ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಬಿಲ್ ವಸೂಲಿ ಕಗ್ಗಂಟು
ಗ್ರಾಮೀಣ ಪ್ರದೇಶದಲ್ಲಿ ನೀರಿಗೆ ನಿಗದಿಪಡಿಸಿದ ಶುಲ್ಕ ವಸೂಲಿ ಗೊಂದಲದ ಗೂಡಾಗಿದೆ. ಸಾಫ್ಟ್ವೇರ್ ಅಭಿವೃದ್ಧಿಪಡಿಸದ ಕಾರಣ ಬಳಕೆಯಾದ ನೀರಿಗೆ ನಿರ್ದಿಷ್ಟ ಶುಲ್ಕ ವಿಧಿಸುವಲ್ಲಿ ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ.
ಗ್ರಾಮೀಣ ಪ್ರದೇಶದಲ್ಲಿ 10 ಸಾವಿರ ಲೀಟರ್ವರೆಗೆ 80 ರೂ., 10-25 ಸಾವಿರ ಲೀಟರ್ಗೆ 95 ರೂ., 25 ಸಾವಿರ ಲೀಟರ್ ಮೇಲ್ಪಟ್ಟು 115 ರೂ. ಹಾಗೂ ವಾಣಿಜ್ಯ ಕಟ್ಟಡಗಳಿಗೆ ಕ್ರಮವಾಗಿ 100 ರೂ., 120, 145 ರೂ. ದರ ನಿಗದಿಪಡಿಸಲಾಗಿದೆ. ಆದರೆ, ಯಾರು ಎಷ್ಟು ನೀರು ಉಪಯೋಗಿಸುತ್ತಿದ್ದಾರೋ ಅಷ್ಟು ಪ್ರಮಾಣದಲ್ಲಿ ದರ ವಿಧಿಸಲು ಸಾಫ್ಟ್ವೇರ್ ಅಭಿವೃದ್ಧಿಪಡಿಸಿ ನೀಡಿಲ್ಲ. ಹಾಗಾಗಿ ದರ ವಸೂಲಿಯಲ್ಲಿ ದಂಧೆ ನಡೆಯುತ್ತಿದ್ದು, ತೆರಿಗೆ ಸಂಗ್ರಹದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಜಲಜೀವನ್ ಮಿಷನ್ ಅಡಿ ಬಹುತೇಕ ಕಡೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಕೆಲವು ಕಡೆ ಮೀಟರ್ ಅಳವಡಿಸಲಾಗಿದೆ. ಇನ್ನೂ ಕೆಲವು ಕಡೆ ಅಳವಡಿಸಿಲ್ಲ. ಮಿಕ್ಕ ಕೆಲವೆಡೆ ಮೀಟರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮೀಟರ್ ಅಳವಡಿಸಿದ ಕಡೆಗಳಲ್ಲಿ ನೀರಿನ ಬಳಕೆ ಆಧರಿಸಿ ಶುಲ್ಕ ವಿಧಿಸಲು ಸಾಫ್ಟ್ವೇರ್ ಅಭಿವೃದ್ಧಿಪಡಿಸಿಲ್ಲ. ಹಾಗಾಗಿ ಬಿಲ್ ಕಲೆಕ್ಟರ್ ಗಳು ವಸತಿ/ವಾಣಿಜ್ಯ ಕಟ್ಟಡಗಳಿಗೆ ಕನಿಷ್ಠ ದರ ವಿಧಿಸುತ್ತಿದ್ದಾರೆ. ಇನ್ನು ಮೀಟರ್ ಅಳವಡಿಸದೇ ಇರುವ ಬಳಕೆದಾರರಿಗೆ ಎಷ್ಟು ಶುಲ್ಕ ವಿಧಿಸಬೇಕು. ವೈಯಕ್ತಿಕ ನಳ ಸಂಪರ್ಕ ಪಡೆಯದೆ ಸಮುದಾಯ ನೀರಿನ ಸಾವರಗಳಿಂದ ನೀರು ಪಡೆಯುವವರಿಗೆ ಎಷ್ಟು ವಿಧಿಸಬೇಕೆಂಬುದನ್ನು