ಸರಹದ್ದಿನ ಕೊನೆಯ ಅಂಚು… ಅಲಾಂಗ್

ಸರಹದ್ದಿನ ಕೊನೆಯ ಅಂಚು… ಅಲಾಂಗ್

ವಿದೇಶ ಪ್ರವಾಸ ಕತೆಗಳನ್ನೇ ಹೇಳುತ್ತಿದ್ದೀರಿ ಎನ್ನುವ ಓದುಗರ ಪ್ರೀತಿಗೆ, ಒಂದು ಮಾತು. ನಿಜ ಹೇಳಬೇಕೆಂದರೆ ಭಾರತದಲ್ಲಿ ಈ ಜನ್ಮ ಪೂರ್ತಿ ಸುತ್ತಿದರೂ ಮುಗಿಯದ ಕತೆಗಳಿವೆ. ಏನಿಲ್ಲ ಎಂದರೂ ಪ್ರತಿ ರಾಜ್ಯದಲ್ಲೂ ಕನಿಷ್ಠ ಎರಡು ವಾರದಿಂದ ಮಾಸಗಟ್ಟಲೇ ತಂಗಿದ್ದೇನೆ. ಆದರೂ ಇಷ್ಟೆಲ್ಲ ಬಾಕಿ ಇದೆಯಲ್ಲ ಎಂದು ಮತ್ತೆಮತ್ತೆ ಬಕೆಟ್ ಲಿಸ್ಟ್ ಬೆಳೆಯುತ್ತಿರುತ್ತದೆ ಹೊರತು ಈ ನೆಲ ಆಫ್‌ಬೀಟ್ ಪ್ರವಾಸಿಗೆ ಮುಗಿಯುವುದೇ ಇಲ್ಲ. ಭಾರತದ ಯಾವುದೇ ದಿಕ್ಕಿನ ಸರಹದ್ದಿಗೆ ಹೋದರೂ ಅಲ್ಲೊಂದು ಜಾಗ ನಿಮಗಾಗಿ ಕಾಯ್ದಿರುತ್ತದೆ. ವಿದೇಶದಲ್ಲಿ ವಿಶೇಷತೆಗಳೆಂದರೆ ನಿಸರ್ಗಜನ್ಯ ಪ್ರದೇಶಕ್ಕೆ ಆಧುನಿಕ ಸ್ಪರ್ಶವೇ ಜಾಸ್ತಿ. ಅಲ್ಲೆಲ್ಲ ಇದ್ದ ಮೂರು ಮೊಳೆತ್ತರದ ನೀರು ಬೀಳುವ ಪ್ರದೇಶ ಅಲ್ಲಿನ ನಯಾಗಾರ ಆದರೆ, ಎಲ್ಲೋ ಒಂದೆರಡು ಕಿ.ಮೀ. ನೀರಿನ ಒಸರೆ ಕೆಲೆವೆಡೆ ಅಮೇಜಾನು. ಹಾಗಾಗಿ ನೈಜ ಎನ್ನುವ ಪ್ರದೇಶಕ್ಕಿಂತ ಶಿಸ್ತಿನ ಸಿಪಾಯಿಯಂತಹ ಕೊರೆದಿಟ್ಟು ಮಾಡಿದ ಸೌಂದರ್ಯ ತತಕ್ಷಣಕ್ಕೆ ನಮ್ಮನ್ನು ವಿದೇಶದಲ್ಲಿ ಆಕರ್ಷಿಸಿ ಬಿಡುತ್ತದೆ.


ಭಾರತದ ನಿಸರ್ಗ ಸೌಂದರ್ಯದಂತೆ, ವಿಪರೀತ ಹಿಮಾಚ್ಛಾದಿತ ಬೆಟ್ಟಗಳಿಂದ ಹಿಡಿದು ಸಮುದ್ರ ಮತ್ತು ಮರಳುಗಾಡಿನ ಬೀಡು ಇತ್ಯಾದಿ ಇನ್ನಾವುದೇ ದೇಶದಲ್ಲಿ ಮೇಲೆ ಹೀಗೆ ಒಟ್ಟಿಗೆ ದಕ್ಕುವುದು, ಬಹುಶಃ ಇದ್ದಿರಲಿಕ್ಕೂ ಇಲ್ಲ. ಹಾಗಾಗಿ ಇಲ್ಲಿ ದೇಶ ಸುತ್ತದಿದ್ದರೆ ವಿದೇಶದ ನೈಜತೆ ಮತ್ತು ನಿಜವಾದ ಭಾರತೀಯತೆ ಅರಿವಿಗೆ ದಕ್ಕದು.
