ಭೀಮಾ ತೀರ ಚಿಂತಕರ ಬೀಡು

ಭೀಮಾ ತೀರ ಚಿಂತಕರ ಬೀಡು

ಹಳೆ ಮೈಸೂರು ಪ್ರಾಂತ್ಯಕ್ಕೆ ಕಾವೇರಿಯಂತೆ , ಕಲ್ಯಾಣ ನಾಡು ಕಲಬುರಗಿವಿಜಯಪುರ, ಯಾದಗಿರಿಗೆ ಭೀಮಾ ಜೀವನದಿ . ಅನ್ನದಾತರು, ಜನ ಜಾನುವಾರುಗಳಿಗೆ ಈ ನದಿ ನೀರೇ ಜೀವನಾಧಾರ . ಮೇರು ಸಾಹಿತಿಗಳು, ಕಲಾವಿದರು, ಖ್ಯಾತ ಪತ್ರಕರ್ತರು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು ಸೇರಿ ಸಹಸ್ರಾರು ಸಾಂಸ್ಕೃತಿಕ ರಾಯಭಾರಿಗಳು, ಪವಿತ್ರ ಧಾರ್ಮಿಕ ಕೇಂದ್ರಗಳು, ಜಿಐ ಮಾನ್ಯತೆ ಪಡೆದ ಉತ್ಕೃಷ್ಟ ತೊಗರಿ ಬೇಳೆ, ಖಡಕ್ ರೊಟ್ಟಿ ಸೇರಿ ಹಲವು ಶ್ರೀಮಂತ ಸಂಸ್ಕೃತಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ನದಿ ಇದು.

12ನೇ ಶತಮಾನದಲ್ಲೇ ಅನುಭವ ಮಂಟಪ ಸ್ಥಾಪಿಸಿ ಜಗತ್ತಿಗೆ ಮೊದಲ ಬಾರಿಗೆ ಪಾರ್ಲಿಮೆಂಟ್ ಪರಿಕಲ್ಪನೆ ನೀಡಿದ ಬಸವಾದಿ ಶರಣರು, ಮಹಾದಾಸೋಹಿ ಶ್ರೀ ಶರಣಬಸವೇಶ್ವರರು, ಸೂಫಿ ಸಂತ ಖಾಜಾ ಬಂದೇನವಾಜರು, ಬಂಥನಾಳ ಶಿವಯೋಗಿಗಳು ಬಾಳಿ ಬೆಳಗಿದ ಪವಿತ್ರ ನೆಲವಿದು. ಇಂಥ ಶ್ರೀಮಂತ ಪರಂಪರೆ ಹೊಂದಿದ ಈ ನೆಲ, ಈಚೆಗೆ ಕುಖ್ಯಾತ ರೌಡಿ ಬಾಗಪ್ಪ ಹರಿಜನ ಹತ್ಯೆಯಾಗುತ್ತಿದ್ದಂತೆಯೇ, ಭೀಮಾ ತೀರ ಮತ್ತೆ ರಕ್ತಸಿಕ್ತ ಚರಿತ್ರೆಗೆ ಸಾಕ್ಷಿಯಾಯಿತು. ಭೀಮಾ ತೀರ ಎಂದರೆ ಸಾಕು ‘ಹಂತಕರ ನಾಡು’ ಎಂಬ ಕುಖ್ಯಾತಿ ನಂಟಿದೆ. ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ವ್ಯಾಪ್ತಿಯ ಈ ನದಿ ತೀರದ ಊರುಗಳಲ್ಲಿ ಹತ್ಯೆಯಾದರೆ ಸಾಕು ಅದಕ್ಕೆ ‘ಭೀಮಾ ತೀರದಲ್ಲಿ ಮತ್ತೆ ರಕ್ತದ ಓಕಳಿ’ ಎಂಬ ಸುದ್ದಿ ಎಲ್ಲ ಮಾಧ್ಯಮಗಳಲ್ಲಿ ರಾರಾಜಿಸುತ್ತದೆ. ಈ ನಕಾರಾತ್ಮಕ ಪದ ಪ್ರಯೋಗದಿಂದ ನದಿ ತೀರದಲ್ಲಿ ಸಹಸ್ರಾರು ಪಾಸಿಟಿವ್ ಸಂಗತಿಗಳು, ಚಿಂತಕರು ಇದ್ದರೂ ಹೊರ ಜಗತ್ತಿಗೆ ಪರಿಚಯವೇ ಆಗುತ್ತಿಲ್ಲ ಎನ್ನುವ ನೋವು ಪ್ರಜ್ಞಾವಂತರನ್ನು ಸದಾ ಕಾಡುತ್ತಿದೆ.

