ಹೆಚ್ಚುತ್ತಿರುವ ಡಿಜಿಟಲ್ ವಂಚನೆ ಜಾಗೃತಿಯೇ ಮದ್ದು

ಹೆಚ್ಚುತ್ತಿರುವ ಡಿಜಿಟಲ್ ವಂಚನೆ ಜಾಗೃತಿಯೇ ಮದ್ದು

ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲರಿಗೂ ಅನುಭವವಾಗಿರಬಹುದು. ಯಾರಿಗಾದರೂ ಮೊಬೈಲ್ ಕರೆ ಮಾಡುವಾಗ, ‘ಗಮನಿಸಿ, ವಿದ್ಯುತ್ ಬಿಲ್ ಕಡಿತ, ಕಸ್ಟಮರ್ ಕೇರ್ ನಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಕೂಡಲೇ ಅಪ್‌ಡೇಟ್ ಮಾಡಿಕೊಳ್ಳಿ, ನಿಮ್ಮ ಸಂಬಂಧಿಕರು ಬಂಧಿತರಾಗಿದ್ದಾರೆ ಹೀಗೆ ಅನಾಮಧೇಯ ಕರೆಗಳು ಬಂದಾಗ ಗಾಬರಿಗೊಂಡು ಬ್ಯಾಂಕ್ ವಿವರ ಅಥವಾ ಒಟಿಪಿಗಳನ್ನು ನೀಡಿ ಹಣ ಕಳೆದುಕೊಳ್ಳಬೇಡಿ…. ಇಂತಹ ಕರೆಗಳ ಬಗ್ಗೆ ಅನುಮಾನ ಕಂಡುಬಂದಲ್ಲಿ 1930 ಕರೆ ಮಾಡಿರಿ. ಈ ಸಂದೇಶವನ್ನು ಗೃಹ ಮಂತ್ರಾಲಯದಿಂದ ಜಾರಿ ಮಾಡಲಾಗಿದೆ’. ಹೀಗೆ ಸಂದೇಶವೊಂದು ಪ್ರತಿ ಬಾರಿ ಕರೆ ಮಾಡುವಾಗ ಕೇಳಿ ಬರುತ್ತಿರುತ್ತದೆ. ಇದು ಆನ್‌ಲೈನ್ ವಂಚನೆಗೆ ಒಳಗಾಗದಂತೆ ಜನರಿಗೆ ಅರಿವು ಮೂಡಿಸುವ ಸಂದೇಶವಾಗಿದೆ. ಇದು ಕೆಲವರಿಗೆ ಕಿರಿಕಿರಿಯನ್ನುಂಟು ಮಾಡಿದರೂ ಇಂತಹ ಜಾಗೃತಿಗಳಿಂದ ವಂಚನೆಯನ್ನು ಸಾಕಷ್ಟು ತಡೆಯಬಹುದಾಗಿದೆ.

ಇಂದಿನ ದಿನಗಳಲ್ಲಿ ಆನ್‌ಲೈನ್ ವಂಚನೆಯ ಜಾಲ ಹಳ್ಳಿ-ಹಳ್ಳಿಗಳಿಗೂ ಹಬ್ಬಿದ್ದು ಸಾಕಷ್ಟು ಜನರು ಹಣವನ್ನು ಕಳೆದುಕೊಂಡು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಆನ್‌ಲೈನ್ ವಂಚನೆಗಳ ಬಗ್ಗೆ ಅರಿವಿಲ್ಲದ ಅಮಾಯಕರು ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಮಗಳ ಮದುವೆಗಾಗಿ, ಮಕ್ಕಳ ಓದಿಗಾಗಿ, ಮನೆ ಕಟ್ಟಲು, ಸಾಲ ಮಾಡಿ ತಂದ ಹಣ ಹೀಗೆ ಕೂಡಿಟ್ಟ ಹಣವೆಲ್ಲ ಅನಾಮಿಕ ಪೋನ್ ಕರೆ ಸ್ವೀಕರಿಸುವುದರಿಂದ, ಒಟಿಪಿ ಹೇಳುವುದರಿಂದ, ಕೆಲವು ಲಿಂಕ್‌ಗಳನ್ನು ಒತ್ತುವುದರ ಮೂಲಕ ಕಳೆದುಕೊಳ್ಳುವುದು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ನಮ್ಮ ಕ್ಷೇತ್ರದ ಅಧಿಕಾರಿಯೊಬ್ಬರು ಈ ಕರೆಗೆ ಓಗೊಟ್ಟು ಅರ್ಧದಾರಿ ಹೋಗಿದ್ದರು. ಆ ಬಳಿಕ ಯಾರೋ ಎಚ್ಚರಿಕೆ ನೀಡಿದ್ದರಿಂದ ಹಿಂದೆ ಬಂದು ನನ್ನೊಡನೆ ಹೇಳಿದರು, ‘ಅದು ಸುಳ್ಳು ನಿಮಿಗೆ ಕೋಟಿ ರೂಪಾಯಿ ಹಣ ದೊರಕುವುದಿಲ್ಲ. ಕಷ್ಟಪಟ್ಟು ಸಂಪಾದಿಸಿದ ಹಣ ಕಳೆದು ಹೋಗುತ್ತದೆ’ ಎಂದು. ಹಿಂದೆ ಕಳುಹಿಸಿದವರನ್ನು ಅಭಿನಂದಿಸಿ ಎಂದೆ.