ಭಾರತದ ನೆಲವನ್ನು ಸೃಷ್ಟಿ ಹುಟ್ಟಿಸಿದ ರೀತಿಯೇ ವಿಸ್ಮಯ. ಇಲ್ಲಿ ವಿದೇಶಿ ನೆಲದ ಹಾಗೆ ಕೃತಕ ಶಿಸ್ತಿನ ಪರಿಚಯವೇ ಬೇಕಿಲ್ಲ. ಆದರೆ ಜನಸಾಮಾನ್ಯರಲ್ಲಿ, ಪ್ರವಾಸಿಗರಲ್ಲಿ ಬೇಕಿರುವ ಶಿಸ್ತು ಮಾತ್ರ ನಮ್ಮಲ್ಲಿ ಅಪೂಟು ಇಲ್ಲ ಎಂದರೂ ತಪ್ಪಿಲ್ಲ. ಸುಮ್ಮನೆ ಸಪ್ತ ಸಹೋದರಿಯರ ಈ ನಾಡಿಗೆ ಕಾಲಿಟ್ಟು, ಮಧ್ಯಾಹ್ನ ಒಂದು ಜಿಲ್ಲೆ, ಸಂಜೆಗೆ ಮತ್ತೊಂದು ರಾಜ್ಯದ ಸರಹದ್ದು, ರಾತ್ರಿ ನಿದ್ರೆ ಅದರ ಪಕ್ಕದ ರಾಜ್ಯದಲ್ಲಿ ಎಂದು ಸುತ್ತುತ್ತ, ಬುಲೆಟ್ ಹತ್ತಿ ತಿರುಗುವಾಗ ದಕ್ಕಿದ ಈ ಪ್ರದೇಶ ಭಾರತದ ಸರಹದ್ದಿನ ಕೊನೆಯ ಆದರೆ ನಮ್ಮನ್ನು ಸುಲಭಕ್ಕೆ ತಲುಪಿಸಿಕೊಳ್ಳದ ಆಯಕಟ್ಟಿನ ಪ್ರದೇಶವೂ ಹೌದು. ಕಾರಣ ಭಾರತೀಯ ಮತ್ತು ಚೀನಾ ಸೇನೆಯ ಚಲನವಲನ ವಿಪರೀತ ಎಂಬಷ್ಟರ ಮಟ್ಟಿಗೆ ಇಲ್ಲೆಲ್ಲ ಸುತ್ತುವರಿದಿದೆ. ಅಲಾಂಗ್ ಆಹಾರದಿಂದ ನೀರಿನವರೆಗೂ ವಿಭಿನ್ನ. ಮೂರೂ ದಿಕ್ಕು ವಿದೇಶಿ ಸರಹದ್ದು ಮತ್ತು ಏಕಮುಖ ಪ್ರವೇಶ, ಊರಿನ ಪ್ರತಿ ಮನೆಯೂ ಗೆಸ್ಟ್‌ಹೌಸು. ಜೊತೆಗೆ ಬೆಳಗು ದೊಡ್ಡದು, ಸಂಜೆ ಚಿಕ್ಕದು, ಸುಮ್ಮನೆ ತಿರುಗಿದರೆ ಇದು ಆಫ್‌ಬೀಟ್‌ಗಳಿಗೂ ದಕ್ಕದು.

