ನಿಸಾರರ ಸೂಟು, ಬೂಟು, ಅತ್ತರ್ ಮತ್ತು ದಿಲ್ಲಗಿ ಅಜಾತಶತ್ರು…

ನಿಸಾರರ ಸೂಟು, ಬೂಟು, ಅತ್ತರ್ ಮತ್ತು ದಿಲ್ಲಗಿ ಅಜಾತಶತ್ರು…

ಕವಿ ಕೆ.ಎಸ್. ನಿಸಾರ್ ಅಹಮದ್ ಅವರನ್ನು ನಾನು ಮೊದಲು ನೋಡಿದ್ದು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ. ಅದು ಕನ್ನಡ ಸಂಘದ ಕಾರ್ಯಕ್ರಮ. ಅಲ್ಲಿ ನಿಸಾರರು ತಮ್ಮ ‘ಸಂಜೆ ಐದರ ಮಳೆ’ ಮತ್ತು ‘ರಾಮನ್ ಸತ್ತ ಸುದ್ದಿ’ ಕವಿತೆಗಳನ್ನು ಓದಿದರು. ಅವುಗಳನ್ನು ಕೇಳಿ ನಾನು ಒಂದು ರೀತಿಯಲ್ಲಿ ವಶೀಕರಣಕ್ಕೆ ಒಳಗಾದೆ. ನಿಸಾರರಿಗೆ ಆತ್ಮೀಯನಾಗಬೇಕೆಂಬ ಇಚ್ಛೆ ಮೂಡಿತು. ಆದರೆ ನಾನು ವಯಸ್ಸಿನಲ್ಲಿ ಅವರಿಗಿಂತ ಬಹಳ ಚಿಕ್ಕವನು. ಅಮೇಲೆ ನಾನು ತುಮಕೂರಿಗೆ ಹೋಗಿ ಆರು ವರ್ಷ ಕೆಲಸ ಮಾಡಿ, ಬೆಂಗಳೂರಿಗೆ ಬಂದು ಹೋಮ್ ಸೈನ್ಸ್ ಕಾಲೇಜಿನಲ್ಲಿ ಲೆಕ್ಚರರ್ ಅದೆ. ಮತ್ತೆ ಅವರು ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಸಿಕ್ಕರು. ಅಷ್ಟೊತ್ತಿಗೆ ನನ್ನ ಮೊದಲ ಕವನ ಸಂಕಲನ ಪ್ರಕಟವಾಗಿತ್ತು. ಅದನ್ನು ಅವರೂ ಓದಿ ಮೆಚ್ಚಿಕೊಂಡಿದ್ದರು. ಹೀಗೆ ನಮ್ಮ ಪರಿಚಯ ಸ್ನೇಹವಾಗಿ ಬೆಳೆಯಿತು. ಅದೇ ವೇಳೆ, ಕೆ.ಎಸ್. ನರಸಿಂಹಸ್ವಾಮಿಯವರ ಅಧ್ಯಕ್ಷತೆಯಲ್ಲಿ ಕನ್ನಡ ಸಮ್ಮೇಳನ ನಡೆಯಿತು. ಅಲ್ಲಿ ಕವಿತೆ ಓದಿ ಮುಗಿದ ಮೇಲೆ, ನಿಸಾರರ ಜತೆ ನಾವು ಕೆಲವರು ಕಾಫಿ ಕುಡಿಯಲು ಗಾಂಧಿಬಜಾರ್‌ನತ್ತ ನಡೆದುಕೊಂಡು ಹೋದೆವು. ಆಗ ಅಲ್ಲೊಂದು ಘಟನೆ ನಡೆಯಿತು. ರಸ್ತೆ ಪಕ್ಕದ ಹಳೇ ಪುಸ್ತಕದಂಗಡಿಯಲ್ಲಿ ನಿಸಾರರ ಪುಸ್ತಕವೊಂದು ಕಣ್ಣಿಗೆ ಬಿತ್ತು. ಅದು ನಿಸಾರರೇ ತಮ್ಮ ಹೆಸರು ಬರೆದು ಸಹಿ ಹಾಕಿ ನರಸಿಂಹಸ್ವಾಮಿಯವರಿಗೆ ಕೊಟ್ಟಿದ್ದು! ಅದನ್ನು ನೋಡಿ ಆಶ್ಚರ್ಯಚಕಿತರಾದ ನಾವು, ‘ನೋಡಿ ಸರ್, ನೀವು ಗೌರವದಿಂದ ಕೊಟ್ಟ ಪುಸ್ತಕ ಇಲ್ಲಿ ಬಿದ್ದಿದೆ. ಇವತ್ತೇ ಅದನ್ನು ಖರೀದಿಸಿ ಮತ್ತೆ ಅವರಿಗೆ ಕೊಡಿ’ ಎಂದು ತಮಾಷೆ ಮಾಡಿದೆವು.