ಇದನ್ನೂ ಓದಿ:ಪರ್ಯಾಯ ಚಿಂತನೆಗೆ ಸಕಾಲ

ಭೀಮಾ ತೀರವು ಶರಣರ ನಾಡು, ಸೂಫಿ ಸಂತರ ತವರೂರು, ಆದರೆ, ಇಲ್ಲಿನ ಶ್ರೀಮಂತ ಪರಂಪರೆ ತೆರೆಗೆ ಸರಿಸಿರುವ ಭೀಮಾ ತೀರದ ಹಂತಕರು, ನೆತ್ತರು, ಸುಲಿಗೆ, ಅಪಹರಣ ಸೇರಿದಂತೆ ಯಾವುದೇ ಅಪರಾಧಿಕ ಕೃತ್ಯ ನಡೆಸಿದರೆ ಭೀಮೆಯ ಹೆಸರು ತಳಕು ಹಾಕುವ ರೂಢಿಯಾಗಿದೆ. ಹೀಗಾಗಿ ಭೀಮಾ ತೀರ ಎಂದರೆ ಭಯಾನಕ ಎನ್ನುವಂತೆ ಹೊರ ಜಗತ್ತಿಗೆ ಬಿಂಬಿತವಾಗಿದೆ. ಹಿಂದೂ ಸಂಪ್ರದಾಯಗಳ ಪ್ರಕಾರ, ಎಲ್ಲ ನದಿಗಳು ಪವಿತ್ರ. ಅದರಲ್ಲೂ ನದಿ ತೀರದಲ್ಲಿ ಗುಡಿ ಗುಂಡಾರ, ಧಾರ್ಮಿಕ ಕೇಂದ್ರಗಳು ಇದ್ದರಂತೂ ಎಲ್ಲಿಲ್ಲದ ಮಹತ್ವ . ಪ್ರಸಿದ್ಧವಾದ ದೇವಸ್ಥಾನಗಳು ಇದ್ದರಂತೂ ದೇಶ-ವಿದೇಶಗಳ ಭಕ್ತರು ಭೇಟಿ ಕೊಡುತ್ತಿದ್ದಾರೆ. ನದಿ ತೀರದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನೆಲೆಯೂರಿದೆ. ಭೀಮಾ ತೀರದಲ್ಲಿರುವ ದೇಗುಲ ಗಾಣಗಾಪುರದ ದತ್ತಾತ್ರೇಯ ಶಕ್ತಿಪೀಠವು ನಿರ್ಗುಣ ಪಾದುಕೆ ಹೊಂದಿದ ಏಕೈಕ ಧಾರ್ಮಿಕ ಕ್ಷೇತ. ಈಗ ಇದಕ್ಕೆ ಕಾಶಿ ಸ್ವರೂಪ ನೀಡಲಾಗುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಈ ಕ್ಷೇತ್ರ ಕೋಟ್ಯಂತರರೂ. ಆದಾಯ ನೀಡುವ ಕೇಂದ್ರ. ಪ್ರಧಾನಿಯಿಂದ ಹಿಡಿದು ಸಿಎಂ, ಮಂತ್ರಿಗಳವರೆಗೆ ಎಲ್ಲರೂ ಭೇಟಿ ನೀಡುತ್ತಾರೆ. ಪ್ರತಿ ವರ್ಷ 15 ಲಕ್ಷ ಭಕ್ತರು ಭೇಟಿ ಕೊಡುವ ತಾಣವಿದು. ಪಂಢರಾಪುರದ ವಿಠಲ ಮಂದಿರ, ಘತ್ತರಗಿ ಭಾಗ್ಯವಂತಿ, ಚಂದ್ರಲಾ ಪರಮೇಶ್ವರಿ, ಭೀಮಾಶಂಕರ ಕ್ಷೇತ್ರಗಳು ಟೆಂಪಲ್ ಟೂರಿಸಂ ಹೆಚ್ಚಿಸಿದ್ದರೂ ಇಲ್ಲಿ ನಡೆಯುವ ರಕ್ತದೋಕುಳಿ, ಕೈಂ ಎಲ್ಲವೂ ನುಂಗಿ ಹಾಕಿದೆ.