ತಂತ್ರಜ್ಞಾನದಿಂದ ಎಷ್ಟು ಪ್ರಯೋಜನ ಇದೆಯೋ, ಅದು ದುರ್ಬಳಕೆಯಾದಾಗ ಅಷ್ಟೇ ಅಪಾಯವೂ ಇದೆ ಎಂಬುದು ನಿಜ. ಡಿಜಿಟಲ್, ಆನ್‌ಲೈನ್ ಮುಂತಾದ ತಂತ್ರಜ್ಞಾನದಿಂದ ಇಂದು ವ್ಯಾಪಾರ, ವ್ಯವಹಾರ ಎಲ್ಲವೂ ಸುಲಭವಾಗಿವೆ. ಎಲ್ಲ ಕ್ಷೇತ್ರಗಳಲ್ಲೂ ಡಿಜಿಟಲ್, ಆನ್‌ಲೈನ್ ತಂತ್ರಜ್ಞಾನದ ಬಳಕೆ ಹೆಚ್ಚಿದ್ದು ಇವೆಲ್ಲ ದೇಶದ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಮಹತ್ತರ ಕೊಡುಗೆ ನೀಡುತ್ತಿವೆ. ನಮ್ಮೆಲ್ಲರ ದಿನನಿತ್ಯದ ವ್ಯವಹಾರಗಳನ್ನು ಸುಲಭಗೊಳಿಸುವುದರ ಜೊತೆಗೆ ಕ್ಷಣಮಾತ್ರದಲ್ಲಿ ಮಾಹಿತಿ, ಮನರಂಜನೆಯ ಜೊತೆಗೆ ಆರೋಗ್ಯ, ಬ್ಯಾಂಕಿಂಗ್ ಮುಂತಾದ ಸೇವೆಗಳನ್ನು ಪಡೆಯಲು ಸಾಧ್ಯವಾಗಿದೆ. ವ್ಯಾಪಾರಿಯೊಬ್ಬ ಕ್ಷಣಮಾತ್ರದಲ್ಲಿ ಆನ್ ಲೈನ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ, ಕೃಷಿಕನು ಮನೆಯಲ್ಲಿದ್ದುಕೊಂಡು ಬೇರೆ ಕೆಲಸ ಮಾಡುತ್ತಲೇ ತೋಟದಲ್ಲಿರುವ ಪಂಪ್ ಚಾಲೂ ಮಾಡಲು ಸಾಧ್ಯ, ಮಕ್ಕಳು ಆನ್‌ಲೈನ್ ಮೂಲಕ ಶಿಕ್ಷಣ ತರಬೇತಿ ಪಡೆಯಬಹುದು. ವಿದ್ಯುತ್ ಬಿಲ್, ಪೇಪರ್ ಬಿಲ್, ನೀರಿನ ಬಿಲ್ ಇತ್ಯಾದಿಯನ್ನು ಅಲ್ಲೇ ಹೋಗಿಯೇ ಪಾವತಿ ಮಾಡಬೇಕಾಗಿಲ್ಲ. ಬ್ಯಾಂಕ್ ಆ್ಯಪ್ ಮೂಲಕ ಸುಲಭವಾಗಿ ವ್ಯವಹಾರ ಮಾಡಬಹುದಾಗಿದೆ. ಹೀಗೆ ನಾನಾ ರೀತಿಯಲ್ಲಿ ಡಿಜಿಟಲ್, ಆನ್‌ಲೈನ್ ತಂತ್ರಜ್ಞಾನಗಳು ಪ್ರಯೋಜನಕಾರಿಯಾಗಿವೆ. ಈಗೀಗ ಜನರು ಪರ್ಸ್ ನಲ್ಲಿ ಹಣವನ್ನು ಇಟ್ಟುಕೊಳ್ಳುವುದೇ ಕಡಿಮೆ. ಆಟೋ ಬಾಡಿಗೆಯಿಂದ ಹಿಡಿದು ಮನೆಬಾಡಿಗೆ, ಸ್ಕೂಲ್ ಫೀ, ಹೀಗೆ ದೊಡ್ಡ ಮೊತ್ತದ ಹಣವನ್ನು ಕೂಡ ಡಿಜಿಟಲ್ಪಾ ವತಿ ಮೂಲಕವೇ ಮಾಡುವುದು ಹೆಚ್ಚಾಗಿದೆ.