ನಿಸಾರರು ಯಾವಾಗಲೂ ಒಂದು ರೀತಿಯ ‘ದಿಲ್ಲಗಿ’ಯಲ್ಲಿ ಇರುತ್ತಿದ್ದರು. ಬಹಳ ಹಾಸ್ಯಪ್ರಜ್ಞೆ ಇತ್ತು. ನಾನು ಹೋಮ್‌ಸೈನ್ಸ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದಾಗ ಸಾಮಾನ್ಯವಾಗಿ ಬೆಳಗ್ಗೆ 9ರಿಂದ 12ವರೆಗೆ ನನ್ನ ತರಗತಿಗಳು ಮುಗಿದು ಹೋಗುತ್ತಿದ್ದವು. ಆಗ ನಿಸಾರರು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಜಿಯಾಲಜಿ ಪ್ರೊಫೆಸರ್ ಆಗಿದ್ದರು. ಕಾಲೇಜಿನ ಮೂರನೇ ಮಹಡಿಯಲ್ಲಿ ಅವರ ಕೊಠಡಿ. ಅದರಲ್ಲಿ ಬಹಳ ಒಳ್ಳೆಯ ಪುಸ್ತಕಾಲಯ ಇತ್ತು. ಜಗತ್ತಿನ ಎಲ್ಲ ಶ್ರೇಷ್ಠ ಕವಿಗಳ ಕವನಸಂಕಲನಗಳು ಅಲ್ಲಿದ್ದವು. ‘ನೀನು ಯಾವಾಗ ಫ್ರೀ ಇದ್ದೀಯೋ ಅವಾಗ ಬಾರಪ್ಪ’ ಎಂದು ನನ್ನನ್ನು ಕರೆದಿದ್ದರು. ನಮ್ಮ ಕಾಲೇಜಿನಿಂದ ಅಲ್ಲಿಗೆ 10 ನಿಮಿಷದ ನಡಿಗೆ, ನಾನು ದಿನವೂ ಅಲ್ಲಿಗೆ ಹೋಗಿ ಕೂರುತ್ತಿದ್ದೆ. ನಿಸಾರರು ಕ್ಲಾಸ್ ಮುಗಿಸಿಕೊಂಡು ಬರುತ್ತಾ ನನಗೆ ‘ಏನಪ್ಪಾ ದೇಶಭಕ್ತಾ’ ಎನ್ನುತ್ತಿದ್ದರು. ಅದನ್ನು ಕೆಲವೊಮ್ಮೆ ಸಂಕ್ಷಿಪ್ತಗೊಳಿಸಿ ‘ಏನೋ ದೇಭ’ ಎನ್ನುತ್ತಿದ್ದರು. ಲಂಕೇಶರ ಕವನವೊಂದರಿಂದಾಗಿ ಆಗ ‘ದೇಶಭಕ್ತ’ ಎಂಬ ಪದ ಪ್ರಚಲಿತವಾಗಿತ್ತು.

