ಟ್ರಂಪಣ್ಣನ ಮಾಗಾ… ಸಖತ್ ಹಾಟ್ ಮಗಾ
ಡೊನಾಲ್ಡ್ ಟ್ರಂಪ್ ಕಳೆದ ಜುಲೈನಲ್ಲಿ ಹತ್ಯಾಕಾರಿಯ ಗುಂಡಿನಿಂದ ಕೂದಲೆಳೆಯಲ್ಲಿ ಪಾರಾದರು. ನವೆಂಬರ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಆ ಭಯಾನಕ ಘಟನೆಯನ್ನು ಅವರು ನೆನಪಿಸಿಕೊಳ್ಳುವುದು ಹೀಗೆ- God has saved me to make America great again! ಅಂದರೆ ಅಮೆರಿಕಾವನ್ನು ಮತ್ತೆ ಮಹಾನ್ ರಾಷ್ಟ್ರವಾಗಿಸಲು ದೇವರು ನನ್ನನ್ನು ಉಳಿಸಿದ ಎಂದು ಟಂಪ್ ಹೇಳುತ್ತಾರೆ ಮತ್ತು ಅಮೆರಿಕಾವನ್ನು ತಾವು ಮತ್ತೆ ಮಹಾನ್ ಮಾಡುವುದಾಗಿ ಮತ್ತೆಮತ್ತೆ ಘಂಟಾಘೋಷವಾಗಿಯೂ ಹೇಳುತ್ತಲೇ ಇದ್ದಾರೆ. ಇಂತಹ ಘೋಷಣೆಗಳು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಂದ,
ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾದವರಿಂದ ಹೊರಬರುವುದು ಹೊಸದೇನಲ್ಲ. 1964ರಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಲಿಂಡನ್ ಬಿ. ಜಾನ್ಸನ್ Great Society (ಮಹಾನ್ ಸಮಾಜ) ಎಂದು ಕೂಗಿಕೊಂಡು ಜಯ ಗಳಿಸಿ, ಅಂತರಿಕ ನೀತಿಗಳಲ್ಲಿ ಒಂದಷ್ಟು ಒಳ್ಳೆಯದು ಮಾಡಿದರೂ ವಿಯೆಟ್ನಾಂ ಯುದ್ಧವನ್ನು ಆರಂಭಿಸುವಂತಹ ಕ್ಷಮಿಸಲಾಗದ ಅಪರಾಧಗಳನ್ನು ವಿದೇಶನೀತಿಯಲ್ಲಿ ಎಸಗಿದ ಕಾರಣ ‘ಮಹಾನ್ ಸಮಾಜ’ದಿಂದಲೇ ತಿರಸ್ಕೃತಗೊಂಡು 1968ರ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದೇ ಇಲ್ಲವೆಂದು ರಾಷ್ಟ್ರಕ್ಕೆ ಬಹಿರಂಗವಾಗಿ ಸಾರಿ ಕೆಳಗಿಳಿದು ಹೊರಟುಹೋದದ್ದು ಇತಿಹಾಸದಲ್ಲಿ ದಾಖಲಾಗಿದೆ. ಅದಕ್ಕೆ ಹೋಲಿಸಿದರೆ 1980ರಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಹಾಲಿವುಡ್ ನಟ ರೊನಾಲ್ಡ್ ರೀಗನ್ ‘ಅಮೆರಿಕಾವನ್ನು ನಾವು ಗಟಾರದಿಂದ ಮೇಲೆತ್ತಬೇಕಾಗಿದೆ’ ಎಂದು ದೊಡ್ಡ ದನಿಯಲ್ಲಿ ಹೇಳಿ ಜನಬೆಂಬಲ ಗಳಿಸಿಕೊಂಡರು. ಅವರ ಮಾತು ಜನತೆಗೆ ಪ್ರಿಯವಾಗಲು ಕಾರಣಗಳೂ ಇದ್ದವು. ನೂರು ವರ್ಷಗಳನ್ನು ಪೂರೈಸಿ ಕಳೆದ ಡಿಸೆಂಬರ್‌ನಲ್ಲಿ ನಿಧನರಾದ ಡೆಮೋಕ್ರಾಟಿಗ ಜಿಮ್ಮಿ ಕಾರ್ಟರ್ ಅವರ 1977-81ರ ಅಧ್ಯಕ್ಷಾವಧಿಯಲ್ಲಿ ಅಮೆರಿಕಾಗೆ ಸ್ಪಷ್ಟ ರಕ್ಷಣಾ ಹಾಗೂ ವಿದೇಶನೀತಿಗಳೇ ಇರಲಿಲ್ಲ.