ಇದನ್ನೂ ಓದಿ: ಹಿರಿಯರಮೌನಕ್ಕೆ ಅಸಮಾಧಾನ

ಸರಹದ್ದಿನ ತಂಪಾದ ಗಾಳಿಯ ಜೊತೆ ಕಲ್ಮಶವಿಲ್ಲದ ರಸ್ತೆಗಳಲ್ಲಿ ಸರಸರನೆ ಬೆಳಗಿನ ವಾಕಿಂಗ್ ಹೊರಟು ನಿಂತರೆ, ನೇರ ಚೀನಿಯರ ಬಂದೂಕಿನೆದುರೇ ನಿಲ್ಲಬೇಕಾದ ಪರಿಸ್ಥಿತಿ. ಕಾರಣ ಒಮ್ಮೆ ಉಸಿರು ಹಿಡಿದು ಓಡಿದರೂ ಸಾಕು ಸರಹದ್ದಿನ ಕುತ್ತಿಗೆಯ ಮೇಲೆ ನಮ್ಮ ಕಾಲಿರುತ್ತದೆ. ಯಾವ ಕಡೆ ಓಡಿದರೂ ಚೀನಿಯ ಬಾರ್ಡರು ಸುತ್ತುವರಿಯುತ್ತದೆ. ಅದಕ್ಕೂ ಮೊದಲೇ ನಮ್ಮ ಬಾರ್ಡರ್ ಪೋರ್ಸು ನಮ್ಮನ್ನು ತಡೆದು ಹಿಂದಿರುಗಿಸುತ್ತದೆ. ಇಂಥ ಫಜಿತಿಯೇ ಬೇಡ ಎಂದು ಈ ಊರ ಸುತ್ತಲೂ ಮೂರು ಕಡೆ ಭಾರತೀಯ ಸೈನಿಕರ ಕಾವಲು ಪಡೆ, ಒಂದೆಡೆಗೆ ನೇರ ದಾರಿಯ ಮೇಲೆ ಆ ದಿನದ ವ್ಯವಹಾರಕ್ಕಾಗಿ, ಪ್ರವಾಸ, ಚಾರಣ, ಸರಹದ್ದಿನ ಕಟ್ಟಕಡೆಯ ಊರು ಎಂದು ನೋಡಲು ಬರುವವರು, ಅವರನ್ನೆಲ್ಲ ಎದುರುಗೊಳ್ಳಲು, ಚಾರಣಕ್ಕೆ ಸಹಾಯ ಮಾಡುವ ಗೈಡು, ಮೂರು ಗಾಲಿಯ ಗುಡುಗುಡಿಸುವ ಬೈಕುಗಳು, ವಿಶೇಷ ಆಹಾರವಾಗಿ ಸರಿಯಾಗಿ ಹದಿನೈದು ದಿನಗಳ ಬಿಸಿಲಿನಲ್ಲಿ ಹದವಾಗಿ ಒಣಗಿಸಿ ಉಪ್ಪು ಹಾಕಿ ದಾರ ಬಿಗಿದಿಟ್ಟ ಒಣಅಳಿಲು ಮಾರುವವರು, ಬೇಕಿದ್ದರೆ ಅವನ್ನೆಲ್ಲ ಅಲ್ಲೆ ಸುಲಿದು, ಕರಿದು, ಮೆಣಸಿನ ಪುಡಿ ಉದುರಿಸಿ, ಬಿಸಿಬಿಸಿ ಕಡುಕಪ್ಪು ಚಹಾದೊಂದಿಗೆ ಪ್ರೀತಿಯನ್ನು ಸೇರಿಸಿ ಎದುರಿಗಿಟ್ಟು ನಿಲ್ಲುವ ಸ್ಥಳೀಯ ಅಮ್ಮಂದಿರು, ಹೀಗೆ ಎಲ್ಲ ಒಂದು ದಾರಿಯ ತುದಿಗೆ ಜಮೆಯಾಗಿ ಅಲ್ಲೊಂದು ಸಣ್ಣಸಂತೆ ನೆರೆದಿರುತ್ತದೆ. ಹೆಸರಿಗೆ ಊರು ಮತ್ತು ಮನೆಗಳಿದ್ದರೂ ಇದು ಗಿಜಿಗಿಡುವುದು. ನನ್ನಂಥ ಅಲೆಮಾರಿಗಳ ಸಂತೆಯಿಂದಲೇ.