ಇದನ್ನೂ ಓದಿ: ಭಾರತಕ್ಕೆ ಸರಣಿ ಜಯದ ತವಕ

ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಮೂಲಕ ಸುಧಾರಿತ ಆನ್‌ಲೈನ್ ಮೂಲಸೌಕರ್ಯ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೆಚ್ಚಿಸಿದ್ದರಿಂದ ಸರ್ಕಾರ ಮಾತ್ರವಲ್ಲದೆ ಇತರ ಸೇವೆಗಳು ನಾಗರಿಕರಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಲಭ್ಯವಾಗುವಂತಾಯಿತು. ಕೈಯಲ್ಲೊಂದು ಇಂಟರ್‌ನೆಟ್ ಸಂಪರ್ಕವಿರುವ ಸ್ಮಾರ್ಟ್‌ ಫೋನ್ ಇದ್ದರೆ ಆಯಿತು, ಬಹುತೇಕ ಕೆಲಸಗಳನ್ನು ಬೆರಳ ತುದಿಯಲ್ಲೇ ಮಾಡಿ ಮುಗಿಸುವ ಕಾಲ ಇದಾಗಿದೆ. ಡಿಜಿಟಲ್ ತಂತ್ರಜ್ಞಾನ ಸೌಲಭ್ಯಗಳು ನಗರ, ಪಟ್ಟಣಗಳಿಗಷ್ಟೇ ಸೀಮಿತವಾಗದೆ ಹಳ್ಳಿ-ಹಳ್ಳಿಗೂ ತಲುಪುವಂತಾಗಿದೆ. ಇದರಿಂದ ಗ್ರಾಮೀಣ ಶಾಲೆಯ ಮಕ್ಕಳು ಆನ್‌ಲೈನ್ ಶಿಕ್ಷಣ ಪಡೆಯುವುದು, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಆನ್‌ಲೈನ್ ವ್ಯವಹಾರ, ಹಳ್ಳಿಯ ಜನರು ಕೂಡ ವರ್ಕ್ ಫ್ರಂ ಹೋಂ, ಅನ್‌ಲೈನ್ ವ್ಯವಹಾರ ಹೀಗೆ ಡಿಜಿಟಲ್ ತಂತ್ರಜ್ಞಾನದ ಸೌಲಭ್ಯವನ್ನು ಪಡೆದುಕೊಳ್ಳಲು ಸಹಕಾರಿಯಾಯಿತು. ಗ್ರಾಮೀಣ ಜನರ ಇಂಟರ್‌ನೆಟ್ ಬಳಕೆ ಹೆಚ್ಚಳದೊಂದಿಗೆ ಡಿಜಿಟಲ್ ಸಾಕ್ಷರತೆಯಲ್ಲೂ ವೃದ್ಧಿಯಾಯಿತು.

