ಹೋರಾಟದ ಶಿಶು ಜನಪದ ಗಾಯಕನಿಗೆ ಅಕ್ಕರೆಯ ಅಭಿನಂದನೆ ಪಿಚ್ಚಳ್ಳಿ ಗೆ ಜನ ಪ್ರೀತಿಯೇ ಅಮೂಲ್ಯ ಪ್ರಶಸ್ತಿ- ಉಮಾಶ್ರೀ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಗೆ ಹೋರಾಟದ ಹಾಡುಗಾರರ ಬಳಗವು ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ಕ್ಷೇತ್ರದ ಜನರ ಜೊತೆಗೆ ನಮಗಾಗಿ ಅವರು, ಅವರಿಗಾಗಿ ನಾವು ಎಂಬಂತೆ ಬೆಸೆದುಕೊಂಡಿರುವ ಪಿಚ್ಚಳ್ಳಿ ಶ್ರೀನಿವಾಸ್ ರಿಗೆ ರಾಜ್ಯೋತ್ಸವ, ಅಕಾಡೆಮಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರಕಿದ್ದರೂ ಜನರ ಪ್ರೀತಿಯ ಪ್ರಶಸ್ತಿಯೇ ದೊಡ್ಡದು ಎಂಬುದು ತಮ್ಮ ಭಾವನೆ ಎಂದರು.
ಜನಪದ ಅಭಿಲಾಷೆಯೊಂದಿಗೆ ನಟನಾಗಲು ಬಂದು ರಂಗ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೂಡಗಿಸಿ ಹೆಸರು ಮಾಡಿರುವ ಪಿಚ್ಚಳ್ಳಿ ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯ ಜೊತೆಗೆ ಉಳ್ಳವರು ಮುಂದೆ ಇಲ್ಲದವರು ಸೆಟೆದು ನಿಂತು ಸಮನಾಗಿ ಬದುಕು ಸಾಗಿಸಬೇಕೆಂದು ಹೋರಾಟ ಧ್ಯೇಯವನ್ನು ಹೊಂದಿರುವ ಕಾಲವಿದ ಎಂದು ಬಣ್ಣಿಸಿದರು.
ನೇರವಾದ ನುಡಿ, ಜನಪರ ಚಿಂತನೆ , ಹೋರಾಟ ಅವರನ್ನು ಎಲ್ಲರೂ ಪ್ರೀತಿಸುವಂತೆ ಮಾಡಿದೆ, ಅವರನ್ನು ರಾಜ್ಯೋತ್ಸವ ಪ್ರಶಸ್ತಿ ಸಿಕ್ಕರುವ ಸಂದರ್ಭದಲ್ಲಿ ನಾವೆಲ್ಲರೂ ಹರಸಲು ಬಂದಿಲ್ಲ, ಸಂಭ್ರಮಿಸಲು ಬಂದಿದ್ದೇವೆ ಎಂದು ವಿವರಿಸಿದರು.
ಇದನ್ನೂ ಓದಿ:- ಮಾಜಿ ಪ್ರಧಾನಿ ನಿಧಾನಕ್ಕೆ ದೇಶಾದ್ಯಂತ ಶೋಕಾಚರಣೆ! ಮನಮೋಹನ್ ಸಿಂಗ್ ಇನ್ನಿಲ್ಲ
ಅಧ್ಯಕ್ಷತೆ ವಹಿಸಿದ ಸಾಹಿತಿ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಪಿಚ್ಚಳ್ಳಿ ಶ್ರೀನಿವಾಸ್ ಹೋರಾಟದ ಹಾಡುಗಾರನಾಗಿ ಬಂದು ಸಮುದಾಯದ ಮೂಲಕ ಗಾಯಕರಾಗಿ ರೂಪಗೊಂಡು, ರಂಗಾಯಣದ ನಂಟಿನಿಂದ ರಂಗಕರ್ಮಿಯಾಗಿ ಸಾಗಿ ಬಂದಿದ್ದಾರೆ, ಮೈಕಲ್ ಜಾಕ್ಸನ್ ರಂತೆ ವಿಶ್ವದ ಸಾಂಸ್ಕೃತಿಕ ಲೋಕದಲ್ಲಿ ಮೇರು ಶಿಖರವಾಗಿ ಪಿಚ್ಚಳ್ಳಿ ಶ್ರೀನಿವಾಸ ರನ್ನು ನಾವು ಕಾಣಬೇಕಾಗಿದೆ, ಈ ಕುರಿತು ಅವರು ಆತ್ಮಾವ ಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
ನಟ ಮಂಡ್ಯ ರಮೇಶ್ ಮಾತನಾಡಿ, ಕೋಲಾರ ಜಿಲ್ಲೆಯ ಕುಗ್ರಾಮ ಪಿಚ್ಚಳ್ಳಿಯಿಂದ ದಲಿತ ಹೋರಾಟದ ಹಿನ್ನೆಲೆಯಿಂದ ರಂಗ ಯಾಣಕ್ಕೆ ನೂರಾರು ಅಭ್ಯರ್ಥಿಗಳ ನಡುವೆ ಆಯ್ಕೆಗೊಂಡು ಬಿ.ವಿ. ಕಾರಂತರ ಗರಡಿಯಲ್ಲಿ ಪಳಗಿ ಯಶಸ್ಸಿನ ಮೆಟ್ಟಲುಗಳನ್ನು ಏರುತ್ತಿರುವ ಪಿಚ್ಚಳ್ಳಿ ಶ್ರೀನಿವಾಸ್ ತಮ್ಮ ಅಪ್ತರಂಗ ಕರ್ಮಿ ಸ್ನೇಹಿತ ಎಂದು ವಿವರಿಸಿದರು.
