ಕಾಲು ಶತಮಾನದ ಕತೆ, ವ್ಯಥೆ…
ನಿನ್ನೆ ಸೂರ್ಯಾಸ್ತವಾಗುವುದರೊಂದಿಗೆ ಅಂತ್ಯವಾಗಿದ್ದು ಇಸವಿ 2024 ಮಾತ್ರವಲ್ಲ, 21ನೇ ಶತಮಾನದ ಕಾಲುಭಾಗವೂ ಹೌದು. ಕಾಲಕ್ಕೆ ಅದರದ್ದೇ ಆದ ಅರ್ಥ ಇರುವುದಿಲ್ಲ. ಆಯಾ ಕಾಲದಲ್ಲಿ ಆಯಾ ದೇಶದಲ್ಲಿ ನಡೆಯುವ ಮಾನವ ಚಟುವಟಿಕೆಗಳು ಕಾಲಕ್ಕೊಂದು ಅರ್ಥ ನೀಡುತ್ತವೆ. ಈ ಅರ್ಥದಲ್ಲಿ, ಕಳೆದ ಕಾಲು ಶತಮಾನವನ್ನು ಭಾರತದ ಮಟ್ಟಿಗೆ ಹೇಗೆ ಅರ್ಥೈಸಿ ಕೊಳ್ಳುವುದು?
ಈ ಶತಮಾನದ ಮೊದಲ ಇಪ್ಪತ್ತೈದು ವರ್ಷಗಳನ್ನು (2000- 2024) ಅರ್ಥೈಸಿಕೊಳ್ಳಲು ಈ ಅವಧಿಯನ್ನು ಹಿಂದಿನ ಶತಮಾನದ ಕೊನೆಯ ಇಪ್ಪತ್ತೈದು ವರ್ಷಗಳ (1975- 1999) ಜತೆಗೆ ಹೋಲಿಸಿ ನೋಡಬೇಕಾಗುತ್ತದೆ. ಇದು ಕಾಲವನ್ನು ಅರ್ಥೈಸಿಕೊಳ್ಳಲು ಸಮಾಜವಿಜ್ಞಾನ ಬಳಸಿಕೊಳ್ಳುವ ಒಂದು ವಿಧಾನವೂ ಹೌದು. ಹಿಂದಿನ ಶತಮಾನದ ಕೊನೆಯ ಇಪ್ಪತ್ತೈದು ವರ್ಷಗಳು ಮೇಲ್ನೋಟಕ್ಕೆ ಮಹಾನ್ ಕ್ಷೋಭೆಯ ಕಾಲ, ಭಾರತವು ರಾಜಕೀಯವಾಗಿ ಅಸ್ಥಿರಗೊಂಡು ಕುಸಿದ ಕಾಲ. ಆದರೆ, ಆ ಅವಧಿಯ ಬೆಳವಣಿಗೆಗಳು ಭಾರತದಲ್ಲಿ ಸಂವಿಧಾನ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದವು ಎಂಬುದೂ ನಿಜ. ನಿನ್ನೆಗೆ ಮುಗಿದುಹೋದ ಈ ಶತಮಾನದ ಮೊದಲ ಕಾಲುಭಾಗ ಮೇಲ್ನೋಟಕ್ಕೆ ಮಹಾನ್ ರಾಜಕೀಯ ಸ್ಥಿರತೆಯ ಕಾಲ, ಭಾರತ ಮೈಕೊಡವಿ ಮೇಲೆದ್ದ ಕಾಲ ಎನ್ನುವ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ವಾಸ್ತವ ದಲ್ಲಿ ಈ ಅವಧಿ ಭಾರತ ಪ್ರಜಾತಾಂತ್ರಿಕವಾಗಿ ಕುಸಿದ ಕಾಲ. ಅದರ ಪರಿಣಾಮಗಳನ್ನು ಗ್ರಹಿಸಿ ಅದಕ್ಕೊಂದು ಪ್ರತಿರೋಧವನ್ನು ರೂಪಿಸಲಾರದಷ್ಟು ಸೊರಗಿಹೋದ ಕಾಲ.
ಹೋದ ಶತಮಾನದ ಕೊನೆಯ ಇಪ್ಪತ್ತೈದು ವರ್ಷ ಗಳ ಆರಂಭದ ವರ್ಷವನ್ನು (1975) ದೇಶನೆನಪಿಸಿಕೊಳ್ಳು ವುದು ತುರ್ತುಪರಿಸ್ಥಿತಿ ಹೇರಿಕೆಯಾದ ವರ್ಷ ಎಂದು. ಹಾಗೆ ನೋಡಿದರೆ ಅದು ಆ ಅವಧಿಯ ನಿರ್ಣಾಯಕ ಬೆಳವಣಿಗೆಯೇನಲ್ಲ. ಅದರಾಚೆಗೂ ಅದೊಂದು ಮಹಾನ್ ರಾಜಕೀಯ ಅಸ್ಥಿರತೆಯ ಕಾಲವಾಗಿತ್ತು. ಆ ಅವಧಿಯಲ್ಲಿ ದೇಶ ಎಂಟು ಚುನಾವಣೆಗಳನ್ನು, ಒಂಬತ್ತು ಮಂದಿ ಪ್ರಧಾನಿಗಳನ್ನು ಕಂಡಿತು. ಪ್ರತ್ಯೇಕತಾ ವಾದ ಇನ್ನಿಲ್ಲದ ಸವಾಲೊಡ್ಡಿದ ಕಾಲವದು. ಇಂದಿರಾ ಗಾಂಧಿಯವರ ಹತ್ಯೆ, ಸಿಖ್ ವಿರೋಧಿ ದಂಗೆ, ರಾಜೀವ್ ಗಾಂಧಿಯವರ ಹತ್ಯೆ, ಕಾರ್ಗಿಲ್ ಯುದ್ಧ ಹೀಗೆ ಹಿಂಸಾತ್ಮಕ ಪ್ರಕರಣಗಳ ಸರಮಾಲೆ. ಮಂಡಲ್ ವರದಿ ಜಾರಿಯಿಂದ ವಿವಿಧ ಜಾತಿಗಳ ನಡುವಣ ಸಮತೋಲನ ಅಸ್ತವ್ಯಸ್ತ ವಾದರೆ, ಬಾಬರಿ ಮಸೀದಿ ಧ್ವಂಸವಾದ ಕಾರಣಕ್ಕೆ ಅಂತರ್ಧಮೀ್ರಯ ಸಂಬಂಧಗಳು ಕುಸಿದುಬಿದ್ದವು. ಮತ್ತೆ ಮತ್ತೆ ಚುನಾವಣೆಗಳು ನಡೆದದ್ದು ಒಂದೆಡೆಯಾದರೆ, ಎರಡು ಚುನಾವಣೆಗಳು ನಡುವೆ ರಾಜಕೀಯ ಸ್ಥಿರತೆ, ಸಾಮಾಜಿಕ ನೆಮ್ಮದಿ ಮರೀಚಿಕೆಯಾಗಿದ್ದು ಇನ್ನೊಂದೆಡೆ.
ಇದನ್ನೂ ಓದಿ: ಹೊಸ ವರ್ಷವೆಂದರೆ ಹೊಸ ಭರವಸೆ ಒಂದಿಷ್ಟು ಮೆಲುಕು, ಕೆಲವು ಮುನ್ನೋಟ
ಆದರೆ ಅದೇ ಇಪ್ಪತ್ತೈದು ವರ್ಷಗಳಲ್ಲಿ ಈ ದೇಶ ದಲ್ಲಿ ಸಾಂವಿಧಾನಿಕ ಸಂವೇದನೆಯೊಂದು ಜೀವಂತ ವಾಗಿದೆ ಎನ್ನುವುದೂ ಸಾಬೀತಾಗಿತ್ತು. ತುರ್ತುಪರಿಸ್ಥಿತಿಯ ಹೇರಿಕೆಯಾಗಿದ್ದೇ ದೇಶದಲ್ಲಿ ತಲೆಯೆತ್ತುತ್ತಿದ್ದ ಸರ್ವಾಧಿ ಕಾರಿ ಧೋರಣೆ ವಿರೋಧಿಸಿ ಜಯಪ್ರಕಾಶ ನಾರಾಯಣ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಂಪೂರ್ಣಕ್ರಾಂತಿ ಆಂದೋಲನವನ್ನು ಹತ್ತಿಕ್ಕುವುದಕ್ಕಾಗಿ. ತುರ್ತುಪರಿಸ್ಥಿತಿ ಆ ಸಾಂವಿಧಾನಿಕ ಸಂವೇದನೆಯ ಪ್ರಕಟಣೆಯನ್ನು ತಾತ್ಕಾಲಿಕವಾಗಿ ಅದುಮಿ ಹಿಡಿಯಿತಾದರೂ 1977ರ ಚುನಾವಣೆಯ ಫಲಿತಾಂಶದಲ್ಲಿ ದೇಶದ ಬಹುತೇಕ ಜನ ಸಂವಿಧಾನದ ದುರ್ಬಳಕೆಯನ್ನು ತಾತ್ಕಾಲಿಕವಾಗಿಯೂ ಸಹಿಸುವುದಿಲ್ಲ ಎಂಬ ಸಂದೇಶವಿತ್ತು. ಎಲ್ಲಕ್ಕಿಂತ ಮಿಗಿಲಾಗಿ ತುರ್ತುಪರಿಸ್ಥಿತಿಯ ನಂತರ ತುರ್ತುಪರಿಸ್ಥಿತಿ ಯನ್ನು ಮತ್ತೊಮ್ಮೆ ಸುಲಭದಲ್ಲಿ ಹೇರದಂತೆ ಸಂವಿಧಾನಕ್ಕೆ ತಿದ್ದುಪಡಿಯಾಯಿತು. ಹಾಗಾಗಿ, ವಿಪರ್ಯಾಸ ಎನಿಸಿ ದರೂ ಸತ್ಯವೇನೆಂದರೆ, ತುರ್ತುಪರಿಸ್ಥಿತಿಯಿಂದಾಗಿ ಸಂವಿಧಾನ ಇನ್ನಷ್ಟು ಗಟ್ಟಿಯಾಯಿತು.