ಸ್ಥಳೀಯ ಮನೆಗಳೆಲ್ಲ ಹೆಚ್ಚು ಕಮ್ಮಿ ಗೆಸ್ಟ್ ಹೌಸಗಳೆ. ಯಾರ ಮನೆಗೆ ಬೇಕಿದ್ದರೂ ವಿಚಾರಿಸದೆ ನುಗ್ಗಬಹುದು. ಅಲ್ಲೂ ಒಣ ಅಳಿಲು, ಲಿಂಬೆರಸದ ಜೊತೆಗಿನ ಕಪ್ಪುಚಹಾ. ಶುದ್ಧ ಶಾಖಾಹಾರಿಯಾದರೆ ಬಿದಿರ ಕಳಲೆ ಒಣಗಿಸಿ ಉಪ್ಪು ಉದುರಿಸಿ ಮಾಡಿದ ಚಿಪ್ಪು ಸಹಾಯಕ್ಕೆ ಬರುತ್ತದೆ. ಆಲೂಗಡ್ಡೆ ಅಲ್ಟಿಮೇಟ್ ಆಹಾರವಾಗಿ ಧಾರಾಳ. ಸಂಜೆಯ ಐದು ಗಂಟೆಗೆಲ್ಲ ರಣರಣ ಕತ್ತಲು ಅಡರಿ, ಬಿದಿರಿನ ವಾದನ ಸಾಧಕದಲ್ಲಿ ಅಲ್ಲೆಲ್ಲೋ ಅರ್ಥವಾಗದ ಬುಡಕಟ್ಟಿನ ಧ್ವನಿಗೆ ಹಿಮ್ಮೇಳ ನುಡಿಯುತ್ತಿದ್ದರೆ, ಇದ್ದಿದ್ದರಲ್ಲೇ ಹದಿವಯಸ್ಸಿನ ಹುಡುಗರು ಇನ್ನೂ ಆರಿರದ ಸೋಲಾರ್ ದೀಪದ ಕೆಳಗೆ ಪುಟ್ ಬಾಲ್ ಆಡುತ್ತಿರುತ್ತವೆ. ಊರ ಮೊದಲೋ ಕೊನೆಯೋ ಗೊತ್ತಾಗದ ದಾರಿಯ ಕೊನೆಯ ಟೀ ಶಾಪ್‌ನವ ಬಾಗಿಲು ಎಳೆಯುವ ಸದ್ದಿಗೆ ತಿರುಗಿ ನಿಂತಿದ್ದೇ ಆದರೆ ಅದು ಸಂಶಯಾತೀತವಾಗಿ ಅಲಾಂಗ್ ಹಳ್ಳಿ.


ಮೂಲತಃ ಅಲೋ… ಎಂದೇ ಜನಪ್ರಿಯವಾಗಿದ್ದ ಹಳ್ಳಿ, ಇತ್ತೀಚೆಗೆ ಅಲಾಂಗ್ ಎಂದು ಬದಲಾಗಿದ್ದು, ವೆಸ್ಟ್ ಸಿಯಾಂಗ್ ಜಿಲ್ಲೆಯ ಲೆಕ್ಕಕ್ಕೆ ಸಿಗದ, ಆದರೆ ಭಾರತದ ಮಟ್ಟಿಗೆ ಗುರುತಿಗೆ ಸಿಕ್ಕುವ ಹಸಿರಿನ ಹಳ್ಳಿ. ಎಷ್ಟೊತ್ತಿಗೂ ಚೀನಿಯರ ಪಡೆಗೆ ತುತ್ತಾಗಬಲ್ಲ ಸರಹದ್ದಿನಲ್ಲಿದೆ. ಟ್ರೆಕ್ಕಿಂಗ್ ಪ್ರಿಯರಿಗೆ ಮತ್ತು ಕೊನೆಯ ಹಳ್ಳಿ ಎನ್ನುವ ಭಾವೋದ್ವೇಗಕ್ಕೆ ಈಡಾಗಿ ಬರುವವರಿಗೆ ಸಹಾಯಕರಾಗಿ ನಿಲ್ಲಲು ಮತ್ತು ಅಸರೆಗೆ ಕಚ್ಚರ್(ಕುದುರೆ ಮತ್ತು ಕತ್ತೆಗಳ ಮಿಶ್ರತಳಿ)ಗಳ ಬೆಂಬಲ ನೀಡುವವರಿಗೆ ಇಲ್ಲಿ ತುಂಬ ಬೆಲೆ. ಕಾರಣ ಹನ್ನೆರಡು ಸಾವಿರ ಅಡಿ ಎತ್ತರದಲ್ಲಿ ಉಸಿರು ಅಡಿಗಡಿಗೆ ಆಮ್ಲಜನಕ ಬೇಡುತ್ತದೆ. ಎದೆ ತಿದಿಯೊತ್ತುತ್ತದೆ. ಊರ ಸುತ್ತ ಅದ್ಭುತ ಎನ್ನಬಹುದಾದ ಪರ್ವತತುದಿಗಳಿದ್ದು, ಸಾಹಸಿಗಳಿಗೆ ಹೇಳಿ ಮಾಡಿಸಿದ್ದರೆ ಪಕ್ಕದಲ್ಲೇ ಕಾಯುವ ಯಾಮೋ ಮತ್ತು ಸಿಪು ನದಿ ನೀರಾಟಕ್ಕೆ, ಪ್ರವಾಸಿಗರಿಗೆ ಸುರಕ್ಷಿತ ತಾಣ ಒದಗಿಸುತ್ತಿದೆ. ಅದರ ಉದ್ದಾನುಉದ್ದ ತೀರದಲ್ಲಿ ಚಿಕ್ಕ ದೋಣಿಗಳ ವಿಹಾರ ಜೀವನದ ಅದ್ಭುತವಾಗಬಲ್ಲದು, ನೀವು ಹೋದರೆ ಇದನ್ನೆಲ್ಲ ಆಮೋದವಾಗಿಸಿಕೊಳ್ಳುತ್ತೀರಿ ಇದು ನನ್ನ ಪ್ರಾಮೀಸು.