ಆ ಸಂದರ್ಭದಲ್ಲಿ ನಿಸಾರರು ಷೇಕ್ಸ್‌ಪಿಯರನ ಒಥೆಲೊ ನಾಟಕ ಮತ್ತು ಪಾಬ್ಲೊನ ಕವಿತೆಗಳನ್ನು ಅನುವಾದ ಮಾಡುತ್ತಿದ್ದರು. ‘ನೋಡಯ್ಯ ಇದು ಹೇಗಿದೆ’ ಅಂತ ನನಗೆ ತೋರಿಸುತ್ತಿದ್ದರು. ನಾನು ನನ್ನ ಅಭಿಪ್ರಾಯ ಹೇಳುತ್ತಿದ್ದೆ. ಮಧ್ಯಾಹ್ನದ ಊಟವನ್ನೂ ಅಲ್ಲಿಗೇ ತರಿಸುತ್ತಿದ್ದರು. ಅವರ ತಂದೆ ಮನೆ ಜಯನಗರದಲ್ಲಿ ಮತ್ತು ಪತ್ನಿಯ ಮನೆ ಸಿಟಿ ಮಾರ್ಕೆಟ್ ಬಳಿ ಇದ್ದವು. ರಾಜಶೇಖರ ಶೆಟ್ಟಿ ಎಂಬ ಒಬ್ಬ ಕನ್ನಡ ಮೇಷ್ಟು ಸದಾ ನಿಸಾರರ ಜತೆಗಿರುತ್ತಿದ್ದರು. ನಿಸಾರರು ಕಾಲೇಜಿನಿಂದ ಸಂಜೆ ಮನೆಗೆ ಹೋಗುವಾಗ ನಾವೂ ಅವರೊಂದಿಗೆ ಕಾವ್ಯದ ಬಗ್ಗೆ ಮಾತನಾಡುತ್ತ ನಡೆದುಕೊಂಡು ಹೋಗುತ್ತಿದ್ದೆವು. ಮನೆ ಸಮೀಪ ಟೀ ಕೊಡಿಸುತ್ತಿದ್ದರು. ಆಮೇಲೆ ನಮ್ಮ ನಮ್ಮ ಮನೆಗಳಿಗೆ ತೆರಳುತ್ತಿದ್ದೆವು. ಕೆಲವೊಮ್ಮೆ ಗಾಂಧಿ ಬಜಾರ್ ಸರ್ಕಲ್‌ನಲ್ಲಿದ್ದ ಪಾರ್ಥಸಾರಥಿಯವರ ಪುಸ್ತಕದ ಅಂಗಡಿಗೆ

ಹೋಗುತ್ತಿದ್ದೆವು. ಅಲ್ಲಿಯೂ ಕಾವ್ಯ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಒಮ್ಮೆ ರಾಜಾಜಿನಗರದ ರಾಮಮಂದಿರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ದಾಸೇಗೌಡರು ನಿಸಾರರ ಕವಿತೆಗಳ ಬಗ್ಗೆ ವಿಚಾರಸಂಕಿರಣ ಏರ್ಪಡಿಸಿದ್ದರು. ಅಲ್ಲಿ ನಾನೂ ಪ್ರಬಂಧ ಮಂಡಿಸಿದೆ. ನಿಸಾರರಿಗೆ ಸಂತೋಷವಾಯಿತು. ಮುಂದೆ ಅವರ ಮೃಗಾಯಣ, ಅನಾಮಿಕಾ ಅಂಗ್ಲರು ಇತ್ಯಾದಿ ಕೃತಿಗಳು ಬಂದವು ಆದರೆ ಅವುಗಳಲ್ಲಿ ಅವರ ಕಾವ್ಯದ ಪ್ರಖರತೆ ಕಡಿಮೆಯಾಗುತ್ತಿದೆ ಎಂದು ನನಗನ್ನಿಸಿತು. ‘ಸಂಜೆ ಐದರ ಮಳೆಸಂಕಲನದಲ್ಲಿದ್ದಷ್ಟು ತೀವ್ರತೆ ‘ಮೃಗಾಯಣ’ದಲ್ಲಿರಲಿಲ್ಲ. ಆಮೇಲೆ ಅವರು ದಿನಪತ್ರಿಕೆಯೊಂದರಲ್ಲಿ ಅಂಕಣ ಬರೆಯಲಾರಂಭಿಸಿದರು. ಅದರಲ್ಲಿ ಬಹಳ ಆಸಕ್ತಿದಾಯಕ ವಿಷಯಗಳಿರುತ್ತಿದ್ದವು. ಒಮ್ಮೆ ಸರ್ ಮಿರ್ಜಾ ಇಸ್ಮಾಯಿಲ್ ಬಗ್ಗೆ ಅದ್ಭುತವಾಗಿ ಬರೆದಿದ್ದರು. ಕಾವ್ಯ ಮಾತ್ರವಲ್ಲ, ವಿಜ್ಞಾನದ ಬಗ್ಗೆಯೂ ನಿಸಾರ್ ಪುಸ್ತಕಗಳನ್ನು ಬರೆದಿದ್ದರು. ಅವರದು ಅಷ್ಟೇನೂ ಧಾರ್ಮಿಕ ವ್ಯಕ್ತಿತ್ವ ಅಲ್ಲ. ಆದರೆ ರಾಮಕೃಷ್ಣ ಪರಮಹಂಸರ ಬಗ್ಗೆ ಬಹಳ ಗೌರವ ಹೊಂದಿದ್ದರು. ಮತ್ತೆ ಮತ್ತೆ ಆ ವಿಷಯ ಮಾತನಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಅವರ ಹಾಡುಗಳನ್ನು ನಾನು ರೇಡಿಯೋದಲ್ಲಿ ಕೇಳಿದ್ದೆ. ನನಗೂ ಹಾಡು ಬರೆಯಬೇಕು ಎಂಬ ಪ್ರೇರಣೆ ಸಿಕ್ಕಿದ್ದು ನಿಸಾರ್ ಅವರಿಂದ ನನ್ನ ಮೊದಲ ಕವನ ಸಂಕಲನಕ್ಕೆ ಅವರಿಂದಲೇ ಮುನ್ನುಡಿ ಬರೆಸಿದ್ದೆ. ನನ್ನ ಕವಿತೆಗಳಲ್ಲಿ ಕೆಲವು ತಿದ್ದುಪಡಿಗಳನ್ನೂ ಸೂಚಿಸುತ್ತಿದ್ದರು. ಅದರಿಂದ ನನ್ನ ಬರವಣಿಗೆ ಸುಧಾರಣೆಯಾಗುತ್ತಿತ್ತು.

ಇದನ್ನೂ ಓದಿ: ಟ್ರಂಪಣ್ಣನ ಮಾಗಾ… ಸಖತ್ ಹಾಟ್ ಮಗಾ

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ನಿಸಾರರನ್ನು ಸಾಹಿತ್ಯ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದರು. ಅಲ್ಲಿಯೂ ನಾನು ಪ್ರತಿದಿನ ಹೋಗುತ್ತಿದ್ದೆ. ಇಂಗ್ಲಿಷ್ ಅನಿಕೇತನಕ್ಕೆ ನನ್ನನ್ನು ಸಂಪಾದಕನನ್ನಾಗಿ ಮಾಡಿದರು. ಮೊದಲ 3-4 ಸಂಪುಟಗಳನ್ನು ನಾನೇ ನಿರ್ವಹಿಸಿದೆ. ನಿಸಾರರು ಅಧ್ಯಕ್ಷ ಸ್ಥಾನ ಬಿಟ್ಟ ಮೇಲೆ ನಾನೂ ಅಲ್ಲಿಂದ ನಿರ್ಗಮಿಸಿದೆ. ಜಿಎಸ್ಸೆಸ್ ಅಧ್ಯಕ್ಷರಾದ ಮೇಲೆ ಮತ್ತೆ ನನ್ನನ್ನು ಅದರ ಸಂಪಾದಕನನ್ನಾಗಿ ಮಾಡಿದ್ದರು. ಬಿಎಸ್ಸೆಸ್‌ಗೂ ನಿಸಾರರಿಗೂ ಆಗುತ್ತಿರಲಿಲ್ಲ. ‘ನಿಸಾರ್ ಒಳ್ಳೆಯ ಕವಿ, ಆದರೆ ಮನುಷ್ಯ ಸರಿ ಇಲ್ಲ’ ಎನ್ನುತ್ತಿದ್ದರು ಜಿಎಸ್ಸೆಸ್. ಇವರೂ ಕೂಡ ಜಿಎಸ್ಸೆಸ್ ಬಗ್ಗೆ ಬಹಳ ಜೋಕ್ ಗಳನ್ನು ಮಾಡುತ್ತಿದ್ದರು.

