ಬೇಜವಾಬ್ದಾರಿ ಧೋರಣೆ ಸಲ್ಲ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿವಾದಗಳ ಸರಣಿ ಮುಂದುವರಿದಿದೆ. ಆಯೋಗ ನಡೆಸುವ ಕೆಎಎಸ್ ಪರೀಕ್ಷೆಯು ಈ ಹಿಂದೆ ಪ್ರಶ್ನೆಪತ್ರಿಕೆಗಳ ಭಾಷಾಂತರದಲ್ಲಿ ಆದ ಗೊಂದಲಗಳಿಂದಾಗಿ ಮುಂದೂಡಿಕೆಯಾಗಿತ್ತು. ಭಾನುವಾರ ನಡೆದ ಅದರ ಮರುಪರೀಕ್ಷೆಯಲ್ಲಿಯೂ ಅದೇ ತಪ್ಪು ಮರುಕಳಿಸಿರುವುದು ಬೇಜವಾಬ್ದಾರಿತನಕ್ಕೆ ಸಾಕ್ಷಿ. ಅನುವಾದದಲ್ಲಿ ಹಲವು ತಪ್ಪುಗಳಾಗಿರುವುದಲ್ಲದೆ, ಕೆಲವು ವಾಕ್ಯಗಳಂತೂ ಗೊಂದಲಮಯವಾಗಿದ್ದವು. ಪ್ರಶ್ನೆಪತ್ರಿಕೆಯೇ ಇಷ್ಟು ದೋಷಪೂರ್ಣವಾಗಿದ್ದರೆ ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸುವುದು ಹೇಗೆ? ಪ್ರತಿ ಬಾರಿಯೂ ತಮ್ಮದಲ್ಲದ ತಪ್ಪಿಗೆ ಅಭ್ಯರ್ಥಿಗಳು ಶಿಕ್ಷೆ ಅನುಭವಿಸುವಂತಾಗಿರುವುದು ವ್ಯವಸ್ಥೆಯ ಘೋರ ವೈಫಲ್ಯಕ್ಕೆ ನಿದರ್ಶನ. ಹಳೆಯ ತಪ್ಪುಗಳು ಪುನರಾವರ್ತನೆ ಆಗಬಾರದೆಂದೇ ನಡೆಸಿದ ಮರುಪರೀಕ್ಷೆಯಲ್ಲಿ ಇಷ್ಟೊಂದು ಅಧ್ವಾನಗಳು ಕಂಡುಬಂದಿರುವುದು ನಿಜಕ್ಕೂ ದುರದೃಷ್ಟಕರ. ಹಾಗಾಗಿ, ಅಭ್ಯರ್ಥಿಗಳಲ್ಲಿನ ಆಕ್ರೋಶ, ವಿರೋಧ ಸಹಜವಾದದ್ದೇ.
ಅದಲ್ಲದೆ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ನೋಂದಣಿ ಮತ್ತು ಒಎಂಆರ್ ಶೀಟ್ ಸಂಖ್ಯೆಗಳು ಅದಲುಬದಲಾದ ಘಟನೆಯೂ ನಡೆದಿದೆ. ಅಭ್ಯರ್ಥಿಗಳು ಪ್ರತಿಭಟನೆಯನ್ನೂ ನಡೆಸಿದ್ದಾರೆ. ವಿಜಯಪುರದ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಪೂರೈಸಿದ ಒಎಂಆರ್ ಹಾಗೂ ಪ್ರವೇಶಪತ್ರದಲ್ಲಿನ ನೋಂದಣಿ ಸಂಖ್ಯೆ ಅದಲು ಬದಲಾಗಿದ್ದಲ್ಲದೆ, ಪ್ರಶ್ನೆಪತ್ರಿಕೆ ಸರಣಿಯಲ್ಲಿಯೂ ವ್ಯತ್ಯಾಸ ಕಂಡುಬಂತು. ಕೋಲಾರದ ಸರ್ಕಾರಿ ಬಾಲಕರ ಕಾಲೇಜು ಮತ್ತು ಮಹಿಳಾ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರದ ಸಂಖ್ಯೆಗೂ ಒಎಂಆರ್ ಏರ್ಪಟ್ಟಿತ್ತು. ‘ನಮಗೆ ಅನ್ಯಾಯವಾಗಿದೆ. ಸಂಖ್ಯೆಗೂ ತಾಳೆಯಾಗದೆ ಗೊಂದಲ ಮತ್ತೊಮ್ಮೆ ಪರೀಕ್ಷೆ ನಡೆಸಿ’ ಎಂದು ಅಭ್ಯರ್ಥಿಗಳು ಆಗ್ರಹಿಸಿದ ಬೆಳವಣಿಗೆಯೂ ಘಟಿಸಿತು. ‘ಭಾಷಾಂತರಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ಹೇಳಿರುವುದು ಹೌದಾದರೂ, ಪ್ರಶ್ನೆಪತ್ರಿಕೆ ರೂಪಿಸುವಾಗಲೇ ಜಾಗ್ರತೆ ವಹಿಸಿ ಗುಣಮಟ್ಟದ ಭಾಷಾಂತರಕ್ಕೆ ಆದ್ಯತೆ ನೀಡಿದ್ದರೆ ಈ ಬಗೆಯ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ.