ಮಂಡಲ್ ವರದಿ ಜಾರಿ ನಂತರದ ರಾಜಕೀಯ ದಿಂದಾಗಿ ಅಂಚಿನ ಸಮುದಾಯಗಳತ್ತ ರಾಜಕೀಯ ಅಧಿಕಾರ ಪ್ರವಹಿಸಿದ್ದು, ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯಿಂದಾಗಿ ಅಧಿಕಾರವು ಸ್ಥಳೀಯ ರಾಜಕೀಯ ಕಾರ್ಯಕರ್ತರತ್ತ ಹರಿದದ್ದು ಕೂಡ ಈ ಅವಧಿಯಲ್ಲೇ. ಅಲ್ಲಿಯವರೆಗೂ ಅಧಿಕಾರವು ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರ ಕೈಯಲ್ಲೇ ಉಳಿದಿತ್ತು. ಒಂದು ಮಟ್ಟಿಗಾದರೂ ಪ್ರಜಾತಂತ್ರ ಅಳವಾಯಿತು, ವಿಸ್ತರಣೆ ಗೊಂಡಿತು. ಒಟ್ಟಿನಲ್ಲಿ, ಆ ಕಾಲ ಯಾವ ನಾಯಕರ ಅತಿರೇಕವನ್ನೂ ಸಹಿಸಲಿಲ್ಲ. ಪ್ರಜಾತಂತ್ರದ ಯಾವ ಅಂಗವೂ ದಾರಿತಪ್ಪಲು ಬಿಡಲಿಲ್ಲ.
ನಿನ್ನೆ ಕೊನೆಗೊಂಡ ಈ ಶತಮಾನದ ಮೊದಲ ಇಪ್ಪತ್ತೈದು ವರ್ಷಗಳು ಇದಕ್ಕೆ ವ್ಯತಿರಿಕ್ತ. ಮೇಲ್ನೋಟಕ್ಕೆ ಈ ಅವಧಿ ಭಾರಿ ರಾಜಕೀಯ ಸ್ಥಿರತೆಯ ಅವಧಿ, ದೊಡ್ಡ ಮಟ್ಟದ ದೇಶವ್ಯಾಪಿ ಕ್ಷೋಭೆಗಳಿಂದ ಮುಕ್ತವಾದ ಅವಧಿ. ಬಲಿಷ್ಠ ನಾಯಕ, ಬಲಿಷ್ಠ ಸರ್ಕಾರಗಳ ಅವಧಿ. ಮನಸ್ಸು ಮಾಡಿದ್ದರೆ ಪ್ರಜಾತಂತ್ರವನ್ನು ಇನ್ನಷ್ಟು ಎತ್ತರಕ್ಕೆ ಏರಿಸ ಬಹುದಾಗಿದ್ದ ಅವಧಿ. ಕಾಲಕ್ರಮದಂತೆ ನಡೆದದ್ದು ಐದು ಚುನಾವಣೆಗಳು ಮಾತ್ರ. ನಾಲ್ಕು ವರ್ಷಗಳ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಅವಧಿಯನ್ನು ಬಿಟ್ಟರೆ, ಇದು ಇಬ್ಬರೇ ಪ್ರಧಾನಮಂತ್ರಿಗಳನ್ನು- ಮನಮೋಹನ ಸಿಂಗ್ ಮತ್ತು ನರೇಂದ್ರ ಮೋದಿ- ಕಂಡ ಕಾಲ. ಯುದ್ಧವಿಲ್ಲದ ಕಾಲ, ಪ್ರತ್ಯೇಕತಾವಾದ ದೊಡ್ಡ ಮಟ್ಟದಲ್ಲಿ ತಲೆಯೆತ್ತದ ಕಾಲ, ರಾಜಕೀಯ ಹತ್ಯೆಗಳನ್ನು ಕಾಣದ ಕಾಲ, ಜನರ ಅರ್ಥಿಕ ಸಂಕಷ್ಟಗಳೇನೇ ಇರಲಿ ದೇಶ ಅರ್ಥಿಕವಾಗಿ ಬಿಕ್ಕಟ್ಟನ್ನು ಎದುರಿಸದ ಕಾಲ. ಇಡೀ ಜಗತ್ತಿಗೆ ಎರಗಿದ ಕೋವಿಡ್ ಸಾಂಕ್ರಾಮಿಕವೊಂದನ್ನು ಬಿಟ್ಟರೆ ಬಿಕ್ಕಟ್ಟು ಎನ್ನುವಂತಹದ್ದೇನೂ ಇಲ್ಲದೇಹೋದ ಕಾಲ. ಹೀಗೆ ಎಲ್ಲವೂ ಸರಿ ಇದ್ದ ಕಾಲದಲ್ಲೇ ದೇಶವು ಸಂವಿಧಾನ ತೋರಿದ ಮಾರ್ಗದಿಂದ ದೂರ ಸರಿಯ ಲಾರಂಭಿಸಿದ್ದು ಮತ್ತು ದೂರ ಸರಿಯುತ್ತಲೇ ಇರುವುದು ಕಾಲದ ವಿಪರ್ಯಾಸ.
ಹೀಗೆಲ್ಲಾ ಆಗತೊಡಗಿದ್ದು 2014ರಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದ ನಂತರ ಅಂತ ಅನ್ನಿಸಬಹುದು. ಆದರೆ, ಈ ವಿಮುಖತೆಗೆ ಅದಕ್ಕಿಂತ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕೆಲ ನಿಷ್ಕ್ರಿಯ ನಿಲುವುಗಳೂ ಕಾರಣವಾಗಿವೆ. ಶತಮಾನದ ಆದಿಯಲ್ಲಿ ಗುಜರಾತ್‌ನಲ್ಲಿ ನಡೆದ ನರಮೇಧ, ಆನಂತರ ಅದರ ಸುತ್ತ ಹುಟ್ಟಿಕೊಂಡ ಹಿಂದೂ ಮತಗಳ ಧ್ರುವೀಕರಣ ದಂತಹವೆಲ್ಲ ನಡೆಯುತ್ತಿದ್ದಾಗ ಯುಪಿಎ ಸರ್ಕಾರವು ಕಣ್ಣುಮುಚ್ಚಿ ಕುಳಿತಿತ್ತು. ದೇಶದಲ್ಲಿ ಸಂವಿಧಾನ ವಿರೋಧಿ ರಾಜಕೀಯವೊಂದು ಹಿಂದುತ್ವದ ಹೆಸರಿನಲ್ಲಿ ರೂಪು ಗೊಳ್ಳುತ್ತಿರುವುದರತ್ತ ನಿರ್ಲಕ್ಷ್ಯ ವಹಿಸಿತ್ತು.