ನಂತರ ನಾನು ರಂಗಭೂಮಿಯಲ್ಲಿ ವ್ಯಸ್ತನಾದೆ. ನಿಸಾರರಿಗೆ ನಿವೃತ್ತಿ ಹತ್ತಿರ ಬಂದಾಗ ಕಲಬುರಗಿಗೆ ವರ್ಗಾವಣೆ ಆಯಿತು. ಅದನ್ನು ರದ್ದು ಮಾಡಿಸಲು ನಾನು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ನಾನು ದೆಹಲಿಗೆ ಹೋದೆ. ತಮಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಗಬೇಕೆಂಬುದು ಆಗ ನಿಸಾರರ ಆಸೆಯಾಗಿತ್ತು. ನಾನು ದೆಹಲಿಯಲ್ಲಿದ್ದೂ ಅದನ್ನು ಕೊಡಿಸಲು ಸಹಾಯ ಮಾಡುತ್ತಿಲ್ಲ ಎಂಬ ಅಸಮಾಧಾನ ನಿಸಾರರಿಗೆ ಮೂಡಿತು. ‘ಅದಕ್ಕೆ ಬೇರೆ ಸಮಿತಿ ಇರುತ್ತೆ, ಅದರಲ್ಲಿ ನನ್ನ ಪಾತ್ರ ಏನೂ ಇಲ್ಲ’ ಎಂದು ನಾನು ಸ್ಪಷ್ಟಪಡಿಸಿದೆ. ಆದರೂ ಅವರಿಗೆ ನಂಬಿಕೆ ಬರಲಿಲ್ಲ. ಒಮ್ಮೆ ಬೆಂಗಳೂರಿಗೆ ಬಂದಾಗ ನಿಸಾರರನ್ನು ಭೇಟಿ ಮಾಡಿದೆ. ಸ್ನೇಹವನ್ನು ಮತ್ತೆ ಕುದುರಿಸಿಕೊಳ್ಳಲು ಪ್ರಯತ್ನಿಸಿದೆ. ನನಗೂ ಕೆಲಸದ ಭಾರ ಹೆಚ್ಚಾಗಿದ್ದುದರಿಂದ ಮುಂದುವರಿಸಲು ಸಾಧ್ಯವಾಗಲಿಲ್ಲ.

ಈಗ ನಾಟಕ ಅಕಾಡೆಮಿ ಅಧ್ಯಕ್ಷರಾಗಿರುವ ನಾಗರಾಜಮೂರ್ತಿ ಕೂಡ ನಿಸಾರರ ವಿದ್ಯಾರ್ಥಿ, ಒಮ್ಮೆ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ‘ನಿಸಾರರ ಕಾವೋತ್ಸವ’ ಏರ್ಪಡಿಸಿದ್ದರು. ಅಲ್ಲಿ ನಿಸಾರರ ಕವಿತೆಗಳನ್ನು ಕಿರಂ ನಾಗರಾಜ್ ಕಟುವಾಗಿ ಟೀಕಿಸಿದರು. ಅದು ನಿಸಾರರಿಗೆ ಹಿಡಿಸಲಿಲ್ಲ. ‘ಅವನನ್ನ ಯಾಕಯ್ಯಾ ಕರೆಸಿದ್ದೀಯ’ ಎಂದು ತರಾಟೆಗೆ ತೆಗೆದುಕೊಂಡರು. ನಿಸಾರರದು ಅತಿ ಸೂಕ್ಷ್ಮ ಮನಸ್ಸು. ಪ್ರಶಂಸೆಯನ್ನು