿಗೆ ಮಾನಸಿಕವಾಗಿ ಉತ್ತಮ ಸ್ಥಿತಿ ಹೊಂದಿರುವುದು, ಮನರಂಜನೆ ಕುಟುಂಬಕ್ಕೆ ಪ್ರಾಶಸ್ತ್ರ ನೀಡುವುದು ಮುಖ್ಯವಾಗಿರುತ್ತದೆ. ನಮ್ಮ ದೇಶದ ಸ್ಥಿತಿ ಗತಿ ಆಚಾರ ವಿಚಾರವೇ ಬೇರೆ ವಿದೇಶಗಳ ಸ್ಥಿತಿ ಗತಿಯೇ ಬೇರೆ. ವೈಯಕ್ತಿಕ ಜತೆಗೆ ಕೌಟುಂಬಿಕ ಜವಾಬ್ದಾರಿಗಳು ಹೆಗಲೇರುವುದು ನಮ್ಮಲ್ಲಿ ಸಾಮಾನ್ಯ. ಅಣ್ಣ, ತಂಗಿಯರ ಮದುವೆ, ಮುಂಜಿ, ಓದು ಹೀಗೆ ನಾನಾ ಜವಾಬ್ದಾರಿ ನಿಭಾಯಿಸುವ ಗುರುತರ ಹೊಣೆ ನಮ್ಮಲ್ಲಿ ಇಂದಿಗೂ ಇದೆ. ಕೇವಲ ದುಡಿಮೆ ಎಂದು ದಿನಕ್ಕೆ ಮುಕ್ಕಾಲು ವೇಳೆ ಕುಳಿತರೆ ಈ ಎಲ್ಲ ಜವಾಬ್ದಾರಿ ನಿರ್ವಹಿಸುವವರು ಯಾರು? ಇದರರ್ಥ ನಾವು ಭಾರತರ ಅಭಿವೃದ್ಧಿ ವಿರೋಧಿಗಳಲ್ಲ. ನಾರಾಯಣಮೂರ್ತಿಯವರು ಅಭಿವೃದ್ಧಿಶೀಲ ಭಾರತದ ವಿರೋಧಿಗಳೂ ಅಲ್ಲ. ಪರ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಸಾಕಷ್ಟು ಹಿಂದಿದ್ದೇವೆ ಎಂಬುದು ಸತ್ಯ. ನಾನು ಸೇರಿದಂತೆ ಅನೇಕರು ನಂಬಿದ್ದು ಗುಣಮಟ್ಟದ ಕೆಲಸದಲ್ಲಿ

ಹೊರತು ಎಷ್ಟು ಹೊತ್ತು ಕೆಲಸ ಮಾಡುತ್ತೇವೆ ಎನ್ನುವದರಲ್ಲಿ ಅಲ್ಲ ಇದನ್ನೇ ಮಹೀಂದ್ರಾ ಮತ್ತು ಮಹೀಂದ್ರಾ ಸಮೂಹ ಸಂಸ್ಥೆಗಳ ಚೇರ್ಮನ್ ಆನಂದ ಮಹೀಂದ್ರಾ ಅವರು ಹೇಳಿದ್ದು ಎಲ್ಲರೂ ಸೋಮಾರಿತನ ಬಿಟ್ಟು ಸಮಯ ಹಾಳು ಮಾಡದೇ ಶ್ರದ್ಧೆಯಿಂದ ಮತ್ತು ಬದ್ಧತೆಯಿಂದ ಕೆಲಸ ಮಾಡಿ ಎಂದು ಪಣತೊಡೋಣ ಎಂದಷ್ಟೇ ಹೇಳಬಹುದು.

Leave a Comment