ಇದನ್ನೂ ಓದಿ: ಏಳು ರಾಜ್ಯಗಳಲ್ಲಿ ಉಪಕ್ರಮ | ರಾಜ್ಯದ 26 ಜಿಲ್ಲೆಗಳು ಆಯ್ಕೆ
ಉದ್ಯೋಗ ಗಿಟ್ಟಿಸಿ, ಉತ್ತಮ ಬದುಕು ರೂಪಿಸಿಕೊಳ್ಳುವ ಆಶಯದಲ್ಲಿ ಸಾವಿರಾರು ಅಭ್ಯರ್ಥಿಗಳು ಹಗಲು-ರಾತ್ರಿ ಕಷ್ಟಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಾರೆ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಯಲ್ಲಿ ನಕಲು, ನಕಲಿ ಪ್ರವೇಶಪತ್ರ, ತಪ್ಪು ಪ್ರಶ್ನೆಪತ್ರಿಕೆ ಹೀಗೆ ಹಲವು ಅಪಸವ್ಯಗಳಿಂದ ಪರೀಕ್ಷಾ ವ್ಯವಸ್ಥೆಯೇ ಇತ್ತೀಚಿನ ದಿನಗಳಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಯುವಕರ ಅಶೋತ್ತರಗಳನ್ನು ಈಡೇರಿಸಲು, ಅವರ ಕನಸುಗಳನ್ನು ನನಸಾಗಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದು ಬಹುತೇಕ ರಾಜಕೀಯ ಪಕ್ಷಗಳು ಹೇಳುತ್ತವೆ. ಆದರೆ, ಬರೀ ಆಶ್ವಾಸನೆ ನೀಡುವ ಬದಲು ವ್ಯವಸ್ಥಿತ ಹಾಗೂ ಪಾರದರ್ಶಕ ಪರೀಕ್ಷಾ ವ್ಯವಸ್ಥೆ ರೂಪಿಸಲು ಸರ್ಕಾರ ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕು. ವಿರೋಧ ಪಕ್ಷಗಳು ಉದ್ಯೋಗಾಕಾಂಕ್ಷಿಗಳ, ಇತರ ಅಭ್ಯರ್ಥಿಗಳ ನೋವನ್ನು ಆಲಿಸಿ, ಅದಕ್ಕೆ ಸ್ಪಂದಿಸಬೇಕು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸುವ, ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಅಡಗಿರುವ ಇಂತಹ ಪರೀಕ್ಷೆಗಳಲ್ಲಿ ಈ ರೀತಿಯ ಬೇಜವಾಬ್ದಾರಿತನ ಸಲ್ಲದು. ತಪ್ಪುಗಳು ಪದೇಪದೆ ಮರುಕಳಿಸದಂತೆ ಕೆಪಿಎಸ್‌ಸಿ ಎಚ್ಚರ ವಹಿಸಬೇಕು. ಮುಂದಿನ ದಿನಗಳಲ್ಲಿ ಮತ್ತೆ ಇಂಥ ಅಪಸವ್ಯ ಕಾಣಿಸಿಕೊಳ್ಳದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.