ಹೊರಬಾಂಧವ್ಯಕ್ಕೆ ಮನ ಹಾತೊರೆಯುವುದೇಕೆ?

ಹೊರಬಾಂಧವ್ಯಕ್ಕೆ ಮನ ಹಾತೊರೆಯುವುದೇಕೆ?


ನನ್ನಗಂಡಬೇರೊಬ್ಬಳೊಂದಿಗೆ ದೈಹಿಕ ಹಾಗೂ ಮಾನಸಿಕವಾಗಿ ಸಂಬಂಧ ಹೊಂದಿದ್ದಾನೆ ಎನ್ನುವ ಗುಮಾನಿ ಇದೆ. ಅದೂ ಗುಮಾನಿಯಷ್ಟೆ ಎಂದೂ ಮನಸ್ಸು ಸಮಾಧಾನಿಸಿಕೊಂಡರೂ, ದಿನೇ ದಿನೇ ನಡೆಯುತ್ತಿರುವ ಘಟನೆಗಳು ಈ ಗುಮಾನಿಯನ್ನು ಪುಷ್ಟಿಕರಿಸುತ್ತಿವೆ. ಹಾಗಾಗಿ ಬೇರೆ ದಾರಿಯಲ್ಲಿ ನಡೆಯುತ್ತಿರುವ ಗಂಡನನ್ನು ಸರಿ ದಾರಿಗೆ ತರುವುದು ಹೇಗೆ?. ನನ್ನ ಮತ್ತು ಅವನ ಸಂಬಂಧ ಚೆನ್ನಾಗಿಯೇ ಇದೆ. ಅವನ ಸಣ್ಣ ಕದಲಿಕೆಯೂ ಬಹುಬೇಗ ಅರ್ಥವಾಗುತ್ತದೆ. ಪತ್ನಿಯೊಂದಿಗೆ ಉತ್ತಮ ಸಂಬಂಧ ಇದ್ದರೂ ಬೇರೆ ಸಂಬಂಧ ಇಟ್ಟುಕೊಳ್ಳಬೇಕು ಎಂದು ಗಂಡಸರಿಗೆ ಯಾಕೆ ಅನಿಸುತ್ತದೆ? ಮತ್ತು ಇದಕ್ಕೆ ಪರಿಹಾರವೇನು?


ನಮ್ಮ ಸಮಾಜದಲ್ಲಿ ದಾಂಪತ್ಯಕ್ಕೆ ವಿಶೇಷವಾದ ಪ್ರಾಮುಖ್ಯ ಇದೆ. ಹಿಂದಿನ ಕಾಲದಿಂದಲೂ ಬಂದಿರುವಂತಹ ಜೀವನದ ನಾಲ್ಕು ಮಜಲುಗಳ ವ್ಯಾಖ್ಯಾನದಲ್ಲೂ ಗೃಹಸ್ಥಾಶ್ರಮಕ್ಕೆ ಹೆಚ್ಚಿನ ಮಹತ್ವ ಇದೆ. ಯಾಕೆಂದರೆ, ಈ ಹಂತದಲ್ಲಿ ವ್ಯಕ್ತಿ ತನ್ನ ಬಾಳಸಂಗಾತಿಯೊಂದಿಗೆ ತನ್ನ ಜೀವನವನ್ನು ಕಟ್ಟಿಕೊಳ್ಳುವ ಒಂದು ಹೊಸ ಆಯಾಮ ದೊರಕುತ್ತದೆ. ಅಲ್ಲಿಯವರೆಗಿನ ವಿದ್ಯಾರ್ಥಿ ದೆಸೆಯ ಜೀವನಕ್ಕಿಂತ ಇದು ಭಿನ್ನವಾಗಿರುತ್ತದೆ. ಕಾರಣವೇನೆಂದರೆ, ಇಲ್ಲಿ ಜವಾಬ್ದಾರಿಗಳು ಜಾಸ್ತಿ ಮತ್ತು ಧರ್ಮ (ಸರಿಯಾದ ಮಾರ್ಗ) ಮತ್ತು ಅರ್ಥವನ್ನು (ಆರ್ಥಿಕತೆ) ಸರಿದೂಗಿಸಿಕೊಂಡು ಹೋಗುವುದರ ಜೊತೆಗೆ, ಮನೋಕಾಮನೆಗಳನ್ನೂ ಪೂರೈಸಿಕೊಳ್ಳುವ ಸಂಕೀರ್ಣ ಸ್ಥಿತಿ ಇದಾಗಿರುತ್ತದೆ. ಮದುವೆಯಾಗುವಾಗ ‘ನೀ ನನಗಿದ್ದರೆ ನಾ ನಿನಗೆ’ ಎನ್ನುವ ಬದಲು ತಾವು ಜೊತೆಯಾಗಿಬಾಳನೌಕೆಯನ್ನು ಸಾಗಿಸೋಣ ಎನ್ನುವಂತಹ ಒಂದು ಪ್ರಮಾಣವನ್ನು ಸತಿ-ಪತಿಗಳು ತಮ್ಮೊಳಗೆ ಮಾಡಿಕೊಳ್ಳುತ್ತಾರೆ. ಮತ್ತು ಆ ಸಂಬಂಧಕ್ಕೆ ಇಬ್ಬರೂ ಬದ್ಧರಾಗಿರಬೇಕು ಎಂಬ ಅಪೇಕ್ಷೆಯನ್ನೂ ಇಟ್ಟುಕೊಳ್ಳುತ್ತಾರೆ.