ಆ ಕಡೆಗೆ ಇಳಿದರೆ ಪುವಾಕ್ ಘಾಟ್-ಉಸಿರು ಎದೆಗೆ ಏರಿಸುತ್ತದೆ. ನಾಲೈದು ಕಿ.ಮೀ. ದೂರದ ಪಾಟುಮ್ ಸೇತುವೆ ಅರ್ಧದಿನದ ಅದ್ಭುತ ರಮ್ಯತಾಣಕ್ಕೆ ಹೇಳಿ ಮಾಡಿಸಿದ್ದರೆ, ಕಪ್ಪುಚಹಾ, ಒಣಮಾಂಸ ತುಂಡಿಗೆ ಮೆಣಸಿನಕಾಳಿನ ಹುಡಿ ಹಾಕಿ ಕೊಡುವ ತಿಂಡಿಗೆ ಮಾಂಸಪ್ರಿಯರಿಂದ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗುತ್ತಿರುತ್ತದೆ. ಅಂದಹಾಗೆ ಸಸ್ಯಾಹಾರಿಗಳಿಗೆ ಬದುಕು ಸ್ವಲ್ಪ ಕಷ್ಟವಾದ್ರೂ, ಇದರೊಂದಿಗೆ ಅರ್ಧ ಹೆಚ್ಚಿ ಒಣಗಿಸಿಡುವ ಬಾಳೆಹಣ್ಣು ಮತ್ತು ಒಣ ಕಿತ್ತಳೆ ಬಾಯಿ ಚಪಲಕ್ಕೆ ಹೇಳಿ ಮಾಡಿಸಿದ್ದರೆ, ಊರ ಸುತ್ತಲೂ ಇರುವ ಅಪರೂಪದ ದೃಶ್ಯಕಾವ್ಯ ಛಾಯಾಗ್ರಾಹಕರಿಗೆ ಸಂಪೂರ್ಣ ಹಬ್ಬ. ಇವೆಲ್ಲ ಒಂದೆಡೆಯಾದರೆ, ಕಿತ್ತಳೆ ತೋಟ ಮತ್ತು ಮಾರುಕಟ್ಟೆಯದ್ದೇ ಒಂದು ತೂಕ. ಪೂರ್ತಿ ಊರಲ್ಲಿ ಎಲ್ಲವನ್ನೂ ಮೀರಿದ ಘಮ ಕಿತ್ತಳೆಯದ್ದು. ಸರಿಸುಮಾರು ನಲ್ವತ್ತು ಬಗೆಯ ಖಾದ್ಯ ಮತ್ತು ಒಣ ಕಿತ್ತಳೆಯ ಅಹಾರೋತ್ಪನ್ನದ ಸಂತೆಯನ್ನು ಯಾರೂ ಬಿಡುವುದಿಲ್ಲ. ಹಾಗಾಗಿ ಇದಷ್ಟೂ ದಿನವೂ ನೀವು ಸಿಹಿ ಸವಿಯುತ್ತಲೇ ಇರುತ್ತೀರಿ.
ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯ ಅಲಾಂಗ್‌ನಲ್ಲಿ ಇಂಗ್ಲಿಷ್ ಅದ್ಭುತ ಭಾಷೆ. ಹುಟ್ಟುತ್ತಲೇ ಮಕ್ಕಳು ‘ಹೌ..ಆರ್..ಯ…?” ಎನ್ನುತ್ತಾರಾ ಎಂದು ಸಂದೇಹಿಸುವಷ್ಟು.


ಹತ್ತಿರದ ವಿಮಾನನಿಲ್ದಾಣ ಲಿಕ್‌ಬಾಲಿಯಿಂದ 220 ಕಿ.ಮೀ. ದೂರ ಜೊತೆಗೆ ದಿಬ್ರುಗಡ್ ಮತ್ತು ಗೌಹಾತಿ ಜೊತೆಗೆ ಒಳ್ಳೆಯ ಸಂಪರ್ಕ ಹೊಂದಿದೆ. ಸಿಲಾಪಾತರ್‌ ರೈಲು ನಿಲ್ದಾಣವೇ ಹತ್ತಿರದ್ದು. ಇಟಾನಗರ, ಲಖೀಮ್ ಪುರಗಳಿಂದ ಉತ್ತಮ ರಸ್ತೆಗಳಿದ್ದು ವಾಹನ ಸೌಕರ್ಯಕ್ಕೆ ಕೊರತೆ ಇಲ್ಲ. ಹೆಚ್ಚಿನ ವಸತಿಗಾಗಿ ಹೋಮ್‌ ಸ್ಟೇಗಳು ಸಾಲುಸಾಲಾಗಿ ಇದ್ದು ಸ್ಥಳೀಯರು ಅತ್ಮೀಯತೆಯಿಂದ ಕೈಬೀಸಿ ಕರೆಯುತ್ತಾರೆ. ಆತಿಥ್ಯಕ್ಕೆ ಓಡಾಟ, ಸಾಹಸ, ಮೋಜಿಗೆ ಯಾವುದೇ ಕೊರತೆ ಇಲ್ಲ. ಆದರೆ ಎತ್ತರ ಮತ್ತು ದೂರ ಎರಡೂ ಸಮನಾಗೇ ಇರುವುದರಿಂದ ಎಟುಕುವುದಿಲ್ಲ ಎಂದು ಗೊಣಗಿದರೆ ಈ ಭೂಮುಖದ ಅದ್ಭುತಗಳನ್ನು ನೋಡುವುದಾದರೂ ಹೇಗೆ? ನಾರ್ತ್ ಈಸ್ಟ್ ಎಂಬ ಹಣೆಪಟ್ಟಿಯಡಿಯಲ್ಲಿರುವ ಈ ರಾಜ್ಯಗಳೆಲ್ಲವೂ ಹೀಗೆ. ಆದರೆ ಅಲಾಂಗ್ ಎಲ್ಲ ರೀತಿಯ ಪ್ರವಾಸಿಸೌಂದರ್ಯ ಒದಗಿಸುವ ಕಾರಣ, ನದಿ, ಪರ್ವತ, ಚಳಿ, ಎತ್ತರ, ಸಾಹಸ, ಆಹಾರ, ಪರಿಸರ, ಸ್ಥಳೀಯ ಗ್ರಾಮದ ಸೊಗಡು, ಇನ್ನೊಂದೆರಡು ದಿನ ಮೊಬೈಲ್ ಫೋನ್ ಕಾಟವಿಲ್ಲದೆ . ಇರೋಣ ಎಂದು ಅದನ್ನು ಮಡಚಿಟ್ಟು ಹೋಗುವ ಯೋಜನೆ ರೂಪಿಸಿದರೆ, ರಾತ್ರಿಗೆ ಆಕಾಶದಲ್ಲಿ ನಕ್ಷತ್ರ ಅಭ್ಯಸಿಸುವವರಿಗೂ ಇದು ಹೇಳಿ ಮಾಡಿಸಿದ ತಾಣ. ಅಂದಹಾಗೆ ಈ ದೇಶದಲ್ಲಿ ಕೊನೆಯ ಹಳ್ಳಿ ಎಂದು ಹಲವು ಊರುಗಳಿವೆ ಆದರೆ ಇದು ಸಂಪೂರ್ಣ ಅಲಗ್… ಅದಕ್ಕೇ ಇದು ಅಲಾಂಗ್..

Leave a Comment