ಸಾರಂಗರಂಗ ಅಧ್ಯಕ್ಷ ಮಾಲೂರು ಲಕ್ಷ್ಮಿ ನಾರಾಯಣ ಮಾತನಾಡಿ, ಪಿಚ್ಚಳ್ಳಿ ಶ್ರೀನಿವಾಸ್ ಕೋಲಾರ ಜಿಲ್ಲೆಯಿಂದ ಹೊರಹೊಮ್ಮಿ ಕಲೆ ಗಾಯನ ಮತ್ತು ಸಾಂಸ್ಕೃತಿಯ ಲೋಕದಲ್ಲಿ ಮಿಂಚುತ್ತಿರುವ ಆತ್ಮೀಯ ಗೆಳೆಯನೆಂದರು.
ಕರ್ನಾಟಕದ ದಲಿತ ಕ್ರಿಯ ಸಮಿತಿ ಸಂಚಾಲಕ ಎಂ. ಚಂದ್ರಶೇಖರ್ ಮಾತನಾಡಿ, ಪಿಚ್ಚಳ್ಳಿ ಹಾಗೂ ತಾವು ಹೇಗೆ ಬಾಲ್ಯದಿಂದಲೂ ಹೋರಾಟದ ಮೂಲಕ ಒಂದಾಗಿರುವ ಸಂಗತಿಗಳನ್ನು ನೆನಪಿಸಿಕೊಂಡರು.
ನಾಟಕರಾದ ಕುಪ್ಪಣ್ಣ ಮಾತನಾಡಿ ಪಿಚ್ಚಳ್ಳಿ ಶ್ರೀನಿವಾಸ್ ರಿಗೆ ಕೇವಲ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೌರವ ಸಿಗಬೇಕಿದೆ ಎಂದು ಆಶಿಸಿದರು.
ಕಾರ್ಯಕ್ರಮದ ಭಾಗವಾಗಿ ಬಹುಮುಖ ಪ್ರತಿಭೆಯ ಪಿಚ್ಚಳ್ಳಿ, ದೇಸಿ ಗಾಯನ ಸತ್ವದ ವಿವಿಧ ಆಯಾಮಗಳು ಮತ್ತು ಪಿಚ್ಚಳ್ಳಿ, ದಲಿತ ದಳ ಮಂಡಳಿ ಹೋರಾಟದ ಹಾಡುಗಳು ಹಾಗೂ ಪಿಚ್ಚಳ್ಳಿ, ರಂಗಭೂಮಿ ಸಂಘಟಕ ಹಾಗೂ ನಟ ನಿರ್ದೇಶಕ ಪಿಚ್ಚಳ್ಳಿ ವಿಷಯಗಳ ಕುರಿತು ಕಾರ್ಯಗಾರ ಜರುಗಿತು. ಪಿಚ್ಚಳ್ಳಿ ಜೊತೆ ಸಂವಾದ ಕಾರ್ಯಕ್ರಮವು ಜರುಗಿತು. ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ .ಪ್ರಭಾಕರ ಇತರರು ಉಪಸ್ಥಿತರಿದ್ದರು.
ಪಿಚ್ಚಳ್ಳಿ ಶ್ರೀನಿವಾಸ್ ಸಂಗ್ರಹಿಸಿರುವ ಹೋರಾಟದ ಹಾಡುಗಳ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇಂದೂಧರ ಹೊನ್ನಾಪುರ,ಎನ್. ಮುನಿಸ್ವಾಮಿ ಸಿ.ಎಂ. ಮುನಿಯಪ್ಪ ಮುಂತಾದವರಿದ್ದರು.