ಅದು ಹಾಗೆಯೇ ಇದ್ದಾಗ ಜೀವನದಲ್ಲಿ ಬರುವಂತಹ ಎಂಥ ಕಷ್ಟಗಳೇ ಆದರೂ ಅವುಗಳನ್ನು ಎದುರಿಸುವ ಶಕ್ತಿ ಬರುತ್ತದೆ. ಮಾತ್ರವಲ್ಲ, ಅಲ್ಲಿ ನೈತಿಕ ಬಲ, ಸಾಮಾಜಿಕ ಬಲ ಮತ್ತು ಭಾವನಾತ್ಮಕ ಬಲ ಇವೆಲ್ಲವೂ ಇರುತ್ತವೆ. ಆದರೆ, ದುರದೃಷ್ಟವಶಾತ್ ಅನೇಕರು ದಾಂಪತ್ಯದ ಪತ್ಯದ ನಿಷ್ಠೆಯ ಬದಲು ದಾಂಪತ್ಯ ದ್ರೋಹವನ್ನು ಎದುರಿಸುತ್ತಾರೆ. ಇದು ಕೇವಲ ಗಂಡಸರು ತಮ್ಮ ಹೆಂಡತಿಯರಿಗೆ ಮೋಸ ಮಾಡುತ್ತಿರುವುದಷ್ಟೇ ಅಲ್ಲ, ಅನೇಕ ಹೆಂಡತಿಯರು ತಮ್ಮ ಗಂಡಂದಿರಿಗೆ ಮೋಸ ಮಾಡುತ್ತಿದ್ದಾರೆ. 2014ರ ಆಶ್ಲೇಮ್ಯಾಡಿಸನ್ ಸಮೀಕ್ಷೆಯ ಪ್ರಕಾರ ಶೇ 76ರಷ್ಟು ಹೆಂಗಸರು
ಮತ್ತು ಶೇ 61ರಷ್ಟು ಗಂಡಸರು ದಾಂಪತ್ಯ ದ್ರೋಹವನ್ನು ಅಥವಾ ಅನೈತಿಕ ಸಂಬಂಧವನ್ನು ಪುಷ್ಟಿಕರಿಸಿದ್ದಾರೆ. ಅಂದರೆ ಒಂದಲ್ಲಾ ಒಂದು ಸಂದರ್ಭದಲ್ಲಿ ಅವರುಗಳೂ ಅನೈತಿಕ ಸಂಬಂಧದಲ್ಲಿ ಭಾಗಿಯಾಗಿರಬಹುದು ಎಂಬುವುದನ್ನು ಊಹಿಸಬಹುದು. ಯಾಕೆ ಈ ದಿಕ್ಕಿನಲ್ಲಿ ಸಮಾಜ ಚಲಿಸುತ್ತಿದೆ ಎನ್ನುವುದಕ್ಕೆ ಜನರು ವಿವಿಧ ಕಾರಣಗಳನ್ನು ಕೊಡುತ್ತಾರೆ.