ಪ್ರೀತಿಸುತ್ತಿದ್ದರು. ಒಂದು ರೀತಿ ಮಗುವಿನ ಸ್ವಭಾವ ಅವರದು. ಅವರ ಬಟ್ಟೆಬರೆಯೂ ವಿಶಿಷ್ಟ. ಯಾವಾಗಲೂ ಸೂಟು, ಬೂಟು, ಟೈ, ತೀರಾ ಬಿಸಿಲಿದ್ದರೆ ಮಾತ್ರ ಶರ್ಟ್. ಯಾವಾಗಲೂ ಅತ್ತರ್ ಹಾಕಿಕೊಳ್ಳುತ್ತಿದ್ದರು. ಅದರ ಸುಗಂಧ ಸುತ್ತಮುತ್ತ ಹರಡಿರುತ್ತಿತ್ತು. ಆ ಅತ್ತರು ಮತ್ತೆ ನನಗೆ ನನ್ನ ಮತ್ತು ಅವರ ಸಂಬಂಧದ, ಸ್ನೇಹದ, ಆತ್ಮೀಯತೆಯ ವಾಹಕವಾಗಿ ನೆನಪಿಗೆ ಬರುತ್ತಿದೆ.ಕನ್ನಡದ ಪ್ರಥಮ ದರ್ಜೆ ಕವಿಗಳಲ್ಲಿ ಒಬ್ಬರಾದ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಅನೇಕ ಸಂದರ್ಭಗಳಿಂದಾಗಿ ಶಿವಮೊಗ್ಗ ಜನತೆಯೊಂದಿಗೆ ತುಂಬ ಆತ್ಮೀಯವಾದ ನಂಟನ್ನು ಹೊಂದಿದ್ದರು. ಅವರು ಇಲ್ಲಿನ ಸಹ್ಯಾದ್ರಿ ಸರ್ಕಾರಿ ಕಾಲೇಜಿನಲ್ಲಿ ಭೂವಿಜ್ಞಾನದ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಅದು ಅವರ ಕಾವ್ಯ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲವಾಗಿತ್ತು. ಅವರ ಅತ್ಯುತ್ತಮವಾದಂಥ ಕೆಲವು ಪದ್ಯಗಳನ್ನು ಶಿವಮೊಗ್ಗದಲ್ಲಿ ಇದ್ದಾಗ ಬರೆದಿದ್ದಾರೆ. ಉದಾಹರಣೆಗೆ ಅವರಿಗೆ ಬಹಳ ಪ್ರಸಿದ್ದಿ ತಂದುಕೊಟ್ಟ ‘ಸಂಜೆ ಐದರ ಮಳೆ’ ಕವನ ಸಂಕಲನದ ಶೀರ್ಷಿಕೆ ಅವರ ಆ ಸಂಕಲನದಲ್ಲಿರುವ ಸಹ್ಯಾದ್ರಿ ಕಾಲೇಜಿನಲ್ಲಿ ಸಂಜೆ ಐದರ ಮಳೆ’ ಕವನದಿಂದ ತೆಗೆದುಕೊಂಡಿದ್ದು, ಅವರ ನಿತ್ಯೋತ್ಸವ ಕವಿತೆಗೂ ಇಲ್ಲಿಯ ಜೋಗದ ಸಿರಿ, ಮಲೆನಾಡಿನ ವೈಭವವೇ ಒಂದು ರೀತಿಯ ಪ್ರೇರಣೆಯಾಗಿದೆ.