ಭೀಮಾ ತೀರದಲ್ಲಿ ಗನ್ ಬದಲು ಪೆನ್‌ಗಳ ಸಪ್ಪಳವೂ ಹೆಚ್ಚು . ನಡೆದಾಡುವ ದೇವರೆಂದೇ ಖ್ಯಾತಿಯಾದ ಎಲ್ಲೆಡೆ ಪ್ರವಚನಗಳ ಮೂಲಕ ಎಲ್ಲರ ಮನೆ ಮಾತಾಗಿದ್ದ ಸಿದ್ದೇಶ್ವರ ಶ್ರೀಗಳು, ವಚನ ಪಿತಾಮಹ ಫ.ಗು. ಹಳಕಟ್ಟಿ ಬಂಥನಾಳ ಶಿವಯೋಗಿಗಳು, ಶಿಂಪಿ ಲಿಂಗಣ್ಣ, ಹಲಸಂಗಿ ಮಧುರ ಚೆನ್ನ ಹರ್ಡೇಕರ ಮಂಜಪ್ಪ, ಸಂಶೋಧಕ ಎಂ.ಎಂ. ಕಲ್ಬುರ್ಗಿ, ಶಂ.ಗು.ಬಿರಾದಾರ, ಶರಣಪ್ಪ ಕಂಚಾಣಿ, ಸಿಸು ಸಂಗಮೇಶ, ಸ.ಜ. ನಾಗಲೋಟಿ ಮಠ, ಬಸವಣ್ಣನವರ ವಚನ ಸಾಹಿತ್ಯದಲ್ಲಿ ಪ್ರಭುತ್ವ ಹೊಂದಿರುವ ರಂಜಾನ್ ದರ್ಗಾ ಮುಂತಾದ ಕವಿಗಳು, ಸಾಹಿತಿಗಳು, ಕಾಂದಬರಿಕಾರರು,ವಿಮರ್ಶಕರು, ಚಿಂತಕರು, ಕಲಾವಿದರು, ಪತ್ರಕರ್ತರು, ನಾಟಕಕಾರರು, ಸಂಶೋಧಕರು, ವಿದ್ವಾಂಸರು, ವಾಗ್ನಿಗಳು, ಲೇಖಕರು ವಿಜಯಪುರದವರು. ಈ ಸಾಂಸ್ಕೃತಿಕ ರಾಯಭಾರಿಗಳು ಸುಂದರ ಸುವಾಸನೆ ಬೀರಿದ ನೆಲವಿದು.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕೃಷ್ಟ ಸ್ಥಾನ ನೀಡಿದರು. ಅಶೋಕನ ಶಾಸನದೊಂದಿಗೆ ಶಿಲ್ಪ ಹೊಂದಿರುವ ದೇಶದ ಏಕೈಕ ಸ್ಥಳ ಚಿತ್ತಾಪುರ ತಾಲೂಕಿನ ಸನ್ನತಿ, ಕನಗನಹಳ್ಳಿ, ಕೊಪ್ಪಳ ಗವಿ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಭೀಮಾ ತೀರದ ಕಲಬುರಗಿಯ ಹಾಗರಗುಂಡಗಿಯವರು. ಜೇವರ್ಗಿಯ ಷಣ್ಮುಖ ಶಿವಯೋಗಿಗಳು, 76ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಡಾ. ಗೀತಾ ನಾಗಭೂಷಣ, ಚೆನ್ನಣ್ಣ ವಾಲೀಕಾರ, ಶೈಲಜಾ ಉಡಚಣ ಇಲ್ಲಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಖ್ಯಾತ ಕಲಾವಿದ ಎಸ್. ಎಂ. ಪಂಡಿತ್ ಕಲಬುರಗಿಯವರು. ಜೆ.ಎಸ್. ಖಂಡೇರಾವ್ , ವಿ.ಜಿ ಅಂದಾನಿ ಕಲೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಇದು ಹೈಲೈಟ್ ಆಗದೇ ಅಪರಾಧ ಲೋಕವೇ ಝಗಮಗಿಸುತ್ತಿರುವುದು ವಿಪರ್ಯಾಸ.

ಹಿಂದೆ ಆಗಿದ್ದನ್ನು ಮರೆತು ಹೊಸ ಜೀವನ ಕಟ್ಟಿಕೊಳ್ಳಬೇಕು ಎಂಬ ಕನವರಿಕೆ ಎಲ್ಲರಲ್ಲೂ ಮನೆ ಮಾಡಿದೆ. ಮರೆತು ಹೋದ ಇತಿಹಾಸ ಮತ್ತೆ ಕೆದಕಬೇಡಿ ಎಂದು ಜನ ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ. ಆದರೆ, ಮಳೆ ನಿಂತರೂ ಮಳೆಹನಿ ನಿಲ್ಲಲ್ಲ ಎನ್ನುವಂತೆ, ಹಿಂದೆ ನಡೆದ ಕೈಂ ಕತೆಗಳು ಈಗ ಸಂಭವಿಸಿದರೆ ಅವುಗಳನ್ನು ವೈಭವೀಕರಣ ಮಾಡುತ್ತಿದ್ದರಿಂದ ಭೀಮಾ ತೀರಕ್ಕೆ ಮತ್ತೆ ರಕ್ತದ ಕಲೆಗಳು ತಗುಲುತ್ತಿವೆ. ಭೀಮಾ ತೀರದ ಮಾನ ಹರಾಜು ಹಾಕಿದ್ದಾಯಿತು, ಈಗಲಾದರೂ ನಮ್ಮ ಪಾಡಿಗೆ ನಮಗೆ ಬಿಡಿ ಎಂದು ಜನ ಗೋಗರೆಯುವಂತೆ ಆಗಿದೆ. ಮಾಸಿದ ನೆನಪುಗಳು ಮತ್ತೆ ಬರದಿರಲಿ. ಹಂತಕರ ಜಾಗದಲ್ಲಿ ಚಿಂತಕರ ಶಬ್ದ ಬರಲಿ. ಸಾಂಸ್ಕೃತಿಕ ಶ್ರೀಮಂತಿಕೆ ಮತ್ತೆ ಪ್ರಜ್ವಲಿಸಲಿ. ಪಾಸಿಟಿವ್ ಸಂಗತಿಗಳತ್ತ ಭೀಮೆ ಹರಿಯಲಿ .

Leave a Comment