ಪಾರದರ್ಶಕತೆ ಅಗತ್ಯ

ಪಾರದರ್ಶಕತೆ ಅಗತ್ಯ

ವಿಶ್ವವಿದ್ಯಾಲಯವೊಂದಕ್ಕೆ ನ್ಯಾಷನಲ್ ಅಸೆಸ್‌ಮೆಂಟ್ ಆ್ಯಂಡ್ ಅಕ್ರೆಡಿಟೇಶನ್ಕೌನ್ಸಿಲ್ (ಎನ್ಎಎಎಸಿ – ನ್ಯಾಕ್) ರೇಟಿಂಗ್ ನೀಡಲು ಕೋಟ್ಯಂತರ ರೂ.

ಲಂಚ ಪಡೆದ ಪ್ರಕರಣ ಈಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಸಮಿತಿಯ ಆರು ಸದಸ್ಯರು ಸೇರಿದಂತೆ 10 ಜನರನ್ನು ಸಿಬಿಐ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಇದರಲ್ಲಿ ದಾವಣಗೆರೆಯ ಒಬ್ಬ ಮಹಿಳಾ ಪ್ರೊಫೆಸರ್ ಕೂಡ ಇದ್ದಾರೆ. ಪ್ರಕರಣದಲ್ಲಿ ಬಂದಿತರಾಗಿರುವ ತನ್ನ ಒಬ್ಬ ಪ್ರೊಫೆಸರ್‌ರನ್ನು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮಂಗಳವಾರ ಸೇವೆಯಿಂದ ಸಸ್ಪೆಂಡ್ ಮಾಡಿದೆ. ಮೇಲ್ನೋಟಕ್ಕೆ ಈ ಪ್ರೊಫೆಸರ್ ಮಾಡಿರುವುದು ತಪ್ಪೆಂದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ವಿವಿಯ ಕುಲಪತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನ ವದ್ದೇಶ್ವರಂನಲ್ಲಿರುವ ಕೊನೇರು ಲಕ್ಷ್ಮಯ್ಯ ಶಿಕ್ಷಣ ಪ್ರತಿಷ್ಠಾನಕ್ಕೆ ಎ+ ರೇಟಿಂಗ್ ನೀಡುವುದಕ್ಕೆ ಸಂಬಂಧಿಸಿದ ಪ್ರಕರಣ ಇದು, ರೇಟಿಂಗ್ ನೀಡುವ ಮುನ್ನ ನ್ಯಾಕ್ ಸಮಿತಿಯ ಸದಸ್ಯರು ಸಂಬಂಧಿಸಿದ ವಿದ್ಯಾಸಂಸ್ಥೆಗೆ ಬೇಟಿ ನೀಡಿ ಎಲ್ಲ ಸೌಲಭ್ಯಗಳನ್ನು ಪರಿಶೀಲಿಸುತ್ತಾರೆ. ಈ ಸಂದರ್ಭದಲ್ಲಿಯೇ ಸಮಿತಿಯವರು ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟರು ಎಂಬ ಗಂಭೀರ ಆರೋಪ ಬಂಧನಕ್ಕೆ ಕೇಳಿಬಂದಿದೆ.