ವಿದೇಶಾಂಗ ಕಾರ್ಯದರ್ಶಿ ಸೈರಸ್ ವ್ಯಾನ್ಸ್ ಸೋವಿಯೆತ್ ಯೂನಿಯನ್ ಜತೆ ಸಂಬಂಧಗಳನ್ನು ಉತ್ತಮಗೊಳಿಸಲು ಗಮನ ಕೊಟ್ಟರೆ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ರಿಗ್ ನ್ಯೂ ಬೆರೆನ್‌ಸ್ಸಿ ಅವರಿಗೆ ಮುಖ್ಯವೆನಿಸಿದ್ದು ಚೀನಾ ಜತೆ ಸ್ನೇಹವರ್ಧನೆ, ಇವರಿಬ್ಬರ ನಡುವೆ ಮತ್ತೊಬ್ಬ ಮುಖ್ಯ ರಾಜತಂತ್ರಜ್ಞ ರಿಚರ್ಡ್ ಹಾಲ್‌ಬ್ರೂಕ್ ಪೂರ್ವ ಮತ್ತು ಆನ್ನೇಯ ಏಷ್ಯಾ ವಿಭಾಗದಲ್ಲಿ ಉಪ ವಿದೇಶಾಂಗ ಕಾರ್ಯದರ್ಶಿಯಾಗಿ ಕೂತು ಮಾಜಿ ಶತ್ತು ವಿಯೆಟ್ನಾಂ ಜತೆ ಸಂಬಂಧಗಳನ್ನು ಬೆಳೆಸುವುದೇ ಶ್ವೇತಭವನದ ಆದ್ಯ ಜವಾಬ್ದಾರಿ ಎನ್ನುವಂತೆ ಆಡುತ್ತಿದ್ದರು. ಇವರೆಲ್ಲರು ಮತ್ತು ಈ ಎಲ್ಲಾ ವಿಷಯಗಳ ನಡುವೆ ಸಮನ್ವಯ ಸಾಧಿಸಬೇಕಾದ ಅಧ್ಯಕ್ಷಕಾ ಕಾರ್ಟರ್ ತಮ್ಮದೇ ದಾರಿ ಹಿಡಿದು ಇಸ್ರೇಲ್ ಮತ್ತು ಈಜಿಪ್ಟ್ಗಳ ನಡುವೆ ಶಾಂತಿ ಸ್ಥಾಪಿಸಲು ಹೊರಟಿದ್ದರು. ಹೀಗಾಗಿ ಅಮೆರಿಕಾ ಜಾಗತಿಕವಾಗಿ ಒಂದಕ್ಕಿಂತ ಹೆಚ್ಚು ಅವಮಾನಗಳನ್ನು ಅನುಭವಿಸುವಂತಾಗಿತ್ತು. ಇತ್ತ ಪ್ರಮುಖ ಅರಬ್ ದೇಶಗಳು ಮುನಿಸಿಕೊಂಡರೆ ಅತ್ತ ಇರಾನ್‌ನಲ್ಲಿ ಧಾರ್ಮಿಕ ಮೂಲಭೂತವಾದಿ ಕ್ರಾಂತಿಯಾಗಿ ಅಮೆರಿಕಾದ ಮಿತ್ರ ರೆಜಾ ಷಾ ಪಲ್ಲವಿ ದೇಶಭ್ರಷ್ಟರಾಗಿದ್ದರು.
ಇದನ್ನೂ ಓದಿ: ಪೋಡಿ ಮುಕ್ತ ತಾಲೂಕು ನಮ್ಮ ಗುರಿ
ಮೂಲಭೂತವಾದಿ ಆಯಾತೊಲ್ಲಾ ಬೊಮೇನಿ ಕಟ್ಟಿಕೊಂಡಿದ್ದ ರೆವಲ್ಯೂಷನರಿ ಗಾರ್ಡ್ಸ್ ತೆಹರಾನ್‌ನಲ್ಲಿನ ಅಮೆರಿಕನ್ ದೂತಾವಾಸಕ್ಕೆ ನುಗ್ಗಿ ಅಲ್ಲಿದ್ದ ಐವತ್ತಕ್ಕೂ ಹೆಚ್ಚು ಜನರನ್ನು ಬಂಧಿಗಳನ್ನಾಗಿಸಿಕೊಂಡಿದ್ದರು. ಅವರನ್ನು ಬಿಡಿಸಲು ಕಾರ್ಟರ್ ಸರ್ಕಾರ ಹೊಡಿದ ಯೋಜನೆ ವಿಫಲವಷ್ಟೇ ಅಲ್ಲ, ಅಮೆರಿಕನ್ ಸೈನಿಕರ ಪ್ರಾಣಹಾನಿಗೂ ಕಾರಣವಾಗಿ ಅಮೆರಿಕಾಗೆ ಜಾಗತಿಕವಾಗಿ ಮುಖಭಂಗವಾಗಿತ್ತು. ಇದು ಸಾಲದು ಎಂಬಂತೆ ಅಫ್ಘಾನಿಸ್ತಾನಕ್ಕೆ ಸೋವಿಯತ್ ಸೇನೆ ನುಗ್ಗಿ ಈ ವಲಯದಲ್ಲಿ ಅಮೆರಿಕಾದ ಹಿತಾಸಕ್ತಿಗಳಿಗೆ ಸವಾಲೊಡ್ಡಿತ್ತು.
ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ದಮನಗೈದು ಸೇನಾ ಸರ್ವಾಧಿಕಾರಿಯಾಗಿ ಪಟ್ಟಾಗಿ ಕೂತಿದ್ದ ಜಿಯಾ-ಉಲ್-ಹಕ್‌ರನ್ನು ವಿಶ್ವಾಸಾರ್ಹ ಸಹಯೋಗಿಯೆಂದು ನಂಬಿ, ಸೋವಿಯೆತ್ ಸೇನೆಯ ವಿರುದ್ಧ ಹೋರಾಡಬಲ್ಲವರನ್ನು ಒಟ್ಟುಗೂಡಿಸಿ ಸೇನೆ ಕಟ್ಟಿ ಎಂದು ಹೇಳಿ ಕಾರ್ಟರ್ ಕೊಟ್ಟ ಬಿಲಿಯನ್ ಗಟ್ಟಲೆ ಡಾಲರ್‌ಗಳನ್ನು ಆತ ತನ್ನದೇ ಅನುಕೂಲಕ್ಕಾಗಿ ಬಳಸಿಕೊಂಡರು. ಪಾಕಿಸ್ತಾನದಾದ್ಯಂತ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮದ್ರಸಾಗಳನ್ನು ಅಂದರೆ ಜಿಹಾದಿ ಕಾರ್ಖಾನೆಗಳನ್ನು ಸ್ಥಾಪಿಸಿದ್ದಲ್ಲದೇ ಮುಸ್ಲಿಂ ಮೂಲಭೂತವಾದಿ ಹೋರಾಟಗಾರರ ಕೂಟಗಳನ್ನು ಕಟ್ಟುವಂತೆ ಪಾಕ್ ಮತ್ತು ಅಫ್ಘನ್ ಸುನ್ನಿ ಮೂಲಭೂತವಾದಿಗಳಿಗೆ ಕೈತುಂಬಾ ಹಣ ಕೊಟ್ಟು ಕಳಿಸತೊಡಗಿದರು. ಹಣವೇನೂ ಅವರ ಸ್ವಂತದ್ದಲ್ಲವಲ್ಲ. ಈಗಿನಂತೆ ಬ್ಯಾಂಕ್ ಖಾತೆಗಳ ನಡುವೆ ಹಣ ವರ್ಗಾವಣೆ, ಆನ್‌ಲೈನ್ ಪೇಮೆಂಟ್ ವ್ಯವಸ್ಥೆಗಳೇನೂ ಇರದಿದ್ದ ಆ ದಿನಗಳಲ್ಲಿ ಕಾರ್ಟರ್ ಕಳುಹಿಸಿದ ಡಾಲರ್‌ಗಳು ಜಿಯಾ ಕೈ ಸೇರಿದು ದೊಡ್ಡ ದೊಡ್ಡ ಚೀಲಗಳಲ್ಲಿ! ಅಫ್ರನ್ ಗಡಿಯಲ್ಲಿ ಮದ್ರಸಾ ಸ್ಥಾಪಿಸುತ್ತೇವೆ, ಸೋವಿಯತ್ ಸೇನೆಯ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿಕೊಂಡು ಬಂದು ನಿಂತವರಿಗೆ ಜಿಯಾ ಸಾಹೇಬ ಚೀಲದೊಳಗೆ ಕೈಹಾಕಿ ಸಿಕ್ಕಿದಷ್ಟು ಡಾಲರ್ ಕಂತೆಗಳನ್ನು ಎತ್ತಿ ಕೊಡುತ್ತಿದ್ದರು!
ಅಮೆರಿಕಾದ ರಕ್ಷಣಾ ಹಾಗೂ ವಿದೇಶ ನೀತಿಗಳನ್ನು ಹೀಗೆ ಹಾಳುಗೆಡವಿ, ಜತೆಗೆ ಅರ್ಥವ್ಯವಸ್ಥೆಯ ಮೇಲೂ ಅನಗತ್ಯ ಹೊರೆ ಹಾಕಿದ ಜಿಮ್ಮಿ ಕಾರ್ಟರ್ನೀತಿಗಳನ್ನು ‘ಅಮೆರಿಕಾವನ್ನು ಗಟಾರಕ್ಕೆ ದೂಡುವ ಕೃತ್ಯ’ಗಳೆಂದು ಬಣ್ಣಿಸಿದ ರೊನಾಲ್ಡ್ ರೀಗನ್ ತಾವು ತಮ್ಮ ದೇಶವನ್ನು ಗಟಾರದಿಂದ ಮೇಲೆತ್ತುವುದಾಗಿ ಹೇಳಿದಾಗ ಸಹಜವಾಗಿಯೇ ಜನತೆ ಒಪ್ಪಿ ಬೆಂಬಲಿಸಿದರು. ಈಗ ಇತಿಹಾಸ ಮರುಕಳಿಸಿದೆ. ಅಧ್ಯಕ್ಷ ಜೋಬೈಡನ್, ವಿದೇಶಾಂಗ ಕಾರ್ಯದರ್ಶಿ ಅಂಟನಿ ಬ್ಲಿಂಕನ್ ಮತ್ತು ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಜೇಕ್ ಸಲಿವಾನ್ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿಮತ್ತೆಯನ್ನು ಹೊಂದಿಯೇ ಇರಲಿಲ್ಲ. ಒಂದಷ್ಟು ವಿವೇಕದ ಮಾತುಗಳು ಬರುತ್ತಿದ್ದುದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಂದ ಮಾತ್ರ. ಆದರೆ ಕರಿಯರಾದ ಕಾರಣವೋ ಏನೋ ಅವರ ಮಾತಿಗೆ ಬೆಲೆಯೇ ಇರಲಿಲ್ಲ. ಎಲ್ಲವೂ ತಾವೇ ಮಹಾ ಬುದ್ಧಿವಂತರು ಎಂದು ತಿಳಿದ ಈ ಮೂವರು ಮೂರ್ಖರದ್ದೇ ಆಟ. ಇವರು ಮಾಡಿದ್ದೆಲ್ಲಾ ಅನಾಹುತವೇ, ಯೂಕ್ರೇನ್ನ ವಿದೂಷಕ ಅಧ್ಯಕ್ಷನನ್ನು ಎತ್ತಿಕಟ್ಟಿ ರಷ್ಯಾವನ್ನು ಕೆರಳಿಸಿ ಸಂಪೂರ್ಣವಾಗಿ ಅನಗತ್ಯವಾಗಿದ್ದ ಯುದ್ಧವೊಂದನ್ನು ಸೃಷ್ಟಿಸಿ ಅದರ ದುಷ್ಪರಿಣಾಮಗಳನ್ನು ಜಗತ್ತಿನ ಮೇಲೆ ಹೇರಿದರು.
ಅದಕ್ಕಾಗಿ ಯೂಕ್ರೇನ್‌ಗೆ ಕೊಟ್ಟಿರುವ ಹಣ 172 ಬಿಲಿಯನ್ ಡಾಲರ್‌ಗಳಂತೆ! ಇತ್ತ ಏಷ್ಯಾಗೆ ಬಂದರೆ ಮೊದಲಿಗೆ ಚೀನಾವನ್ನು ಓಲೈಸಿ ನಂತರ ನಿದ್ದೆಯಿಂದ ಎದ್ದವರಂತೆ ಆ ದೇಶದ ರೆಕ್ಕೆಗಳನ್ನು ಕತ್ತರಿಸುತ್ತೇವೆ ಎಂದು ಏನೇನೋ ಮಾಡಲು ಹೋಗಿ ಈ ಮೂವರು ಎಸಗಿದ ಅನಾಚಾರಗಳಿಗೆ ಕೊನೆಯಿಲ್ಲ. ಅದರ ಒಂದು ಅನಾಹುತಕಾರಿ ಪರಿಣಾಮವನ್ನು ನಾವು ಬಾಂಗ್ಲಾದೇಶದಲ್ಲಿ ನೋಡುತ್ತಿದ್ದೇವೆ. ಶೈವಾನ್ ಅಂತೂ ಅಮೆರಿಕಾವನ್ನು ನಂಬಬಹುದೇ ಎಂಬ ಸಂದಿಗ್ಧದಲ್ಲಿದೆ. ಗಾಜಾದಲ್ಲಿ ಆರಂಭವಾದ ಭೀಕರ ಸಂಘರ್ಷದ ಕುರಿತಾಗಿ ಬೈಡನ್ ಸರ್ಕಾರದ ನೀತಿ ‘ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎನ್ನುವಂತಹದು. ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಆವಧಿಯಲ್ಲಿ ಭಾರತದ ವಿಶ್ವಾಸವನ್ನು ಗಳಿಸಿಕೊಂಡು ಅದನ್ನು ನಂಬಿಗಸ್ತ ಮಿತ್ರನನ್ನಾಗಿಸಿಕೊಂಡಿದ್ದರು. ಆದರೆ ಬೈಡೆನ್ ಮತ್ತವರ ಸಂಗಡಿಗರು ಭಾರತದ ವಿಷಯದಲ್ಲಿ ಮಗುವನ್ನೂ ಚಿವುಟಿದರು, ತೊಟ್ಟಿಲನ್ನೂ ತೂಗಿದರು. ಇದೇ ಸ್ಥಿತಿ ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್ ಸೌದಿ ಅರೇಬಿಯಾ ಮುಂತಾದ ಹಲವು ಸಾಮರಿಕ ಸಹಯೋಗಿಗಳದ್ದು. ಇವೆಲ್ಲಕ್ಕೂ ಸಂಬಂಧಿಸಿದ ಅನಗತ್ಯ ಹಣ ಪೋಲಾಗಿಸುವಿಕೆಯಿಂದಾಗಿ ಸರ್ಕಾರ ಇಂದು 32 ಟ್ರಿಲಿಯನ್ ಸಾಲದ ಹೊರೆ ಹೊತ್ತುಕೊಂಡಿದೆ. ಈ ಎಲ್ಲಾ ಎಡವಟ್ಟುಗಳಿಂದಾಗಿ ಜಾಗತಿಕವಾಗಿ ತಿರಸ್ಕಾರಕ್ಕೆ ಗುರಿಯಾಗುತ್ತಿರುವ ಅಮೆರಿಕಾ ತನ್ನ ಹಿಂದಿನ ಗ್ರೇಟ್‌ನೆಸ್ ಅನ್ನು ಕಳೆದುಕೊಂಡಿದೆ ಎಂದು ಟ್ರಂಪ್ ಹೇಳಿದಾಗ ಅದು ವಾಸ್ತವದ ಚಿತ್ರಣವೇ ಆಗಿತ್ತು ಮತ್ತು ಅವರ Make America Great Again ಜನತೆ ಧನಾತ್ಮಕವಾಗಿ ಸ್ಪಂದಿಸಿದರು. ಆ ಘೋಷಣೆಯ ನಾಲ್ಕು ಪದಗಳ ಮೊದಲಕ್ಷರಗಳನ್ನು ಒಟ್ಟುಗೂಡಿಸಿ ಸೃಷ್ಟಿಸಲಾದ ಹೃಸ್ವರೂಪ MAGA (ಮ್ಯಾಗಾ) ಅಮೆರಿಕಾದಾದ್ಯಂತ ಗುಂಯ್‌ಗುಡಗೊಡಗಿತು.
ಸರಿ, ಈ ಮ್ಯಾಗಾವನ್ನು ಟ್ರಂಪ್ ಹೇಗೆ ಸಾಧಿಸುತ್ತಾರೆ? ಇದಂತೂ ‘ಸಂಬಂಧಪಟ್ಟವರಿಗೆ’ ಭಯಾನಕವೇ ಆಗಿರುವಂತಿದೆ. ಸಂಕ್ಷಿಪ್ತವಾಗಿಯೇ ಹೇಳುವುದಾದರೆ ಟ್ರಂಪ್ ಯೋಜನೆಗಳು ಆಂತರಿಕ ಹಾಗೂ ವಿದೇಶ ನೀತಿಗಳೆರಡಕ್ಕೂ ವ್ಯಾಪಿಸಿವೆ. ಒಳ್ಳೆಯ ಎಂಜಿನಿಯರ್ ಅಥವಾ ಡಾಕ್ಟರ್ ಗಳಿಂದ ಹಿಡಿದು ಒಳ್ಳೆಯ ವೇಟರ್‌ವರೆಗೆ ಎಲ್ಲ ಬಗೆಯ ಕೌಶಲಗಳಲ್ಲಿ ಪರಿಣಿತಿ ಇರುವವರನ್ನು ಟ್ರಂಪ್ ಜಗತ್ತಿನ ಎಲ್ಲೆಡೆಗಳಿಂದ ಅಮೆರಿಕಾಗೆ ಆಹ್ವಾನಿಸುತ್ತಾರೆಆದರೆ ಕಾನೂನುಬಾಹಿರವಾಗಿ ಅಮೆರಿಕಾ ಪ್ರವೇಶಿಸಿ ಅಪರಾಧ ಕೃತ್ಯಗಳಲ್ಲಿ ತೊಡಗುವವರು ಮತ್ತು ಅಮೆರಿಕಾದ ಅರ್ಥವ್ಯವಸ್ಥೆಗೆ ಹೊರೆಯಾಗುವವರು ಟ್ರಂಪ್ ರಿಗೆ ಬೇಡ. ಹತ್ತಿರದ ಲ್ಯಾಟಿನ್ ಅಮೆರಿಕಾದ ದೇಶಗಳಿಂದಲೇ ಅಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದರಿಂದ ಅವರನ್ನು ಗುರುತಿಸಿ ಬಲವಂತವಾಗಿ ಸೇನಾ ಸರಕುಸಾಗಾಣಿಕೆಯ ವಿಮಾನಗಳಿಗೆ ತುಂಬಿ ಅವರವರ ದೇಶಗಳಿಗೆ ಕಳುಹಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಇದನ್ನು ಹಾಂಡುರಾಸ್‌ನಂತಹ ದೇಶಗಳು ತೆಪ್ಪಗೆ ಒಪ್ಪಿಕೊಂಡರೆ ಕೊಲಂಬಿಯಾದಂತಹ ದೇಶಗಳು ಮೊದಲಿಗೆ ವಿರೋಧಿಸಿ ನಂತರ ಟ್ರಂಪ್ ಬೆದರಿಕೆಗೆ ತಟಪಟನೆ ಬಾಗುತ್ತಿವೆ.