ಇದನ್ನೂ ಓದಿ:ಬಿಯರ್ ದರ ಏರಿಕೆಗೆ ಇಳಿದ ಕಿಕ್

ಅವುಗಳಲ್ಲಿ ಕೆಲವನ್ನು ಹೇಳುವುದಾದರೆ, ಸುಲಭವಾಗಿ ಲಭ್ಯವಿರುವ ಡೇಟಿಂಗ್ ಆ್ಯಪ್‌ಗಳು, ಜಾಗತಿಕ ಸಂಸ್ಕೃತಿಗೆ ನಮ್ಮನ್ನು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡಿರುವುದು, ವರ್ಕಿಂಗ್ ಸ್ಪೇಸ್ (ಉದ್ಯೋಗದ ಸಂಗಾತಿ) ಎಂಬಂತಹ ಪರಿಕಲ್ಪನೆಗಳು, ನಗರದಲ್ಲಿರುವಂತಹ ಅನಾಮಧೇಯತೆ ಮತ್ತು ಅದರಿಂದಾಗಿ ಬೆಳೆದಿರುವ ಗೌಪ್ಯತೆ ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ ಇಂದು ಅನೇಕರುಮದುವೆಯಾಚೆಗಿನ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಕೆಲವೊಂದು ಮಾನಸಿಕ ಸ್ಥಿತಿಗಳೂ ಕಾರಣಗಳಾಗಿರಬಹುದು. ಹೈಪರ್ ಸೆಕ್ಕುವಾಲಿಟಿ ಎನ್ನುವುದು ಬೇರೆ ಬೇರೆ ರೀತಿಯ ಮಾನಸಿಕ ಆರೋಗ್ಯದ ಸಮಸ್ಯೆಗಳಿಂದಾಗಿ ಬರಬಹುದು. ಉದಾಹರಣೆಗೆ, ಸೆಕ್ಕುವಲ್ ಅಡ್ಡಿಕ್ಸ್ (ಲೈಂಗಿಕತೆಯ ಚಟ), ಪ್ಯಾರಾಫಿಲಿಯ, ಫೆಟಿಷಿಸಂ ಅಥವಾ ಬೈಪೋಲಾರ್ ಡಿಸಾರ್ಡರ್ ಮುಂತಾದ ಸಮಸ್ಯೆಗಳ ಕಾರಣಗಳಿಂದಲೂ ಒಬ್ಬ ವ್ಯಕ್ತಿ ಮತ್ತೆ ಮತ್ತೆ ಲೈಂಗಿಕ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸುತ್ತಾನೆ ಅಥವಾ ವಹಿಸುತ್ತಾಳೆ. ಜೊತೆಗೆ ಇನ್ನೂ ಕೆಲವರಿಗೆ ಒಬ್ಬರೊಂದಿಗೇ ಲೈಂಗಿಕ ಸಂಪರ್ಕವನ್ನು ಹೊಂದಿರುವುದು ಬಂಧನದಂತೆ ಭಾಸವಾಗುತ್ತದೆ. ಮತ್ತು ಅವರಿಗೆ ಅನೇಕರೊಂದಿಗಿನ ಲೈಂಗಿಕ ಚಟುವಟಿಕೆಯೇ ಹೆಚ್ಚು ಖುಷಿ ಕೊಡುತ್ತದೆ.