ಇದನ್ನೂ ಓದಿ: ನಿಸಾರರ ಸೂಟು, ಬೂಟು, ಅತ್ತರ್ ಮತ್ತು ದಿಲ್ಲಗಿ ಅಜಾತಶತ್ರು…

ಅಧಿಕಾರಿಗಳಿಂದ ಬಂಧನಕ್ಕೆ ಒಳಗಾದವರಲ್ಲಿ ಆ ವಿದ್ಯಾಸಂಸ್ಥೆಯ ಅಧ್ಯಕ್ಷ, ಕುಲಪತಿ, ನಿರ್ದೇಶಕ ಮತ್ತು ಉಪಾಧ್ಯಕ್ಷರು ಕೂಡ ಇದ್ದಾರೆ. ಇನ್ನು ಕೆಲವು ಅತಿ ಗಣ್ಯರ ಹೆಸರುಗಳನ್ನು ಪ್ರಥಮ ವರ್ತಮಾನ ವರದಿಯಲ್ಲಿ ಇದ್ದು, ಅವರನ್ನು ಇನ್ನೂ ಬಂಧಿಸಲು ತನಿಖಾ ಸಂಸ್ಥೆಗೆ ಸಾಧ್ಯವಾಗಿಲ್ಲ. ಅತ್ಯುತ್ತಮ ರೈಟಿಂಗ್ ನೀಡಿದರೆ ಹಣ ಕೊಡುವುದಾಗಿ ನ್ಯಾಕ್ ಸಮಿತಿ ಸದಸ್ಯರಿಗೆ ವಿದ್ಯಾಸಂಸ್ಥೆಯ ಪದಾಧಿಕಾರಿಗಳೇ 1.8 ಕೋಟಿ ರೂ. ಹಣದ ಆಮಿಷ ಒಡ್ಡಿದ್ದರೆಂಬುದು ಸಿಬಿಐ ತನಿಖೆಯಲ್ಲಿ ಧೃಡಪಟ್ಟಿದೆ. ಅಕ್ರೆಡಿಟೇಷನ್ ಸಮಿತಿಯ ಅಧ್ಯಕ್ಷರಿಗೆ ಮತ್ತು ರೇಟಿಂಗ್ ವರದಿಯ ಕರಡು ತಯಾರಿಸುವವರಿಗೆ ತಲಾ 10 ಲಕ್ಷ ರೂ. ನಗದು, ಸಮಿತಿಯ ಪ್ರತಿಯೊಬ್ಬ ಸದಸ್ಯರಿಗೆ 3 ಲಕ್ಷ ರೂ. ನಗದು, ಒಂದು ಲ್ಯಾಪ್‌ಟಾಪ್ ಕೊಡುವುದಾಗಿವಿದ್ಯಾಸಂಸ್ಥೆ ಹೇಳಿತ್ತೆನ್ನಲಾಗಿದೆ. ಸಂಬಂಧಿಸಿದ ವಿದ್ಯಾಸಂಸ್ಥೆಗೆ ಮತ್ತು ಸಮಿತಿ
ಸದಸ್ಯರ ಮನೆಗಳಿಗೆ ದಾಳಿ ನಡೆಸಿದ ಸಿಬಿಐ ಈಗಾಗಲೇ 37 ಲಕ್ಷ ರೂ. ನಗದು, 6
ಲ್ಯಾಪ್‌ಟಾಪ್ ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) 1994ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ‘ನ್ಯಾಕ್’ನ ಪ್ರಮುಖ ಕಾರ್ಯ ಭಾರತದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪರಿಶೀಲಿಸಿ ಅವುಗಳಿಗೆ ರೇಟಿಂಗ್ ನೀಡುವುದು. ಅದಕ್ಕಾಗಿ ವಿಸ್ತೃತ ನಿಯಮಾವಳಿಗಳು ಅಸ್ತಿತ್ವದಲ್ಲಿವೆ. ಇದರಲ್ಲಿ ರೇಟಿಂಗ್ ಪಡೆಯುವ ವಿದ್ಯಾಸಂಸ್ಥೆಗೆ ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕ ವಲಯದಲ್ಲಿ ಗೌರವ ಹೆಚ್ಚಾಗುತ್ತದೆ. ಆದರೆ, ಶಿಕ್ಷಣದ ಗುಣಮಟ್ಟವನ್ನು ಕಾಪಾಡುವುದಕ್ಕಾಗಿ ರೂಪುಗೊಂಡ ಈ ವ್ಯವಸ್ಥೆ ಹೇಗೆ ಹಾಳಾಗಿದೆ ಎಂಬುದಕ್ಕೆ ಪ್ರಸಕ್ತ ಲಂಚ ಪ್ರಕರಣವೇ ಜ್ವಲಂತ ಸಾಕ್ಷಿಯಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಈ ಪ್ರಕರಣ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಗೇ ನಾಚಿಕೆಗೇಡು. ‘ನ್ಯಾಕ್’ ರೇಟಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮುಂದಾಗಬೇಕಿದೆ.

Leave a Comment