ನಿಸಾರ್ ಅವರು ತುಂಬ ಪ್ರೀತಿ ಹಾಗೂ ಸ್ನೇಹದ ವ್ಯಕ್ತಿಯಾಗಿದ್ದರಿಂದ ಎಲ್ಲರನ್ನೂ ಬಹಳ ಸುಲಭವಾಗಿ ಆಕರ್ಷಿಸುತ್ತಿದ್ದರು, ಅವರ ಜತೆಗೆ ಬಹಳ ಅತ್ಮೀಯವಾದ ಸಂಬಂಧಗಳನ್ನು ಕೂಡ ಇಟ್ಟುಕೊಳ್ಳುತ್ತಿದ್ದರು ಎಂದು ಅವರ ಅನೇಕ ಒಡನಾಡಿಗಳು ನೆನಪು ಮಾಡಿಕೊಳ್ಳುತ್ತಾರೆ. ನಾನು ಅವರನ್ನು ಮೊದಲು ಭೇಟಿ ಮಾಡಿದ್ದು ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ. ಉಡುತಡಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದ ಸಂಬಂಧ. ಆಗಲೇ ನನಗೆ ಅವರ ನಡುವಳಿಕೆ, ಸಜ್ಜನಿಕೆ, ಅಧಿಕಾರ ಸ್ಥಾನದಲ್ಲಿದ್ದ ಪ್ರಸಿದ್ದ ಕವಿಯಾದರೂ ಅವರು ನಡೆಸಿಕೊಳ್ಳುತ್ತಿದ್ದ ಸಹಜತೆ ಬಹಳ ಇಷ್ಟವಾಗಿತ್ತು. ಆ ನಂತರ ಆಗಾಗ ಅಲ್ಲಲ್ಲಿ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೆವು ಅಷ್ಟೇ. ಅವರು ಅಜಾತ ಶತ್ರುವಾಗಿದ್ದರು ಹಾಗೂ ಎಲ್ಲ ತಲೆಮಾರಿನ ಬರಹಗಾರರಿಗೂ ಹತ್ತಿರದವರೇ ಆಗಿದ್ದರು. ಅವರ ಸ್ವಭಾವವೇ ಹಾಗೆ. ನಾವು ಅವರ ಕಾವ್ಯ ಓದಿದರೂ ನಮಗೆ ಅವರ ಸೂಕ್ಷ್ಮತೆ ಅರ್ಥವಾಗುತ್ತದೆ. ಮುಸ್ಲಿಂ ಸಮುದಾಯಕ್ಕೆ ಸೇರಿರುವ ವ್ಯಕ್ತಿಗಳು ಅನುಭವಿಸಬೇಕಾದಂಥ ಅಂದರೆ ಅವರ ಬಗ್ಗೆ ಇತರರು ತೋರಿಸಬಹುದಾದಂಥ ಗುಮಾನಿಗಳು, ಸಂಶಯಗಳು… ಇವುಗಳ ಬಗ್ಗೆ ಅವರು ಬಹಳ ಸೂಕ್ಷ್ಮವಾದಂಥ ಒಂದು ಪದ್ಯವನ್ನು ಬರೆದಿದ್ದಾರೆ.

ಅಲ್ಲದೆ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಸಂಪ್ರದಾಯ ಮತ್ತು ಆಧುನಿಕತೆಯನ್ನು ಅವರು ಹೇಗೆ ನಿಭಾಯಿಸಬೇಕಾಗುತ್ತದೆ ಅನ್ನುವುದನ್ನೂ ಅಷ್ಟೇ ಸುಂದರವಾಗಿ ಬರೆದಿದ್ದಾರೆ. ಅವರ ವ್ಯಕ್ತಿತ್ವವೇ ಒಂದು ರೀತಿಯ ಸಮನ್ವಯದ ವ್ಯಕ್ತಿತ್ವ. ಅಜಾತಶತ್ತು ಸ್ವಭಾವವಾದ್ದರಿಂದ ಎಲ್ಲರನ್ನೂ ಸಮನ್ವಯಗೊಳಿಸಿ ಕಹಿ ಭಾವನೆ ಯಾರಲ್ಲೂ ಉಳಿಯದ ಹಾಗೆ ನೋಡಿಕೊಳ್ಳುತ್ತಿದ್ದರು. ಅವರ ವ್ಯಕ್ತಿತ್ವದ ಘನತೆ, ತೆರೆದ ಮನಸ್ಸು ಮತ್ತು ಅವರಿಗೆ ಇದ್ದಂಥ ಈ ಸಮನ್ವಯದ ಸ್ವಭಾವ ಇದೆಲ್ಲ ಬಹಳ ಮುಖ್ಯ. ಅವರನ್ನು ಕನ್ನಡ ಸಮಾಜ ಒಪ್ಪಿಕೊಂಡಿದ್ದು, ಪ್ರೀತಿಸಿದಂಥ ರೀತಿ ಬಹಳ ಅನನ್ಯವಾಗಿತ್ತು. ಅವರು ನವ್ಯ ಕವಿಯಾಗಿಆರಂಭಿಸಿದರು. ಅಮೇಲೆ ಜನರಿಗೂ ಪ್ರಿಯವಾದಂಥ ಸರಳವಾದ ಮತ್ತು ಸುಂದರವಾದ ಹಾಡುಗಳನ್ನು ಅವರು ಬರೆದರು. ಬಹುಶಃ ಅವರ ತಲೆಮಾರಿನ ಕವಿಗಳಲ್ಲೇ ಇಷ್ಟೊಂದುಜನರನ್ನು ತಲುಪುವಂಥ ಸಾಮರ್ಥ್ಯವನ್ನು ತೋರಿಸಿದವರು ನಿಸಾರ್ ಅಹಮದ್. ನಾನು ಕೇಳಿದ ಅವರ ಕೊನೆಯ ಭಾಷಣ ಅಂದರೆ ಬೆಂಗಳೂರಿನಲ್ಲಿ ಡಾ. ಯು. ಆರ್. ಅನಂತಮೂರ್ತಿ ಅವರ ಕುರಿತು ನಡೆದ ಒಂದು ವಿಚಾರಸಂಕಿರಣದಲ್ಲಿ.