‘ನಮ್ಮ’ ಜನರನ್ನು ಹಾಗೆ ಕಳುಹಿಸಲಾಗದು, ಅವರಿಗೆ ಆತ್ಮಗೌರವವಿದೆ’ ಎಂದೆಲ್ಲಾ ಹೇಳಿದ ಕೊಲಂಬಿಯಾದ ಅಧ್ಯಕ್ಷ ಗುಸ್ತಾವೋ ಪೆತ್ರೋ ನಂತರ ತನ್ನ ಜನರ ಆತ್ಮಗೌರವಕ್ಕಿಂತಲೂ ಅಮೆರಿಕಾದ ಜತೆಗಿನ ವ್ಯಾಪಾರ ತಂದು ಸುರಿಯುವ ಹಲವು ಬಿಲಿಯನ್ ಡಾಲರ್‌ಗಳೇ ಮುಖ್ಯ ಎಂದರಿತರು! ಮೆಕ್ಸಿಕೋದ ಅಧ್ಯಕ್ಷೆ ಕ್ಲಾಡಿಯಾ ಶೇನ್‌ಬಾಮ್ ಪಾರ್ದೋ ಸಹ ಈ ವಿಷಯದಲ್ಲಿ ಅಮೆರಿಕಾದೊಂದಿಗೆ ಸಹಕರಿಸಲು ತಡವಾಗಿಯಾದರೂಮುಂದಾಗಿದ್ದಾರೆ. ಮ್ಯಾಗಾ ಬಿಸಿ ಹಾಗಿದೆ!
ಇಷ್ಟವಾಗಿಯೂ, ಟ್ರಂಪ್ ಈ ಯೋಜನೆಗೆ ದೇಶದೊಳಗೇ ವಿರೋಧವಿದೆ. ಲ್ಯಾಟಿನ್ ಅಮೆರಿಕಾದ ವಲಸಿಗರಿಲ್ಲದಿದ್ದರೆ ದೇಶದಲ್ಲಿ ಹಲವು ಕೆಲಸವೇ ಆಗುವುದಿಲ್ಲ ಎನ್ನುವವರೂ ದೇಶದೊಳಗಿ ಇದ್ದಾರೆ. ಇವರಲ್ಲಿ ಟ್ರಂಪ್-ವಿರೋಧಿ ಡೆಮೋಕ್ರಾಟಿಗಳು ಸಾಕಷ್ಟಿದ್ದರೂ ವಾಸ್ತವಸ್ಥಿತಿಯನ್ನು ಬಿಂಬಿಸುವವರೂ ಇದ್ದಾರೆ. ಅಂತಹವರ ವಿರೋಧದವನ್ನು ಕಾನೂನಾತ್ಮಕವಾಗಿ ಎದುರಿಸಿ ಕಾನೂನುಬಾಹಿರ ವಲಸಿಗರನ್ನು ಅವರವರ ದೇಶಗಳಿಗೆ ಕಳುಹಿಸಬೇಕಾದರೆ ಪ್ರತಿಯೊಬ್ಬರಿಗೂ ತಲಾ ಹದಿಮೂರು ಸಾವಿರ ಡಾಲರ್ ಗಳನ್ನು ವ್ಯಯಿಸಬೇಕಾಗುತ್ತದಂತೆ. ಅಂದಾಜು ಒಂದು ಕೋಟಿ ಹತ್ತು ಲಕ್ಷದಷ್ಟಿರುವ ಅಕ್ರಮ ವಲಸಿಗರಲ್ಲಿ ಎಷ್ಟು ಜನರನ್ನು ಈ ವಿಧಾನದಿಂದ ಹೊರಹಾಕಬಹುದು, ಅದಕ್ಕೆಷ್ಟು ಖರ್ಚಾಗಬಹುದು, ಅದಕ್ಕೆ ಟ್ರಂಪ್ ತಯಾರಾಗಿರುವರೇ ಅಥವಾ ಬೇರೆ ದಾರಿ ಹುಡುಕುತ್ತಾರೆಯೇ ಕಾದುನೋಡಬೇಕು.