ಅನೇಕ ಕಾರಣಗಳಿಂದಾಗಿ ವ್ಯಕ್ತಿಗಳು ಮದುವೆಯಾಚೆಗಿನ ಸಂಬಂಧದಲ್ಲಿ ತೊಡಗುತ್ತಾರೆ. ನಿಮ್ಮ ಗುಮಾನಿ ಏನಿದೆಯೋ ಅದಕ್ಕೇನಾದರೂ ಸಾಕ್ಷ್ಯ ಸಿಕ್ಕಲ್ಲಿ, ನಿಮಗೆ ಮಾತನಾಡುವುದಕ್ಕೆ ಸುಲಭ. ಇಲ್ಲದಿದ್ದರೆ, ನೀವು ಈ ವಿಚಾರವಾಗಿ ಮುಕ್ತವಾಗಿ ಮಾತನಾಡತೊಡಗಿದರೆ, ಎರಡು ಋಣಾತ್ಮಕ ಪ್ರತಿಫಲಗಳಾಗಬಹುದು. ಒಂದು ವೇಳೆ ಅವರು ಅಂತಹ ಯಾವುದೇ ಕೆಲಸ ಮಾಡದೇ ನೀವು ಸಂಶಯ ಪಟ್ಟದ್ದರಿಂದಾಗಿ ತಮ್ಮ ಅತ್ಮಾಭಿಮಾನಕ್ಕೆ ಧಕ್ಕೆ ಆಯಿತೆಂದು ವಿರಸ ಉಂಟಾಗಬಹುದು. ಅಥವಾ ಒಂದು ವೇಳೆ ಅವರು ತಪ್ಪಿತಸ್ಥರಾದರೆ, ಅದನ್ನು ಅಡಗಿಸುವ, ಅಥವಾ ನಿಮ್ಮ ಮೇಲೆಯೇ ತಪ್ಪಿನ ಗೂಬೆ ಕೂರಿಸುವ ಪ್ರಯತ್ನವನ್ನೂ ಮಾಡಬಹುದು. ಅವರು ಬಹಳ ಉತ್ತಮ ವ್ಯಕ್ತಿಯಾಗಿದ್ದು ನಿಮ್ಮ ತೊಳಲಾಟವನ್ನು ಅರ್ಥಮಾಡಿಕೊಳ್ಳುವವರಾದರೆ, ನಿಮ್ಮ ನಡುವೆ ಇರುವ ಈ ಗುಮಾನಿದೂರವಾಗಲೂಬಹುದು. ಹಾಗಾಗಿ ನೀವು ಜಾಗರೂಕರಾಗಿ ಮುಂದಿನ ಹೆಜ್ಜೆಯ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ನಿಮಗೆ ನೇರವಾಗಿ ಮಾತಾಡುವುದಕ್ಕೆ ಕಷ್ಟವಾದರೆ ಹಿರಿಯ ಸಹಾಯಪಡೆದುಕೊಳ್ಳಿ .ಇಲ್ಲದಿದ್ದರೆ ,ನಿಮ್ಮ ಹತ್ತಿರವಿರುವ ಕೌಟುಂಬಿಕ ಚಿಕಿತ್ಸೆಯನ್ನು ಮಾಡುವ ಸೈಕೋಥೆರಪಿಸ್ಟ್ ಭೇಟಿ ಮಾಡಿ. ಅವರಿಗೆ ಸುಧಾರಣೆ ಯಾಗುವ ಮನಸ್ಸಿದ್ದರೆ, ಸೈಕೋ ಥೆರಪಿಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು. ಮತ್ತು ಆ ಮೂಲಕ ಸಂಸಾರವನ್ನು ಇನ್ನೂಭದ್ರವಾಗಿಸಬಹುದು .ಆನಂದದ ಜೀವನವನ್ನು ನಡೆಸಬಹುದು.

Leave a Comment