ನಿಯಮಗಳಲ್ಲಿ ಸ್ಪಷ್ಟಪಡಿಸಿಲ್ಲ. ಮೀಟರ್ ಇರುವ ಕಡೆ ಡೇಟಾ ಎಂಟ್ರಿ ಮಾಡಿ ಬಳಕೆ ಪ್ರಮಾಣ ಆಧರಿಸಿ ಶುಲ್ಕ ವಿಧಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಪಂಚಾಯಿತಿಗಳು ಖಾಸಗಿ ಸಾಫ್ಟ್ವೇರ್ ಬಳಸಿ ವಸೂಲಿ ಮಾಡುತ್ತಿದ್ದರೂ ವ್ಯತ್ಯಾಸವಾಗುತ್ತಿರುವುದರಿಂದ ನೀರಿನ ದರ ವಸೂಲಿ ಕಗ್ಗಂಟಾಗಿದೆ. ಇನ್ನೂ ಕೆಲವು ಕಡೆ ಅಸ್ತಿ ತೆರಿಗೆಗಿಂತ ನೀರಿನ ದರವನ್ನೇ ಹೆಚ್ಚು ವಸೂಲಿ ಮಾಡಲಾಗುತ್ತಿದೆ. ಆರಂಭಿಕ ದರ 10 ಸಾವಿರ ಲೀಟರ್ಗೆ ತಿಂಗಳಿಗೆ 80 ರೂ.ನಂತೆ ವರ್ಷಕ್ಕೆ 960 ರೂ.ವಸೂಲು ಮಾಡಲಾಗುತ್ತಿದೆ. ನೀರಿನಿಂದಲೇ 200 ಕೋಟಿ ರೂ.: ಎಲ್ಲ ಸ್ಥಾವರಗಳಿಂದ ನೀರಿನ ದರವನ್ನು ವೈಜ್ಞಾನಿಕ ಹಾಗೂ ಕಟ್ಟುನಿಟ್ಟಾಗಿ ವಸೂಲು ಮಾಡಿದಲ್ಲಿ ಈಗ ಸಂಗ್ರಹವಾಗುತ್ತಿರುವುದಕ್ಕಿಂತ ಇನ್ನೂ 200 ಕೋಟಿ ರೂ. ಆದಾಯ ಸಂಗ್ರಹ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಮೈಗ್ರೇನ್ ಕಿರಿಕಿರಿ ತಪ್ಪಲು ಬೇಕು ಒಳ್ಳೆಯ ಚಿಕಿತ್ಸೆ
ಶೇ.27 ಗುರಿ ಸಾಧನೆ: ಸರ್ಕಾರ 2024-25ನೇ ಸಾಲಿಗೆ ಗ್ರಾಪಂಗಳಿಂದ ತೆರಿಗೆ ವಸೂಲಿ ಗುರಿ 1602 ಕೋಟಿ ರೂ. ನಿಗದಿಪಡಿಸಿದೆ. ಆದರೆ, ಈವರೆಗೆ ಬಾಕಿ ಸೇರಿ 1066 ಕೊಟಿ ರೂ. ಮಾತ್ರ ವಸೂಲಾಗಿದೆ. ಒಟ್ಟು ಬೇಡಿಕೆಗೆ ಹೋಲಿಸಿದರೆ ತೆರಿಗೆ ಪ್ರಮಾಣಲೇ ಮಾತು ಆದರೆ, ಇತ್ತೀಚಿನ ವರ್ಷಗಳಲ್ಲಿ 1066 ರೂ. ವಸೂಲಿ ದೊಡ್ಡ ಸಾಧನೆ. ಈ ಹಿಂದೆ 759 ಕೋಟಿ ರೂ. ವಸೂಲಿ ದಾಖಲೆ ಇತ್ತು. ಮಾರ್ಚ್ ಅಂತ್ಯಕ್ಕೆ ಇನ್ನೂ 200-250 ಕೋಟಿ ರೂ. ವಸೂಲಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕೇರಳ, ರಾಜಸ್ತಾನ ಮತ್ತಿತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಗ್ರಾಪಂಗಳಿಂದ ವಸೂಲಾಗುವ ತೆರಿಗೆ ಪ್ರಮಾಣ ಹೆಚ್ಚಿದೆ.