ಪರಿಣಾಮವಾಗಿ, 25 ವರ್ಷಗಳ ಸ್ಥಿರ ರಾಜಕೀಯದ ಅವಧಿಯಲ್ಲಿ ದೇಶವು ಸಂವಿಧಾನದ ಹಾದಿ ಬಿಟ್ಟು ತುರ್ತುಪರಿಸ್ಥಿತಿಯ ಕಾಲಕ್ಕಿಂತ ನೂರ್ಮಡಿ ದೂರ ಸರಿದಿದೆ. ಚುನಾವಣೆಗಳೂ ಅರ್ಥ ಕಳೆದುಕೊಳ್ಳುತ್ತಿವೆ. ಅಧಿಕಾರ ದುರುಪಯೋಗವೇ ಅಧಿಕಾರ ಚಲಾವಣೆ ಎಂಬಂತಾಗಿದೆ. ಪ್ರಜಾತಂತ್ರದ ನಾಲ್ಕೂ ಅಂಗಗಳು ನಿಸ್ತೇಜವಾಗಿವೆ. ಸಂಸತ್ತು 2024ರ ಚುನಾವಣೆಯ ನಂತರ ತುಸು ಚಿಗುತುಕೊಂಡಿದೆ ಎನ್ನುವ ಅಂಶಿಕ ಸತ್ಯ ವೊಂದನ್ನುಳಿದು ಏನೂ ಬದಲಾಗಿಲ್ಲ. ತುರ್ತುಪರಿಸ್ಥಿತಿಯ ಕಾಲದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧವಿತ್ತು. ಈಗ ಮಾಧ್ಯಮಗಳು ಅಳುವ ಪಕ್ಷದ ಹೊಗಳುಭಟರಂತೆ ವರ್ತಿಸುತ್ತಿರುವುದು ಮಾಧ್ಯಮ ನಿರ್ಬಂಧಗಳಿಗಿಂತ ಅಪಾಯಕಾರಿ ಬೆಳವಣಿಗೆ. ತುರ್ತುಪರಿಸ್ಥಿತಿಯ ಕಾಲದಲ್ಲಿ ನ್ಯಾಯಾಂಗ ತಾತ್ಕಾಲಿಕವಾಗಿ ವಿಚಲಿತಗೊಂಡಿತ್ತು. ಈಗ ನ್ಯಾಯಾಂಗದ ಪ್ರಮುಖ ಹುದ್ದೆಗಳಲ್ಲಿ ಇರುವ ಕೆಲವರು ಆಳುವ ಪಕ್ಷದ ಸೈದ್ದಾಂತಿಕ ಸಮರ್ಥಕರಂತೆ ಮಾತನಾಡಿರುವುದು ವರದಿಯಾಗಿದೆ.
ತುರ್ತುಪರಿಸ್ಥಿತಿಯ ಕಾಲದಲ್ಲಿ ಅಧಿಕಾರಿವರ್ಗ ಅಸಹಾಯಕವಾಗಿತ್ತು ಅಥವಾ ಗುಲಾಮಗಿರಿಯನ್ನು ತಾತ್ಕಾಲಿಕವಾಗಿ ಒಪ್ಪಿಕೊಂಡಿತ್ತು. ಈಗ ಆಡಳಿತದ ಉಕ್ಕಿನ ಆವರಣ ಎನಿಸಿಕೊಂಡಿರುವ ಅಖಿಲ ಭಾರತ ಸೇವೆಗೆ ಸೇರಿದ ಮಂದಿ ‘ಬಾಬರಿ ಮಸೀದಿ ಉರುಳಿದಾಗ ನಾವು ಸಿಹಿ ಹಂಚಿಕೊಂಡೆವು’ ಅಂತ ಅಳುಕಿಲ್ಲದೆ ಹೇಳಿಕೊಳ್ಳು ವಲ್ಲಿಯವರೆಗೆ ಪರಿಸ್ಥಿತಿ ಬಿಗಡಾಯಿಸಿದೆ.
ಭಾರತೀಯರ ಸಾಂವಿಧಾನಿಕ ಸಂವೇದನೆಗಳು ಜಡ್ಡುಗಟ್ಟದೇ ಹೋಗಿದ್ದರೆ ಇಷ್ಟೊತ್ತಿಗೆ ‘ಸಂಪೂರ್ಣ ಕ್ರಾಂತಿ’ ಮಾದರಿಯ ಪ್ರಯತ್ನವೊಂದು ಹುಟ್ಟಿಕೊಳ್ಳುತ್ತಿತ್ತು. 2024ರ ಚುನಾವಣಾ ಫಲಿತಾಂಶವು 1977ರ ಫಲಿತಾಂಶದಂತೆ ನಿರ್ಣಾಯಕವಾಗಿರುತ್ತಿತ್ತು. ಇಂದಿನಿಂದ ಪ್ರಾರಂಭವಾಗುವ ಈ ಶತಮಾನದ ಮುಂದಿನ ಅವಧಿ ಯಲ್ಲಾದರೂ ಮೂರನೆಯ ದರ್ಜೆಯ ರಾಜಕಾರಣ ವನ್ನು ಇಟ್ಟುಕೊಂಡು ಮೊದಲ ದರ್ಜೆಯ ದೇಶ ಕಟ್ಟಲು ಸಾಧ್ಯವಿಲ್ಲ ಎಂಬ ಸತ್ಯವನ್ನು ದೇಶ ಅರಿತುಕೊಂಡೀತೇ?