ಇಂತಹ ಪ್ರಯೋಜನಕಾರಿ ತಂತ್ರಜ್ಞಾನ, ಸೌಲಭ್ಯಗಳು ಮೋಸಗಾರರು, ಭ್ರಷ್ಟರ ಕೈಗೆ ದೊರಕಿದಾಗ ಏನೆಲ್ಲ ಅಕ್ರಮ, ಅನಾಹುತ, ಅವ್ಯವಹಾರಗಳು ನಡೆಯಬಹುದು ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ನಾನಾ ರೀತಿಯ ಆನ್‌ಲೈನ್ ವಂಚನೆಗಳು ಪ್ರತ್ಯಕ್ಷ ಸಾಕ್ಷಿಯಾಗುತ್ತಿವೆ. ತೆರಿಗೆ ಇಲಾಖಾ ಅಧಿಕಾರಿ ಹೆಸರಲ್ಲಿ ಕರೆ ಮಾಡಿ, “ನಿಮ್ಮ ಹೆಸರಲ್ಲಿ ಮಾದಕ ವಸ್ತುಗಳು ಸರಬರಾಜಾಗುತ್ತಿದ್ದು ಕೇಸ್‌ ದಾಖಲಾಗಿದೆ. ಇಂತಿಷ್ಟು ದುಡ್ಡು ಕಟ್ಟಿದರೆ ಕೇಸ್ ಇಲ್ಲೇ ಮುಕ್ತಾಯವಾಗುತ್ತದೆ. ಇಲ್ಲವಾದಲ್ಲಿ ಮನೆಗೆ ಬಂದು ನಿಮ್ಮನ್ನು ಬಂಧಿಸಬೇಕಾಗುತ್ತದೆ.

ಇದರಿಂದ ನಿಮ್ಮ ಮಾನ-ಮರ್ಯಾದೆ ಕಳೆದುಕೊಳ್ಳುತ್ತೀರಿ’ ಎಂದು ಬೆದರಿಸಿ ಹಣ ನೀಡುವಂತೆ ಒತ್ತಾಯಿಸುತ್ತಾರೆ. ಕೆಲವೊಮ್ಮೆ ಪೊಲೀಸ್ ಠಾಣೆಯಿಂದಲೇ ಕರೆಗಳು ಮಾಡುತ್ತಿರುವ ರೀತಿಯಲ್ಲಿ ವಂಚಿಸಿ ಸಾವಿರ, ಲಕ್ಷಗಟ್ಟಲೆ ಹಣ ಪೀಕಿಸುತ್ತಾರೆ. ಇದಲ್ಲದೆ, ‘ನಾವು ಬ್ಯಾಂಕಿನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಕೆ.ವೈ.ಸಿ ಅಪ್‌ಡೇಟ್ ಆಗಿಲ್ಲ. ನಿಮ್ಮ ಮೊಬೈಲ್‌ಗೆ ಬಂದ ಒಟಿಪಿ ಸಂಖ್ಯೆ ತಿಳಿಸಿದಲ್ಲಿ ಕೆ.ವೈ.ಸಿ ಅಪ್‌ಡೇಟ್ ಮಾಡುತ್ತೇವೆ’ ಎಂದು ನಂಬಿಸುತ್ತಾರೆ. ಅವರ ಮಾತನ್ನು ನಿಜವೆಂದೇ ನಂಬಿ ಒಟಿಪಿ ತಿಳಿಸಿದಲ್ಲಿ ಖಾತೆಯಲ್ಲಿರುವ ಹಣ ಕ್ಷಣ ಮಾತ್ರದಲ್ಲಿ ಮಂಗಮಾಯವಾಗುತ್ತದೆ. ಆಗಲೇ ತಾವು ವಂಚನೆಗೆ ಒಳಗಾಗಿರುವುದು ತಿಳಿಯುವುದು.
ಹೀಗೆ ನಿತ್ಯವೂ ಹೊಸ ಹೊಸ ರೀತಿಯಲ್ಲಿ ಆನ್‌ಲೈನ್ ವಂಚನೆಗಳು ನಡೆಯುತ್ತಿವೆ. ತಂತ್ರಜ್ಞಾನ ಬೆಳೆದಂತೆಲ್ಲ ಆನ್‌ಲೈನ್ ವಂಚನೆಯ ಜಾಲವೂ ವಿಸ್ತಾರವಾಗುತ್ತಿದೆ. ಅನಕ್ಷರಸ್ಥರು ಮಾತ್ರವಲ್ಲದೆ ಶಿಕ್ಷಿತರೂ ಈ ವಂಚನೆಯ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಆನ್‌ಲೈನ್ ವಂಚನೆಗಳ ಬಗ್ಗೆ ಎಲ್ಲರೂ ಆದಷ್ಟು ಜಾಗೃತರಾಗಿರಬೇಕು. ಈ ಬಗ್ಗೆ ಮಾಧ್ಯಮಗಳು, ಪೊಲೀಸ್ ಇಲಾಖೆ, ಸರ್ಕಾರಗಳು ಮತ್ತೆ-ಮತ್ತೆ ಎಚ್ಚರ ನೀಡಿದರೂ ಜನರು ಮೋಸ ಹೋಗುವುದು ಮಾತ್ರ ಕಡಿಮೆಯಾಗಿಲ್ಲ.