ಬೆಳಗಿನ ಗೋಷ್ಠಿಗೆ ಅವರು ಅಧ್ಯಕ್ಷರಾಗಿ ಬಂದಿದ್ದರು. ಅಗಲೇ ಅವರಿಗೆ ಆರೋಗ್ಯ ಚೆನ್ನಾಗಿರಲಿಲ್ಲ. ಯಾರದೋ ಸಹಾಯದ ಜೊತೆಗೆ ನಡೆದುಕೊಂಡು ವೇದಿಕೆಗೆ ಬಂದರು. ಆದರೆ ಅವರ ಸ್ನೇಹಿತರಾದ ಅನಂತಮೂರ್ತಿ ಅವರ ನೆನಪುಗಳು ಅವರಿಗೆ ಹೇಗೆ ನುಗ್ಗಿ ಬಂದವು ಅಂದರೆ ಸುಮಾರು 45 ನಿಮಿಷಗಳಿಗಿಂತ ಹೆಚ್ಚು ಕಾಲ ಅನಂತಮೂರ್ತಿ ಅವರ ಸ್ವಭಾವ, ಜೀವನ, ಅವರ ಜತೆಗೆ ಇವರಿಗಿದ್ದ ಸಂಬಂಧ ಕಾವ್ಯ, ಸಾಹಿತ್ಯದ ಕುರಿತ ಭಿನ್ನಾಭಿಪ್ರಾಯ ಇದ್ದರೂ ಅವೆಲ್ಲವನ್ನು ಮೀರಿದಂಥ ಗೆಳೆತನ ಇವೆಲ್ಲವನ್ನೂ ನೆನಪು ಮಾಡಿಕೊಂಡರು. ನಿಸಾರ್ ಅವರ ಸ್ನೇಹಿತರೆಲ್ಲ ಹೇಳುವ ಹಾಗೆ ಯಾವಾಗ ಭೇಟಿಯಾದರೂ ಶಿವಮೊಗ್ಗದ ನೆನಪುಗಳನ್ನು ಹಂಚಿಕೊಂಡಾಗ ಅವರು ತುಂಬ ಸಂತೋಷ ಪಡುತ್ತಿದ್ದರು. ಇಲ್ಲಿಯ ನೆನಪುಗಳು ಅವರಿಗೆ ಯಾವಾಗಲೂ ಬಹಳ ಅರ್ಥಪೂರ್ಣವಾಗಿಯೇ ಉಳಿದವು. ಶಿವಮೊಗ್ಗ ಕೂಡ ಅವರನ್ನು ಅಷ್ಟೇ ಪ್ರೀತಿಯಿಂದ ಇವತ್ತಿಗೂ ನೆನಪು ಮಾಡಿಕೊಳ್ಳುತ್ತಿದೆ ಎನ್ನುವುದು ಸಾಂಸ್ಕೃತಿಕವಾಗಿ ಬಹಳ ಮುಖ್ಯವಾದ ಸಂಗತಿ.

Leave a Comment