ಸರ್ಕಾರ ಅವರದಾದರೂ ವ್ಯವಸ್ಥೆ ಇನ್ನೂ ನಮ್ಮದೇ ಎಂದು ನಮ್ಮಲ್ಲಿ ಎನ್ ಡಿಎ ಸರ್ಕಾರದ ವಿರೋಧಿಗಳು ಹೇಳುವ ಮಾತು ಅಮೆರಿಕಾದಲ್ಲೂ ನಿಜವೇ, ಡೆಮೋಕ್ರಾಟಿಗರು ತಮಗೆ ಅನುಕೂಲವಾಗುವಂತೆ ಕಟ್ಟಿ ಭದ್ರಗೊಳಿಸಿಕೊಂಡಿದ್ದ ಆಡಳಿತಶಾಹಿ ಮತ್ತು ನ್ಯಾಯಾಂಗದಿಂದಲೇ ತಮ್ಮ ಮೊದಲ ಅವಧಿಯಲ್ಲಿ ತಮಗೆ ಸರಿಯೆನಿಸಿದ್ದನ್ನು ಮಾಡಲಾಗಲಿಲ್ಲ. ತಮ್ಮ ಮೂಗಿನ ಕೆಳಗೇ ತಮ್ಮ ವಿರುದ್ಧ ಪಿತೂರಿಗಳು ನಡೆಯುತ್ತಿದ್ದುದನ್ನು ತಡೆಯಲಾಗಲಿಲ್ಲ ಎಂದು ಟ್ರಂಪ್ ಅರಿತುಕೊಂಡಿದ್ದಾರೆ. ಅದಕ್ಕಾಗಿ ತಕ್ಕ ತಯಾರಿಯನ್ನೂ ಮಾಡಿಕೊಂಡೇ ಬಂದಿದ್ದಾರೆ. ಚುನಾವಣೆಯ ಸಂದರ್ಭಗಳಲ್ಲಿ ಹೆರಿಟೇಜ್ ಫೌಂಡೇಶನ್ ತಯಾರಿಸಿದ ಪ್ರಾಜೆಕ್ಟ್ 2025 ಹೇಳಿದ್ದು ‘ಸುಮಾರು 50,000 ಸರ್ಕಾರಿ ಅಧಿಕಾರಿಗಳು ಮತ್ತು ನ್ಯಾಯಾಧೀಶರುಗಳನ್ನು ತೆಗೆದುಹಾಕಿ, ಹೊಸ ಸರ್ಕಾರಕ್ಕೆ ನಿಷ್ಠರಾಗಿರುವವರನ್ನು ನೇಮಿಸಿಕೊಳ್ಳಬೇಕು’ ಎಂದು. ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಆಗ ಹೇಳಿದ ಟ್ರಂಪ್ ಈಗ ಆ ಯೋಜನೆಯನ್ನೇ ಎಲಾನ್ ಮಸ್ಕ್ ಜತೆಗೂಡಿ ಇನ್ನಷ್ಟು ವ್ಯಾಪಕವಾಗಿ ಕಾರ್ಯರೂಪಕ್ಕಿಳಿಸಿದ್ದಾರೆ. ಮ್ಯಾಗಾ ಯೋಜನೆಗಳು ಯಶಸ್ವಿಯಾಗಬೇಕಾದರೆ ಅನುಕೂಲಕರ ಆಡಳಿತಶಾಹಿ ಇರಲೇಬೇಕು ಎನ್ನುವುದು ಇವರಿಬ್ಬರ ನಿಲುವು, ಅದಕ್ಕನುಗುಣವಾಗಿ ಎಂಟು ತಿಂಗಳ ಸಂಬಳದೊಂದಿಗೆ ಸ್ವಯಂನಿವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುವ ಇಮೇಲ್ ಸುಮಾರು ಎರಡು ಲಕ್ಷ ಫೆಡರಲ್ ಸರ್ಕಾರದ ಅಧಿಕಾರಿಗಳಿಗೆ ಹೋಗಿದೆಯಂತೆ. ಮ್ಯಾಗಾ ಬಿಸಿ ಯಾರಿಗೆಲ್ಲಾ ತಟ್ಟುತ್ತಿದೆ!