ಕೆಲವೊಮ್ಮೆ ಅತಿಯಾದ ಆಸೆಯೇ ನಮ್ಮನ್ನು ಮೋಸಗೊಳಿಸುತ್ತದೆ. ‘ಈ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿ, ಒಂದೇ ತಿಂಗಳಿನಲ್ಲಿ ದುಪ್ಪಟ್ಟು ಮಾಡಿಕೊಡುತ್ತೇವೆ’ ಎಂಬ ಆಸೆ ತೋರಿಸಿ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸುತ್ತಾರೆ. ನಂತರ ನಂಬಿಕೆ ಬರುವ ಸಲುವಾಗಿ ಕೆಲವು ಮಂದಿಗೆ ಒಂದಷ್ಟು ದುಪ್ಪಟ್ಟು ಹಣ ಪಾವತಿಸಿ ನಂಬಿಕೆ ಮೂಡಿಸುತ್ತಾರೆ. ಜೊತೆಗೆ ಮತ್ತಷ್ಟು ಜನರಿಗೆ ಈ ಬಗ್ಗೆ ಪ್ರಚಾರ ಮಾಡಿಸಿ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಪಡೆದುಕೊಳ್ಳುತ್ತಾರೆ. ಕೊನೆಗೆ ಒಂದು ದಿನ ರಾತ್ರಿ ಬೆಳಗಾಗುವಾಗ ಹಣ ಹೂಡಿಕೆ ಮಾಡಿದ ಆ್ಯಪ್ ಕೆಲಸವೇ ಮಾಡುವುದಿಲ್ಲ. ಅದರಲ್ಲಿ ಇರುವ ಮಾಹಿತಿಗಳ ಸಂಪರ್ಕವೂ ಸಿಗುವುದಿಲ್ಲ. ಹೀಗೆ ಹಣ ಲಪಟಾಯಿಸಿ ಸಹಸ್ರಾರು ಗ್ರಾಹಕರಿಗೆ ಪಂಗನಾಮ ಹಾಕಿದ ಬಗ್ಗೆಅನೇಕ ವರದಿಗಳು ಪತ್ರಿಕೆಯಲ್ಲಿ ಬಂದಿವೆ. ಆ್ಯಪ್‌ಗಳ ಮೂಲ ಸೃಷ್ಟಿಕರ್ತರು ಎಲ್ಲೊ ಇದ್ದುಕೊಂಡು ಸುಲಭವಾಗಿ ವಂಚಿಸುತ್ತಾರೆ. ಇಂತಹ ಮೋಸಗಾರರಿಗೆ ತಂತ್ರಜ್ಞಾನ ಹಾಗೂ ಮಾತಿನಲ್ಲೇ ಮಂಕುಬೂದಿ ಎರಚುವ ಜಾಣೆಯೇ ಬಂಡವಾಳ, ಹಾಗಾಗಿ ಹೆಚ್ಚಿನ ಲಾಭ, ಆಸೆಗೆ ಮಾರು ಹೋಗದೆ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಬೇಕು. ವಿಶ್ವಾಸಾರ್ಹ ಬ್ಯಾಂಕ್, ಸೇವಾ ಕೇಂದ್ರ, ಸಂಸ್ಥೆಗಳಲ್ಲಿ ವ್ಯವಹಾರ ನಡೆಸುವುದು ಉತ್ತಮ

