ಅಪಾಯದಲ್ಲಿ ಪಶ್ಚಿಮ ಘಟ್ಟ
ಅನಿಯಂತ್ರಿತ ಪ್ರವಾಸೋದ್ಯಮ, ಹೆಚ್ಚುತ್ತಿರುವ ಅಭಿವೃದ್ಧಿ ಚಟುವಟಿಕೆಗಳಿಂದ ಕರ್ನಾಟಕದ ಪಶ್ಚಿಮ ಘಟ್ಟ ಮತ್ತಷ್ಟು ಅಪಾಯದ ಸನ್ನಿವೇಶ ಎದುರಿಸುತ್ತಿದೆ. ಕಂದಾಯ ಮತ್ತು ವಿಪತ್ತು ನಿರ್ವಹಣಾ ವಿಭಾಗವು ರಾಜ್ಯ ಸರಕಾರಕ್ಕೆ ಈ ಸಂಬಂಧ ವರದಿ ಸಲ್ಲಿಸಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಿಮ ಘಟ್ಟದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯ ಸಂಭವಿಸಲಿದೆ ಎಂಬ ಎಚ್ಚರಿಕೆ ನೀಡಿದೆ.
ಪಶ್ಚಿಮ ಘಟ್ಟ ಕಳೆದ 19 ವರ್ಷಗಳಲ್ಲಿ 1,403 ಭೂಕುಸಿತಗಳನ್ನು ಕಂಡಿದ್ದು, 98 ಜನರು ಮೃತಪಟ್ಟಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕಡಿದಿರುವುದು, ರಸ್ತೆ ವಿಸ್ತರಣೆಗಾಗಿ ಆಗಿರುವ ಭೂಭಾಗದ ವ್ಯತ್ಯಾಸ, ಮಣ್ಣಿನ ಸವಕಳಿ, ಸಣ್ಣ ತೊರೆಗಳಿಂದ ಸೃಷ್ಟಿಯಾಗಿರುವ ಇಳಿಜಾರು, ಮಾನವ ನಿರ್ಮಿತ ಒತ್ತಡಗಳಿಂದಾಗಿ ಭೂಕುಸಿತ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಅಲ್ಲದೆ, ಪಶ್ಚಿಮ ಘಟ್ಟದ ಎಂಟು ಜಿಲ್ಲೆಗಳ ವ್ಯಾಪ್ತಿಯ 31,231 ಚದರ ಕಿ.ಮೀ. ಪ್ರದೇಶದಲ್ಲಿ ಭೂಕುಸಿತದ ಅಪಾಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಪಟೇಲರ ನೆನಪುಳಿಸಲು ಸರಕಾರಕ್ಕೆ ಆಸಕ್ತಿ ಇಲ್ಲವೇ?
ಕೊಡಗು ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶದ ಶೇ.96ಕ್ಕಿಂತ ಹೆಚ್ಚು ಪ್ರದೇಶ ಭೂಕುಸಿತಕ್ಕೆ ಒಳಗಾಗುವ ಅಪಾಯವಿದೆ. ದಕ್ಷಣ ಕನ್ನಡದ ಶೇ.94.9 ಮತ್ತು ಉತ್ತರ ಕನ್ನಡ 81.3ರಷ್ಟು ಭೂಪ್ರದೇಶಗಳಲ್ಲಿ ಕುಸಿತದ ಸಂಭವನೀಯತೆ ಹೆಚ್ಚಿದೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯು ಅತಿ ಹೆಚ್ಚು 609 ಭೂಕುಸಿತಗಳನ್ನು ಕಂಡಿದೆ. ಚಿಕ್ಕಮಗಳೂರು 260 ಹಾಗೂ ಕೊಡಗಿನಲ್ಲಿ 188 ಮತ್ತು ದಕ್ಷಣ ಕನ್ನಡದಲ್ಲಿ 166 ಭೂಕುಸಿತಗಳು ಸಂಭವಿಸಿವೆ. ಇದೇ ಅವಧಿಯಲ್ಲಿ ಕೊಡಗು, ಉತ್ತರ ಕನ್ನಡ ಮತ್ತು ದಕ್ಷಣ ಕನ್ನಡದಲ್ಲಿ ಅತಿ ಹೆಚ್ಚು ಅಂದರೆ, ಕ್ರಮವಾಗಿ 53, 34, 11 ಜನರ ಸಾವು ಸಂಭವಿಸಿದೆ.
ಪಶ್ಚಿಮ ಘಟ್ಟಗಳಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಾಗಿರುವುದರಿಂದ ಇತ್ತೀಚೆಗೆ ಭೂಕುಸಿತ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯ ಸರಕಾರ ನಿಯಮಿತವಾಗಿ ತಪಾಸಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ಭೂಕುಸಿತ ಸಂಭವಿಸುವುದನ್ನು ತಪ್ಪಿಸಬೇಕು ಎಂಬ ಆಗ್ರಹ ಪರಿಸರ ತಜ್ಞರಿಂದ ವ್ಯಕ್ತವಾಗಿದೆ. “ಪ್ರವಾಸೋದ್ಯಮದ ಜತೆಗೆ ಸರಕಾರದ ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳಿಂದಲೂ ಪಶ್ಚಿಮ ಘಟ್ಟಕ್ಕೆ ಅಪಾಯ ಎದುರಾಗಿದೆ. ಜಲಾಶಯಗಳು, ಅಣೆಕಟ್ಟುಗಳು, ಹೆದ್ದಾರಿಗಳು ಸೇರಿದಂತೆ ಅವೈಜ್ಞಾನಿಕ ಯೋಜನೆಗಳನ್ನು ಕೈಬಿಡದಿದ್ದರೆ, ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದ ಘಟನೆಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ,” ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.