ವಿದೇಶ ಆರ್ಥಿಕ ನೀತಿಗಳಿಗೆ ಸಂಬಂಧಿಸಿದಂತೆ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿರುವುದು ಹಿಂದಿನಂತೇ ಈಗಲೂ ಚೀನಾ. ಆ ದೇಶದ ಜತೆಗಿನ ವ್ಯಾಪಾರದಲ್ಲಿ ಅಮೆರಿಕಾ ವರ್ಷವೊಂದಕ್ಕೆ ಸುಮಾರು ನಾನೂರು ಬಿಲಿಯನ್ ಡಾಲರ್‌ಗಳನ್ನು ಕಳೆದುಕೊಳ್ಳುತ್ತಿದೆ. ಚೀನಾ ಗಳಿಸುವ ಆ ಭಾರಿ ಮೊತ್ತ ಜಾಗತಿಕವಾಗಿ ಅದರ ನವವಸಾಹತುಶಾಹಿ ನೀತಿಗೆ ಸಹಕಾರಿಯಾಗಿದೆ ಎನ್ನುವುದು ಮೊದಲಿನಿಂದಲೂ ಟ್ರಂಪ್‌ರ ಅಭಿಮತ. ಹೀಗಾಗಿ ಹಿಂದಿನಂತೇ ಈಗಲೂ ಚೀನೀ ಆಯಾತಗಳ ಮೇಲೆ ಈಗಿರುವ ಸುಂಕಗಳ ಮೇಲೆ ಇನ್ನೂ ಶೇ. 10 ಹೆಚ್ಚುವರಿ ಸುಂಕವನ್ನು ಟ್ರಂಪ್ ಸರ್ಕಾರ ವಿಧಿಸಿದೆ. ಚೀನೀ ವಸ್ತುಗಳು ಅಮೆರಿಕಾದಲ್ಲಿ ತುಟ್ಟಿಯಾಗುವಂತೆ ಮಾಡಿ ಅವುಗಳಿಗೆ ಅಮೆರಿಕಾದಲ್ಲಿ ಬೇಡಿಕೆಯನ್ನು ಕುಗ್ಗಿಸಿ ಆ ಮೂಲಕ ಚೀನೀ ಆದಾಯವನ್ನು ಕುಗ್ಗಿಸುವುದು ಟ್ರಂಪ್ ಯೋಜನೆ.
ಚೀನಾದಿಂದ ಇರುವ ಮತ್ತೊಂದು ಕೆಡುಕೆಂದರೆ ಅಲ್ಲಿಂದ ಬರುವ ಭಯಂಕರ ಫೆಂಟಾನಿಲ್ ಮಾದಕದ್ರವ್ಯ. ಇದರ ದುರ್ಬಳಕೆಯಿಂದ ಅಮೆರಿಕಾದಲ್ಲಿ ಪ್ರತಿದಿನ ಇನ್ನೂರರಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಫೆಂಟಾನಿಲ್ ಅಮೆರಿಕಾಗೆ ಬರುವುದು ಮೆಕ್ಸಿಕೋ ಮತ್ತು ಕೆನಡಾಗಳ ಮೂಲಕ ಈ ಕಾರಣ ಮತ್ತು ಅವೆರಡೂ ದೇಶಗಳ ಜತೆಗಿನ ವ್ಯಾಪಾರದಲ್ಲಿ ಅಮೆರಿಕಾ ಅನುಭವಿಸುವ ಸಂದಾಯ ಬಾಕಿ (Balance of Payment) ಅನಾನುಕೂಲತೆಗಳನ್ನು ಹೋಗಲಾಡಿಸಲು ಟ್ರಂಪ್ ಆ ದೇಶಗಳ ಆಯಾತಗಳ ಮೇಲೂ ಶೇ. 25 ಅಮದು ಶುಲ್ಕ ವಿಧಿಸಹೊರಟಿದ್ದರು. ಆದರೆ ಫೆಂಟಾನಿಲ್ ಕಳ್ಳಸಾಗಾಣಿಕೆಯನ್ನು ತಡೆಯಲು ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಮತ್ತು ಸಂದಾಯ ಬಾಕಿ ಕುರಿತಾಗಿ ಅಮೆರಿಕಾದ ಚಿಂತೆಗಳಿಗೆ ಸಂವೇದನಾಶೀಲರಾಗಿ ವರ್ತಿಸುವ ಭರವಸೆಯನ್ನು ಆ ದೇಶಗಳ ನಾಯಕರು ನೀಡಿದ ಮೇಲೆ ಅದಾಯಶುಲ್ಕ ಹೆಚ್ಚಳದ ಕ್ರಮವನ್ನು ಟ್ರಂಪ್ ಒಂದು ತಿಂಗಳಿಗೆ ಮುಂದೂಡಿದ್ದಾರೆ. ಮೆಕ್ಸಿಕೋದ ಅಧ್ಯಕ್ಷೆ ಕ್ಲಾಡಿಯಾ ಶೇನ್‌ಬಾಮ್ ಪಾರ್ದೋ ಅಂತೂ ಮಾರಕರನ್ನ ಕಳಸಾಗಾಣಿಕೆಯನ್ನು ತಡೆಯಲು ತಾವು ಎಲ್ಲ ಬಗೆಯ ಪ್ರಯತ್ನಗಳನ್ನೂಮಾಡುತ್ತಿರುವುದಾಗಿ ಅಲವತ್ತುಕೊಂಡು 40 ಟನ್ ಮಾದಕದ್ರವ್ಯವನ್ನು ಹುಡುಕಿ ನಾಶ ಮಾಡಿದ್ದರ ಲೆಕ್ಕವನ್ನೂ ಕೊಟ್ಟಿದ್ದಾರೆ. ಮ್ಯಾಗಾ ಬಿಸಿ ಸಖತ್ತಾಗಿಯೇ ಇದೆ ಬಿಡಿ.