ಇತ್ತೀಚೆಗೆ ವಾಟ್ಸ್ ಆ್ಯಪ್ ಸಂದೇಶವನ್ನು ಓದಿದೆ. ಹೆಂಡತಿಯ ಮುಗ್ಧತನವೋ ಅಥವಾ ಜಾಣೆಯೋಒಟ್ಟಿನಲ್ಲಿ ಪತಿರಾಯನ ಹಣ ಉಳಿಸಿದ ಕೀರ್ತಿ ಹೆಂಡತಿಗೆ ಸಲ್ಲುತ್ತದೆ. ಒಬ್ಬ ಸರ್ಕಾರಿ ನೌಕರನಿಗೆ ವಯೋನಿವೃತ್ತಿಯಾಯಿತು. ಆಗ ದೊರೆತ 20 ಲಕ್ಷ ರೂ.ವನ್ನು ತನ್ನ ಮತ್ತು ಪತ್ನಿಯ ಜಾಯಿಂಟ್ ಅಕೌಂಟ್‌ನಲ್ಲಿ ಬ್ಯಾಂಕ್ ಸೇವಿಂಗ್ಸ್ ಎಂದು ಇಟ್ಟರು. ಖಾತೆಯ ವಿವರ ಹಾಗೂ ಎಟಿಎಂ ಪಿನ್ ಸಂಖ್ಯೆ ಎಲ್ಲವನ್ನೂ ಆಕೆಗೂ ತಿಳಿಸಿದರು.
ಒಂದು ದಿನ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಮೊಬೈಲ್‌ನ್ನು ಮನೆಯಲ್ಲೇ ಮರೆತು ಬಂದದ್ದು ನೆನಪಾಯಿತು. ಕೂಡಲೇ ಮನೆಗೆ ಬಂದರು. ಫೋನ್ ಸೋಫಾ ಮೇಲೆ ಬಿದ್ದಿದ್ದು ನೋಡಿ ಸ್ವಲ್ಪ ಸಮಾಧಾನ ಆಯಿತು. ಉಫ್ ಅಂತ ಸೋಫಾ ಮೇಲೆ ಕುಳಿತು ಪತ್ನಿಗೆ ಫೋನ್ ಏನಾದರೂ ಬಂದಿತ್ತೆ ಅಂತ ಕೇಳಿದರು. ‘ಹೌದ್ರಿ… ಬ್ಯಾಂಕಿನಿಂದ ಬಂದಿತ್ತು, ಜಾಯಿಂಟ್ ಅಕೌಂಟ್ ಮಾಹಿತಿ ಅಪ್‌ಡೇಟ್ ಮಾಡೋಕು, ಓಟಿಪಿ ಹೇಳಿ ಅಂತಂದ್ರು’,

ಗಾಬರಿಯಾಗಿ ‘ಒಟಿಪಿ ಕೋಟ್ಯಾ ಯಾವ ಒಟಿಪಿ ಕೊಟ್ಟೆ?’ ಅಂತ ಕೇಳಿದ್ರು.

ಆಗ ಪತ್ನಿ, ‘ಹೌದ್ರಿ, ಬ್ಯಾಂಕ್ ಮ್ಯಾನೇಜರ್ ಸ್ವತಃ ಫೋನ್ ಮಾಡಿದ್ರು ಅದಕ್ಕೆ ಕೊಟ್ಟೆ’ ಎಂದಾಗ, ಸಾಹೇಬರು ಕುಸಿದು ಹೋದ್ರು. ತಲೆ ತಿರುಗಿದಂತೆ ಆಯಿತು. ತಕ್ಷಣ ಮೊಬೈಲ್ ಫೋನ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ರು. ಅದರಲ್ಲಿದ್ದ 20 ಲಕ್ಷ ರೂ. ಬ್ಯಾಲೆನ್ಸ್ ಹಾಗೇ ಇತ್ತು. ಅಬ್ಬಾ ಬದುಕಿದೆ ಎಂದೆನಿಸಿತು.

ಹೆಂಡತಿ ಬಳಿ, ‘ಏನೇ, ಒಟಿಪಿ ಯಾವುದು ಕೊಟ್ಟೆ?’ ಎಂದಾಗ ಆಕೆ ಮುಗ್ಧತೆಯಿಂದ, ‘ಒಟಿಪಿ 4048 ಅಂತ ಬಂದಿತ್ತು. ನಮ್ಹು ಜಾಯಿಂಟ್ ಅಕೌಂಟ್ ಅಲ್ವಾ, ಅದಕ್ಕೆ ನಾನು ನನ್ನ ಪಾಲಿನ ಅರ್ಧ ಒಟಿಪಿ 2024 ಮಾತ್ರ ಕೊಟ್ಟೆ. ನಿಮ್ಮು ಕೊಡಲಿಲ್ಲ’ ಅಂದ್ಲು. ಸಾಹೇಬರಿಗೆ ಜೀವ ಬಂದಂತಾಯಿತು. ಸಮಾಧಾನಗೊಂಡು, ‘ನಿನ್ನ ಅರ್ಧ ಒಟಿಪಿ ಹೇಳಿದ್ದು ಒಳ್ಳದೇ ಆಯ್ತು ಕಣೆ. ಅದಕ್ಕೆನೇ ಅರ್ಧಾಂಗಿ ಅನ್ನೋದು’ ಎಂದರು ಸಾಹೇಬ್ರು.ಇಂತಹ ಕರೆಗಳು ಬಂದಾಗ ಪೂರ್ವಾಪರ ವಿಚಾರಿಸಿಕೊಳ್ಳಬೇಕು. ಜೊತೆಗೆ ಮನೆಯಲ್ಲಿ ಅಥವಾ ತಿಳಿದವರಲ್ಲಿ, ಸಂಬಂಧಪಟ್ಟವರಲ್ಲಿ ವಿಚಾರಿಸಿ ಮುಂದುವರಿಯುವುದು ಒಳ್ಳೆಯದು. ಈಗ ಹೇಗೆಲ್ಲ ಸಾಧ್ಯವೋ ಹಾಗೆಲ್ಲ ಮೋಸ, ವಂಚನೆ ಮಾಡಲು ಮೋಸಗಾರರು ಕಾಯುತ್ತಲೇ ಇರುತ್ತಾರೆ. ಹಿಂದೆಲ್ಲ ಮನೆಗೆ ನುಗ್ಗಿ ಹಣ ದೋಚಬಹುದು. ಅದಕ್ಕೆ ಬ್ಯಾಂಕಿನಲ್ಲಿ ಇಟ್ಟರೆ ಭದ್ರವಾಗಿ ಇರುತ್ತದೆ ಎಂಬ ನಂಬಿಕೆ ಇತ್ತು. ಆದರೆ ಈಗ ಬ್ಯಾಂಕಿನಲ್ಲಿ ಹಣ ಇರಿಸಿದರೂ ಕಳ್ಳರು ನಾನಾ ತಂತ್ರಗಳ ಮೂಲಕ ನಾವೇ ನಮ್ಮ ಕೈಯಾರೆ ಕಳ್ಳರಿಗೇ ಹಣ ನೀಡುವಂತೆ ಮೋಡಿ ಮಾಡುತ್ತಾರೆ.

ಮೋಸ ಹೋಗುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಬದುಕಿನಲ್ಲಿ ನಾವು ಅದೆಷ್ಟೋ ಸಲ ಮೋಸ ಹೋಗುತ್ತೇವೆ. ಹಣ, ಸಂಬಂಧ, ನೆಮ್ಮದಿ, ಬದುಕನ್ನು ಕಳೆದುಕೊಳ್ಳುತ್ತೇವೆ. ‘ನಂಬಿದವರಿಂದಲೇ ಮೋಸ ಹೋಗಿ ನನ್ನ ನಂಬಿಕೆ ಸುಳ್ಳಾಯಿತಲ್ಲ’ ಎಂದು ಕೊರಗುವುದೂ ಇದೆ. ನಂಬಿದವರು ಮೋಸ ಮಾಡುವುದನ್ನು ಅರಿಯುವುದು ಬಹಳ ಕಷ್ಟ. ಆದರೆ ಅಪರಿಚಿತರು ಮೋಸ ಮಾಡುವುದನ್ನು ತಿಳಿಯಲು ಕಷ್ಟವಾಗಲಾರದು. ಅದಕ್ಕಾಗಿ ಸಾಕಷ್ಟು ಎಚ್ಚರದಲ್ಲಿರಬೇಕು. ಯಾವುದೇ ವ್ಯವಹಾರ, ವ್ಯಾಪಾರ ಅಥವಾ ವಹಿವಾಟುಗಳಿರಲಿ ಎಚ್ಚರದಿಂದ ಮಾಡುವುದು ಒಳಿತು. ಹಣವೇ ಆಗಲಿ ಸಂಬಂಧವೇ ಆಗಲಿ ವ್ಯವಹಾರ ಮಾಡುವಾಗ ಎಚ್ಚರವಿರಲಿ.

ಹೆಚ್ಚಿಗೆ ಪಡೆಯದಿದ್ದರೂ ಪರವಾಗಿಲ್ಲ, ಮೋಡಿ ಮಾತಿಗೆ ಮರುಳಾಗಿ, ಅತಿ ಆಸೆ ಮಾಡಿ ಇದ್ದುದನ್ನೂ ಕಳೆದುಕೊಳ್ಳುವ ಸ್ಥಿತಿ ಬಾರದಿರಲಿ.

Leave a Comment